ಮಿಲನ್ ಆಸ್ಪತ್ರೆಯಿಂದ ಬಂಜೆತನದ ಗುಪ್ತ ಸಮಸ್ಯೆಗೆ ಯಶಸ್ವಿ ಚಿಕಿತ್ಸೆ; ಐವಿಎಫ್ ಮೂಲಕ ಯಶಸ್ವಿ ಗರ್ಭಧಾರಣೆ

KannadaprabhaNewsNetwork |  
Published : Jul 08, 2026, 01:15 AM IST
ಶಿಲ್ಪಾ ಎಲ್ಲೂರ್‌ | Kannada Prabha

ಸಾರಾಂಶ

ಗರ್ಭಕೋಶದ ಉರಿಯೂತದ (ಕ್ರಾನಿಕ್ ಎಂಡೊಮೆಟ್ರೈಟಿಸ್) ಸಮಸ್ಯೆಯನ್ನು ನಿಖರವಾಗಿ ಪತ್ತೆ ಹಚ್ಚಿ ಚಿಕಿತ್ಸೆ ನೀಡಿದ ವೈದ್ಯ ತಜ್ಞರು

ಬೆಂಗಳೂರು: ಗರ್ಭಕೋಶದ ಒಳಪದರದ ಉರಿಯೂತ (ಕ್ರಾನಿಕ್ ಎಂಡೊಮೆಟ್ರೈಟಿಸ್) ಎಂಬ ಸಂಕೀರ್ಣ ಸಮಸ್ಯೆಯನ್ನು ಬೆಂಗಳೂರಿನ ''ಮಿಲನ್ - ಫರ್ಟಿಲಿಟಿ ಮತ್ತು ಬರ್ತಿಂಗ್ ಆಸ್ಪತ್ರೆ''ಯು ಯಶಸ್ವಿಯಾಗಿ ನಿಭಾಯಿಸಿದೆ. ಆಸ್ಪತ್ರೆಯ ರಿಪ್ರೊಡಕ್ಟಿವ್ ಮೆಡಿಸಿನ್ ಮತ್ತು ಹೈ-ರಿಸ್ಕ್ ಆಬ್ಸ್ಟೆಟ್ರಿಕ್ಸ್ ವಿಭಾಗದ ಸೀನಿಯರ್ ಕನ್ಸಲ್ಟೆಂಟ್ ಡಾ. ಶಿಲ್ಪಾ ಎಲ್ಲೂರ್ ಅವರ ನೇತೃತ್ವದಲ್ಲಿ ನಡೆದ ಈ ಚಿಕಿತ್ಸೆಯಿಂದಾಗಿ, ಐವಿಎಫ್ (IVF) ಮುಖಾಂತರ 39 ವರ್ಷದ ಮಹಿಳೆಯೊಬ್ಬರು ಯಶಸ್ವಿಯಾಗಿ ಗರ್ಭಧರಿಸಿದ್ದಾರೆ. ನೋಡಲು ಭ್ರೂಣವು ಆರೋಗ್ಯಕರವಾಗಿದ್ದರೂ, ಗರ್ಭಕೋಶದ ಒಳಗಿನ ಗುಪ್ತ ಸಮಸ್ಯೆಗಳು ಗರ್ಭಧಾರಣೆಗೆ ಹೇಗೆ ಅಡ್ಡಿಯಾಗಬಹುದು ಮತ್ತು ಅದನ್ನು ಪತ್ತೆಹಚ್ಚಿ ಪರಿಹಾರ ಕಂಡುಕೊಳ್ಳುವುದು ಎಷ್ಟು ಮುಖ್ಯ ಎಂಬುದನ್ನು ಈ ಪ್ರಕರಣ ಸಾಬೀತುಪಡಿಸಿದೆ.

