ಸ್ವಾತಂತ್ರ್ಯ ಯೋಧರಿಗೆ ಸೂಕ್ತ ಗೌರವ ದೊರಕಲಿ: ಪೊನ್ನಣ್ಣ

KannadaprabhaNewsNetwork |  
Published : Aug 18, 2026, 02:45 AM IST
ಕೊಡಗಿನ ನೈಜ ಸ್ವಾತಂತ್ರ್ಯ ಇತಿಹಾಸವನ್ನು ಸಾಕ್ಷೀಕರಿಸಿದ “ನೆಪ್ಪುರ ನಳತ್ ಮಾಂಜತ ಮೊಟ್ಟ್  ಕಾರ್ಯಕ್ರಮ.  | Kannada Prabha

ಸಾರಾಂಶ

ಭಾರತ ಸ್ವಾತಂತ್ರ್ಯದ ಇತಿಹಾಸದಲ್ಲಿ ಕೊಡಗು ತನ್ನದೇ ಅಧ್ಯಾಯ ಹೊಂದಿದ್ದು, ದೇಶದ ಸ್ವಾತಂತ್ರ್ಯಕ್ಕಾಗಿ ಈ ನಾಡಿನ ಹಿರಿಯರು ತಮ್ಮ ನಿಸ್ವಾರ್ಥ ಸೇವೆ ನೀಡಿದ್ದಾರೆ. ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಹೋರಾಟಗಾರರನ್ನು ಕೊಡಗು ನಮ್ಮ ದೇಶಕ್ಕೆ ನೀಡಿದೆ.

ಮೂರ್ನಾಡು: ಭಾರತ ಸ್ವಾತಂತ್ರ್ಯದ ಇತಿಹಾಸದಲ್ಲಿ ಕೊಡಗು ತನ್ನದೇ ಅಧ್ಯಾಯ ಹೊಂದಿದ್ದು, ದೇಶದ ಸ್ವಾತಂತ್ರ್ಯಕ್ಕಾಗಿ ಈ ನಾಡಿನ ಹಿರಿಯರು ತಮ್ಮ ನಿಸ್ವಾರ್ಥ ಸೇವೆ ನೀಡಿದ್ದಾರೆ. ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಹೋರಾಟಗಾರರನ್ನು ಕೊಡಗು ನಮ್ಮ ದೇಶಕ್ಕೆ ನೀಡಿದೆ. ಆದರೆ ಇಲ್ಲಿಯವರೆಗೆ ಅವರಿಗೆ ಸೂಕ್ತವಾದ ಗೌರವ ಸಿಗದಿರುವುದು ದುರದೃಷ್ಟಕರ ಎಂದು ವಿರಾಜಪೇಟೆ ಶಾಸಕ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಪೊನ್ನಣ್ಣ ವಿಷಾದ ವ್ಯಕ್ತಪಡಿಸಿದ್ದಾರೆ.ಭಾರತ ಸ್ವಾತಂತ್ರ್ಯದ 80ನೇ ವರ್ಷಾಚರಣೆ ಸಂದರ್ಭ ಆ.15ರಂದು ಯುನೈಟೆಡ್ ಕೊಡವ ಆರ್ಗನೈಜೇಷನ್ (ಯುಕೊ) ಹಾಗೂ ಮೂರ್ನಾಡು ಕೊಡವ ಸಮಾಜದ ಸಹಯೋಗದಲ್ಲಿ ಆಯೋಜಿಸಿದ್ದ ‘ನೆಪ್ಪುರ ನಳತ್ ಮಾಂಜತ ಮೊಟ್ಟ್’ ಎಂಬ ವಿಶೇಷ ಕಾರ್ಯಕ್ರಮದಲ್ಲಿ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಅವರೊಂದಿಗೆ ಮುಖ್ಯ ಅಥಿತಿಗಳಾಗಿ ಭಾಗವಹಿಸಿ ಕೊಡಗಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಿಗೆ ಪುಷ್ಪ ನಮನ ಸಲ್ಲಿಸಿ ಅವರು ವಿಶೇಷ ಗೌರವ ಸಮರ್ಪಿಸಿದರು.ಇದೇ ಸಂದರ್ಭ ಏರ್ಪಡಿಸಿದ್ದ ‘ನೆಪ್ಪುರ ಚೊಪ್ಪು’ ಎಂಬ ಕೊಡಗಿನ ಸ್ವಾತಂತ್ರ್ಯ ಹೋರಾಟಗಾರರ ನಿಸ್ವಾರ್ಥ ಬದುಕು ಹಾಗೂ ಅವರ ತ್ಯಾಗ ಬಲಿದಾನಗಳನ್ನು ಮೆಲುಕು ಹಾಕುವ ಛಾಯಾಚಿತ್ರ ಪ್ರದರ್ಶನ ವೀಕ್ಷಿಸಿದ ಶಾಸಕದ್ವಯರು, ನಮ್ಮ ಇಂದಿನ ನೆಮ್ಮದಿಯ ಬದುಕಿಗೆ ಈ ನಾಡಿನ ಹಿರಿಯರ ತ್ಯಾಗ ಬಲಿದಾನಗಳೇ ಮೂಲ ಕಾರಣ. ಈ ಸ್ವಾತಂತ್ರ್ಯ ದಿನದಂದು ಅವರ ತ್ಯಾಗ ಬಲಿದಾನಗಳನ್ನು ನೆನಪಿಸುವ, ಇತಿಹಾಸದ ಮಹತ್ವವನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಅದ್ಭುತ ಪರಿಕಲ್ಪನೆಯ ಇಂತಹ ಅರ್ಥಪೂರ್ಣ ಹಾಗೂ ಭಾವನಾತ್ಮಕ ಕಾರ್ಯಕ್ರಮ ಆಯೋಜಿಸಿದ ‘ಯುಕೊ’ ಹಾಗೂ ಮೂರ್ನಾಡು ಕೊಡವ ಸಮಾಜದ ಪ್ರಯತ್ನವನ್ನು ಶಾಸಕದ್ವಯರು ಶ್ಲಾಘಿಸಿದರು.

ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮಾತನಾಡಿ, ನೆನಪಿನಂಗಳದಲ್ಲಿ ಮರೆಯಾಗಿ ಹೋಗಿರುವ ಕೊಡಗಿನ ಸ್ವಾತಂತ್ರ್ಯ ಹೋರಾಟಗಾರರ ಸೇವೆ, ತ್ಯಾಗ, ಬಲಿದಾನಗಳನ್ನು ಪರಿಚಯಿಸುವ ಮಾಹಿತಿಗಳನ್ನೊಳಗೊಂಡ ಒಂದು ಸಮಗ್ರ ಮ್ಯೂಸಿಯಂ ಸ್ಥಾಪನೆಯಾಗಬೇಕಾದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಮಡಿಕೇರಿಯ ಕೊಡವ ಹೆರಿಟೇಜ್ ಕೇಂದ್ರ ನಿರ್ಮಿಸಲು ಮೀಸಲಿಟ್ಟ ಸ್ಥಳದಲ್ಲಿ ಪ್ರತ್ಯೇಕವಾಗಿ ಕೊಡ ಗಿನ ಸ್ವಾತಂತ್ರ್ಯ ಹೋರಾಟಗಾರರ ಮ್ಯೂಸಿಯಂ ನಿರ್ಮಿಸಲು ತಮ್ಮ ಪೂರ್ಣ ಸಹಕಾರ ನೀಡುವುದಾಗಿ ಘೋಷಿಸಿದರು.

ಯುಕೊ ಅದ್ಯಕ್ಷ, ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ಕಾರದಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಕೆಲವೇ ಕೆಲವು ಹೋರಾಟಗಾರರನ್ನು ಗುರುತಿಸಿ ಗೌರವ ನೀಡಲಾಗುತ್ತಿದೆ. ಆದರೆ ಇಲ್ಲಿನ ನೈಜ ಹೋರಾಟಗಾರರಿಗೆ ಸ್ಥಳೀಯವಾಗಿ ಸಾರ್ವಜನಿಕರು ಹಾಗೂ ಸರ್ಕಾರದಿಂದ ಗೌರವ ನೀಡಿ ಸ್ಮರಿಸುವ ಕೆಲಸವಾಗಬೇಕು ಎಂದು ಹೇಳಿದರು.

