ಮಣಿಪಾಲ: ಶ್ರದ್ಧೆ ಹಾಗೂ ಗುರಿಯನ್ನಿರಿಸಿಕೊಂಡು ಮುನ್ನಡೆಯುವ ವಿದ್ಯಾರ್ಥಿಗಳು ಬದುಕಿನಲ್ಲಿ ಯಶಸ್ಸು ಕಾಣುತ್ತಾರೆ. ವಿದ್ಯಾರ್ಥಿಗಳು ಸತ್ಪ್ರಜೆಗಳಾಗಿ ದೇಶದ ಉನ್ನತಿಗೆ ಕಾರಣೀಕರ್ತರಾಗಬೇಕು ಎಂದು ಉಡುಪಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ನಾಯಕ್ ಹೇಳಿದರು. ಆರ್.ಕೆ. ನಾಯಕ್ ಮತ್ತು ರಮಾದೇವಿ ಸಮಾಜ ಸೇವಾ ನಿಧಿ ಆಶ್ರಯದಲ್ಲಿ ನಡೆದ ವಿದ್ಯಾರ್ಥಿವೇತನ ಮತ್ತು ಅನಾರೋಗ್ಯ ಪೀಡಿತ ಕುಟುಂಬಗಳಿಗೆ ಧನ ಸಹಾಯ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಆರ್ಥಿಕವಾಗಿ ಸಂಕಷ್ಟದಲ್ಲಿರುವ ಮಕ್ಕಳಿಗೆ ತಮ್ಮಿಂದ ವೈಯಕ್ತಿಕ ಧನ ಸಹಾಯ ನೀಡಿ ಮಕ್ಕಳ ವಿದ್ಯೆಗೆ ಪ್ರಾಧಾನ್ಯತೆ ನೀಡುತ್ತಿರುವ ಮತ್ತು ಅನಾರೋಗ್ಯ ಪೀಡಿತ ಕುಟುಂಬಗಳಿಗೆ ಸಹಾಯಹಸ್ತ ಚಾಚುತ್ತಿರುವ ಸಂಸ್ಥೆಯ ದೇವತಾ ಕಾರ್ಯವನ್ನು ಶ್ಲಾಘಿಸಿ, ಸಮಾಜದಲ್ಲಿ ಆರ್ಥಿಕವಾಗಿ ಸಶಕ್ತರಿರುವವರೆಲ್ಲರೂ ಈ ರೀತಿ ಸಮಾಜದ ಋಣ ತೀರಿಸುವ ಕೆಲಸ ಮಾಡಬೇಕು ಎಂದರು. ಮಣಿಪಾಲದ ಆರ್‌ಎಸ್‌ಬಿ ಸಭಾಭವನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪಿಯುಸಿಯಲ್ಲಿ ರಾಜ್ಯ ಮಟ್ಟದ ರ್‍ಯಾಂಕ್ ಪಡೆದ ಮೂವರು ವಿದ್ಯಾರ್ಥಿಗಳನ್ನು ಆರ್.ಕೆ. ನಾಯಕ್ ಗೌರವಿಸಿದರು.