ಕ್ರಾನಿಕ್ ಎಂಡೊಮೆಟ್ರೈಟಿಸ್ ಎಂದರೆ ಭ್ರೂಣವು ಅಂಟಿಕೊಳ್ಳುವ ಮತ್ತು ಬೆಳೆಯುವ ಗರ್ಭಕೋಶದ ಒಳಪದರದಲ್ಲಿ (ಎಂಡೊಮೆಟ್ರಿಯಮ್) ಸಣ್ಣ ಪ್ರಮಾಣದಲ್ಲಿ ನಿರಂತರವಾಗಿ ಉಂಟಾಗುವ ಉರಿಯೂತ ಅಥವಾ ಇನ್ಫೆಕ್ಷನ್. ತೀವ್ರ ಸ್ವರೂಪದ ಸೋಂಕುಗಳು ಜ್ವರ ಅಥವಾ ತೀವ್ರ ಹೊಟ್ಟೆನೋವಿನಂತಹ ಲಕ್ಷಣಗಳನ್ನು ತೋರಿಸುತ್ತವೆ. ಆದರೆ ಈ ಕ್ರಾನಿಕ್ ಎಂಡೊಮೆಟ್ರೈಟಿಸ್ ಯಾವುದೇ ಸ್ಪಷ್ಟ ಲಕ್ಷಣಗಳನ್ನು ತೋರಿಸುವುದಿಲ್ಲ. ಯೋನಿಯಿಂದ ಅಸಹಜ ಸ್ರಾವ, ಸಣ್ಣಪುಟ್ಟ ಹೊಟ್ಟೆನೋವು ಅಥವಾ ಅನಿಯಮಿತ ರಕ್ತಸ್ರಾವದಂತಹ ಸಣ್ಣ ಲಕ್ಷಣಗಳಷ್ಟೇ ಕಾಣಿಸಿಕೊಳ್ಳಬಹುದು. ಗರ್ಭಕೋಶಕ್ಕೆ ಭ್ರೂಣ ಅಂಟಿಕೊಳ್ಳದೆ ಇರಲು, ಪದೇ ಪದೇ ಗರ್ಭಪಾತವಾಗಲು ಹಾಗೂ ಬಂಜೆತನಕ್ಕೆ ಈ ಸಮಸ್ಯೆಯೂ ಒಂದು ಪ್ರಮುಖ ಕಾರಣ ಎಂದು ವೈದ್ಯಯಕೀಯ ಲೋಕ ಈಗ ಗುರುತಿಸುತ್ತಿದೆ.

39 ವರ್ಷದ ಮಹಿಳೆ (ಶ್ರೀಮತಿ ಕೆ- ಹೆಸರು ಬದಲಾಯಿಸಲಾಗಿದೆ) ಮತ್ತು 40 ವರ್ಷದ ಅವರ ಪತಿ ತಮ್ಮ ಎರಡನೇ ಮಗುವಿಗಾಗಿ ಕಳೆದ ಐದು ವರ್ಷಗಳಿಂದ ಪ್ರಯತ್ನಿಸುತ್ತಿದ್ದರು. 12 ವರ್ಷಗಳ ಹಿಂದೆ ವಿವಾಹವಾಗಿದ್ದ ಈ ದಂಪತಿಗೆ 10 ವರ್ಷದ ಮಗಳಿದ್ದಾಳೆ. ಯಾವುದೇ ನೋವಿಲ್ಲದೆ ನಿಯಮಿತವಾಗಿ ಮುಟ್ಟಾಗುತ್ತಿದ್ದ ಮಹಿಳೆಗೆ ಥೈರಾಯ್ಡ್ ಸಮಸ್ಯೆ (ಹೈಪೋಥೈರಾಯ್ಡಿಸಮ್) ಇತ್ತು ಹಾಗೂ ಅದಕ್ಕೆ ಮಾತ್ರೆ ತೆಗೆದುಕೊಳ್ಳುತ್ತಿದ್ದರು. ಐಟಿ ಉದ್ಯೋಗಿಯಾಗಿರುವ ಅವರ ಪತಿಗೂ ಥೈರಾಯ್ಡ್ ಮತ್ತು ರಕ್ತದೊತ್ತಡ (ಬಿಪಿ) ಸಮಸ್ಯೆಗಳಿದ್ದವು; ಆದರೆ ಅವೆಲ್ಲವೂ ನಿಯಂತ್ರಣದಲ್ಲಿದ್ದವು.