ಮೂರ್ನಾಡು ಕೊಡವ ಸಮಾಜದ ಅಧ್ಯಕ್ಷ ತೇಲಪಂಡ ಸುಬ್ಬಯ್ಯ ಸ್ವಾಗತಿಸಿ, ಮುಂದೆಯೂ ಇಂತಹ ಅರ್ಥ ಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಕೊಡವ ಸಮುದಾಯದ ಅಸ್ತಿತ್ವ ಉಳಿಸುವ ನಿಟ್ಟಿನಲ್ಲಿ ಸಂಕಲ್ಪಬದ್ಧರಾಗಿ ಕೆಲಸ ಮಾಡಲಿದ್ದೇವೆ ಎಂದು ಹೇಳಿದರು. ‘ನೆಪ್ಪುರ ಚೊಪ್ಪು’ ಛಾಯಾಚಿತ್ರ ಪ್ರದರ್ಶನವನ್ನು ಕೊಡಗಿನ ಗಾಂಧಿ ಪಂದ್ಯಂಡ ಬೆಳ್ಯಪ್ಪ ಹಾಗೂ ಸ್ವಾತಂತ್ರ್ಯ ಹೋರಾಟಗಾರ್ತಿ ಪಂದ್ಯಂಡ ಸೀತಮ್ಮ ಬೆಳ್ಯಪ್ಪ ಅವರ ಪುತ್ರ ಪಂದ್ಯಂಡ ವಿಜಯ್ ಬೆಳ್ಯಪ್ಪ, ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಮನ್ ಸುಬ್ರಮಣಿ, ಬ್ರಹ್ಮಗಿರಿ ವಾರಪತ್ರಿಕೆ ಸಂಪಾದಕ ಉಳ್ಳಿಯಡ ಪೂವಯ್ಯ ಹಾಗೂ ಏಕೀಕರಣ ರಂಗದ ಪ್ರಮುಖರಾದ ಅಜ್ಜೀನಂಡ ತಮ್ಮೂ ಪೂವಯ್ಯ ಜಂಟಿಯಾಗಿ ಉದ್ಘಾಟಿಸಿದರು. ಪೆಮ್ಮಡಿಯಂಡ ವೇಣು ಅಪ್ಪಣ್ಣ ಸಾಂಪ್ರದಾಯಿಕವಾಗಿ ತಪ್ಪಡ್ಕವನ್ನು ಕಟ್ಟುವ ಮೂಲಕ ನಾಡಿನ ಒಳಿತಿಗಾಗಿ ಪ್ರಾರ್ಥಿಸಿದರು.

ಹೆಸರಾಂತ ಗಾಯಕರಾದ, ಚೆಕ್ಕೇರ ಪಂಚಮ್ ಬೋಪಣ್ಣ, ಬೊಟ್ಟೋಳಂಡ ಅಶಿತಾ ಬೋಪಣ್ಣ, ಪಳಂಗಂಡ ಮೇಘನಾ ನಾಚಪ್ಪ, ರೀಟಾ ನಾಚಪ್ಪ, ಜೂ. ಕಿಶೋರ್ ಕುಮಾರ್ ಖ್ಯಾತಿಯ ಮಾಳೇಟಿರ ಅಜಿತ್ ಪೂವಣ್ಣ ದೇಶಭಕ್ತಿ ಪ್ರಸ್ತುತಪಡಿಸಿದರು.ಸೋಮೆಯಂಡ ಕೌಶಲ್ಯ ಸತೀಶ್, ಪುದಿಯೊಕ್ಕಡ ಸುಜಾತ ದೇವಯ್ಯ, ಅಮ್ಮಾಟಂಡ ವಿಂದ್ಯ ದೇವಯ್ಯ, ಬಾಚೆಟ್ಟಿರ ರೇಶ್ಮ ಸುಬ್ಬಯ್ಯ ಹಾಗೂ ಪೆಮ್ಮಂಡ ಗೀತಾ ಪವಿತ್ರ ಕೊಡಗಿನ ಸ್ವಾತಂತ್ರ್ಯ ಹೋರಾಟಗಾರರ ಕುರಿತು ವಿಚಾರ ಮಂಡನೆ ಮೂಲಕ ನುಡಿನಮನ ಸಲ್ಲಿಸಿದರು.

