ದಾವಣಗೆರೆಯಲ್ಲಿ ದಿಢೀರ್‌ ಮಳೆ: ವ್ಯಾಪಾರಿಗಳು ಕಂಗಾಲು

KannadaprabhaNewsNetwork |  
Published : Oct 20, 2025, 01:02 AM IST
19ಕೆಡಿವಿಜಿ6, 7, 8, 9, 10, 11-ದಾವಣಗೆರೆ ಹಳೆ ಪ್ರವಾಸಿ ಮಂದಿರದ ಟಾರ್ ರಸ್ತೆ ಬದಲಿಗೆ ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಮೈದಾನಕ್ಕೆ ಹಬ್ಬಕ್ಕೆ ಹೂವು, ಹಣ್ಣು, ಬೂದು ಕುಂಬಳಕಾಯಿ, ಮಾವಿನ ತೋರಣ ಮಾರಾಟಕ್ಕೆ ಸ್ಥಳಾಂತರ ಮಾಡಿದ್ದು, ಅನಿರೀಕ್ಷಿತ ಮಳೆ ತಂದ ಆಪತ್ತಿನಿಂದ ಬಡ ವ್ಯಾಪಾರಸ್ಥರು, ರೈತ ಕುಟುಂಬಗಳ ಪರದಾಟದ ದೃಶ್ಯಗಳು. | Kannada Prabha

ಸಾರಾಂಶ

ದೀಪಾವಳಿ ಹಬ್ಬದ ಹೂವು, ಹಣ್ಣು ಹಂಪಲು, ಬಾಳೆಕಂಬ, ಮಾವಿನ ತೋರಣ, ಕಾಚಿ ಕಡ್ಡಿ, ಬ್ರಹ್ಮದಂಡಿಯಂತಹ ಪೂಜಾ ಸಾಮಗ್ರಿ ಮಾರಾಟಕ್ಕೆ ತಂದಿದ್ದ ಸಣ್ಣಪುಟ್ಟ ಬಡ ವ್ಯಾಪಾರಸ್ಥರು, ರೈತರು, ರೈತಾಪಿ ಕುಟುಂಬ, ಕೂಲಿ ಕಾರ್ಮಿಕರು, ಕುಟುಂಬ ಸಮೇತ ಬಂದಿದ್ದ ಮಕ್ಕಳು, ಹಬ್ಬಕ್ಕೆ ಖರೀದಿಗೆ ಹೋಗಿದ್ದ ಜನರು ಭಾನುವಾರ ಸಂಜೆ 7ರಿಂದ ದಿಢೀರನೇ ಸುರಿದ ಭಾರೀ ಮಳೆಯಿಂದಾಗಿ ಕತ್ತಲಿನಲ್ಲೇ ಪರದಾಡಬೇಕಾಯಿತು.

ಕನ್ನಡಪ್ರಭ ವಾರ್ತೆ ದಾವಣಗೆರೆ

ದೀಪಾವಳಿ ಹಬ್ಬದ ಹೂವು, ಹಣ್ಣು ಹಂಪಲು, ಬಾಳೆಕಂಬ, ಮಾವಿನ ತೋರಣ, ಕಾಚಿ ಕಡ್ಡಿ, ಬ್ರಹ್ಮದಂಡಿಯಂತಹ ಪೂಜಾ ಸಾಮಗ್ರಿ ಮಾರಾಟಕ್ಕೆ ತಂದಿದ್ದ ಸಣ್ಣಪುಟ್ಟ ಬಡ ವ್ಯಾಪಾರಸ್ಥರು, ರೈತರು, ರೈತಾಪಿ ಕುಟುಂಬ, ಕೂಲಿ ಕಾರ್ಮಿಕರು, ಕುಟುಂಬ ಸಮೇತ ಬಂದಿದ್ದ ಮಕ್ಕಳು, ಹಬ್ಬಕ್ಕೆ ಖರೀದಿಗೆ ಹೋಗಿದ್ದ ಜನರು ಭಾನುವಾರ ಸಂಜೆ 7ರಿಂದ ದಿಢೀರನೇ ಸುರಿದ ಭಾರೀ ಮಳೆಯಿಂದಾಗಿ ಕತ್ತಲಿನಲ್ಲೇ ಪರದಾಡಬೇಕಾಯಿತು.