ಮಿಲನ್ ಆಸ್ಪತ್ರೆಗೆ ಬರುವ ಮೊದಲು, ಈ ದಂಪತಿ ಎರಡು ಬಾರಿ ಐಯುಐ (IUI - ಗರ್ಭಕೋಶದೊಳಗೆ ವೀರ್ಯಾಣು ಸೇರಿಸುವ ಪ್ರಕ್ರಿಯೆ) ಚಿಕಿತ್ಸೆಗೆ ಒಳಗಾಗಿದ್ದರೂ ಅದು ವಿಫಲವಾಗಿತ್ತು. ಆ ಬಳಿಕ ಅವರು ಜೂನ್ 2024 ರಲ್ಲಿ ಮಿಲನ್ ಆಸ್ಪತ್ರೆಗೆ ಭೇಟಿ ನೀಡಿದ್ದರು.

ಮಿಲನ್ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮತ್ತು ಪರೀಕ್ಷೆಗಳನ್ನು ನಡೆಸಿದಾಗ, ಮಹಿಳೆಯ ಅಂಡಾಶಯದ ನಾಳಗಳು (ಟಿ್ಯೂಬ್‌ಗಳು) ತೆರೆದುಕೊಂಡಿರುವುದು ಕಂಡುಬಂತು. ಆದರೆ, ಅಲ್ಟ್ರಾಸೌಂಡ್ ಸ್ಕ್ಯಾನ್ ಮಾಡಿದಾಗ ಗರ್ಭಕೋಶವು ಊದಿಕೊಂಡಿರುವುದು ಮತ್ತು ''ಅಡೆನೊಮಯೋಸಿಸ್'' (ಗರ್ಭಕೋಶದ ಒಳಪದರದ ಅಂಗಾಂಶವು ಸ್ನಾಯುವಿನ ಗೋಡೆಯೊಳಗೆ ಬೆಳೆಯುವ ಸ್ಥಿತಿ) ಇರುವುದು ಪತ್ತೆಯಾಯಿತು. ಇದು ಭ್ರೂಣ ಕಸಿ ಮಾಡಲು ಅಡ್ಡಿಯಾಗುವಂಥಹದ್ದಾಗಿತ್ತು. ಪತಿಯ ವೀರ್ಯದ ತಪಾಸಣೆಯಲ್ಲಿ ''ಟೆರಾಟೊಜೂಸ್ಪರ್ಮಿಯಾ'' (ಅಸಹಜ ಆಕಾರದ ವೀರ್ಯಾಣು, ಇದು ಫಲವತ್ತತೆ ಮೇಲೆ ಪರಿಣಾಮ ಬೀರುತ್ತದೆ) ಇರುವುದು ಕಂಡಬಂತು. ದಂಪತಿಗಳ ವಯಸ್ಸು, ಹಿಂದಿನ ವಿಫಲ ಐಯುಐ ಪ್ರಯತ್ನಗಳು ಮತ್ತು ಈ ರೀತಿಯ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ವೈದ್ಯರು ಐವಿಎಫ್ (IVF) ಮಾಡಲು ನಿರ್ಧರಿಸಿದರು.

ಭ್ರೂಣದ ಸಿದ್ಧತೆ ಮತ್ತು ತಳೀಯ ಪರೀಕ್ಷೆ: ಮಹಿಳೆಗೆ ಸೂಕ್ತ ಚುಚ್ಚುಮದ್ದುಗಳನ್ನು ನೀಡಿ 10 ಅಂಡಾಣುಗಳನ್ನು ಹೊರತೆಗೆಯಲಾಯಿತು. ಆ ಪೈಕಿ 8 ಗುಣಮಟ್ಟದ ಅಂಡಾಣುಗಳಾಗಿದ್ದು, ಅವೆಲ್ಲವೂ ಯಶಸ್ವಿಯಾಗಿ ಫಲವತ್ತಾಗಿ 5 ಅತ್ಯುತ್ತಮ ಗುಣಮಟ್ಟದ ಬ್ಲಾಸ್ಟೊಸಿಸ್ಟ್‌ಗಳಾಗಿ (ಕಸಿ ಮಾಡಲು ಸೂಕ್ತವಾದ ಮುಂದುವರಿದ ಹಂತದ ಭ್ರೂಣ) ಅಭಿವೃದ್ಧಿಗೊಂಡವು.

