ಕನ್ನಡಪ್ರಭ ವಾರ್ತೆ ಹೊಸನಗರ
ಬಸವ ಜಯಂತಿ ಹಾಗೂ ಲಿಂಗೈಕ್ಯ ಶ್ರೀ ಮ.ನಿ.ಪ್ರ ಸಿದ್ದಲಿಂಗ ಮಹಾಶಿವಯೋಗಿ ಪುಣ್ಯಸ್ಮರಣೆ ಅಂಗವಾಗಿ ತಾಲೂಕಿನ ಮೂಲೆಗದ್ದೆ ಮಠದ ಶ್ರೀ ಸದಾನಂದ ಶಿವಯೋಗಾಶ್ರಮದಲ್ಲಿ ಹಮ್ಮಿಕೊಂಡಿದ್ದ ಇಷ್ಟಲಿಂಗ ಪೂಜೆ ಬಳಿಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಜಲ-ವಾಯು ಮಾಲಿನ್ಯದಂತೆ ಮನುಷ್ಯನ ಮನಸ್ಸು ಕೂಡ ಕಲುಷಿತಗೊಳ್ಳುತ್ತಿದೆ. ಆದರೆ, ಮನಸ್ಸಿನ ಮಾಲಿನ್ಯ ತೊಡೆದು ಹಾಕಲು ವಿಶ್ವಗುರು ಬಸವಣ್ಣಾದಿ ಶಿವಶರಣರ ವಚನ ಸಾಹಿತ್ಯವೇ ಸೂಕ್ತ ಮಾರ್ಗ ಸೂಚಿಯಾಗಿದೆ ಎಂದರು.
ಮನಸ್ಸು ಮಾಲಿನ್ಯವಾದಲ್ಲಿ ಕೂಡಲ ಸಂಗಮ ದೇವರ ಶರಣರಲ್ಲಿ ಅನುಭಾವ ಹೊಂದಬೇಕು ಎನ್ನುವ ಮೂಲಕ ಬಸವಣ್ಣ ವಿಶ್ವಮಾನ್ಯರಾದರು. ಮಠ-ಮಾನ್ಯಗಳಲ್ಲಿ ನಡೆಯುವ ಹಲವು ಅನುಭವ ಗೋಷ್ಠಿಗಳಲ್ಲಿ ಭಕ್ತರು ಪಾಲ್ಗೊಂಡು ಮನಮೈಲಿಗೆ ನಿವಾರಿಸಿಕೊಳ್ಳಲು ಇದು ಏಕೈಕ ಪರಿಹಾರ ಎಂದರು.ಕಳ್ಳರು ಕದಿಯಲಾಗದ, ಅಣ್ಣ-ತಮ್ಮಂದಿರು ಪಾಲು ಕೇಳಲಾಗದ, ಬಳಸಿದಷ್ಟು ವ್ಯಯವಾಗದ ಒಳ್ಳೆಯ ವಿದ್ಯೆ, ಜ್ಞಾನ ಸಂಪತ್ತು ಬಸವಾದಿ ಶಿವಶರಣರ ವಚನ ಸಾಹಿತ್ಯವೇ ಆಗಿದ್ದು, ಮನಸ್ಸಿನ ಮೈಲಿಗೆ ತೊಳೆದು ನಮ್ಮ ಬಾಳಿಗೆ ಬೆಳಕು ನೀಡುವ ಸಾಧನವಾಗಿದೆ. ಆಂತಹ ವಚನ ಸಾಹಿತ್ಯವನ್ನು ಪ್ರತಿಯೊಬ್ಬ ಶಿವಶರಣ ನಿತ್ಯವು ಬಾಳಿನಲ್ಲಿ ಅಳವಡಿಸಿಕೊಂಡು ಬದುಕಬೇಕಿದೆ ಎಂದರು.
ಬೆಳಗ್ಗೆ ಶೀ ಮಠದ ಆವರಣದಲ್ಲಿ ನೂರಾರು ಭಕ್ತರು ಇಷ್ಟಲಿಂಗ ಪೂಜೆ, ರುದ್ರಾಕ್ಷಿ ಧಾರಣೆ ಬಳಿಕ, ರೋಟರಿ ಕ್ಲಬ್ ಆಶ್ರಯದಲ್ಲಿ ರಕ್ತದಾನ ಶಿಬಿರ ಏರ್ಪಡಿಸಿ 35 ಯೂನಿಟ್ ರಕ್ತ ಸಂಗ್ರಹಿಸಲಾಯಿತು. ಈ ವೇಳೆ ನೂತನವಾಗಿ ನಿರ್ಮಾಣವಾಗಿದ್ದ ಭೋಜನಾಲಯ ಕಟ್ಟಡ ಲೋಕಾರ್ಪಣೆಗೊಂಡಿತು. ಸಮಾಜದ ವಿವಿಧ ಸಾಧಕರ ಸನ್ಮಾನಿಸಲಾಯಿತು. 50 ವರ್ಷದ ವೈವಾಹಿಕ ಜೀವನ ಪೂರೈಸಿದ ಸಮಾಜದ ಹಿರಿಯರಾದ ಹರತಾಳು ಜಯಶೀಲಪ್ಪಗೌಡ ದಂಪತಿಯ ಮಠದ ವತಿಯಿಂದ ಸನ್ಮಾನಿಸಿ ಆಶೀರ್ವದಿಸಲಾಯಿತು.