ಕಠಿಣ ಶ್ರಮದಿಂದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧ್ಯ

KannadaprabhaNewsNetwork | Updated : Mar 13 2024, 02:02 AM IST

ಸಾರಾಂಶ

ಛಲದಿಂದ ಕಠಿಣ ಶ್ರಮ ಪಟ್ಟರೆ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಕಾಣಬಹುದು ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಬಿ.ಗೋಪಾಲಕೃಷ್ಣ ಹೇಳಿದರು.

ಕೃಷಿಕ್ ಸರ್ವೋದಯ ಫೌಂಡೇಶನ್‌ ನ ಸ್ಪರ್ಧಾತ್ಮಕ ತರಬೇತಿ ಶಿಬಿರದಲ್ಲಿ ಡಾ. ಬಿ . ಗೋಪಾಲಕೃಷ್ಣ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಛಲದಿಂದ ಕಠಿಣ ಶ್ರಮ ಪಟ್ಟರೆ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಕಾಣಬಹುದು ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಬಿ.ಗೋಪಾಲಕೃಷ್ಣ ಹೇಳಿದರು.ನಗರದ ಎಐಟಿ ಕಾಲೇಜು ಸಭಾಂಗಣದಲ್ಲಿ ಕೃಷಿಕ್ ಸರ್ವೋದಯ ಫೌಂಡೇಶನ್‌ ನಿಂದ ಐಎಎಸ್, ಕೆಎಎಸ್, ಬ್ಯಾಂಕಿಂಗ್ ಮತ್ತು ಇತರೆ ನಾಗರಿಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.ನಮಗೆ ಒಳ್ಳೆ ಶಿಕ್ಷಣ ಸಿಕ್ಕ ನಂತರ ಅದನ್ನು ಹೇಗೆ ಬಳಸಿಕೊಳ್ಳುತ್ತೇವೆ ಎನ್ನುವುದು ತುಂಬಾ ಮುಖ್ಯವಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವುದರಿಂದ ದಿಢೀರನೆ ಉತ್ತಮ ಸ್ಥಾನಮಾನ ಸಿಗುವ ಅವಕಾಶಗಳಿವೆ. ನಮ್ಮ ಹಿನ್ನೆಲೆ ಏನು ? ನಮ್ಮ ಜಾತಿ ಯಾವುದು ? ನಮ್ಮ ಬಳಿ ಹಣ ಇದೆಯೋ ಇಲ್ಲವೋ ಇದೆಲ್ಲವೂ ವಿಷಯವೇ ಆಗುವುದಿಲ್ಲ ಎಂದರು. ಸಿನಿಮಾ, ಸೀರಿಯಲ್‌ಗಳ ರೀತಿ ಬರೇ ಶ್ರೀಮಂತರು ಮಾತ್ರ ಐಎಎಸ್ ಪರೀಕ್ಷೆ ಬರೆಯಲು ಬರುವುದಿಲ್ಲ. ಅಲ್ಲಿ ರಾಜಕಾರಣಿಗಳು, ಬಡ ರೈತರ ಮಕ್ಕಳು, ಎಲ್ಲ ರೀತಿ ಜಾತಿಯವರು ಇರುತ್ತಾರೆ. ಅಲ್ಲಿಗೆ ಹೋದರೆ ಒಂದೊಳ್ಳೆ ಜಾಗಕ್ಕೆ ಬಂದಿದ್ದೇವೆ ಎನ್ನುವ ಸಮಾಧಾನ ಸಿಗುತ್ತದೆ ಎಂದು ಹೇಳಿದರು.