ಮಹಿಳೆಯ ಗರ್ಭಕೋಶದಲ್ಲಿ ಅಡೆನೊಮಯೋಸಿಸ್ ಸಮಸ್ಯೆ ಇದ್ದಿದ್ದರಿಂದ, ಭ್ರೂಣವನ್ನು ಒಳಸೇರಿಸುವ ಮುನ್ನ ಗರ್ಭಕೋಶದ ವಾತಾವರಣವನ್ನು ಸರಿಪಡಿಸಲು ಗರ್ಭಕೋಶದೊಳಗೆ ತಾತ್ಕಾಲಿಕವಾಗಿ ''ಮೈರೆನಾ'' ಉಪಕರಣವನ್ನು ಅಳವಡಿಸಲಾಯಿತು. ಉತ್ತಮವಾಗಿದ್ದ ಒಂದು ಭ್ರೂಣವನ್ನು ವರ್ಣತಂತು ದೋಷಗಳನ್ನು ಪತ್ತೆ ಮಾಡುವ ತಳೀಯ ಪರೀಕ್ಷೆಗೆ (PGT-A) ಒಳಪಡಿಸಲಾಯಿತು. ಪರೀಕ್ಷೆಯಲ್ಲಿ ಆ ಭ್ರೂಣವು ಸಂಪೂರ್ಣ ಆರೋಗ್ಯಕರವಾಗಿದೆ ಎಂಬುದು ದೃಢಪಟ್ಟಿತು.

ಸೋಂಕು ಪತ್ತೆಹಚ್ಚುವಿಕೆಯಲ್ಲಿ ನಿರ್ಣಾಯಕ ತಿರುವು: ಮೇ 2025 ರಲ್ಲಿ, ಅಳವಡಿಸಿದ್ದ ಮೈರೆನಾ ಉಪಕರಣವನ್ನು ತೆಗೆದು ಭ್ರೂಣವನ್ನು ಗರ್ಭಕೋಶಕ್ಕೆ ಸೇರಿಸುವ ಪ್ರಕ್ರಿಯೆ ಆರಂಭವಾಯಿತು. ಆದರೆ, ಗರ್ಭಕೋಶವನ್ನು ಸಿದ್ಧಪಡಿಸುವ ಹಾರ್ಮೋನ್ ಚಿಕಿತ್ಸಾ ಪ್ರಕ್ರಿಯೆಗಳ ಸಮಯದಲ್ಲಿ, ಮಹಿಳೆಯಲ್ಲಿ ಸೋಂಕಿನ ಲಕ್ಷಣಗಳು ಮತ್ತು ಅಸಹಜ ಸ್ರಾವ ಕಾಣಿಸಿಕೊಂಡಿದ್ದರಿಂದ ಪ್ರಕ್ರಿಯೆಯನ್ನು ರದ್ದುಗೊಳಿಸಲಾಯಿತು. ಆಗ ಗರ್ಭಕೋಶದ ಒಳಪದರದ ಬಗ್ಗೆ ಆಳವಾದ ತಪಾಸಣೆ ನಡೆಸಲಾಯಿತು.

ಗರ್ಭಕೋಶದ ಒಳಗೆ ಕ್ಯಾಮೆರಾ ಕಳುಹಿಸಿ ನೋಡುವ ಹಿಸ್ಟರೊಸ್ಕೋಪಿ ವಿಧಾನ ಹಾಗೂ ಗರ್ಭಕೋಶದ ಒಳಪದರದ ಮಾದರಿಯನ್ನು ತೆಗೆದು ಬಯಾಪ್ಸಿ ಮಾಡಲಾಯಿತು. ಅಲ್ಲಿ ಅತ್ಯಾಧುನಿಕ ಪ್ರಯೋಗಾಲಯ ಪರೀಕ್ಷೆಗಳನ್ನು (IHC) ನಡೆಸಿದಾಗ ಗರ್ಭಕೋಶದ ಒಳಪದರದಲ್ಲಿ ಪ್ಲಾಸ್ಮಾ ಜೀವಕೋಶಗಳು (ಸೋಂಕಿನ ವಿರುದ್ಧ ಹೋರಾಡುವ ಜೀವಕೋಶಗಳು) ಸೇರಿಕೊಂಡಿರುವುದು ಪತ್ತೆಯಾಯಿತು. ಇದು ಗರ್ಭಕೋಶದಲ್ಲಿ ದೀರ್ಘಕಾಲದ ಉರಿಯೂತ (ಕ್ರಾನಿಕ್ ಎಂಡೊಮೆಟ್ರೈಟಿಸ್) ಇರುವುದನ್ನು ಖಚಿತಪಡಿಸಿತು.

