ಬ್ಯಾಡಗಿ: ಆಶ್ರಯ ಯೋಜನೆಯಡಿ ನಿವೇಶನ ವಂಚಿತ ಮಹಿಳಾ ಫಲಾನುಭವಿಗಳು ಪುರಸಭೆಗೆ ನುಗ್ಗಿ ದಾಂಧಲೆ ನಡೆಸಿದರಲ್ಲದೇ ಪ್ರಸ್ತುತ ಹಂಚಿಕೆ ಮಾಡಲು ನಿರ್ಧರಿಸಿರುವ 419 ಫಲಾನುಭವಿಗಳ ಪಟ್ಟಿಯನ್ನು ರದ್ದುಪಡಿಸುವಂತೆ ಆಗ್ರಹಿಸಿದ ಘಟನೆ ಮಂಗಳವಾರ ಬೆಳಗ್ಗೆ ನಡೆಯಿತು.ನಿನ್ನೆಯಷ್ಟೇ (ಸೋಮವಾರ) ವಸತಿ ಸಚಿವ ಜಮೀರ ಅಹ್ಮದಖಾನ್ ಸಾಂಕೇತಿಕವಾಗಿ ಹಕ್ಕುಪತ್ರ ವಿತರಿಸಿ ತೆರಳಿದ್ದರು. ಅಲ್ಲಿಯವರೆಗೂ ತಾಳ್ಮೆಯಿಂದಿದ್ದ ನಿವೇಶನ ವಂಚಿತ ಮಹಿಳಾ ಫಲಾನುಭವಿಗಳು ಮಂಗಳವಾರ ಬೆಳಗ್ಗೆ ಆಯ್ಕೆಯಾದ ಫಲಾನುಭವಿಗಳ ಪಟ್ಟಿಯನ್ನು ನೋಡುತ್ತಿದ್ದಂತೆ ಪುರಸಭೆ ಸಭಾ ಭವನದ ಎದುರು ಹಠಾತ್ ಪ್ರತಿಭಟನೆಗಿಳಿದರು.
ಸ್ಥಗಿತಗೊಂಡ ಸಾಮಾನ್ಯ ಸಭೆ: ಪೂರ್ವ ನಿಗದಿಯಂತೆ ಪುರಸಭೆಯ ಸರ್ವ ಸದಸ್ಯರ ಸಾಮಾನ್ಯಸಭೆ ಸರಿಯಾಗಿ 11 ಗಂಟೆಗೆ ಆರಂಭವಾಗಬೇಕಾಗಿತ್ತು. ಆದರೆ ನಿವೇಶನ ವಂಚಿತ ಮಹಿಳಾ ಫಲಾನುಭವಿಗಳು ಸಾಮಾನ್ಯಸಭೆ ನಡೆಯಬೇಕಾಗಿದ್ದ ಸಭಾಭವನದ ಮುಂಭಾಗದಲ್ಲಿಯೇ ಪ್ರತಿಭಟನೆ ನಡೆಸುವ ಮೂಲಕ ಸಭೆಗೆ ತಡೆಯೊಡ್ಡಿದ ಘಟನೆ ಜರುಗಿತು.ಸತ್ತವರ ಹೆಸರಿಗೆ ನಿವೇಶನ: ಈ ವೇಳೆ ಮಾತನಾಡಿದ ನಿವೇಶನ ವಂಚಿತ ಮಹಿಳಾ ಫಲಾನುಭವಿಗಳು ಪುರಸಭೆ ಸದಸ್ಯರು ಸೇರಿದಂತೆ ಆಶ್ರಯ ಸಮಿತಿ ಸದಸ್ಯರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಇದ್ದವರಿಗೆ ಮನೆ ಕೊಡಲಾಗದ ಹೇಡಿಗಳು ಸತ್ತವರ ಹೆಸರಿಗೂ (ಫಲಾನುಭವಿ ಸಂಖ್ಯೆ 127) ನಿವೇಶನ ಹಂಚಿಕೆ ಮಾಡಿದ್ದಾರೆ ಎಂದು ಅರೋಪಿಸಿದರು.