ಸಾಮಾನ್ಯವಾಗಿ ನಗರದ ಹಳೆ ಪಿಬಿ ರಸ್ತೆಯಲ್ಲಿ ಪ್ರತಿ ಹಬ್ಬಗಳಿಗೆ ವ್ಯಾಪಾರ ಮಾಡುತ್ತಿದ್ದ ಜನರನ್ನು ಪಾಲಿಕೆಯಿಂದ ಇಲ್ಲಿನ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಮೈದಾನಕ್ಕೆ ಸ್ಥಳಾಂತರ ಮಾಡಿತ್ತು. ಭಾನುವಾರ ಮಧ್ಯಾಹ್ನದವರೆಗೂ ನೆಮ್ಮದಿಯಿಂದ ವ್ಯಾಪಾರ ಮಾಡುತ್ತಿದ್ದ ಬಡ ವ್ಯಾಪಾರಿಗಳಿಗೆ ಅತ್ತ ದೇವಸ್ಥಾನದ ಮೈದಾನಕ್ಕೆ ಸ್ಥಳಾಂತರಿಸಲು ಸ್ವತಃ ಸಂಚಾರ ಪೊಲೀಸರು ಮುಂದೆ ನಿಂತಿದ್ದರೆ, ರಾತ್ರಿ ಬಡ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಮಳೆ, ಕೆಸರಿನಲ್ಲಿ ಪರದಾಡುತ್ತಿದ್ದರೆ ಕೇಳುವವರೂ ಇಲ್ಲ ಎನ್ನುವ ಸ್ಥಿತಿ ಇತ್ತು.

ನಾಲ್ಕು ಕಾಸು ಹಬ್ಬದಲ್ಲಿ ದುಡಿಮೆ ಮಾಡಲೆಂದು ಕೈ ಸಾಲ, ಕೈಗಡ ಪಡೆದು, ಸಾಲ ಮಾಡಿಕೊಂಡು ಹಬ್ಬದ ಸಾಮಾನು ಖರೀದಿಸಿ, ಬಾಡಿಗೆ ವಾಹನ, ಅಪೆ ಆಟೋ, ರಿಕ್ಷಾಗಳಲ್ಲಿ ತಮ್ಮ ಊರಿನಿಂದ, ಮನೆಯಿಂದ, ತೋಟದಿಂದ ತಂದಿದ್ದ ರೈತರು, ವ್ಯಾಪಾರಸ್ಥರು, ಸಣ್ಣ ಪುಟ್ಟ ವ್ಯವಹಾರಸ್ಥರು, ಬಡವರು, ಕೂಲಿ ಕಾರ್ಮಿಕರು ಏಕಾಏಕಿ ಹಳೆಯ ಪ್ರವಾಸಿ ಮಂದಿರ ರಸ್ತೆಯಿಂದ ಶ್ರೀ ಬೀರಲಿಂಗೇಶ್ವರ ಮೈದಾನಕ್ಕೆ ವ್ಯಾಪಾರಕ್ಕೆ ಪೊಲೀಸರ ಬಲವಂತಕ್ಕೆ ಒಲ್ಲದ ಮನಸ್ಸಿನಿಂದಲೇ ತೆರಳಿದ್ದರು. ಆದರೆ, ಸಂಜೆ 7ರಿಂದ ಸುಮಾರು ಒಂದು ಗಂಟೆ ಗುಡುಗು, ಮಿಂಚು, ಸಿಡಿಲಿನ ಆರ್ಭಟದಿಂದ ಸುರಿದ ಮಳೆಯು ಬಡವರ ಕಣ್ಣೀರು ಕಾಣದಂತೆ ಮಾಡಿತ್ತು.

ನೋಡ ನೋಡುತ್ತಿದ್ದಂತೆಯೇ ಸುರಿಯಲಾರಂಭಿಸಿದ ಮಳೆಯು ಬಡ ವ್ಯಾಪಾರಸ್ಥರ ಒಂದಿಷ್ಟು ದುಡಿಮೆಯ ಆಸೆಗೆ ತಣ್ಣೀರೆರೆಯಿತು. ಸಾಲ ಮಾಡಿ ತಂದಿದ್ದ ಸಾವಿರಾರು ರು. ಬಗೆಬಗೆಯ ಹೂವು ಮಳೆಯ ಹೊಡೆತಕ್ಕೆ, ಮೈದಾನದ ಮಣ್ಣು, ಮಳೆ ನೀರಿನಲ್ಲಿ ರಾಡಿಯಾದವು. ಅನಿರೀಕ್ಷಿತ ಮಳೆ ತಂದ ಆಪತ್ತಿನಿಂದ ಬಡ ವ್ಯಾಪಾರಸ್ಥರು, ರೈತರು ಏನು ಮಾಡಬೇಕೆಂಬುದೇ ತೋಚದೆ, ಮಳೆಯಿಂದ ರಕ್ಷಣೆಯನ್ನೂ ಪಡೆಯಲಾಗದೇ, ತಾವು ತಂದ ಸರಕನ್ನು ರಕ್ಷಿಸಿಕೊಳ್ಳಲು ಪರದಾಡುತ್ತಿದ್ದ ದೃಶ್ಯಕ್ಕೆ ಖರೀದಿಗೆಂದು ಹೋಗಿದ್ದ ಜನರು ಸಹ ಮರುಗಿದರು.