ಮಹಿಳೆಗೆ ಸೂಕ್ತವಾದ ಆಂಟಿಬಯೋಟಿಕ್ ಚಿಕಿತ್ಸೆ ಮತ್ತು ಯೋನಿಯಲ್ಲಿ ಆರೋಗ್ಯಕರ ಬ್ಯಾಕ್ಟೀರಿಯಾಗಳನ್ನು ಉತ್ಪಾದಿಸಲು ಪ್ರೋಬಯಾಟಿಕ್ಸ್ ಔಷಧಿಗಳನ್ನು ನೀಡಲಾಯಿತು. ಗುಣಮುಖರಾದ ನಂತರ ಗರ್ಭಕೋಶವನ್ನು ಸಿದ್ಧಪಡಿಸಲಾಯಿತು ಮತ್ತು ಗುಣಮಟ್ಟದ ಒಂದೇ ಒಂದು ಭ್ರೂಣವನ್ನು ಗರ್ಭಕೋಶಕ್ಕೆ ಯಶಸ್ವಿಯಾಗಿ ವರ್ಗಾಯಿಸಲಾಯಿತು. ಇದರ ಫಲವಾಗಿ, ಮಹಿಳೆಯು ಗರ್ಭಧರಿಸಿದ್ದು ಪ್ರಸ್ತುತ ಏಳು ವಾರಗಳ ಗರ್ಭಿಣಿಯಾಗಿದ್ದಾರೆ ಮತ್ತು ಆರೋಗ್ಯವಾಗಿದ್ದಾರೆ.

ಬೆಂಗಳೂರಿನ ಮಿಲನ್ - ಫರ್ಟಿಲಿಟಿ ಮತ್ತು ಬರ್ತಿಂಗ್ ಆಸ್ಪತ್ರೆಯ ರೊಪ್ರೊಡಕ್ಟಿವ್ ಮೆಡಿಸಿನ್ ಮತ್ತು ಹೈ-ರಿಸ್ಕ್ ಆಬ್ಸ್ಟೆಟ್ರಿಕ್ಸ್ ವಿಭಾಗದ ಸೀನಿಯರ್ ಕನ್ಸಲ್ಟೆಂಟ್ ಡಾ. ಶಿಲ್ಪಾ ಎಲ್ಲೂರ್ ಅವರು ಈ ಕುರಿತು ಮಾತನಾಡಿ, "ಕ್ರಾನಿಕ್ ಎಂಡೊಮೆಟ್ರೈಟಿಸ್ ಎಂಬುದು ಯಾವುದೇ ಲಕ್ಷಣಗಳನ್ನು ತೋರಿಸದ, ಬಂಜೆತನಕ್ಕೆ ಕಾರಣವಾಗುವ ಒಂದು ಪ್ರಮುಖ ಗುಪ್ತ ಸಮಸ್ಯೆಯಾಗಿದೆ. ಸಾಮಾನ್ಯ ತಪಾಸಣೆಗಳಲ್ಲಿ ಭ್ರೂಣ ವಿಫಲತೆಗಳಿಗೆ ಕಾರಣ ಸಿಗದಿದ್ದಾಗ ಇಂತಹ ಆಳವಾದ ಪರೀಕ್ಷೆಗಳು ಬೇಕಾಗುತ್ತವೆ. ಹಿಸ್ಟರೊಸ್ಕೋಪಿ ಮತ್ತು ಅತ್ಯಾಧುನಿಕ ಪರೀಕ್ಷೆಗಳ ಮೂಲಕ ಈ ತಡೆಗೋಡೆಯನ್ನು ನಾವು ಗುರುತಿಸಿದೆವು. ನಂತರ ಸೂಕ್ತ ಚಿಕಿತ್ಸೆ ನೀಡಿದ್ದರಿಂದ ಮಹಿಳೆ ಐವಿಎಫ್ ಮೂಲಕ ಗರ್ಭಧರಿಸಲು ಸಾಧ್ಯವಾಯಿತು. ರೋಗಿಯ ಅಗತ್ಯತೆಗೆ ಅನುಗುಣವಾಗಿ ಸಕಾಲಿಕ ಚಿಕಿತ್ಸೆ ನೀಡಿದರೆ ಎಂತಹ ಬಂಜೆತನದ ಸವಾಲನ್ನೂ ಮೀರಿ ನಿಲ್ಲಬಹುದು ಎಂಬುದಕ್ಕೆ ಈ ಪ್ರಕರಣವೆ ಸಾಕ್ಷಿ, " ಎಂದರು.

