ಜಾತ್ರೆ । ಭಾವಚಿತ್ರದೊಂದಿಗೆ ಉತ್ಸವ ಮೂರ್ತಿ ವೀರಭದ್ರನ ಮಹೋತ್ಸವ । ಐದು ವರ್ಷದಿಂದ ಧಾರ್ಮಿಕ ಉತ್ಸವ ಆಚರಣೆ । ಪ್ರಮುಖ ಮಾರ್ಗಗಳಲ್ಲಿ ಸಂಚರಿಸುವ ಕಟ್ಟಿಗೆ ಆನೆ
ಕಲ್ಯಾಣ ಕರ್ನಾಟಕದ ಇತಿಹಾಸ ಪ್ರಸಿದ್ಧ ಹಾಗೂ ಧಾರ್ಮಿಕ ಮಹತ್ವ ಹೊಂದಿರುವ ಹುಮನಾಬಾದ ಆರಾಧ್ಯ ದೈವ, ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಹಿನ್ನೆಲೆ ಬುಧವಾರ ರಾತ್ರಿ ಪಲ್ಲಕ್ಕಿ ಉತ್ಸವದ ಜತೆಗೆ ಹೊರಟ ಈ ವರ್ಷದ ಪ್ರಮುಖ ಆಕರ್ಷಣೆಯಾದ ಆನೆಯ ಮೇಲಿನ ಅಂಬಾರಿ ಮೇಲೆ ವೀರಭದ್ರೇಶ್ವರ ಭಾವಚಿತ್ರದ ಭವ್ಯ ಮೆರವಣಿಗೆ ಜರುಗಿತು.
ದಶಕಗಳ ಹಿಂದೆ ಅಂಬಾರಿಯ ಮೇಲೆ ವೀರಭದ್ರೇಶ್ವರನ ಅಲಂಕೃತ ಉತ್ಸವ ಮೂರ್ತಿಯ ಮೆರವಣಿಗೆ ಮಾಡಲಾಗುತ್ತಿತ್ತು ಎಂಬ ನಂಬಿಕೆ ಆಧಾರದ ಮೇಲೆ. ಕಾಲ ಬದಲಾದಂತೆ ಪ್ರತಿ ವರ್ಷ ಐದು ದಿವಸ ಪಟ್ಟಣದ ಪ್ರಮುಖ ಮಾರ್ಗಗಳಲ್ಲಿ ಕಟ್ಟಿಗೆಯ ಆನೆಯಯೊಂದಿಗೆ ಅಲಂಕೃತ ಉತ್ಸವ ಮೂರ್ತಿಯ ಪಲ್ಲಕಿ ಮೆರವಣಿಗೆ ನಡೆದುಕೊಂಡು ಬಂದಿದೆ.ಈ ವರ್ಷ ಭಕ್ತರ ಬಹು ದಿನಗಳ ಕನಸಿನ ಮೇರೆಗೆ ದಿವಂಗತ ಬಸವರಾಜ ಪಾಟೀಲ್ ಪರಿವಾರದಿಂದ ಜೀವಂತ ಆನೆಯ ತರುವ ಮೂಲಕ ದೇವಸ್ಥಾನ ಬಳಿ ಜಂಬೂ ಸವಾರಿಗೆ ರೇಣುಕಾ ವೀರ ಗಂಗಾಧರ ಶಿವಾಚಾರ್ಯ, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವೀರಣ್ಣ ಪಾಟೀಲ್, ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ ಪಾಟೀಲ್, ಡಿಸಿಸಿ ಬ್ಯಾಂಕ ಉಪಾಧ್ಯಕ್ಷ ಅಭಿಷೇಕ ಪಾಟೀಲ್, ಕೆಎಂಎಫ್ ಸದಸ್ಯ ರೇವಣಸಿದ್ದಪ್ಪ ಪಾಟೀಲ್, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯರು ಪುಷ್ಪಾರ್ಚನೆಯ ಮೂಲಕ ಕಲಬುರಗಿ ಜಿಲ್ಲೆಯ ಕಡಗಂಚಿಯ ಗಜರಾಣಿಗೆ ವಿಶೇಷ ಪೂಜೆ ಸಲ್ಲಿಸಿದರು.
ಜೀವಂತ ಆನೆಯಿಂದ ಮೆರವಣಿಗೆ ಸಾಗುವ ದಾರಿಯುದ್ದಕ್ಕೂ ಮಾತೆಯರು, ಮಕ್ಕಳು ವೀರಭದ್ರ ಸ್ವಾಮಿ ಪ್ರತಿ ಮನಸ್ಸು, ಹೃದಯಗಳಲ್ಲೂ ಸಂತೋಷ ಎದ್ದು ಕಾಣುತ್ತಿತ್ತು. ಕಣ್ತುಂಬಿಕೊಂಡ ಭಕ್ತಾದಿಗಳು ಕೈ ಮುಗಿದು ಭಕ್ತಿ ಸಲ್ಲಿಸಿದರು. ಅನೇಕರು ಇದೇ ಸಂದರ್ಭದಲ್ಲಿ ಆನೆಯೊಂದಿಗೆ ಪೋಟೋ ತೆಗೆದುಕೊಳ್ಳುತ್ತಿರುವುದು ವಿಶೇಷವಾಗಿತ್ತು. ಆನೆಯು ಭಕ್ತರಲ್ಲಿ ಎಂದಿಲ್ಲದ ಖುಷಿ ತಂದಿತ್ತು.
ಡಿವೈಎಸ್ಪಿ ಜೆಎಸ್ ನ್ಯಾಮೇಗೌಡರ್ ನೇತೃತ್ವದಲ್ಲಿ ಮುಂಜಾಗ್ರತಾ ಕ್ರಮವಾಗಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಮೆರವಣಿಗೆ ಹಿನ್ನೆಲೆಯಲ್ಲಿ ಹಿಂದೆಂದಿಗಿಂತಲೂ ಅತ್ಯಧಿಕ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.