ಕುಮಟಾ: ತಾಲೂಕಿನ ಕತಗಾಲದಲ್ಲಿರುವ ಸತ್ಸಂಗ ಭವನದಲ್ಲಿ ಇತ್ತೀಚೆಗೆ ಡಾ. ಗಣಪತಿ ಭಟ್ ವಿರಚಿತ, ಕಲಾಶ್ರೀ ಸಾಂಸ್ಕೃತಿಕ ವೇದಿಕೆ ಪ್ರಕಟಿಸಿದ ಕುಂಕುಮಾರ್ಚನೆ ಪುಸ್ತಕದ ೧೬ ಮತ್ತು ೧೭ನೇ ಆವೃತ್ತಿಯನ್ನು ಬಿಡುಗಡೆಗೊಳಿಸಲಾಯಿತು.
ಕುಂಕುಮಾರ್ಚನೆ ಪುಸ್ತಕದ ೧೬ನೇ ಆವೃತ್ತಿ ಬಿಡುಗಡೆಗೊಳಿಸಿದ ಧಾರವಾಡದ ರಾಮಕೃಷ್ಣಾಶ್ರಮದ ಅಧ್ಯಕ್ಷ ವಿಜಯಾನಂದ ಸ್ವಾಮೀಜಿ ಮಾತನಾಡಿ, ಕೇವಲ ರಸ್ತೆ, ಕೈಗಾರಿಕೆ ನಿರ್ಮಾಣಗಳಿಂದ ಮಾತ್ರವೇ ದೇಶದ ಸಮೃದ್ಧತೆ ಲೆಕ್ಕಹಾಕಲಾಗದು. ಸುಸಂಸ್ಕೃತ ಗ್ರಂಥ ರಚನೆಯಿಂದ ದೇಶದ ಶೈಕ್ಷಣಿಕ- ಆಧ್ಯಾತ್ಮಿಕ ಶಕ್ತಿ ಬೆಳೆಯುತ್ತದೆ. ವಿವಿಧ ಕ್ಷೇತ್ರಗಳಲ್ಲಿ ಪ್ರಾಚೀನರು ಬರೆದ ಗ್ರಂಥಗಳ ಸತ್ಫಲವನ್ನು ಇಂದು ಅನುಭವಿಸುತ್ತಿದ್ದೇವೆ ಎಂದರು.ಕುಂಕುಮಾರ್ಚನೆ ಪುಸ್ತಕದ ೧೭ನೇ ಆವೃತ್ತಿಯನ್ನು ಸಂಸ್ಕೃತ ಉಪನ್ಯಾಸಕ ಕವಲಕ್ಕಿಯ ಡಾ. ಕೇಶವಕಿರಣ ಬಿಡುಗಡೆ ಮಾಡಿ ಮಾತನಾಡಿ, ಪಾಂಡಿತ್ಯವೆಂಬ ಮೂರ್ತಿಗೆ ಸಹೃದಯತೆ ಮುಕುಟವಾಗಿದೆ. ವಿಮರ್ಶೆ ಹಾಗೂ ಸತತ ಅಧ್ಯಯನಶೀಲತೆಯೂ ವಿದ್ವತ್ತಿಗೆ ಮೆರುಗನ್ನು ನೀಡುತ್ತದೆ. ಸಂಸ್ಕೃತಾಧಾರಿತ ಸಂಗೀತದ ಪ್ರೌಢ ಗ್ರಂಥಗಳು ಕನ್ನಡ ಮತ್ತು ಹಿಂದಿಯಲ್ಲಿ ಕಲಾಶ್ರೀ ಸಂಸ್ಥೆಯಿಂದ ಪ್ರಕಟವಾಗುತ್ತಿರುವುದು ಹೆಮ್ಮೆ ಎಂದರು.
ನೇತ್ರತಜ್ಞೆ ಡಾ. ಸುಮತಿ ನಾಯಕ, ಸಂಸ್ಕೃತ ವಿದುಷಿ ಡಾ. ಶ್ರೀದೇವಿ ಭಟ್ಟ ಮಾತನಾಡಿದರು. ಗಿರಿಜಾ ಅರುಣಕುಮಾರ, ವಿದುಷಿ ರೋಹಿಣಿ ನಾಗೇಂದ್ರ ವೇದಿಕೆಯಲ್ಲಿದ್ದರು. ಕಲಾವಿದ ಮಂಗಳೂರಿನ ಸಂಜೀವ ರಾವ್ ಅವರನ್ನು ಸನ್ಮಾನಿಸಲಾಯಿತು.ಕೌಶಿಕ ಷಡಕ್ಷರಿ ಸ್ವಾಗತಿಸಿದರು. ಶಿಕ್ಷಣತಜ್ಞ ಬೆಂಗಳೂರಿನ ಎಂ.ಆರ್. ಅರುಣಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ವಾನ್ ವೆಂಕಟರಮಣ ಭಟ್ಟ ಚಂದಗುಳಿ ವಂದಿಸಿದರು. ಡಾ. ಗಣಪತಿ ಭಟ್ಟ ಪರಿಚಯಿಸಿದರು. ಮಾರುತಿ ನಾಯ್ಕ, ರಂಜಿತಾ ಗೌಡ ನಿರೂಪಿಸಿದರು. ಅನಂತರ ಮಹಿಳೆಯರಿಂದ ಸ್ತೋತ್ರಗಾನ ಮತ್ತು ದೇವಿಗೆ ಕುಂಕುಮಾರ್ಚನೆ ಜರುಗಿತು.
ರುಕ್ಮಿಣಿ ದೀಕ್ಷಿತ, ಸುವರ್ಣಾ ದೇಸಾಯಿ, ಜಯಶ್ರೀ ಶೆಟ್ಟಿ, ಗಿರಿಜಾ ಜೋಶಿ, ಉಷಾ ಪುರಾಣಿಕ, ರೂಪಾ ರಾವ್, ಹೇಮಾ ಜೋಶಿ, ಶ್ರೀದೇವಿ ದೇಶಪಾಂಡೆ, ಶೈಲಾ ಬಿರಾದಾರ, ನಾಗಶ್ರಿಯಾ ಭಟ್ಟ, ಉಮಾ ವಿಶ್ವನಾಥ, ಶಾಲಿನಿ ಚಂದ್ರಶೇಖರ, ಎಚ್.ಎನ್. ಅಂಬಿಗ, ವಿದುಷಿ ರೋಹಿಣಿ ಭಟ್ಟ ಮುಂತಾದವರು ಇದ್ದರು.