ವೇತನಕ್ಕಾಗಿ ಬಿಎಂಟಿಸಿ ಎಲೆಕ್ಟ್ರಿಕ್‌ ಬಸ್‌ ಚಾಲಕರ ದಿಢೀರ್‌ ಪ್ರತಿಭಟನೆ

KannadaprabhaNewsNetwork |  
Published : May 15, 2024, 01:41 AM IST
Protest 6 | Kannada Prabha

ಸಾರಾಂಶ

ವೇತನ ಪಾವತಿ ವಿಳಂಬ ಹಾಗೂ ವೇತನ ಕಡಿತ ವಿರೋಧಿಸಿ ಬಿಎಂಟಿಸಿ ಎಲೆಕ್ಟ್ರಿಕ್‌ ಬಸ್‌ ಚಾಲಕರು ಮಂಗಳವಾರ ಬೆಳಗ್ಗೆ ಶಾಂತಿನಗರ ಘಟಕದಲ್ಲಿ ದಿಢೀರ್‌ ಪ್ರತಿಭಟನೆ ನಡೆಸಿದ್ದರಿಂದ ಎಲೆಕ್ಟ್ರಿಕ್ ಬಸ್‌ ಸೇವೆಯಲ್ಲಿ ವ್ಯತ್ಯಯ ಉಂಟಾಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ವೇತನ ಪಾವತಿ ವಿಳಂಬ ಹಾಗೂ ವೇತನ ಕಡಿತ ವಿರೋಧಿಸಿ ಬಿಎಂಟಿಸಿ ಎಲೆಕ್ಟ್ರಿಕ್‌ ಬಸ್‌ ಚಾಲಕರು ಮಂಗಳವಾರ ಬೆಳಗ್ಗೆ ಶಾಂತಿನಗರ ಘಟಕದಲ್ಲಿ ದಿಢೀರ್‌ ಪ್ರತಿಭಟನೆ ನಡೆಸಿದ್ದರಿಂದ ಎಲೆಕ್ಟ್ರಿಕ್ ಬಸ್‌ ಸೇವೆಯಲ್ಲಿ ವ್ಯತ್ಯಯ ಉಂಟಾಯಿತು.

ಬಿಎಂಟಿಸಿಯು ಗ್ರಾಸ್‌ ಕಾಸ್ಟ್‌ ಕಾಂಟ್ರ್ಯಾಕ್ಟ್‌ (ಜಿಸಿಸಿ) ಆಧಾರದಲ್ಲಿ 136 ಬಸ್‌ಗಳನ್ನು ಖಾಸಗಿ ಸಂಸ್ಥೆಯಿಂದ ಪಡೆದುಕೊಂಡಿದೆ. ಈ ಎಲೆಕ್ಟ್ರಿಕ್‌ ಬಸ್‌ಗಳನ್ನು ಪೂರೈಸಿದ ಸಂಸ್ಥೆಯೇ ಬಸ್‌ಗಳ ನಿರ್ವಹಣೆ ಮಾಡಿ, ಅದಕ್ಕೆ ಚಾಲಕರನ್ನು ನೇಮಿಸಿಕೊಂಡು ವೇತನವನ್ನೂ ನೀಡುತ್ತಿದೆ. ಆದರೆ, ಕಳೆದ ಎರಡ್ಮೂರು ತಿಂಗಳಿನಿಂದ ಚಾಲಕರಿಗೆ ಸಮರ್ಪಕವಾಗಿ ವೇತನ ನೀಡಿಲ್ಲ. ಕೆಲ ಚಾಲಕರಿಗೆ ವೇತನ ನೀಡಲಾಗಿದೆಯಾದರೂ, ನಿಗದಿ ಪಡಿಸಿದ್ದಕ್ಕಿಂತ ಕಡಿಮೆ ವೇತನವನ್ನು ನೀಡಲಾಗಿದೆ. ಈ ಬಗ್ಗೆ ಬಿಎಂಟಿಸಿ ಹಾಗೂ ಗುತ್ತಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.

ಈ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ ಕೆಲಸಕ್ಕೆ ಬಂದಿದ್ದ 100ಕ್ಕೂ ಹೆಚ್ಚಿನ ಚಾಲಕರು, ಬಸ್‌ಗಳನ್ನು ಮಾರ್ಗಕ್ಕೆ ಕೊಂಡೊಯ್ಯದೆ ಘಟಕದಲ್ಲಿಯೇ ಪ್ರತಿಭಟನೆ ನಡೆಸಿದರು. ಇದರಿಂದಾಗಿ ಶಾಂತಿನಗರ ಬಸ್‌ ಡಿಪೋದಿಂದ ಬೆಳಗ್ಗೆ 6 ಗಂಟೆಯಿಂದ ಆರಂಭವಾಗಬೇಕಿದ್ದ ಬಸ್‌ ಸೇವೆ ವಿಳಂಬವಾಯಿತು.