ಚೆಯ್ಯಂಡ ಬನಿತ್ ಬೋಜಣ್ಣ ಹಾಗೂ ಕಳ್ಳಿಚಂಡ ದೀನಾ ಉತ್ತಪ್ಪ ನಿರೂಪಿಸಿದರು. ಮೂರ್ನಾಡು ಕೊಡವ ಸಮಾಜದ ಕಾರ್ಯದರ್ಶಿ ಚಂಗಂಡ ಸೂರಜ್ ವಂದಿಸಿದರು.

ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ವಿರಾಜಪೇಟೆ ಕೊಡವ ಸಮಾಜ ಅಧ್ಯಕ್ಷ ಅಮ್ಮಣಿಚಂಡ ರವಿ ಉತ್ತಪ್ಪ, ಕಾರ್ಯದರ್ಶಿ ಮಾಳೇಟಿರ ಶ್ರೀನಿವಾಸ್, ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಮುಂಡಂಡ ನಾಣಯ್ಯ, ವಿವಿದ ಕೊಡವ ಸಮಾಜಗಳ ಅದ್ಯಕ್ಷರು, ಮೂರ್ನಾಡು ಕೊಡವ ಸಮಾಜದ ಉಪಾಧ್ಯಕ್ಷ ಕೋಟೆರ ರಾಜ, ಖಜಾಂಚಿ ಅಮ್ಮಾಟಂಡ ದೇವಯ್ಯ, ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಪಳಂಗಂಡ ರೇಖ, ಕೊಡವ ತಕ್ಕ್ ಎಳ್ತ್ ಕಾರಡ ಕೂಟದ ಅಧ್ಯಕ್ಷ ಚಟ್ಟಂಗಡ ರವಿ ಸುಬ್ಬಯ್ಯ, ನಾಡು ತಕ್ಕರಾದ ಪಳಂಗಂಡ ಕೇಶು, ಕೋಟೆರ ರಷ್ಯ, ಪಳಂಗಂಡ ವಿಠಲ, ವಿವಿದ ಪೊಮ್ಮಕ್ಕಡ ಕೂಟದ ಸದಸ್ಯರು, ವಿವಿಧ ಕೊಡವ ಕೂಟಗಳ ಸದಸ್ಯರು. ಚೇನಂಡ ಗಿರೀಶ್, ಸುರೇಶ್, ಸಮಾಜ ಸೇವಕ ಅವರೆಮಾದಂಡ ಶರಣ್, ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯ ಚೊಟ್ಟೆಯಂಡ ಸಂಜು ಕಾವೇರಪ್ಪ, ಪುತ್ತರಿರ ಪಪ್ಪು ತಿಮ್ಮಯ್ಯ, ಫೀ.ಮಾ. ಕಾರ್ಯಪ್ಪ ಜ. ತಿಮ್ಮಯ್ಯ ಫೌಂಡೇಶನ್‌ನ ಪಾಲೇಂಗಡ ಅಮಿತ್ ಭೀಮಯ್ಯ, ಸ್ವಾತಂತ್ರ್ಯ ಹೋರಾಟಗಾರರ ಕುಟುಂಬ ಸದಸ್ಯರು ಹಾಗೂ ಗಣ್ಯರು ಹಾಗೂ ಯುಕೊ ಸದಸ್ಯರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಲ್‌ಎಲ್‌ಸಿ–ಎಚ್‌ಎಲ್‌ಸಿ ಕಾಲುವೆಗಳಿಗೆ ಜಂಟಿ ನೀರು ಹರಿಸಲು ಆಗ್ರಹ
ಪೊಲೀಸ್‌ ಸರ್ಪಗಾವಲಿನಲ್ಲಿ ಬಸವರಾಜ ರೆಡ್ಡಿ ಅಂತ್ಯಸಂಸ್ಕಾರ