"ವರ್ಷಗಳ ಕಾಯುವಿಕೆ ಮತ್ತು ಹಲವು ವಿಫಲ ಪ್ರಯತ್ನಗಳ ನಂತರ, ನಮ್ಮ ಈ ಕನಸು ಈಗ ನನಸಾಗಿದೆ. ಮಿಲನ್ ಆಸ್ಪತ್ರೆಯಲ್ಲಿ ನಮಗೆ ಸಿಕ್ಕ ಬೆಂಬಲ, ಮಾರ್ಗದರ್ಶನ ಮತ್ತು ಗುಣಮಟ್ಟದ ಆರೈಕೆ ನಮ್ಮಲ್ಲಿ ಹೊಸ ಭರವಸೆ ಮೂಡಿಸಿತು. ಈ ಸಂಕೀರ್ಣ ಗರ್ಭಧಾರಣೆಯ ಪ್ರಯಾಣದಲ್ಲಿ ಬೆನ್ನೆಲುಬಾಗಿ ನಿಂತ ಡಾ. ಶಿಲ್ಪಾ ಎಲ್ಲೂರ್ ಮತ್ತು ಅವರ ಇಡೀ ವೈದ್ಯಕೀಯ ತಂಡಕ್ಕೆ ನಾವು ಚಿರಋಣಿಯಾಗಿದ್ದೇವೆ " ಎಂದು ರೋಗಿಯಾದ ಮಹಿಳೆ ತಮ್ಮ ಹರ್ಷ ವ್ಯಕ್ತಪಡಿಸಿದರು.

ಗರ್ಭಧಾರಣೆಗೆ ಪ್ರಯತ್ನಿಸಿ ಪ್ರತಿಬಾರಿ ವಿಫಲವಾಗುತ್ತಿರುವಾಗ ''ಕ್ರಾನಿಕ್ ಎಂಡೊಮೆಟ್ರೈಟಿಸ್‌''ನಂತಹ ಗುಪ್ತ ಕಾರಣಗಳ ಬಗ್ಗೆಯೂ ಗಮನಹರಿಸುವುದು ಅತ್ಯಂತ ಅಗತ್ಯ ಎಂಬುದನ್ನು ಈ ಪ್ರಕರಣವು ಎತ್ತಿ ತೋರಿಸುತ್ತದೆ. ಮಿಲನ್ ಆಸ್ಪತ್ರೆಯ ವೈದ್ಯರ ಅತ್ಯಾಧುನಿಕ ರೋಗನಿರ್ಣಯ, ಸಕಾಲಿಕ ಚಿಕಿತ್ಸೆ ಹಾಗೂ ಸೂಕ್ತ ಆರೈಕೆಯಿಂದಾಗಿ ಈ ಗುಪ್ತ ಸಮಸ್ಯೆಯನ್ನು ನಿವಾರಿಸಿ ಆ ದಂಪತಿಗಳ ಪೋಷಕರಾಗುವ ಕನಸು ಇಂದು ನನಸಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಲಿಸುತ್ತಿದ್ದ ಲಾರಿಗೆ ಬಸ್ ಡಿಕ್ಕಿ: ಚಾಲಕ ಸೇರಿ ಇಬ್ಬರ ಸಾವು
ಹರಳಯ್ಯ ಸ್ವಾಮೀಜಿ ಮೇಲಿನ ಹಲ್ಲೆಗೆ ಆಕ್ರೋಶ