ಸಾಗರ: ಪಠ್ಯದ ಓದಿನಿಂದಲೇ ಸಾಧನೆ ಮಾಡಿ ಬದುಕು ಕಟ್ಟಿಕೊಳ್ಳಬಹುದು ಎನ್ನುವುದು ಸತ್ಯಕ್ಕೆ ದೂರವಾದ ಸಂಗತಿ. ನೃತ್ಯ, ಸಂಗೀತ ಮುಂತಾದ ಸಾಂಸ್ಕೃತಿಕ ಕಲೆಗಳಲ್ಲಿಯೂ ಸಾಧನೆ ಮಾಡಿದರೆ ಬದುಕು ಕಟ್ಟಿಕೊಳ್ಳಬಹುದು ಎಂದು ಮೈಸೂರಿನ ನೂಪುರ ಕಲಾವಿದರು ಸಾಂಸ್ಕೃತಿಕ ಟ್ರಸ್ಟ್‌ನ ನಿರ್ದೇಶಕ ನಾಟ್ಯಾಚಾರ್ಯ ಪ್ರೊ.ಕೆ. ರಾಮಮೂರ್ತಿ ರಾವ್ ಅಭಿಪ್ರಾಯಪಟ್ಟರು.
ಭರತನಾಟ್ಯ ರಂಗ ಪ್ರವೇಶವೆಂದರೆ ಕಲಾವಿದ ಸುಮಾರು ೧೦-೧೫ ವರ್ಷ ಕಲಿತಿದ್ದನ್ನು ೩ ಗಂಟೆ ಕಾಲ ಪೂರ್ಣಾವಧಿ ಪ್ರದರ್ಶನವನ್ನು ಕಲಾವಿಮರ್ಷಕರು, ಸಾರ್ವಜನಿಕರಿಗೆ ತೋರಿಸುವ ಸುದಿನ. ಇದು ಕಲಾವಿದ ಹಾಗೂ ಕಲಿಸಿದ ಗುರುಗಳಿಗೆ ಪರೀಕ್ಷೆಯ ದಿನ. ದಣಿವಿಲ್ಲದಂತೆ ೧.೫ ಗಂಟೆ ನೃತ್ಯ ಮಾಡುವುದು ಸಣ್ಣ ಕಾರ್ಯವಲ್ಲ. ಕಲೆಯಿಂದ ಸಿಗುವ ಸುಖ ಭಾಷೆ, ಪದದಲ್ಲಿ ವರ್ಣಿಸಲು ಸಾಧ್ಯವಿಲ್ಲ, ಅನುಭವಿಸಿಯೇ ತೀರಬೇಕು ಎಂದು ಹೇಳಿದರು.
ಬೆಂಗಳೂರಿನ ಶರತ್ ನೃತ್ಯಾನುಸಂಧಾನ ಸಂಸ್ಥೆ ನಿರ್ದೇಶಕ ವಿದ್ವಾನ್ ಟಿ.ಎಸ್. ಶರತ್ ಮಾತನಾಡಿ, ಮನುಷ್ಯ ತನ್ನ ಭಾವನೆ ವ್ಯಕ್ತಪಡಿಸಲು ನಾಟ್ಯವೂ ಸೇರಿದಂತೆ ಹಲವು ಮಾಧ್ಯಮ ಬಳಸಿಕೊಳ್ಳುತ್ತಾನೆ. ಕಲ್ಲು ಕೆತ್ತುವುದರಿಂದ ಶಿಲ್ಪಕಲೆಯಾದರೆ ಕುಂಚದಿಂದ ಚಿತ್ರಿಸಿದರೆ ಚಿತ್ರಕಲೆಯಾಗುತ್ತದೆ. ಆದರೆ ಎಲ್ಲ ಕಲೆಯಲ್ಲೂ ಹೆಚ್ಚು ಕಷ್ಟದ್ದು ನೃತ್ಯ. ಕಲಾವಿದರು ತಮ್ಮ ಅಭಿನಯದ ಮೂಲಕ ಎಲ್ಲ ಭಾವನೆಯನ್ನೂ ಪ್ರೇಕ್ಷಕರಿಗೆ ಮನವರಿಕೆ ಮಾಡಿಕೊಡಬೇಕಾಗುತ್ತದೆ ಎಂದರು.ಹಿರಿಯ ರಂಗಕರ್ಮಿ ಮಂಜುನಾಥ ಜೇಡಿಕುಣಿ ಮಾತನಾಡಿದರು. ಚಂದನರವರು ಸತತವಾಗಿ ಮೂರು ಗಂಟೆ ಕಾಲ ವಿವಿಧ ನಾಟ್ಯ ಪ್ರಸ್ತುತ ಪಡಿಸಿದರು. ನಟುವಾಂಗದಲ್ಲಿ ವಿದುಷಿ ಡಾ. ವಿಜಯಲಕ್ಷ್ಮೀ ಹೆಗಡೆ, ಹಾಡುಗಾರಿಕೆಯಲ್ಲಿ ವಿದ್ವಾನ್ ರಘುರಾಂ ರಾಜಗೋಪಾಲನ್, ಮೃದಂಗದಲ್ಲಿ ಬೆಂಗಳೂರಿನ ವಿದ್ವಾನ್ ಸಾಯಿ ವಂಶಿ, ಕೊಳಲು ವಿದ್ವಾನ್ ಶಶಾಂಕ್ ಜೋಡಿದಾರ್, ವೀಣೆಯಲ್ಲಿ ವಿದುಷಿ ಅಪೂರ್ವ ಅನಿರುದ್ಧ್, ರಿದಂಪ್ಯಾಡ್ನಲ್ಲಿ ವಿದ್ವಾನ್ ಸುಮಧರ್ ಆನೂರ್ ಸಹಕರಿಸಿದರು.