ಸತತ ಪ್ರಯತ್ನದಿಂದ ಯಶಸ್ಸು ಸಾಧ್ಯ: ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ

KannadaprabhaNewsNetwork |  
Published : May 09, 2026, 02:15 AM IST
ಅಭಿನಂದನಾ ಸಮಾರಂಭ  | Kannada Prabha

ಸಾರಾಂಶ

ಆತ್ಮ ಸ್ಥೈರ್ಯದಿಂದ ಕಾರ್ಯ ಸಿದ್ಧಿ ಸಾಧ್ಯ. ವಿದ್ಯಾರ್ಥಿಗಳು ಓದಿನ ಜೊತೆಗೆ ಇತರೆ ಉತ್ತಮ ಹವ್ಯಾಸಗಳನ್ನೂ ರೂಢಿಸಿಕೊಳ್ಳಬೇಕು. ಜೀವನದಲ್ಲಿ ಸತತ ಪ್ರಯತ್ನ ಮುಖ್ಯವಾಗಿದ್ದು, ಪ್ರಯತ್ನದಿಂದ ಯಶಸ್ಸು ಸಾಧ್ಯ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಹೇಳಿದರು.

ಕಾರವಾರ: ಆತ್ಮ ಸ್ಥೈರ್ಯದಿಂದ ಕಾರ್ಯ ಸಿದ್ಧಿ ಸಾಧ್ಯ. ವಿದ್ಯಾರ್ಥಿಗಳು ಓದಿನ ಜೊತೆಗೆ ಇತರೆ ಉತ್ತಮ ಹವ್ಯಾಸಗಳನ್ನೂ ರೂಢಿಸಿಕೊಳ್ಳಬೇಕು. ಜೀವನದಲ್ಲಿ ಸತತ ಪ್ರಯತ್ನ ಮುಖ್ಯವಾಗಿದ್ದು, ಪ್ರಯತ್ನದಿಂದ ಯಶಸ್ಸು ಸಾಧ್ಯ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಹೇಳಿದರು.

ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆದ 2025-26ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಜಿಲ್ಲೆಗೆ ಅತೀ ಹೆಚ್ಚು ಅಂಕ ಪಡೆದ ಮಕ್ಕಳ ಅಭಿನಂದನಾ ಸಮಾರಂಭ ಮತ್ತು ಸಂವಾದದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳು ಕೇವಲ ಅಂಕ ಗಳಿಸುವ ಉದ್ದೇಶದಿಂದ ಮಾತ್ರ ಓದದೇ ಜೀವನದಲ್ಲಿ ತಮ್ಮ ಕನಸನ್ನು ನನಸು ಮಾಡಿಕೊಳ್ಳುವ ಕಡೆಗೆ ಗಮನ ಹರಿಸಬೇಕು. ಅಂಕ ಕೇವಲ ಮಾನದಂಡವಾಗಿದ್ದು, ಒಂದೊಂದು ಅಂಕ ವಿದ್ಯಾರ್ಥಿಯ ಮನೋ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಈ ಬಾರಿಯ ಪರೀಕ್ಷೆಯಲ್ಲಿ ಇಲಾಖೆಯ ಪ್ರಯತ್ನ, ಪಾಲಕರ ಬೆಂಬಲ, ಸಮಾಜದ ಪ್ರೇರಣೆಯಿಂದ ಉತ್ತಮ ಸಾಧನೆಯಾಗಿದೆ ಎಂದರು.

ವಿದ್ಯಾರ್ಥಿಗಳು ಒತ್ತಡಗಳನ್ನು ಎದುರಿಸಿ ಮುಂದಿನ ಭವಿಷ್ಯದ ಕಡೆ ಯೋಚಿಸಿ ನಿರ್ಧಾರ ಕೈಗೊಳ್ಳಬೇಕು. ಜೀವನದಲ್ಲಿ ಸಾಧಿಸಬೇಕು ಎಂಬ ಛಲವಿದ್ದಾಗ ತಮ್ಮ ಗುರಿ ಮುಟ್ಟಲು ಸಾಧ್ಯ. ಆ ನಿಟ್ಟಿನಲ್ಲಿ ಪೋಷಕರು, ಶಿಕ್ಷಕರಿಂದ ನೇರವಾಗಿ ಅಥವಾ ಪರೋಕ್ಷವಾಗಿ ಸಹಕಾರ ಇರುತ್ತದೆ. ಶಿಕ್ಷಣ ಪಡೆದ ನಂತರ ತಾವು ಸಮಾಜಕ್ಕೆ ಏನು ಕೊಡುಗೆ ನೀಡುತ್ತೀರಿ ಎಂಬುದು ಮುಖ್ಯವಾಗಿದೆ ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಓದಿ ರಾಜ್ಯಕ್ಕೆ ರ‍್ಯಾಂಕ್ ಬಂದ ವಿದ್ಯಾರ್ಥಿಗಳ ಸಾಧನೆ ಅತೀ ದೊಡ್ಡದು, ಜೀವನದಲ್ಲಿ ಗುರಿ ಸಾಧಿಸಲು ಸತತ ಪ್ರಯತ್ನವಿರಬೇಕು. ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಉತ್ತಮ ಸಾಧನೆ ಮಾಡುವ ಕಡೆ ಗಮನ ಹರಿಸಬೇಕು ಎಂದರು.

ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗವ ಸಂದರ್ಭದಲ್ಲಿ ಮೂಲ ವಿಷಯಗಳನ್ನು ಮೊದಲು ಅರ್ಥ ಮಾಡಿಕೊಂಡು ಅಧ್ಯಯನ ಮಾಡಬೇಕು, ಮಾದರಿ ಪ್ರಶ್ನೆ ಪತ್ರಿಕೆಗಳಿಗೆ ಉತ್ತರ ಬರೆದು ಅದನ್ನು ತಾವೇ ಮೌಲ್ಯಮಾಪನ ಮಾಡಿ, ಅದರಲ್ಲಿ ಆಗಿರುವ ತಪ್ಪುಗಳನ್ನು ಕಂಡು ಹಿಡಿದು ಅವುಗಳನ್ನು ಸರಿಪಡಿಸಿಕೊಳ್ಳಬೇಕು ಕಠಿಣ ಪರಿಶ್ರಮದಿಂದ ಗುರಿ ತಲುಪಲು ಸಾಧ್ಯ. ಓದಿನ ಜೊತೆ ಆಸಕ್ತಿ ಇರುವ ಪಠ್ಯತೇರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಸಂವಾದದಲ್ಲಿ ಯಲ್ಲಾಪುರದ ಸಮೃದ್ಧಿ ಭಾಗ್ವತ, ಭಟ್ಕಳದ ಸಾನಿಕಾ ಬೈಲೂರ್, ವೈಭವಿ ನಾಯ್ಕ, ಹೊನ್ನಾವರದ ದೇವಿಕಾ ಪೈ, ಕುಮಟಾದ ದಿಶಾಂತ್ ನಾಯ್ಕ, ಶಿರಸಿಯ ಅದಿತಿ ನಾಯ್ಕ, ಲತಿಕಾ ಹಾಗೂ ಇತರ ವಿದ್ಯಾರ್ಥಿಗಳು ಸಂವಾದದಲ್ಲಿ ಪಾಲ್ಗೊಂಡು ತಮ್ಮ ಅನಿಸಿಕೆ ಹಂಚಿಕೊoಡರು.

ಕಾರ್ಯಕ್ರಮದಲ್ಲಿ ರಾಜ್ಯಕ್ಕೆ ಮೊದಲ ಹತ್ತು ಸ್ಥಾನ ಗಳಿಸಿದ ಶಿರಸಿ ಮತ್ತು ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲೆಯ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕಿ ಲತಾ ನಾಯಕ, ಕುಮಟಾ ಡಯಟ್ ಉಪನಿರ್ದೇಶಕ ಎನ್ ಆರ್ ಹೆಗಡೆ, ಶಿಕ್ಷಣಾಧಿಕಾರಿ ಡಾ. ಶುಭಾ ನಾಯಕ, ಜಿಲ್ಲಾ ಯೋಜನಾ ಉಪ ಸಮನ್ವಯ ಆಧಿಕಾರಿ ಭಾಸ್ಕರ ಗಾಂವಕರ, ಡಯಟ ಕುಮಟಾ ಹಿರಿಯ ಉಪನ್ಯಾಸಕಿ ಭಾರತಿ ನಾಯ್ಕ, ವಿದ್ಯಾರ್ಥಿಗಳು ಮತ್ತು ಪೋಷಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೆಡ್ ಕ್ರಾಸ್ ಮಾನವೀಯ ಸೇವೆಯ ಪ್ರತೀಕ
ಮುರುಡೇಶ್ವರದಲ್ಲಿ ಕಾರು ಅಪಘಾತ: ಒಬ್ಬ ಸಾವು, ಮೂವರಿಗೆ ಗಾಯ