ಸಾಮರ್ಥ್ಯ ಅರಿತು ಪ್ರಯತ್ನಿಸಿದರೆ ಯಶಸ್ಸು

KannadaprabhaNewsNetwork | Published : Mar 8, 2025 12:30 AM

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಜೀವನದ ಸುವರ್ಣ ಘಟ್ಟ. ನೀವುಗಳು 20 ವರ್ಷ ಕಷ್ಟ ಪಟ್ಟರೆ ಮುಂದಿನ ಎಪ್ಪತ್ತು ವರ್ಷ ಜೀವನವನ್ನು ನಗುತ್ತಾ ಸುಖಮಯವಾಗಿ ಕಳೆಯಬಹುದು ಎಂದು ಡಾ.ಐಶ್ವರ್ಯ ಚೌಧರಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಜೀವನದ ಸುವರ್ಣ ಘಟ್ಟ. ನೀವುಗಳು 20 ವರ್ಷ ಕಷ್ಟ ಪಟ್ಟರೆ ಮುಂದಿನ ಎಪ್ಪತ್ತು ವರ್ಷ ಜೀವನವನ್ನು ನಗುತ್ತಾ ಸುಖಮಯವಾಗಿ ಕಳೆಯಬಹುದು ಎಂದು ಡಾ.ಐಶ್ವರ್ಯ ಚೌಧರಿ ಹೇಳಿದರು.

ನಗರದ ಹೊರವಲಯದ ಇಟ್ಟಂಗಿಹಾಳದ ಎಕ್ಸಲಂಟ್ ಆಂಗ್ಲ ಮಾಧ್ಯಮ ಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಯಶಸ್ವಿಗೆ ನಿರ್ದಿಷ್ಟವಾದ ಸೂತ್ರ ಎನ್ನುವುದು ಇರುವುದಿಲ್ಲ. ಸತತ ಪ್ರಯತ್ನ ಹಾಗೂ ಎಲ್ಲರೂ ತಮ್ಮ ತಮ್ಮ ಅಭಿರುಚಿ ಮತ್ತು ಸಾಮರ್ಥ್ಯವನ್ನು ಅರಿತುಕೊಂಡು ಪ್ರಯತ್ನಿಸಿದಾಗ ಖಂಡಿತವಾಗಿ ಯಶಸ್ಸು ಸಿಗುತ್ತದೆ ಎಂದು ಹೇಳಿದರು.

ನಿವೃತ್ತ ಪೊಲೀಸ್ ಅಧಿಕಾರಿ ಬಿ.ಆರ್‌.ಚೌಕಿಮಠ ಮಾತನಾಡಿ, 10ನೇ ತರಗತಿ ವಿದ್ಯಾರ್ಥಿಗಳಿಗೆ ಶುಭಕೋರಿ, ತಂದೆ-ತಾಯಿಗಳ ಋಣ, ಗುರುವಿನ ಋಣ ಹಾಗೂ ಸಮಾಜದ ಋಣ ತೀರಿಸಲು ಶ್ರಮಿಸಬೇಕು. ತಂದೆ ತಾಯಿಗಳು ಮಕ್ಕಳಿಂದ ಏನನ್ನು ಅಪೇಕ್ಷಿಸುವುದಿಲ್ಲ, ಮಕ್ಕಳು ಉತ್ತಮ ಶಿಕ್ಷಣವಂತರಾಗಿ ಉತ್ತಮ ಬದುಕು ಕಟ್ಟಿಕೊಂಡರೆ ಸಾಕು. ಅದೇ ಅವರಿಗೆ ಖುಷಿ ನೀಡುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಾ.ಶಿವಾನಂದ ಕೆಲೂರ ಮಾತನಾಡಿ, ಆಸ್ಟ್ರೇಲಿಯಾದ ಕೈಕಾಲುಗಳೇ ಇಲ್ಲದ ನಿಕ್ ವುಜಿಸಿಕ್ ಜಗತ್ತಿನ ಶ್ರೇಷ್ಠ ಮಾತುಗಾರ. ಇವರು ಮಗುವಾಗಿದ್ದಾಗ ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಹಾಗೂ ದೈಹಿಕವಾಗಿ ಹೋರಾಡಿದರು. ಆದರೆ ಅಂತಿಮವಾಗಿ ತನ್ನ ಅಂಗವೈಕಲ್ಯತೆಯನ್ನು ಅಧೀನಪಡಿಸಿಕೊಂಡು ಶ್ರೇಷ್ಠ ಭಾಷಣಕಾರರಾದರು. ನಿಕ್ ನಮಗೆಲ್ಲರಿಗೂ ಪ್ರೇರಣೆಯಾಗಬೇಕು. ಕೇವಲ ಕೊರತೆಗಳ ಬಗ್ಗೆ ಯೋಚಿಸಿ ಜೀವನವನ್ನು ಹಾಳು ಮಾಡಿಕೊಳ್ಳದೆ, ಕೊರತೆಗಳನ್ನು ಸಾಮರ್ಥ್ಯವನ್ನಾಗಿ ಪರಿವರ್ತಿಸಿಕೊಳ್ಳಬೇಕು. ಕೇವಲ ಋಣಾತ್ಮಕವಾಗಿ ಯೋಚಿಸುವ ವ್ಯಕ್ತಿಯಿಂದ ದೂರವಿರಿ. ಸಂಯಮವನ್ನು ಬೆಳೆಸಿಕೊಂಡು ಎ.ಪಿ.ಜಿ ಅಬ್ದುಲ್ ಕಲಾಂರ ಸರಳ ಜೀವನ ಸೂತ್ರವನ್ನು ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಸಲಹೆ ನೀಡಿದರು.

ಮುಖ್ಯೋಪಾಧ್ಯಾಯ ತುಳಜಾರಾಮ ಸುಕ್ತೆ, ಶ್ರೀಶೈಲ ಹೆಗಳಾಡಿ, ಐ.ಎಮ್.ಹಿಟ್ಟಿನಳ್ಳಿ ಉಪಸ್ಥಿತರಿದ್ದರು. ರಮ್ಯಾ ಘಟ್ನಟ್ಟಿ, ಸಂಜು ಅಳಲಗೇರಿ ನಿರೂಪಿಸಿದರು. ರುಚಿತಾ ಘಟ್ನಟ್ಟಿ ಸ್ವಾಗತಿಸಿ, ವಂದಿಸಿದರು.

Share this article