ಕನ್ನಡಪ್ರಭ ವಾರ್ತೆ ಶಿವಮೊಗ್ಗ
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಹಾಗೂ ಜಿಲ್ಲಾ ಪಂಚಾಯಿತಿ, ದೇಶೀಯ ವಿದ್ಯಾಶಾಲಾ ಸಮಿತಿ ಸಹಯೋಗ ದಲ್ಲಿ ಶುಕ್ರವಾರ ನಗರದ ಡಿವಿಎಸ್ ಪಿಯು ಸ್ವತಂತ್ರ ಕಾಲೇಜಿನಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಾಹ್ಯಾಕಾಶ ವಿಜ್ಞಾನಿ ವಿಕ್ರಂ ಸಾರಾಬಾಯಿ ಸೇರಿದಂತೆ ಅನೇಕ ವಿಜ್ಞಾನಿಗಳು ಚಂದ್ರನ ಮೇಲೆ ಉಪಗ್ರಹ ಕಳುಹಿಸುವ ಬಗ್ಗೆ ಸಾಕಷ್ಟು ಸಂಶೋಧನೆಗಳನ್ನು ಮಾಡುತ್ತಾ ಬಂದಿದ್ದು, ಚಂದ್ರಯಾನ-3 ರ ಯಶಸ್ಸು ಅವರ ಕನಸಿನ ಫಲವಾಗಿದೆ ಎಂದರು.
ದೇಶದ ರಕ್ಷಣಾ ವ್ಯವಸ್ಥೆಗಾಗಿ ಇಸ್ರೋದಿಂದ ಮೊದಲ ಉಪಗ್ರಹ ಉಡಾವಣೆ ಮಾಡಲಾಯಿತು. ನಂತರ ನೌಕಾ ಪಡೆಗಳಲ್ಲಿ ಸಂವಹಿಸಲು ಸರಿಯಾದ ಮಾಧ್ಯಮ ಇರಲಿಲ್ಲ ಅದಕ್ಕಾಗಿ, ಇನ್ಸಾಟ್-07 ನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಇಂದು ಇದನ್ನು ಭಾರತೀಯ ಮೂರು ಸೇನೆಗಳೂ ಬಳಸುತ್ತಿದ್ದಾರೆ. ಚಂದ್ರಯಾನ-01 ಮತ್ತು ಚಂದ್ರಯಾನ-02 ರಲ್ಲಿನ ಸೂಕ್ಷ್ಮ ವಿಚಾರಗಳನ್ನು ಅಧ್ಯಯನ ನಡೆಸಿ ಚಂದ್ರಯಾನ -3 ರಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿ ಅದ್ಭುತ ಸಾಧನೆ ತೋರಲಾಗಿದ್ದು, ದಕ್ಷಿಣ ಧೃವದಲ್ಲಿ ಲ್ಯಾಂಡಿಂಗ್ ಮಾಡಿದ ಮೊದಲ ದೇಶವಾಗಿ ಹೊರಹೊಮ್ಮಿದ್ದೇವೆ. ಈ ಮೂಲಕ ಚಂದ್ರನ ಮೇಲೆ ಇತರೆ ಎರಡು ದೇಶಗಳೊಂದಿಗೆ ನಮಗೂ ಹಕ್ಕಿದೆ. ಪಿಪಿಟಿ ಪ್ರದರ್ಶನದ ಮೂಲಕ ಚಂದ್ರಯಾನ-3 ರ ಸಂಪೂರ್ಣ ಪ್ರಕ್ರಿಯೆ, ವಿಜ್ಞಾನಿ ವಿಕ್ರಮ್ ಸಾರಾಬಾಯಿ ಅವರ ಸಾಧನೆ ಗಳು, ಇತರೆ ಬಾಹ್ಯಾಕಾಶದ ವಿಷಯಗಳ ಕುರಿತು ವಿದ್ಯಾರ್ಥಿಗಳಿಗೆ ವಿವರಿಸಿದರು.