ಪ್ರತಿಭಟನೆ ವೇಳೆ ಆಕ್ರೋಶ ವ್ಯಕ್ತಪಡಿಸಿದ ಚಾಲಕರು, ಬಿಎಂಟಿಸಿ ಎಲೆಕ್ಟ್ರಿಕ್‌ ಬಸ್‌ಗಳ ಚಾಲಕರಿಗೆ ಖಾಸಗಿ ಸಂಸ್ಥೆಯು ಮಾಸಿಕ ₹26 ಸಾವಿರ ವೇತನ ನಿಗದಿ ಮಾಡಿದ್ದು, ಅದರಲ್ಲಿ ₹2 ಸಾವಿರ ಪಿಎಫ್‌ ಸೇರಿ ಇನ್ನಿತರ ಕಾರಣಗಳಿಗೆ ಕಡಿತಗೊಳಿಸುವುದಾಗಿ ತಿಳಿಸಿತ್ತು. ಆದರೆ, ಕೆಲಸಕ್ಕೆ ಸೇರ್ಪಡೆಯಾದ ನಂತರ ಮಾಸಿಕ ₹18 ಸಾವಿರ ವೇತನ ನೀಡಲಾಗುತ್ತಿದೆ. ಕಳೆದೆರಡು ತಿಂಗಳಿನಿಂದ ₹2 ಸಾವಿರ ಬದಲು, ₹5 ಸಾವಿರ ಕಡಿತಗೊಳಿಸಲಾಗುತ್ತಿದೆ. ಈ ತಿಂಗಳು ಕೆಲವರಿಗೆ ಮಾತ್ರ ವೇತನವಾಗಿದ್ದು, ಉಳಿದ ನೌಕರರಿಗೆ ವೇತನ ನೀಡಿಲ್ಲ ಎಂದು ದೂರಿದರು.

ಆರಂಭದಲ್ಲಿ ಬಸ್‌ ಪೂರೈಸಿರುವ ಟಾಟಾ ಸಂಸ್ಥೆಯ ಅಡಿಯಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಾಗುತ್ತದೆ ಎಂದು ತಿಳಿಸಲಾಗಿತ್ತು. ನಂತರ ಖಾಸಗಿ ಸಂಸ್ಥೆಯಿಂದ ಗುತ್ತಿಗೆ ಆಧಾರದಲ್ಲಿ ನೇಮಿಸಲಾಗಿದೆ. ಅಲ್ಲದೆ, ಕೆಲಸಕ್ಕೆ ಸೇರಿಸಿಕೊಳ್ಳುವಾಗ ವಸತಿ ಸೇರಿ ಇನ್ನಿತರ ಸವಲತ್ತುಗಳನ್ನು ನೀಡುವುದಾಗಿ ತಿಳಿಸಲಾಗಿತ್ತು. ಆದರೆ, ಅದ್ಯಾವುದನ್ನೂ ಕೊಡುತ್ತಿಲ್ಲ. ಹೀಗಾಗಿ ಪ್ರತಿಭಟಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಬಿಎಂಟಿಸಿ ಅಧಿಕಾರಿಗಳು, ಚಾಲಕರನ್ನು ಸಮಾಧಾನ ಪಡಿಸುವ ಪ್ರಯತ್ನ ಮಾಡಿದರು. ಆದರೆ, ಅದಕ್ಕೊಪ್ಪದ ಚಾಲಕರು ಪ್ರತಿಭಟನೆ ಮುಂದುವರಿಸಿದರು. ಕೊನೆಗೆ, ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ಸೇರಿಸಿಕೊಂಡ ಸಂಸ್ಥೆಯ ಪ್ರತಿನಿಧಿಗಳು, ಬಿಎಂಟಿಸಿ ಅಧಿಕಾರಿಗಳು ಚಾಲಕರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು. ನಂತರ ಚಾಲಕರು ಪ್ರತಿಭಟನೆ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾದರು.

ಬಸ್‌ ನಿರ್ವಹಣೆ ಸಂಸ್ಥೆಗೆ ಬಿಎಂಟಿಸಿ ನೋಟಿಸ್‌:

ಚಾಲಕರ ಪ್ರತಿಭಟನೆಯಿಂದ ಉಂಟಾದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಎಂಟಿಸಿ, ಎಲೆಕ್ಟ್ರಿಕ್‌ ಬಸ್‌ಗಳ ನಿರ್ವಹಣೆಯ ಗುತ್ತಿಗೆ ಪಡೆದಿರುವ ಟಿಎಂಎಲ್‌ ಸ್ಮಾರ್ಟ್‌ಸಿಟಿ ಮೊಬಿಲಿಟಿ ಸಲ್ಯೂಷನ್‌ ಲಿ. ಸಂಸ್ಥೆಗೆ ನೋಟಿಸ್‌ ನೀಡಿದೆ. ಬಸ್‌ಗಳ ಕಾರ್ಯಾಚರಣೆಗೆ ತಡೆಯುಂಟಾಗುವುದಕ್ಕೆ ಸಂಸ್ಥೆಯೇ ಕಾರಣ, ಮುಂದಿನ ದಿನಗಳಲ್ಲಿ ಈ ರೀತಿಯ ವ್ಯತ್ಯಯ ಉಂಟಾಗದಂತೆ ನೋಡಿಕೊಳ್ಳುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿದೆ.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