ಚಿಕ್ಕಪ್ಪನಹಳ್ಳಿ ಷಣ್ಮುಖಕನ್ನಡಪ್ರಭವಾರ್ತೆ ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅವರ ಸಹೋದರ ಕೆ.ಸಿ.ನಾಗರಾಜ್ ಚಿತ್ರದುರ್ಗದಲ್ಲಿ ಮತ್ತೆ ಸೂಪರ್ ಎಂಎಲ್ಎ ಗಿರಿ ಶುರುಮಾಡಿದ್ದು ಕಳೆದ ನಾಲ್ಕು ದಿನಗಳ ಅಂತರದಲ್ಲಿ ನಗರಸಭೆಯಲ್ಲಿ ಎರಡು ಸಭೆಗಳನ್ನು ನಡೆಸುವುದರ ಮೂಲಕ ದರ್ಬಾರ್ ಮುಂದುವರಿಸಿರುವುದು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಚಿತ್ರದುರ್ಗ ನೆಲದಲ್ಲಿ ಅಪ್ರಜಾಪ್ರಭುತ್ವ ನಡೆಯೊಂದು ವಿಜೃಂಭಿಸುವಂತಾಗಿದೆ ಎಂಬ ಪ್ರತಿಕ್ರಿಯೆಗಳು ಕೇಳಿ ಬರುತ್ತಿವೆ. ಆಡಳಿತ ವಲಯದಲ್ಲಿ ಅಸಹನೀಯ ಸನ್ನಿವೇಶ ಸೃಷ್ಟಿಗೆ ಕಾರಣವಾಗಿರುವ ಕೆ.ಸಿ.ನಾಗರಾಜ್ ಅವರ ಈ ನಡೆ ಒಂದೆಡೆ ಆಯಕಟ್ಟಿನ ಅಧಿಕಾರಿಗಳಿಗೆ ಅಡಕತ್ತರಿಯಲ್ಲಿ ಸಿಲುಕಿದ ಅನುಭವ ತಂದಿದ್ದರೆ, ಮತ್ತೊಂದಿಷ್ಟು ಮಂದಿ ಅಸಹಾಯಕತೆಯಲ್ಲಿ ತೊಳಲಾಡುತ್ತಿದ್ದಾರೆ. ಎದುರಾಡಿದರೆ, ಆಕ್ಷೇಪಣೆ ವ್ಯಕ್ತಪಡಿಸಿದರೆ ವರ್ಗಾವಣೆಯಾದೀತೆಂಬ ಭೀತಿ ಅವರಲ್ಲಿದೆ. ಉನ್ನತ ಅಧಿಕಾರಿಗಳಿಗಂತೂ ಇದು ಬಿಸಿ ತುಪ್ಪವಾಗಿದೆ. ಶಾಸಕ ವೀರೇಂದ್ರ ಪಪ್ಪಿ ಯಾರ ಕೈಗೂ ಸಿಗುವುದಿಲ್ಲ, ಜಿಲ್ಲಾ ಕೇಂದ್ರದಲ್ಲಿ ಲಭ್ಯವಿರುವುದಿಲ್ಲ. ಅವರ ಪಾಡಿಗೆ ತಮ್ಮ ವಹಿವಾಟು ನೋಡಿಕೊಂಡಿರುತ್ತಾರೆ ಎಂಬ ದೂರುಗಳು ಜನಸಾಮಾನ್ಯರಿಂದ ಕೇಳಿ ಬರುತ್ತಿವೆ. ತಮ್ಮ ಸಹೋದರನ ವ್ಯವಹಾರಿಕ ಬಿಜಿಯನ್ನು ಅಸ್ತ್ರವಾಗಿ ಬಳಸಿಕೊಂಡು ಕೆ.ಸಿ.ನಾಗರಾಜ್ ಸೂಪರ್ ಎಂಎಲ್ ಎ ಆಗಿ ಫೀಲ್ಡಿಗಿಳಿದಿದ್ದಾರೆ. ಇದಕ್ಕೆ ವೀರೇಂದ್ರ ಪಪ್ಪಿ ಅವರ ಸಹಮತ ಇದೆ ಎನ್ನಲಾಗಿದೆ. ಚಿತ್ರದುರ್ಗದಲ್ಲಿ ಯಾವ ಅಧಿಕಾರಿಗಳು ಇರಬೇಕು ಎಂಬುದ ನಾಗರಾಜ್ ಅವರೇ ನೋಡಿಕೊಳ್ಳುತ್ತಾರೆ. ನಾಗಣ್ಣ ಹುಂ.. ಅಂದರೆ ಅಧಿಕಾರಿ ಇರ್ತಾರೆ, ಹುಂಹುಂ ಅಂದರೆ ಇರಲ್ಲ ಎಂಬ ಅಭಿಪ್ರಾಯಗಳು ಅಧಿಕಾರಿ ವಲಯದಲ್ಲಿವೆ. ಕೆ.ಸಿ ನಾಗರಾಜ್ ಅವರು ಅಧಿಕಾರಿಗಳ ಸಭೆ ನಡೆಸುತ್ತಿರುವುದು ಇದೇ ಮೊದಲಲ್ಲ. ಹಿಂದೊಮ್ಮೆ ಅವರ ಸಹೋದರಿ ಸರ್ಕಾರಿ ಕಲಾ ಕಾಲೇಜಿನ ಕಾರ್ಯಕ್ರಮದಲ್ಲಿ ತಮ್ಮ ಸಹೋದರನ ಬದಲು ಹಾಜರಾಗಿದ್ದರು. ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯೊಂದರಲ್ಲಿ ಶಾಸಕ ವೀರೇಂದ್ರ ಪಪ್ಪಿ ಪರವಾಗಿ ನಾಗರಾಜ್ ಪಾಲ್ಗೊಂಡಿದ್ದರು. ಶಾಸಕರು ಅಲಭ್ಯವಿದ್ದ ಸಂದರ್ಬದಲ್ಲಿ ನಾಗರಾಜ್ ಅವರನ್ನೇ ಕರೆದುಕೊಂಡು ಹೋಗುವ ಹೊಸ ನಡಾವಳಿಗಳು ಶುರುವಾಗಿವೆ. ಸಾರ್ವಜನಿಕರಿಂದ ಆಕ್ಷೇಪಣೆ ಕೇಳಿ ಬಂದಾಗ ನಾಗರಾಜ್ ಕೆಡಿಪಿ ಸದಸ್ಯರಾಗಿ ಸರ್ಕಾರದಿಂದ ನೇಮಕಾತಿ ಮಾಡಿಸಿಕೊಂಡು ಬಂದಿದ್ದರು. ಕೆಡಿಪಿ ಸಭೆಗಳಲ್ಲಿ ಪಾಲ್ಗೊಳ್ಳಲು ಈ ಸದಸ್ಯತ್ವ ಇದೆಯೇ ವಿನಹ ಸರ್ಕಾರಿ ಅಧಿಕಾರಿಗಳ ಕುಳ್ಳರಿಸಿಕೊಂಡು ಸಭೆ ಮಾಡುವಂತಿಲ್ಲ. ಕಳೆದ ಶುಕ್ರವಾರ ಅಂದರೆ ನಾಲ್ಕು ದಿನಗಳ ಹಿಂದೆಯಷ್ಟೇ ಕೆ.ಸಿ ನಾಗರಾಜ್ ನಗರಸಭೆಯಲ್ಲಿ ಎಲ್ಲ ಅಧಿಕಾರಿಗಳ ಸಭೆ ಕರೆದು ಕಾಮಗಾರಿ ಸೇರಿದಂತೆ ಇನ್ನಿತರೆ ಆಡಳಿತಾತ್ಮಕ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ. ನಾಗರಾಜ್ ಬರುವ ತನಕ ಕಾದಿದ್ದು ಸಭೆ ನಡೆಸುವಂತಹ ಪರಿಸ್ಥಿತಿ ಅಧಿಕಾರಿಗಳು ತಂದುಕೊಂಡಿದ್ದಾರೆ.
ಜನಪ್ರತಿನಿಧಿಗಳ ಪರವಾಗಿ ಬೇರೊಬ್ಬರು ಸಭೆ ನಡೆಸುವುದು ತಪ್ಪು. ಇದಕ್ಕೆ ಅವಕಾಶ ಕೊಡಬಾರದು.-ಡಿ.ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವರು. ಹಿಂದೊಮ್ಮೆ ಹಿರಿಯೂರು ಶಾಸಕಿಯಾಗಿದ್ದ ಪೂರ್ಣಿಮಾ ಅವರ ಪತಿ ಶ್ರೀನಿವಾಸ್ ಹಿರಿಯೂರು ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ್ದರು. ಇದು ಮಾಧ್ಯಮಗಳಲ್ಲಿ ವರದಿಯಾದ ನಂತರ ಅಂದಿನ ಜಿಲ್ಲಾಧಿಕಾರಿ ತಾಲೂಕು ಮಟ್ಟದ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದರು. ಚಿತ್ರದುರ್ಗದಲ್ಲಿ ನಡೆಯುತ್ತಿರುವ ಸಭೆಗಳು ನಿಯಂತ್ರಣವಾಗಬೇಕಾದರೆ ಜಿಲ್ಲಾಧಿಕಾರಿ ವೆಂಕಟೇಶ್ ಅವರು ತಮ್ಮ ಕೆಳ ಹಂತದ ಅಧಿಕಾರಿಗಳಿಗೆ ಬಿಗಿ ನಿರ್ದೇಶನ ನೀಡಿದರೆ ಎಲ್ಲವೂ ನಿಯಂತ್ರಣಕ್ಕೆ ಬರುತ್ತದೆ. ಅಧಿಕಾರಿಗಳು ಅಡಕತ್ತರಿಯಿಂದ ಪಾರಾಗುತ್ತಾರೆ. ಹೆಸರು ಹೇಳಲು ಇಚ್ಛಿಸದ ಸರ್ಕಾರಿ ನೌಕರ.