ಕಠಿಣ ಪರಿಶ್ರಮದಿಂದ ಜೀವನದಲ್ಲಿ ಯಶಸ್ಸು ಸಾಧ್ಯ

KannadaprabhaNewsNetwork | Published : Jan 17, 2025 12:45 AM

ಸಾರಾಂಶ

ಯುವ ಜನತೆ ನಕಾರಾತ್ಮಕ ಚಿಂತನೆಗಳನ್ನು ತೊರೆದು ಸಕಾರಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಕಠಿಣ ಪರಿಶ್ರಮ ಪಟ್ಟಲ್ಲಿ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ.

ಸಂಡೂರು: ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ವ್ಯಕ್ತಿಗಳು ಸಮಾಜದಲ್ಲಿ ತಪ್ಪು ಮಾಡಲು ಸಾಧ್ಯವಿಲ್ಲ. ಯುವ ಜನತೆ ನಕಾರಾತ್ಮಕ ಚಿಂತನೆಗಳನ್ನು ತೊರೆದು ಸಕಾರಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಕಠಿಣ ಪರಿಶ್ರಮ ಪಟ್ಟಲ್ಲಿ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಸಂಡೂರಿನ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ದೇವರೆಡ್ಡಿಯವರು ಅಭಿಪ್ರಾಯಪಟ್ಟರು.

ಪಟ್ಟಣದ ಕೃಪಾನಿಲಯ ಶಾಲೆಯಲ್ಲಿ ಬುಧವಾರ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ವಕೀಲರ ಸಂಘ ಹಾಗೂ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಯುವ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ವಿವೇಕಾನಂದರಂತಹ ಮಹಾನ್ ವ್ಯಕ್ತಿಗಳ ಚರಿತ್ರೆ ಓದಿ ತಿಳಿಯಬೇಕು. ಉತ್ತಮ ಆಲೋಚನೆಗಳಿಂದ ಸಮಾಜದಲ್ಲಿ ಮಹಾನ್ ವ್ಯಕ್ತಿಗಳಾಗಿದ್ದಾರೆ. ಅಂತಹವರ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು. ನಾನು ಎನ್ನುವುದನ್ನು ತೊರೆದು ನಾವು ಎನ್ನುವ ಮನೋಭಾವ ರೂಢಿಸಿಕೊಳ್ಳಬೇಕು. ಪ್ರತಿಯೊಬ್ಬರು ತಂದೆ-ತಾಯಿ, ಗುರು ಹಿರಿಯರನ್ನು ಗೌರವಿಸಬೇಕು ಎಂದರು.

ಯುವ ಜನಾಂಗಕ್ಕೆ ಪ್ರೇರಣೆ:

ಹಿರಿಯ ವಕೀಲರಾದ ಆರ್. ವೀರೇಶಪ್ಪ ಅವರು ರಾಷ್ಟ್ರೀಯ ಯುವ ದಿನಾಚರಣೆ ಕುರಿತು ಉಪನ್ಯಾನ ನೀಡಿ, ಸ್ವಾಮಿ ವಿವೇಕಾನಂದರ ಜೀವನ ಸಾಧನೆ ಯುವ ಜನಾಂಗಕ್ಕೆ ಪ್ರೇರಣೆಯಾಗಿದೆ. ದೇಶದ ಸಂಸ್ಕೃತಿಯನ್ನು ಪ್ರಪಂಚಕ್ಕೆ ಪರಿಚಯಿಸಿದ ಮಹಾನ್ ವ್ಯಕ್ತಿ ಸ್ವಾಮಿ ವಿವೇಕಾನಂದರು. ಅವರ ಜನ್ಮ ದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತಿದೆ. ಅವರು ತಮ್ಮ ತಂದೆ-ತಾಯಿಗಳಿಂದ ಸ್ವಾವಲಂಬನೆಯ ಪಾಠವನ್ನು ಕಲಿತರು. ತಮ್ಮ ಜೀವನವನ್ನು ಸಮಾಜದ ಸುಧಾರಣೆ, ದೇಶಕ್ಕಾಗಿ ಮುಡಿಪಾಗಿಟ್ಟವರು. ಯುವ ಜನತೆ ಇನ್ನೊಬ್ಬರಿಗೆ ಭಾರವಾಗದಂತೆ ಜೀವನವನ್ನು ರೂಢಿಸಿಕೊಳ್ಳಬೇಕಿದೆ. ಅವರ ಆದರ್ಶಗಳು ಎಲ್ಲರಿಗೂ ಮಾರ್ಗದರ್ಶಿಗಳಾಗಿವೆ. ಅವುಗಳನ್ನು ಎಲ್ಲರೂ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದರು.

ಹಿರಿಯ ವಕೀಲರಾದ ಟಿ.ಎಂ. ಶಿವಕುಮಾರ್, ಕೃಪಾನಿಲಯ ಸಂಸ್ಥೆಯ ವ್ಯವಸ್ಥಾಪಕಿ ಸಿಸ್ಟರ್ ಸಿಸಿಲಿ ಫೆಲಿಕ್ಸ್ ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ಅರಳಿ ಮಲ್ಲಪ್ಪ ಅಧ್ಯಕ್ಷೀಯ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಶರಣ ಬಸಪ್ಪ, ವಕೀಲರ ಸಂಘದ ಉಪಾಧ್ಯಕ್ಷ ಕೆ.ಆರ್. ದಾದಾಪೀರ್, ಕಾರ್ಯದರ್ಶಿ ಎಚ್. ಕುಮಾರಸ್ವಾಮಿ, ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯರಾದ ಮಂಜುನಾಥಗೌಡ, ಎಂ.ಪಿ.ಎಂ. ಸುರೇಂದ್ರನಾಥ್, ಹಲವು ವಕೀಲರು, ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಕೀಲರಾದ ಡಿ. ನಾಗರಾಜ ನಿರೂಪಿಸಿದರು. ಮಹಾರುದ್ರಪ್ಪನವರು ವಂದಿಸಿದರು.

Share this article