ಬಳ್ಳಾರಿ:ಸಂಡೂರಿನ ದೇವದಾರಿ ಬೆಟ್ಟದಲ್ಲಿ ಕುದುರೆಮುಖ ಕಬ್ಬಿಣ ಅದಿರಿನ ಕಂಪನಿಗೆ ಗಣಿಗಾರಿಕೆ ಪ್ರಾರಂಭಿಸಲು ಅನುಮತಿ ನೀಡಬಾರದು ಎಂದು ಒತ್ತಾಯಿಸಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
ಈ ಹಿಂದೆ ಪಶ್ಚಿಮ ಘಟ್ಟಗಳಲ್ಲಿ ಅನೇಕ ವರ್ಷ ಗಣಿಗಾರಿಕೆ ಮಾಡಿ ಅರಣ್ಯ ಕಾಯ್ದೆಗಳನ್ನು ಉಲ್ಲಂಘನೆ ಮಾಡಿ ಅಲ್ಲಿಯ ಜನತೆಯಿಂದ ತಿರಸ್ಕಾರಕ್ಕೆ ಒಳಗಾಗಿ ಅಪಖ್ಯಾತಿ ಪಡೆದಿರುವ ಕುದುರೆಮುಖ ಕಬ್ಬಿಣ ಅದಿರಿನ ಕಂಪನಿಗೆ ಸಂಡೂರಿನ ದೇವದಾರಿ ಬೆಟ್ಟದಲ್ಲಿ 470 ಹೆಕ್ಟೇರ್‌ಗಳಷ್ಟು ಹಸಿರಿನಿಂದ ತುಂಬಿರುವ ಬೆಟ್ಟವನ್ನು ಗಣಿಗಾರಿಕೆಗೆ ಪರವಾನಗಿ ನೀಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿರುವುದು ಸರಿಯಲ್ಲ. ಅಲ್ಲಿ ಗಣಿಗಾರಿಕೆ ಪ್ರಾರಂಭಿಸಲು ಈ ಬೆಟ್ಟದಲ್ಲಿ ದಟ್ಟವಾಗಿ ಬೆಳೆದು ನಿಂತಿರುವ ಸುಮಾರು 99 ಸಾವಿರ ಗಿಡಮರಗಳನ್ನು ಕಡಿದು ಹಾಕಬೇಕಾಗುತ್ತದೆ ಎನ್ನುವುದು ಅತ್ಯಂತ ಆತಂಕದ ಸಂಗತಿಯಾಗಿದೆ. ಜಿಲ್ಲೆಯಲ್ಲಿ ಈ ಹಿಂದೆ ಮಾಡಿರುವ ಅಕ್ರಮ ಗಣಿಗಾರಿಕೆಯಿಂದಾಗಿ ಅಪಾರ ಪ್ರಮಾಣದ ಖನಿಜ ಸಂಪತ್ತು ನಾಶವಾಗಿದೆ. ಕೃಷಿ ವಲಯದ ಹಾಗೂ ಜನಸಾಮಾನ್ಯರ ಆರೋಗ್ಯ ಮೇಲೂ ದುಷ್ಟರಿಣಾಮ ಬೀರಿದೆ.ಈ ಹಿಂದೆ ಪರಿಸರದ ಸೂಕ್ಷ್ಮತೆಯನ್ನು ಪರಿಗಣಿಸಿ, ಅರಣ್ಯ ಇಲಾಖೆಯು ದೇವದಾರಿ ಗುಡ್ಡ ಮತ್ತು ಸ್ವಾಮಿಮಲೈ ಪ್ರದೇಶಗಳಲ್ಲಿ ಯಾವುದೇ ಹೊಸ ಗಣಿಗಾರಿಕೆಗೆ ಪರವಾನಗಿ ನೀಡಬಾರದೆಂದು ವರದಿ ನೀಡಿದ್ದು ಇಲ್ಲಿ ಪ್ರಸ್ತುತ. ಸರ್ಕಾರವು ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ರಾಜ್ಯ ಸರ್ಕಾರ ಕೇವಲ ತಾತ್ಕಾಲಿಕವಾಗಿ ತಡೆಹಿಡಿಯುವುದಷ್ಟೇ ಅಲ್ಲದೆ, ಯಾವುದೇ ಕಾರಣಕ್ಕೂ ದೇವದಾರಿಯಲ್ಲಿ ಗಣಿಗಾರಿಕೆಗೆ ಅವಕಾಶ ನೀಡಬಾರದು. ಇಲ್ಲವಾದಲ್ಲಿ ಜನತೆ ಬೃಹತ್ ಹೋರಾಟಕ್ಕೆ ಸಜ್ಜಾಗಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ನೇತೃತ್ವ ವಹಿಸಿದ್ದ ಎಸ್‌ಯುಸಿಐ ಜಿಲ್ಲಾ ಸಮಿತಿ ಸದಸ್ಯ ಆರ್.