ಶಿರಸಿ: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆಯ 5 ಗ್ಯಾರಂಟಿ ಯೋಜನೆಗಳನ್ನು ಜಿಲ್ಲೆಯಲ್ಲಿ ಅತ್ಯಂತ ಯಶಸ್ವಿಯಾಗಿ ನಿರ್ವಹಿಸಲಾಗಿದೆ ಎಂದು ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸತೀಶ್ ಪಿ. ನಾಯ್ಕ ತಿಳಿಸಿದರು.ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷದವರು ಎಷ್ಟೇ ಟೀಕೆ ಟಿಪ್ಪಣಿಗಳನ್ನು ಮಾಡಿದರೂ ಅವುಗಳನ್ನು ಎದುರಿಸಿ ರಾಜ್ಯ ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿ ಯೋಜನೆಗಳನ್ನು ಜಿಲ್ಲೆಯ ಲಕ್ಷಾಂತರ ಫಲಾನುಭವಿಗಳಿಗೆ ಯಾವುದೇ ಮಧ್ಯವರ್ತಿ ಇಲ್ಲದೆ ನೇರವಾಗಿ ಫಲಾನುಭವಿಗಳ ಖಾತೆಗೆ ಕೋಟ್ಯಂತರ ರುಪಾಯಿ ನೆರವು ತಲುಪಿಸಲಾಗಿದೆ ಎಂದರು.ಗೃಹಜ್ಯೋತಿ ಯೋಜನೆ ಅಡಿಯಲ್ಲಿ 3,97,474 ಫಲಾನುಭವಿಗಳು ₹641.45 ಕೋಟಿ ಮೊತ್ತದ ಉಚಿತ ವಿದ್ಯುತ್ ಸೌಲಭ್ಯ ಪಡೆದುಕೊಂಡಿದ್ದಾರೆ. ಶಕ್ತಿ ಯೋಜನೆ ಮೂಲಕ 2790 ಕೋಟಿ ಮಹಿಳೆಯರು ಉಚಿತ ಬಸ್ ಪ್ರಯಾಣದ ಪ್ರಯೋಜನ ಪಡೆದಿದ್ದು, ಸರ್ಕಾರ ₹635 ಕೋಟಿ ಸಾರಿಗೆ ಇಲಾಖೆಗೆ ಭರಣ ಮಾಡಲಾಗಿದೆ ಎಂದು ಹೇಳಿದರು.ಅನ್ನಭಾಗ್ಯ ಯೋಜನೆ ಮುಖಾಂತರ 3,28,000 ಕುಟುಂಬಗಳಿಗೆ 89399.00 ಮೆಟ್ರಿಕ್ ಟನ್ ಅಕ್ಕಿಯನ್ನು ಇಲ್ಲಿಯವರೆಗೆ ವಿತರಿಸಲಾಗಿದೆ ಮತ್ತು ಯುವನಿಧಿ ಯೋಜನೆ ಅಡಿಯಲ್ಲಿ 8890 ಫಲಾನುಭವಿಗಳ ಖಾತೆಗೆ ಒಟ್ಟು ₹26,45,05,500 ಜಮಾ ಮಾಡಲಾಗಿದೆ. ಹಾಗೂ ಗೃಹಲಕ್ಷ್ಮೀ ಯೋಜನೆ ಮೂಲಕ 3,12,679 ಫಲಾನುಭವಿ ಮಹಿಳೆಯರಿಗೆ ಇಲ್ಲಿಯವರೆಗೆ ಸುಮಾರು ₹2000 ಕೋಟಿಯನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಸಂದಾಯ ಮಾಡಲಾಗಿದೆ ಎಂದರು.ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ನಾಗರಾಜ ಮುರುಡೇಶ್ವರ, ಪುರುಷೋತ್ತಮ ನಾಯ್ಕ, ಸಿದ್ದಾಪುರ ತಾಲೂಕು ಗ್ಯಾರಂಟಿ ಯೋಜನೆಯ ಅಧ್ಯಕ್ಷ ಕೆ.ಜಿ. ನಾಗರಾಜ, ಶಿರಸಿ ತಾಲೂಕು ಗ್ಯಾರಂಟಿ ಅಧ್ಯಕ್ಷೆ ಸುಮಾ ಉಗ್ರಾಣಕರ್ ಇತರರು ಇದ್ದರು.