ಎಐಟಿ ಕಾಲೇಜು ಪ್ರಾಂಶುಪಾಲ ಡಾ. ಸಿ.ಟಿ.ಜಯದೇವ್ ಮಾತನಾಡಿ, ನಾಗರಿಕ ಸೇವಾ ಹುದ್ದೆಗಳಿಗೆ ಹೋಗಬೇಕೆಂದು ಬಯಸುವವರಿಗೆ ಕೃಷಿಕ್ ಸರ್ವೋದಯ ಫೌಂಡೇಶನ್‌ನ ತರಬೇತಿ ಉತ್ತಮ ಅವಕಾಶವಾಗಿದೆ. ಇದರಲ್ಲಿ ದಕ್ಷ ಐಎಎಸ್ ಅಧಿಕಾರಿಗಳು ಇದ್ದಾರೆ. ಗ್ರಾಮೀಣ ಹಿನ್ನೆಲೆಯಿಂದ ಬಂದ ವಿದ್ಯಾರ್ಥಿಗಳಿಗೆ ತರಬೇತಿಯಿಂದ ಅತೀ ಹೆಚ್ಚು ಉಪಯೋಗ ವಾಗುತ್ತದೆ ಎಂದರು. ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಆಸಕ್ತಿ ಇರುವವರಿಗೆ ಮಾರ್ಗದರ್ಶನ ಮಾಡುವ ಸೂಕ್ತ ಸಂಸ್ಥೆಗಳು, ತರಗತಿಗಳು ಇರಲಿಲ್ಲ. ಈ ಹಿನ್ನೆಲೆಯಲ್ಲಿ ನಿವೃತ್ತ ಜಿಲ್ಲಾಧಿಕಾರಿ ಟಿ.ತಿಮ್ಮೇಗೌಡ ಮತ್ತು ಅವರ ತಂಡ ಕೃಷಿಕ್ ಫೌಂಡೇಶನ್ ಸ್ಥಾಪಿಸಿದೆ. ಇದಕ್ಕೆ ಎಐಟಿ ಕಾಲೇಜು ಸಂಪೂರ್ಣ ಸಹಕಾರ ನೀಡಿದ ಪರಿಣಾಮ ಇಂದು ಉತ್ತಮ ತರಬೇತಿ ನೀಡಲು ಸಾಧ್ಯವಾಗುತ್ತಿದೆ ಎಂದು ಹೇಳಿದರು. 21 ವರ್ಷಗಳ ವಿದ್ಯಾಭ್ಯಾಸ ತಮ್ಮ ವೈಯಕ್ತಿಕ ಬದುಕು, ವ್ಯವಹಾರಕ್ಕೆ ಮುಗಿಯಬಾರದು ಅದರ ಬದಲು ಐಎಎಸ್, ಕೆಎಎಸ್ ಪರೀಕ್ಷೆ ಬರೆದರೆ ಕುಟುಂಬಕ್ಕೂ ಹೆಮ್ಮೆ ಸಮಾಜಕ್ಕೂ ಸೇವೆಸಲ್ಲಿಸಬಹುದು ಇದರಿಂದ ಜಿಲ್ಲೆಗೂ ಹೆಮ್ಮೆ ಎಂದರು. ಕೃಷಿಕ್ ಸರ್ವೋದಯ ಫೌಂಡೇಶನ್ ಅಧ್ಯಕ್ಷ ಡಾ. ಜೆ.ಪಿ.ಕೃಷ್ಣೇಗೌಡ, ಸದಸ್ಯರಾದ ಉಮೇಶ್ಚಂದ್ರ, ರವಿ, ಲಕ್ಷ್ಮಣಗೌಡ, ಸಂಪನ್ಮೂಲ ವ್ಯಕ್ತಿಗಳಾದ ಸುಬ್ರಮಣ್ಯ, ಆಕಾಶ್ ಉಪಸ್ಥಿತರಿದ್ದರು.

12 ಕೆಸಿಕೆಎಂ 2ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಚಿಕ್ಕಮಗಳೂರಿನ ಎಐಟಿ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ತರಬೇತಿ ಶಿಬಿರವನ್ನು ಜಿಪಂ ಸಿಇಒ ಡಾ. ಗೋಪಾಲಕೃಷ್ಣ ಉದ್ಘಾಟಿಸಿದರು.

Share this article