ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಮಿನಾಜ್ ಮೆಹಬೂಬಸಾಬ ಕುರುಡಗಿ ಸತತ ಅಧ್ಯಯನ ಮಾಡಿದ್ದರಿಂದ ರಾಜ್ಯಕ್ಕೆ 4 ರ್‍ಯಾಂಕ್, ಜಿಲ್ಲೆಗೆ 2ನೇ ಹಾಗೂ ಬಾದಾಮಿ ತಾಲೂಕಿಗೆ ಪ್ರಥಮ ಸ್ಥಾನದಲ್ಲಿ ಬರಲು ಸಾಧ್ಯವಾಗಿದೆ ಎಂದು ಡಿಡಿಪಿಐ ಬಿ.ಕೆ.ನಂದನೂರ ಹೇಳಿದರು.ಭಾನುವಾರ ಪಟ್ಟಣದ ಮಿನಾಜ್ ಮೆಹಬೂಬಸಾಬ ಕುರುಡಗಿ ಮನೆಗೆ ಭೇಟಿ ನೀಡಿ ಶಿಕ್ಷಣ ಇಲಾಖೆ ಪರವಾಗಿ ಸನ್ಮಾನಿಸಿ ಮಾತನಾಡಿದರು. ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಗರಿಷ್ಠ ಅಂಕ ಗಳಿಸಿದ್ದು ಹೆಮ್ಮೆಯ ಸಂಗತಿ. ಮನೆಯಲ್ಲಿ ಓದಲು ತಂದೆ, ತಾಯಿ ಅವಕಾಶ ಮಾಡಿ ಪ್ರೊತ್ಸಾಹ ನೀಡಿದ್ದರಿಂದ ಗುಳೇದಗುಡ್ಡ ತಾಲೂಕಿನಲ್ಲಿಯೇ ಹೆಚ್ಚು ಅಂಕಗಳಿಸಿ ಕೀರ್ತಿ ತಂದಿದ್ದಾಳೆ. ಇಲಾಖೆಯವರ ಶ್ರಮ ಸಾರ್ಥಕವಾಗಿದೆ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೈ. ಕುಂದರಗಿ ಮಾತನಾಡಿ, ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿನಿ 622 ಅಂಕ ಗಳಿಸಿ ಶಿಕ್ಷಣ ಇಲಾಖೆಗೆ ಹೆಸರು ತಂದಿದ್ದಾಳೆ. ಬಡತನದಲ್ಲಿ ಕಮಲ ಅರಳಿದ್ದು ಹೆಮ್ಮೆಯ ಸಂಗತಿಯಾಗಿದೆ. ಯಶಸ್ಸು ಗಳಿಸಲು ಬೇರೆ ಬೇರೆ ಜಿಲ್ಲೆಯ ಸಂಪನ್ಮೂಲ ವ್ಯಕ್ತಿಗಳ ಮಾರ್ಗದರ್ಶನ, ಮನೆ ಮನೆ ಭೇಟಿ ಮುಂತಾದ ಕಾರ್ಯಕ್ರಮ ಮಾಡಿದ ಶಿಕ್ಷಕರ ಪಾತ್ರ ದೊಡ್ಡದಾಗಿದೆ. ತಾಲ್ಲೂಕಿನಲ್ಲಿ ಶೇ 80.76 ಪ್ರತಿಶತ ಫಲಿತಾಂಶ ಬಂದಿದೆ ಎಂದರು.ಕಸಾಪದಿಂದ ಸನ್ಮಾನ: ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದಿಂದ ಮಿನಾಜ್ ಮೆಹಬೂಬಸಾಬ ಕುರುಡಗಿ ಅವರನ್ನು ತಾಲೂಕಾಧ್ಯಕ್ಷ ಎಚ್.ಎಸ್. ಘಂಟಿ ಸನ್ಮಾನಿಸಿದರು ಅವರೊಂದಿಗೆ ಪದಾಧಿಕಾರಿಗಳಿದ್ದರು.
ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಉಪ ಪ್ರಾಚಾರ್ಯ ಮಲ್ಲಿಕಾರ್ಜುನ ಮಾಗಿ, ಎಸ್.ಸಿ.ಕೊರವರ, ಆರ್.ಬಿ.ಪಾಗಿ, ಎಸ್.ಎಸ್,ಬಿರಾದಾರ, ರಮೇಶ ಬುಳ್ಳಾ,ಸಂಜಯ ನಡುವಿನಮನಿ, ಧನಂಜಯ ಕೊಪ್ಪಳ, ನಜೀರಅಹ್ಮದ ಕುರಡಗಿ, ಮೆಹಬೂಬ ತಟಗಾರ, ಅಲ್ಲಾಭಕ್ಷಿ ಭಾಗವಾನ, ಭಾಗೀತರಿ ಆಲೂರ, ವಿ.ಕೆ.ಬದಿ, ಶಿಕ್ಷಕರು, ಸಮುದಾಯದ ಮುಖಂಡರು ಮುಂತಾದವರಿದ್ದರು.