ಯಶಸ್ಸಿಗೆ ನಿರಂತರ ಶ್ರಮಬೇಕು: ಅಜಿತ್‌ ಹನುಮಕ್ಕನವರ

KannadaprabhaNewsNetwork |  
Published : Jun 23, 2024, 02:04 AM IST
ವಾರ್ಷಿಕ ಸ್ನೇಹ ಸಮ್ಮೇಳನ | Kannada Prabha

ಸಾರಾಂಶ

ಯಶಸ್ಸು ಸಿಗಲು ನಿರಂತರ ಶ್ರಮಬೇಕು. ಮುಂದೆ ಅದೇ ಸಾಧನೆ ಆಗುತ್ತದೆ. ಧೈರ್ಯದಿಂದ ಕಾರ್ಯದಲ್ಲಿ ಮುಂದೆ ನಡೆಯಬೇಕು.

ಧಾರವಾಡ:

ಕಾಲೇಜ್‌ ಜೀವನವು ಒಂದು ಪ್ರಮುಖ ಘಟ್ಟ. ಪದವಿ ಮುಗಿದ ನಂತರ ಜೀವನದಲ್ಲಿ ಜವಾಬ್ದಾರಿಯೂ ಹೆಚ್ಚುತ್ತದೆ. ಅನೇಕ ಜೀವಿಗಳು ಹುಟ್ಟುತ್ತವೆ, ಸಾಯುತ್ತವೆ. ಆದರೆ, ಹುಟ್ಟಿದ ಜೀವಿಗಳಲ್ಲಿ ಮನುಷ್ಯ ಮಾತ್ರ ಏನಾಗಬೇಕು? ಎಂಬ ಕನಸು ಕಾಣುತ್ತಾನೆ. ಗುರಿ ಸ್ಪಷ್ಟವಾಗಿದ್ದರೆ ಸಾಕು ಅನ್ನ ಮತ್ತು ಆತ್ಮತೃಪ್ತಿ ಎರಡು ಸಿಗಲು ಸಾಧ್ಯ ಎಂದು ಏಷ್ಯಾನೆಟ್ ಸುವರ್ಣನ್ಯೂಸ್‌ನ ಪ್ರಧಾನ ಸಂಪಾದಕ ಅಜಿತ್‌ ಹನುಮಕ್ಕನವರ ಹೇಳಿದರು.

ಇಲ್ಲಿಯ ಜೆಎಸ್‌ಎಸ್‌ ಬನಶಂಕರಿ ಕಲಾ, ವಾಣಿಜ್ಯ ಮತ್ತು ಶಾಂತಿಕುಮಾರ ಗುಬ್ಬಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ನಡೆದ ವಾರ್ಷಿಕ ಸ್ನೇಹ ಸಮ್ಮೇಳನದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಯಶಸ್ಸು ಸಿಗಲು ನಿರಂತರ ಶ್ರಮಬೇಕು. ಮುಂದೆ ಅದೇ ಸಾಧನೆ ಆಗುತ್ತದೆ. ಧೈರ್ಯದಿಂದ ಕಾರ್ಯದಲ್ಲಿ ಮುಂದೆ ನಡೆಯಬೇಕು. ನಾವು ಕಲಿಯುತ್ತಿರುವ ಪಠ್ಯಕ್ರಮಕ್ಕೆ ಸೀಮಿತ ಚೌಕಟ್ಟು ಇದೆ. ಆದರೆ, ಜೀವನದ ಪಾಠಕ್ಕೆ ನಿರ್ದಿಷ್ಟವಾದ ಪಠ್ಯಕ್ರಮದ ಚೌಕಟ್ಟು ಇಲ್ಲ. ಹಾಗಾಗಿ, ನಾವು ಏನಾಗಬೇಕೆಂಬುದು ನಮ್ಮ ಗುರಿಯಾಗಿರಬೇಕು. ಇಂದಿನ ವಿದ್ಯಾರ್ಥಿಗಳು ಒತ್ತಡದಿಂದ ಹೊರಬರಬೇಕು ಎಂದು ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜನತಾ ಶಿಕ್ಷಣ ಸಮಿತಿ ಕಾರ್ಯದರ್ಶಿ ಡಾ. ಅಜಿತ ಪ್ರಸಾದ, ವ್ಯಕ್ತಿಯ ಆಸೆಗಳಿಗೆ ಮನ್ನಣೆ ದೊರೆಯಬೇಕಾದರೆ, ನಿರಂತರ ಶ್ರಮದಿಂದ ಯೋಗ್ಯವಾದ ಸ್ಥಾನ ಅಲಂಕರಿಸಬೇಕು. ಜೀವನದಲ್ಲಿ ಆಯ್ಕೆಗಳು ಅನೇಕವಾಗಿರುತ್ತವೆ. ಸೂಕ್ತವಾದದ್ದನ್ನು ಆಯ್ದುಕೊಳ್ಳಬೇಕು. ಹೇಗೆ ಬೇರುಗಳಿಗೆ ನೀರು ಹಾಕಿದರೆ ಉತ್ತಮ ಫಲ ಬರಲು ಸಾಧ್ಯವೋ. ಹಾಗೆ ನಮ್ಮ ಶ್ರಮ ಸಾರ್ಥಕವಾದರೆ ಅದೇ ಉತ್ತಮ ಫಲ ಎಂಬ ಆಶಯ ವ್ಯಕ್ತಪಡಿಸಿದರು.

ವೇದಿಕೆಯ ಮೇಲೆ ಕಾಲೇಜಿನ ಅಭಿವೃದ್ಧಿ ಅಧಿಕಾರಿ ಡಾ. ಸೂರಜ್ ಜೈನ್, ಉಪಪ್ರಾಚಾರ್ಯ ಆವಂತಿಕಾ ರೊಟ್ಟಿ, ಡಾ. ಎನ್.ಡಿ. ಕುಲಕರ್ಣಿ, ದೈಹಿಕ ಶಿಕ್ಷಣ ಹಾಗೂ ಕ್ರೀಡಾ ವಿಭಾಗದ ನಿರ್ದೇಶಕ ಜೆ.ಆರ್. ಕುಂದಗೋಳ ಉಪಸ್ಥಿತರಿದ್ದರು.

ಪ್ರಾಚಾರ್ಯ ಡಾ. ಕೆ.ಎಚ್. ನಾಗಚಂದ್ರ ಸ್ವಾಗತಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ. ಜಿನದತ್ತ ಹಡಗಲಿ ಪರಿಚಯಿಸಿದರು. ಅಪೂರ್ವ ಐಹೊಳೆ ವಂದಿಸಿದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

PREV

Recommended Stories

15 ವರ್ಷ ಮೇಲ್ಪಟ್ಟ ಸರ್ಕಾರಿ ವಾಹನ ಗುಜರಿಗೆ: ಆದೇಶ
ಹಾಸಿಗೆ, ದಿಂಬಿಗಾಗಿ ಮತ್ತೆ ಕೋರ್ಟಲ್ಲಿ ಅಂಗಲಾಚಿದ ಕೊಲೆ ಆರೋಪಿ ದರ್ಶನ್‌