ಜಿಪಂ ಮುಖ್ಯ ಯೋಜನಾಧಿಕಾರಿ ಸಿ.ಎಸ್.ಗಾಯತ್ರಿ ಮಾತನಾಡಿ, ಚಂದ್ರಯಾನ-3 ಮಿಷನ್ ಯಶಸ್ಸನ್ನು ಆಚರಿಸಲು ಭಾರತ ಸರ್ಕಾರ ಪ್ರತಿ ವರ್ಷ ಆಗಸ್ಟ್ 23 ನ್ನು ‘ರಾಷ್ಟ್ರೀಯ ಬಾಹ್ಯಾಕಾಶ ದಿನ’ ಎಂದು ಘೋಷಿಸಿದ್ದು, ಇದರ ಅಂಗವಾಗಿ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯು ಬಾಹ್ಯಾಕಾಶ ವಿಜ್ಞಾನದ ಕುರಿತು ಆಸಕ್ತಿ ಮೂಡಿಸಲು ಗಗನಯಾತ್ರಿ ಹಾಗೂ ಬಾಹ್ಯಾಕಾಶ ವಿಜ್ಞಾನಿಗಳ ಕೊಡುಗೆಗಳ ಬಗ್ಗೆ ವಿಜ್ಞಾನ ಚಟುವಟಿಕೆಗಳನ್ನು ಆಯೋಜಿಸಿದೆ ಎಂದು ತಿಳಿಸಿದರು.
ದೇಶೀಯ ವಿದ್ಯಾ ಶಾಲಾ ಸಮಿತಿ ಕಾರ್ಯದರ್ಶಿ ಎಸ್.ರಾಜಶೇಖರ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಾಹ್ಯಾಕಾಶ ಕ್ಷೇತ್ರದಲ್ಲಿ ಆಸಕ್ತಿ ಹೊಂದಿ, ಬಾಹ್ಯಾಕಾಶ ಮತ್ತು ವೈಜ್ಞಾನಿಕ ಕ್ಷೇತ್ರದಲ್ಲಿ ಇರುವ ವಿಫುಲ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಡಿವಿಎಸ್ ಸ್ವತಂತ್ರ ಪಿಯು ಕಾಲೇಜಿನ ಪ್ರಾಂಶುಪಾಲ ಎ.ಈ.ರಾಜಶೇಖರ್ ಮಾತನಾಡಿ, ಚಂದ್ರಯಾನ-3 ರ ಯಶಸ್ಸು ನಮ್ಮೆಲ್ಲರ ಹೆಮ್ಮೆ. ಈ ದಿನವನ್ನು ಬಾಹ್ಯಾಕಾಶ ದಿನವಾಗಿ ಸಂಭ್ರಮಿಸುತ್ತಿರುವುದಕ್ಕೆ ಸರ್ಕಾರಕ್ಕೆ ಅಭಿನಂದನೆಗಳು. ಚಂದ್ರಯಾನ-3 ರ ತಂಡದಲ್ಲಿ ಡಿವಿಎಸ್ ಕಾಲೇಜಿನ 5 ಜನ ವಿದ್ಯಾರ್ಥಿ ಗಳಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.ವಾರ್ತಾ ಇಲಾಖೆಯ ವಾರ್ತಾ ಸಹಾಯಕಿ ಎಂ.ಟಿ.ಭಾಗ್ಯ , ಡಿವಿಎಸ್ ಸ್ವತಂತ್ರ ಪಿಯು ಕಾಲೇಜಿನ ಶಿಕ್ಷಕ ಪ್ರತಿನಿಧಿ ಎಚ್.ಸಿ.ಉಮೇಶ್ , ಜಿ.ಪಂ ಜಿಲ್ಲಾ ಯೋಜನಾ ಸಂಯೋಜಕ ಪಿ.ಶಂಕರ ಉಪನ್ಯಾಸಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಜರಿದ್ದರು.