ಕೊಪ್ಪಳ: ಬದುಕಿನಲ್ಲಿ ಬರುವ ಅವಕಾಶ ಸದ್ಬಳಕೆಯಿಂದ ಯಶಸ್ಸು ಸಾಧ್ಯ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಹೇಳಿದರು.
ಶಂಭುಲಿಂಗನಗೌಡ ಪಾಟೀಲ್ ಮೇರು ವ್ಯಕ್ತಿತ್ವದ ನಾಯಕರಾಗಿದ್ದು, ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ನಿರಂತರವಾಗಿ ಶ್ರಮಿಸಿದ ಅವರು ಸಂಘಟನಾ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಎಂದರು.
ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿ, ಶಂಭುಲಿಂಗನಗೌಡ ಪಾಟೀಲ್ ಕಠಿಣ ಪರಿಶ್ರಮದಿಂದ ಬೆಳೆದ ಸಂಘಟನಾ ಚತುರ ನಾಯಕರು. ಶಿಕ್ಷಕರ ಸಂಘಟನೆ ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಜ್ಞಾನದ ಮೂಲಕ ಸಮಾಜ ನಿರ್ಮಾಣ ಸಾಧ್ಯ. ಶಿಕ್ಷಕರು ಮಕ್ಕಳಿಗೆ ಜ್ಞಾನ ನೀಡುವ ಮೂಲಕ ರಾಷ್ಟ್ರ ನಿರ್ಮಾಣದ ಕಾರ್ಯ ಮಾಡುತ್ತಾರೆ ಎಂದರು.ವಿಪ ಸದಸ್ಯೆ ಹೇಮಲತಾ ನಾಯಕ್ ಮಾತನಾಡಿ, ಕಾಲೇಜು ದಿನಗಳಿಂದಲೇ ಶಂಭುಲಿಂಗನಗೌಡ ನಾಯಕತ್ವದ ಗುಣ ಗಮನಿಸಿದ್ದೇನೆ. ವಿದ್ಯಾರ್ಥಿ ಜೀವನದಲ್ಲೇ ಸಂಘಟನಾ ಕೌಶಲ್ಯ ಬೆಳೆಸಿಕೊಂಡ ಅವರು ಸರ್ಕಾರಿ ಸೇವೆಗೆ ಸೇರಿದ ಆನಂತರ ಶಿಕ್ಷಕರ ಸಂಘಟನೆಯ ಮೂಲಕ ರಾಜ್ಯಮಟ್ಟದ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಅನೇಕ ಸರ್ಕಾರಿ ನೌಕರರು ತಮ್ಮ ವೃತ್ತಿ ಹಾಗೂ ಕುಟುಂಬಕ್ಕೆ ಮಾತ್ರ ಸೀಮಿತರಾಗುತ್ತಾರೆ. ಆದರೆ ಶಂಭುಲಿಂಗನಗೌಡ ವೃತ್ತಿಯ ಜತೆಗೆ ಸಂಘಟನಾ ಕ್ಷೇತ್ರದಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡು ಜನರ ಮೆಚ್ಚುಗೆ ಪಡೆದಿದ್ದಾರೆ ಎಂದರು.
ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, 38 ವರ್ಷಗಳ ಕಾಲ ಶಿಕ್ಷಣ ಎಂಬ ಪವಿತ್ರ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಶಂಭುಲಿಂಗನಗೌಡ ಕಾರ್ಯ ಶ್ಲಾಘನೀಯ. ನಿವೃತ್ತಿ ಬಳಿಕವೂ ಸಮಾಜಮುಖಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಸುರೇಶ ಭೂಮರೆಡ್ಡಿ, ಉದ್ಯಮಿ ಬಸವರಾಜ ಪುರದ, ಶಿವಾನಂದ ನಾಯಕ್, ಹನುಮರಡ್ಡಿ ಅಂಗನಕಟ್ಟಿ, ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ, ರಾಜ್ಯ ಉಪಾಧ್ಯಕ್ಷ ನಾಗರಾಜ ಜುಮ್ಮಣ್ಣನವರ್, ರುದ್ರಣ್ಣ, ಮಲ್ಲಿಕಾರ್ಜುನ ಗೌಡ, ವೆಂಕನಗೌಡ ಹಿರೇಗೌಡರ, ಬೀರಪ್ಪ ಅಂಡಗಿ, ರವಿ ಉತ್ತಂಗಿ, ರಮೇಶ ವೈದ್ಯ ಉಪಸ್ಥಿತರಿದ್ದರು.
ಶಂಭುಲಿಂಗನಗೌಡ ಪಾಟೀಲ್ ಹಲಗೇರಿ ಅವರನ್ನು ಶಾಲು, ಹಾರ, ಫಲಕ ಹಾಗೂ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.