ವಿಶ್ವಕ್ಕೆ ರೆಡ್ ಕ್ರಾಸ್ ಸಂಸ್ಥೆಯ ಕೊಡುಗೆ ಅಪಾರ

KannadaprabhaNewsNetwork |  
Published : May 09, 2026, 02:15 AM IST
೦೮ಕೆಪಿಎಲ್‌೦೪  ಕೊಪ್ಪಳ ನಗರದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಕಾನೂನು ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕ, ಯುವ ರೆಡ್ ಕ್ರಾಸ್ ಘಟಕ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಕೊಪ್ಪಳ ಇವರುಗಳ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ರೆಡ್ ಕ್ರಾಸ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ರೆಡ್‌ಕ್ರಾಸ್‌ ಸಂಸ್ಥೆ ಜಿಲ್ಲಾ ಶಾಖೆಯ ಸಭಾಪತಿ ಸೋಮರೆಡ್ಡಿ ಅಳವಂಡಿ ಮಾತನಾಡಿದರು | Kannada Prabha

ಸಾರಾಂಶ

ರೆಡ್ ಕ್ರಾಸ್ ಸಂಸ್ಥೆಯಲ್ಲಿ ತೊಡಗಿಸಿಕೊಂಡು ಹಲವಾರು ಸೇವೆಗಳನ್ನು ಮನುಕುಲಕ್ಕೆ ಸಲ್ಲಿಸಬಹುದು

ಕೊಪ್ಪಳ: ಇಂದಿನ ಯುವಕರು ದೇಶಕ್ಕೆ ಕೊಡುಗೆ ಸಲ್ಲಿಸುವುದಾದರೆ ನಿಮ್ಮ ಅಕ್ಕಪಕ್ಕದ ಜನರ ಸಂಕಷ್ಟಗಳಿಗೆ ಸ್ಪಂದಿಸಿದರೆ ಸಾಕು ಅದು ದೇಶಕ್ಕೆ ಕೊಡುಗೆ ನೀಡಿದಂತೆ ಎಂದು ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆಯ ಜಿಲ್ಲಾ ಶಾಖೆಯ ಸಭಾಪತಿ ಸೋಮರೆಡ್ಡಿ ಅಳವಂಡಿ ಹೇಳಿದರು.

ನಗರದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಭಾರತ ರತ್ನ ಶ್ರೀಅಟಲ್ ಬಿಹಾರಿ ವಾಜಪೇಯಿ ಕಾನೂನು ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕ, ಯುವ ರೆಡ್ ಕ್ರಾಸ್ ಘಟಕ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಕೊಪ್ಪಳ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ರೆಡ್ ಕ್ರಾಸ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದಿನಂಪ್ರತಿ ನಿಮ್ಮ ಸುತ್ತಮುತ್ತ ನಡೆಯುವ ಘಟನೆಗಳಿಗೆ ಯುವಜನತೆ ಮಾನವೀಯ ಮೌಲ್ಯಗಳೊಂದಿಗೆ ಸ್ಪಂದಿಸಬೇಕು. ರೆಡ್ ಕ್ರಾಸ್ ಸಂಸ್ಥೆಯಲ್ಲಿ ತೊಡಗಿಸಿಕೊಂಡು ಹಲವಾರು ಸೇವೆಗಳನ್ನು ಮನುಕುಲಕ್ಕೆ ಸಲ್ಲಿಸಬಹುದು. ರೆಡ್ ಕ್ರಾಸ್ ಸಂಸ್ಥೆಗೆ ಜಾತಿ,ಧರ್ಮ,ಮತ,ಪಂಥ,ದೇಶಗಳ ಕುರಿತು ತಾರತಮ್ಯವಿಲ್ಲ. ಇವುಗಳಿಂದ ಮುಕ್ತವಾಗಿ ದೇಶ ಸೇವೆ ಹಾಗೂ ಮಾನವ ಕುಲದ ಸೇವೆ ಮಾಡುವ ಉದ್ದೇಶ ಈ ಸಂಸ್ಥೆ ಹೊಂದಿದೆ. ವಿಪತ್ತು, ಯುದ್ಧದ ಸಂದರ್ಭಗಳಲ್ಲಿ ಜನರಿಗೆ ಸೇವೆ ಸಲ್ಲಿಸುವುದು ಮತ್ತು ಉಪಚರಿಸುವ ಕಾರ್ಯ ಸಂಸ್ಥೆಯು ಮಾಡುತ್ತದೆ. ಸಂಸ್ಥೆಯಿಂದ ಯಾವುದೇ ಫಲಾಪೇಕ್ಷೆ ನಿರೀಕ್ಷಿಸದೆ ಯುವಕರು ಸೇವೆ ಸಲ್ಲಿಸಬಹುದು. ಕೊಪ್ಪಳ ಜಿಲ್ಲಾ ಶಾಖೆಯು ಮೂರು ಬಾರಿ ರಾಜ್ಯಪಾಲರ ಪ್ರಶಸ್ತಿ ಪಡೆಯುವುದರೊಂದಿಗೆ ಅತಿ ಹೆಚ್ಚು ರಕ್ತ ಸಂಗ್ರಹಣೆಗೆ ರಾಜ್ಯಕ್ಕೆ ಮಾದರಿಯಾದ ಜಿಲ್ಲೆಯಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಶಾಖೆಯ ಉಪಸಭಾಪತಿ ಡಾ.ಮಂಜುನಾಥ್ ಬಿ.ಸಜ್ಜನ್ ಮಾತನಾಡಿ, ವಿಶ್ವಕ್ಕೆ ರೆಡ್‌ಕ್ರಾಸ್‌ ಸಂಸ್ಥೆ ಅತ್ಯಂತ ಶ್ರೇಷ್ಠ ಕೊಡುಗೆ ನೀಡುತ್ತಿದೆ. ಮಾನವನ ಜೀವನದಲ್ಲಿ ಮಾನವೀಯ ಮೌಲ್ಯ ಹುಟ್ಟುಹಾಕುವುದರೊಂದಿಗೆ ಸ್ವಯಂಸೇವಾ ಮನೋಭಾವನೆ ಬೆಳೆಸುತ್ತದೆ. ಯುದ್ಧದ ಸಂದರ್ಭದಲ್ಲಿ ಜನರು ಭಯಭೀತರಾಗಿ ಪಲಾಯನ ಮಾಡುವಾಗ ಅಲ್ಲಿ ಗಾಯಾಳುಗಳಿಗೆ ಉಪಚರಿಸುವ ಪ್ರಥಮ ಸಂಸ್ಥೆ ರೆಡ್‌ಕ್ರಾಸ್‌ ಆಗಿರುತ್ತದೆ. ನೀವು ಸಹ ರೆಡ್ ಕ್ರಾಸ್ ಸಂಸ್ಥೆಯೊಂದಿಗೆ ಸೇರಿಕೊಂಡು ನೈಸರ್ಗಿಕ ವಿಪತ್ತುಗಳ ಸಂದರ್ಭದಲ್ಲಿ ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಬಹುದು. ನಮ್ಮ ರೆಡ್ ಕ್ರಾಸ್ ಸಂಸ್ಥೆಯು ಕೇವಲ ರಕ್ತ ಭಂಡಾರವಾಗಿ ಕಾರ್ಯನಿರ್ವಹಿಸದೆ ಹಲವಾರು ಸಮಾಜಮುಖಿ ಕಾರ್ಯ ಮಾಡುತ್ತಿದೆ. ಮಾನವೀಯತೆಯೊಂದಿಗೆ ಸಮಾಜದಲ್ಲಿ ನಾವೆಲ್ಲರೂ ಸೇರಿ ಕೆಲಸ ಮಾಡಿ ಆರೋಗ್ಯಯುತವಾದ ಉತ್ತಮ ಸಮಾಜ ನಿರ್ಮಾಣ ಮಾಡುವುದು ನಮ್ಮ ಕರ್ತವ್ಯವಾಗಿದೆ. ರೆಡ್ ಕ್ರಾಸ್ ಸಂಸ್ಥೆಯು ಮಾನವೀಯತೆ, ಸ್ವಾತಂತ್ರ್ಯ, ನಿಷ್ಪಕ್ಷಪಾತ, ತಟಸ್ಥತೆ, ಸ್ವಯಂಸೇವೆ, ಏಕತೆ ಮತ್ತು ಸಾರ್ವತ್ರಿಕವಾದ ಮೂಲಭೂತ ತತ್ವಗಳೊಂದಿಗೆ ನಿಸ್ವಾರ್ಥ ಸೇವೆ ಸಲ್ಲಿಸುತ್ತದೆ ಎಂದು ಹೇಳೀದರು.

ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮಾಧಿಕಾರಿ ಬಸವರಾಜ ಎಸ್.ಎಂ.ಪ್ರಾಸ್ತವಿಕವಾಗಿ ಮಾತನಾಡಿದರು.

ಪ್ರಾಚಾರ್ಯರಾದ ಉಷಾದೇವಿ ಹಿರೇಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪನ್ಯಾಸಕ ಯು.ಎಸ್ ಸೊಪ್ಪಿಮಠ, ಸೋಮಶೇಖರ್, ರಾಜು ಯು ಸೇರಿದಂತೆ ಸಿಬ್ಬಂದಿ, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸೌಮ್ಯ ನಾಲ್ವಾಡ ಪ್ರಾರ್ಥಿಸಿದರು. ಪ್ರಗತಿ ಸ್ವಾಗತಿಸಿದರು, ಸಂಕಲ್ಪ ಕಾರ್ಯಕ್ರಮ ನಿರೂಪಿಸಿದರು ಹಾಗೂ ಬಸವರಾಜ್ ಘರ್ಜಿನಾಳ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೆಡ್ ಕ್ರಾಸ್ ಮಾನವೀಯ ಸೇವೆಯ ಪ್ರತೀಕ
ಮುರುಡೇಶ್ವರದಲ್ಲಿ ಕಾರು ಅಪಘಾತ: ಒಬ್ಬ ಸಾವು, ಮೂವರಿಗೆ ಗಾಯ