ಸೋಮಶೇಖರ ಗೌಡ ಹಾಗೂ ಎ.ದೇವದಾಸ್ ಮಾತನಾಡಿ, ಕಳೆದ 25 ವರ್ಷಗಳಲ್ಲಿ ಗಣಿಗಾರಿಕೆ ಸಂಪೂರ್ಣ ಯಾಂತ್ರೀಕರಣಗೊಂಡ ನಂತರ ಗಣಿಗಳಿಂದ ಹೊರ ತೆಗೆಯುವ ಅದಿರಿನ ಪ್ರಮಾಣ ಸಾವಿರಾರು ಪಟ್ಟು ಹೆಚ್ಚಿದೆ. ಅದೇ ಸಮಯಕ್ಕೆ ಕಬ್ಬಿಣ ಅದಿರಿನ ಬೆಲೆ ಶೇ.200 ಅಧಿಕವಾಗಿ ಗಣಿ ಮಾಲೀಕರಿಗೆ ಭಾರಿ ಲಾಭದ ಹೊಳೆ ಹರಿದು ವರದಾನವಾಗಿದೆ. ಆದರೆ ಉದ್ಯೋಗ ಅವಕಾಶಗಳು ಮಾತ್ರ ಅತ್ಯಂತ ಕಡಿಮೆಯಾಗಿದೆ. ರೈತರಿಗೆ, ಕಾರ್ಮಿಕರಿಗೆ, ಪರಿಸರಕ್ಕೆ, ಜನಸಾಮಾನ್ಯರ ಪಾಲಿಗೆ ಶಾಪವಾಗಿದೆ. ಭಾರಿ ಗಾತ್ರದ ವಿನಾಶಕಾರಿ ಗಣಿಗಾರಿಕೆಯ ಫಲವಾಗಿ ವಾತಾವರಣದಲ್ಲಿ ಧೂಳಿನ ಪ್ರಮಾಣವು ಮಿತಿಗಿಂತ ಅನೇಕ ಪಟ್ಟು ಹೆಚ್ಚಿ ಸಂಡೂರಿನ ಸುತ್ತಮುತ್ತಲಿನ ಜನತೆ ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದರು.ರೈತರ ಜಾನುವಾರುಗಳು ಸಹಿತ ವೃದ್ಧಿಯಾಗದೇ ಸಾವನ್ನಪ್ಪುತ್ತಿವೆ. ಮಳೆ ಕಡಿಮೆಯಾಗಿ ಈ ಹಿಂದೆ ಮಲೆನಾಡಿನಂತಿದ್ದ ಸಂಡೂರು ಈಗ ಬರಡು ಭೂಮಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಂಡೂರಿನ ದೇವದಾರಿ ಬೆಟ್ಟವನ್ನು ಕುದುರೆಮುಖ ಕಬ್ಬಿಣ ಅದಿರಿನ ಕಂಪನಿಗೆ ಗಣಿಗಾರಿಕೆ ಮಾಡಲು ಪರವಾನಗಿ ನೀಡಲೇಬಾರದು ಎಂದು ಒತ್ತಾಯಿಸಿದರು.
ಪಕ್ಷದ ಜಿಲ್ಲಾ ಪ್ರಮುಖರಾದ ಡಾ.ಪ್ರಮೋದ್, ಶಾಂತಾ, ನಾಗರತ್ನ, ಈಶ್ವರಿ, ಜಗದೀಶ್ ಪಾಲ್ಗೊಂಡಿದ್ದರು. ಮುಖ್ಯಮಂತ್ರಿ, ಅರಣ್ಯ ಸಚಿವರಿಗೆ ಬರೆದ ಮನವಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಯಿತು.