ಪರಿಶ್ರಮದಿಂದ ಮಾತ್ರ ಯಶಸ್ಸು: ಎಂ.ಬಿ. ಮಹದೇವಪ್ಪ

KannadaprabhaNewsNetwork |  
Published : Sep 01, 2025, 01:04 AM IST
31ಎಚ್‌ವಿಆರ್2 | Kannada Prabha

ಸಾರಾಂಶ

ಸರ್ಕಾರ ಹಲವು ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗಾಗಿ ನೀಡುತ್ತಿದೆ.

ಹಾವೇರಿ: ಶೈಕ್ಷಣಿಕ ಸ್ಪರ್ಧೆಯ ಭರಾಟೆಯಲ್ಲಿ ಪರಿಶ್ರಮದಿಂದ ಮಾತ್ರ ಯಶಸ್ಸು ಸಾಧ್ಯವಿದ್ದು, ಭವಿಷ್ಯದ ಬದುಕಿಗೆ ಈಗಲೇ ಸಿದ್ಧರಾಗಬೇಕು ಎಂದು ಹಾವೇರಿ ಶಿಕ್ಷಣ ಇಲಾಖೆ ಕ್ಷೇತ್ರ ಸಮನ್ವಯಾಧಿಕಾರಿ ಎಂ.ಬಿ. ಮಹದೇವಪ್ಪ ಹೇಳಿದರು.

ಇಲ್ಲಿಯ ಭಗತ್ ಪಿಯು ಕಾಲೇಜು ಸಭಾಂಗಣದಲ್ಲಿ ಬೆಂಗಳೂರಿನ ಡ್ರೀಮ್ ಸ್ಕೂಲ್ ಫೌಂಡೇಶನ್‌ನಿಂದ ಜಿಲ್ಲೆಯ ವಿವಿಧ ಶಾಲೆಗಳ ಪ್ರತಿಭಾವಂತ 53 ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ ಹಾಗೂ ಶೈಕ್ಷಣಿಕ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸರ್ಕಾರ ಹಲವು ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗಾಗಿ ನೀಡುತ್ತಿದೆ. ಇದರ ನಡುವೆ ಡ್ರೀಮ್‌ ಸ್ಕೂಲ್‌ ಫೌಂಡೇಶನ್ ಹಾವೇರಿ ಜಿಲ್ಲೆಯ ವಿವಿಧ ಶಾಲೆಗಳ ಮಕ್ಕಳಿಗೆ ವರ್ಷವಿಡಿ ಶೈಕ್ಷಣಿಕ ಮಾರ್ಗದರ್ಶನ ನೀಡಿ, ಮಕ್ಕಳ ಶೈಕ್ಷಣಿಕ ಹಿತಕ್ಕೆ ಪ್ರಾಮಾಣಿಕವಾಗಿ ಶ್ರಮಿಸುತ್ತಿದೆ. ಇಂದಿನ ಸ್ಪರ್ಧೆಗೆ ಮಕ್ಕಳನ್ನು ಸಿದ್ಧಗೊಳಿಸುವ ಅನಿವಾರ್ಯತೆ ನಮ್ಮ ಮುಂದಿದೆ ಎಂದರು.