ಮಣ್ಣು ತೂರಿದ ಮಹಿಳೆಯರು: ಪ್ರಸ್ತುತ ಪಟ್ಟಿಯಲ್ಲಿ ಮನೆ ಇದ್ದಂತಹ ಶೇ.40ರಷ್ಟು ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲಾಗಿದೆ. ಅಲ್ಲದೇ ಕೆಲವರು ಹಣ ಕೊಟ್ಟವರಿಗೆ ಮಾತ್ರ ನಿವೇಶನ ಕೊಟ್ಟಿದ್ದಾರೆ. ದಶಕದಿಂದ ಒಂದು ಸೂರಿಗಾಗಿ ಕಾಯುತ್ತಿದ್ದೇವೆ ಆದರೆ ಅರ್ಜಿ ಸಲ್ಲಿಸಿ ಸಲ್ಲಿಸಿ ಸಾಕಾಗಿ ಹೋಗಿದ್ದೇವೆ ನಮ್ಮನ್ನು ಬಿಟ್ಟು ಅನರ್ಹರಿಗೆ ನಿವೇಶನ ಹಂಚಿಕೆ ಮಾಡಲಾಗಿದೆ. ಬಡವರ ಶಾಪ ಆಶ್ರಯ ಸಮಿತಿ ಅಧ್ಯಕ್ಷರಿಗೆ, ಸದಸ್ಯರಿಗೆ ತಟ್ಟದೇ ಇರಲ್ಲ ಎಂದು ಅವರ ಹೆಸರು ಹೇಳಿ ಮಣ್ಣು ತೂರಿ ಆಕ್ರೋಶ ಹೊರಹಾಕಿದರು.ಹಲವು ದಶಕದಿಂದ ನನೆಗುದಿಗೆ ಬಿದ್ದಿದ್ದ ಸಮಸ್ಯೆ ಬಗೆಹರಿಸಿ ಮನೆ ಇಲ್ಲದ ಬಡವರಿಗೆ ನಿವೇಶನ ಹಂಚಿಕೆ ಮಾಡಲು ಸೂಚನೆ ನೀಡಿ ತಮ್ಮ ಅಧ್ಯಕ್ಷ ಸ್ಥಾನ ಬಿಟ್ಟು ಕೊಟ್ಟ ಶಾಸಕರಿಗೆ ಆಶ್ರಯ ಸಮಿತಿ ಅಧ್ಯ ಕ್ಷ ಅಬ್ದುಲ್ ಮುನಾಫ ಎರೇಶಿಮಿ ಬಡವರಿಗೆ ನಿವೇಶನ ನೀಡದೆ ಉಳ್ಳವರಿಗೆ ನಿವೇಶನ ನೀಡಿ ಮೋಸ ಮಾಡಿ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ನೊಂದ ಮಹಿಳೆಯರು ಆರೋಪಿದರು.ಬ್ಯಾನರ್ ಅಧ್ಯಕ್ಷ: ಪ್ರಾಮಾಣಿಕವಾಗಿ ಕೆಲಸ ಮಾಡಿ ಅರ್ಹರಿಗೆ ನಿವೇಶನ ನೀಡುತ್ತೇವೆ ಎಂದು ಸುಳ್ಳು ಪತ್ರಿಕಾ ಹೇಳಿಕೆ ನೀಡಿ ಜನರಿಗೆ ಭರವಸೆ ಹುಟ್ಟಿಸಿ ಆಶ್ರಯ ಸಮಿತಿ ಅಧ್ಯಕ್ಷ ಅಬ್ದುಲ್ ಮುನಾಫ ಎರೇಶಿಮಿ ಲಕ್ಷಾಂತರ ರುಪಾಯಿ ಖರ್ಚು ಮಾಡಿ ಊರ ತುಂಬೆಲ್ಲಾ ಬ್ಯಾನರ್ ಹಾಕಿಕೊಂಡು ಪ್ರಚಾರ ಪಡೆದು ಪುನಃ ಮನೆ ಇದ್ದವರಿಗೆ ಹಕ್ಕು ಪತ್ರ ನೀಡಿ ನಮಗೆಲ್ಲ ಅನ್ಯಾಯ ಮಾಡಿದ್ದಾರೆ. ಅವರೇ ಮತ್ತೆ ಸಮಿತಿ ಅಧ್ಯಕ್ಷರಾಗಿ ಮುಂದುವರೆದರೆ ಕಚೇರಿಗೆ ಸಗಣಿ ಎರಚುವ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಮಹಿಳೆಯರು ಆಶ್ರಯ ಸಮಿತಿ ಅಧ್ಯಕ್ಷ ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದರು. ಆದರೆ ಅವರು ಬೆಳಗ್ಗೆಯಿಂದಲೇ ಮೊಬೈಲ್ ಬಂದ್ ಮಾಡಿಕೊಂಡು ಯಾರಿಗೂ ಸಿಗದೇ ಉಳಿದರು. ಅಲ್ಲದೇ ಆಶ್ರಯ ಸಮಿತಿ ಸದಸ್ಯರು ಸಹ ಸ್ಥಳಕ್ಕೆ ಬರದೇ ದೂರ ಉಳಿದಿದ್ದು, ಪ್ರತಿಭಟನಾಕಾರರನ್ನು ಮತ್ತಷ್ಟು ಕೆರಳುವಂತೆ ಮಾಡಿತು. ನಮಗೆ ನ್ಯಾಯ ಬೇಕು ಎಂದು ಬಿಗಿಪಟ್ಟು ಹಿಡಿದು ಕುಳಿತರು.ಅನರ್ಹರ ರದ್ದತಿಗೆ ಒತ್ತಡ: ಪ್ರತಿಭಟನೆ ಕಾವು ಹೆಚ್ಚುತ್ತಲೇ ಸಾಗಿದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಯಪ್ಪಗೋಳ, ಬಸವರಾಜ ಛತ್ರದ, ಸುಭಾಷ ಮಾಳಗಿ ಸೇರಿದಂತೆ ಎಲ್ಲ ಸದಸ್ಯರು ಅನರ್ಹರ ಹಕ್ಕು ಪತ್ರ ರದ್ದು ಮಾಡುವ ಠರಾವ್ ಕಾಪಿ ತಂದು ಪ್ರತಿಭಟನಕಾರರಿಗೆ ತೋರಿಸಿ ನಿಮ್ಮೊಂದಿಗೆ ನಾವಿದ್ದೇವೆ. ಅರ್ಹರಿಗೆ ನಿವೇಶನ ಕೊಡುವ ಭರವಸೆ ನೀಡಿದ ನಂತರ ಪ್ರತಿಭಟನೆ ವಾಪಸ್ ಪಡೆಯಲಾಯಿತು. ಈ ಸಂದರ್ಭದಲ್ಲಿ ನಿವೇಶನ ವಂಚಿತ ನೂರಾರು ಮಹಿಳೆಯರುವ ಉಪಸ್ಥಿತರಿದ್ದರು.