ಸಂಚಾರಕ್ಕೆ ಸಮಸ್ಯೆಯಾಗುತ್ತದೆಂಬ ಕಾರಣಕ್ಕೆ ಏಕಾಏಕಿ ಶ್ರೀ ಬೀರಲಿಂಗೇಶ್ವರ ಮೈದಾನಕ್ಕೆ ಬಡ ವ್ಯಾಪಾರಸ್ಥರನ್ನು ಸ್ಥಳಾಂತರಿಸಿದ್ದು ಸರಿಯಲ್ಲ. ಹಳೆ ಪ್ರವಾಸಿ ಮಂದಿರ ರಸ್ತೆಯಲ್ಲೇ ವ್ಯಾಪಾರ ಮಾಡಲು ಅವಕಾಶ ಕೊಟ್ಟಿದ್ದರೆ ಹೂವು, ಹಣ್ಣುಗಳನ್ನು ಪಕ್ಕದ ಕಟ್ಟಡಗಳ ಮುಂದೆ ಬಚ್ಚಿಟ್ಟುಕೊಂಡು, ರಕ್ಷಿಸಿಕೊಳ್ಳುತ್ತಿದ್ದರು. ಸೋಮವಾರದಿಂದಲೇ ಹಬ್ಬ ಶುರುವಾಗಲಿದೆ. ಆದರೆ, ತಂದ ಹೂವುಗಳು ಮಳೆ ನೀರಿನಿಂದ, ಕೆಸರು ನೀರಿನಿಂದಾಗಿ ಕೊಳೆತು ಹೋಗುವಂತಾಗಿದೆ. ಅಲ್ಲದೇ, ದೇವಸ್ಥಾನದ ಮೈದಾನದಲ್ಲಿ ಕನಿಷ್ಠ ಸೌಲಭ್ಯಗಳೂ ಇಲ್ಲ. ಮಳೆಯಿಂದಾಗಿ ಇಡೀ ರಾತ್ರಿ ಕಳೆಯುವುದೇ ಕಷ್ಟವಾಗಿದೆ ಎಂದು ವ್ಯಾಪಾರಸ್ಥರು, ರೈತರು ಅಳಲು ತೋಡಿಕೊಂಡರು.

ಬಡ ವ್ಯಾಪಾರಸ್ಥರು, ರೈತರನ್ನು ಕನಿಷ್ಠ ಸೌಲಭ್ಯಗಳು, ರಕ್ಷಣೆಯೂ ಇಲ್ಲದ ಕಡೆಗೆ ಸ್ಥಳಾಂತರಿಸುವುದು ಸರಿಯಲ್ಲ. ಸೋಮವಾರದಿಂದ ಹಳೆ ಪ್ರವಾಸಿ ಮಂದಿರದ ಬಳಿಯೇ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಿ. ಆ ಮಕ್ಕಳು, ವಯೋವೃದ್ಧರು, ಗರ್ಭಿಣಿ, ಬಾಣಂತಿಯರು ಇಡೀ ಕುಟುಂಬ ಸಮೇತ ಒಂದಿಷ್ಟು ದುಡಿಮೆ ಮಾಡಿಕೊಳ್ಳಲು ಬಂದಿದ್ದಾರೆ. ಅಂತಹವರಿಗೆ ಅನ್ಯಾಯವಾಗಬಾರದು ಎಂದು ಹಬ್ಬದ ಖರೀದಿಗೆ ಹೋಗಿದ್ದ ಸಾರ್ವಜನಿಕರು, ವಿಶೇಷವಾಗಿ ಮಹಿಳೆಯರು ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಪಾಲಿಕೆಗೆ ಒತ್ತಾಯಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿಕೆಶಿ ಸಿಎಂ ಆದರೆ ನನಗೆ ಸಚಿವ ಸ್ಥಾನವೇ ಬೇಡ : ರಾಜಣ್ಣ
ದರ್ಶನ್‌ ಜೈಲಿಂದ ಹೊರಬರಲು ನಿತ್ಯ ಪ್ರಾರ್ಥಿನೆ: ನಟ ಜೈದ್‌