ಸಾಹಿತಿ ಪ್ರೊ. ಮಾರುತಿ ಶಿಡ್ಲಾಪುರ ಮಾತನಾಡಿ, ಮಕ್ಕಳಲ್ಲಿ ಅಂಕಪಟ್ಟಿಯ ಆವೇಶ ತುಂಬುತ್ತಾ ನೈತಿಕ ಹಿನ್ನಡೆಗೆ ಅವಕಾಶವಾಗಬಾರದು. ಇಂದು ಜಾಗತಿಕ ಮಟ್ಟದಲ್ಲಿ ಶೈಕ್ಷಣಿಕ ಹಾಗೂ ಔದ್ಯೋಗಿಕ ಸ್ಪರ್ಧೆ ಇದೆ. ಆದರೆ ಇದರ ಹೆಸರಿನಲ್ಲಿ ಮಕ್ಕಳು ನೈತಿಕತೆಯಿಂದ ದೂರ ಉಳಿಯುವಂತಾಗಬಾರದು. ನಮ್ಮ ಮನೆ ಹಾಗೂ ಶಾಲೆಗಳು ಸಾಂಸ್ಕೃತಿಕ ಚೈತನ್ಯವನ್ನು ಮಕ್ಕಳಲ್ಲಿ ಜಾಗೃತಿಗೊಳಿಸುವ ಅನಿವಾರ್ಯತೆ ಇದೆ. ಈ ಸಂಧರ್ಭದಲ್ಲಿ ಶಾಲೆ ಹಾಗೂ ಮನೆಗಳಲ್ಲಿ ಮಕ್ಕಳಿಗೆ ನೈತಿಕ ಶಿಕ್ಷಣ ನೀಡುವುದನ್ನು ಎಲ್ಲರೂ ಬೆಂಬಲಿಸಬೇಕು. ಆಗ ಮಕ್ಕಳ ವಿದ್ಯೆಗೆ ಬೆಲೆ ಬರುತ್ತದೆ ಎಂದರು.

ಎನ್‌ಎಂಎಂಎಸ್ ನೋಡಲ್ ಅಧಿಕಾರಿ ಶ್ರೀನಿವಾಸ ಮಾತನಾಡಿ, ಡ್ರೀಮ್‌ ಸ್ಕೂಲ್‌ ಫೌಂಡೇಶನ್‌ ಇಡೀ ಜಿಲ್ಲೆಯ ಆಯ್ದ ಪ್ರತಿಭಾವಂತ ಮಕ್ಕಳಿಗೆ ನೀಡುತ್ತಿರುವ ಶೈಕ್ಷಣಿಕ ಮಾರ್ಗದರ್ಶನ ಈ ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸಲು ಸಹಕಾರಿಯಾಗಿದೆ. ನಮ್ಮ ಇಲಾಖೆಯಿಂದ ಎಲ್ಲ ರೀತಿಯ ಸಹಕಾರ ನೀಡುತ್ತಿದ್ದು, ಪಾಲಕರಿಗೂ ಕೂಡ ಇದು ಮೆಚ್ಚುಗೆಯಾಗಿದೆ ಎಂದರು.

ಭಗತ್ ಸಂಸ್ಥೆಯ ಅಧ್ಯಕ್ಷ ಸತೀಶ ಭಾಗಣ್ಣನವರ ಅಧ್ಯಕ್ಷತೆ ವಹಿಸಿದ್ದರು. ಡ್ರೀಮ್‌ ಸ್ಕೂಲ್‌ ಫೌಂಡೇಶನ್‌ ಕಾರ್ಯಕ್ರಮಾಧಿಕಾರಿ ಪಿ. ಕೃತಿಕಾ, ಜಿಲ್ಲಾ ಸಂಯೋಜಕ ಪ್ರಶಾಂತ ರುದ್ರುಗೌಡರ, ರಾಣಿಬೆನ್ನೂರು ಸಂಯೋಜಕ ಅರುಣಕುಮಾರ, ಮಾಹಿತಿ ತಂತ್ರಜ್ಞಾನ ಆಡಳಿತಾಧಿಕಾರಿ ಜಗದೀಶ ಪಾಲ್ಗೊಂಡಿದ್ದರು.

PREV

Recommended Stories

ವಾಲ್ಮೀಕಿ ಸಮುದಾಯಕ್ಕೆ ಅನ್ಯಾಯ ಆಗಲ್ಲ ಎಂಬ ಸಂದೇಶ ರವಾನೆ!
ಸಿಎಂ ಪುತ್ರನ ಹೇಳಿಕೆಯಿಂದ ರಾಜ್ಯ ರಾಜಕೀಯದಲ್ಲಿ ಸಂಚಲನ