ರೈತರಿಗಾಗಿ ಮಸೂದೆ ಮಂಡಿಸಿದ ಸುಧಾಕರ್‌

KannadaprabhaNewsNetwork |  
Published : Dec 06, 2025, 02:15 AM IST
ಸುಧಾಕರ್‌ | Kannada Prabha

ಸಾರಾಂಶ

ಅನ್ನದಾತ ರೈತರ ಕಲ್ಯಾಣಕ್ಕಾಗಿ ಬಿಜೆಪಿ ಸಂಸದ ಡಾ.ಕೆ.ಸುಧಾಕರ್ ಅವರು ಲೋಕಸಭೆಯಲ್ಲಿ ಎರಡು ಮಹತ್ವದ ಖಾಸಗಿ ಮಸೂದೆಗಳನ್ನು ಮಂಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ನವದೆಹಲಿ

ಅನ್ನದಾತ ರೈತರ ಕಲ್ಯಾಣಕ್ಕಾಗಿ ಬಿಜೆಪಿ ಸಂಸದ ಡಾ.ಕೆ.ಸುಧಾಕರ್ ಅವರು ಲೋಕಸಭೆಯಲ್ಲಿ ಎರಡು ಮಹತ್ವದ ಖಾಸಗಿ ಮಸೂದೆಗಳನ್ನು ಮಂಡಿಸಿದ್ದಾರೆ. ಈ ಮಸೂದೆಗಳು ಕೃಷಿ ಆರ್ಥಿಕತೆ ಹಾಗೂ ಗ್ರಾಮೀಣ ಕುಟುಂಬಗಳ ಅಭಿವೃದ್ಧಿಗೆ ಸಹಕಾರಿಯಾಗಿವೆ. ರೈತರ ಕಲ್ಯಾಣ, ಗ್ರಾಮೀಣ ಉದ್ಯಮಶೀಲತೆ ಮತ್ತು ಭಾರತದ ಕೃಷಿ ಪರಿವರ್ತನೆಯ ವಿಚಾರದಲ್ಲಿ ಸಂಸದ ಡಾ। ಕೆ.ಸುಧಾಕರ್‌ ಅವರ ಬದ್ಧತೆಯನ್ನು ಈ ಎರಡೂ ಮಸೂದೆಗಳು ಪ್ರತಿಬಿಂಬಿಸುತ್ತವೆ.

ಮಸೂದೆ ಮಂಡಿಸಿ ಮಾತನಾಡಿದ ಸುಧಾಕರ್‌, ನಮ್ಮ ಹೈನುಗಾರರು ಮತ್ತು ಹೂವು ಬೆಳೆಗಾರರು ಗ್ರಾಮೀಣ ಭಾರತದ ಬೆನ್ನೆಲುಬಾಗಿದ್ದಾರೆ. ಈ ಮಸೂದೆಗಳು ಅವರ ಆದಾಯವನ್ನು ಭದ್ರಪಡಿಸಿ, ಸಮಸ್ಯೆಗಳನ್ನು ನಿವಾರಿಸುತ್ತದೆ. ಜೊತೆಗೆ, ಹೊಸ ಆರ್ಥಿಕ ಅವಕಾಶಗಳನ್ನು ಒದಗಿಸುತ್ತದೆ. ಇದರಿಂದಾಗಿ ಸರಿಯಾದ ಸಾಂಸ್ಥಿಕ ಚೌಕಟ್ಟು ನೀಡುವುದರ ಮೂಲಕ ಭಾರತವು ಪುಷ್ಪಕೃಷಿಯಲ್ಲಿ ಜಾಗತಿಕ ನಾಯಕನಾಗಬಹುದು. ಹಾಗೆಯೇ, ಪ್ರತಿ ಹೈನುಗಾರರು ಸಾಮಾಜಿಕ ಭದ್ರತೆ ಮತ್ತು ಘನತೆಯನ್ನು ಪಡೆಯಬಹುದು ಎಂದು ಹೇಳಿದರು.

ಭಾರತವು ಈಗಾಗಲೇ ₹717.83 ಕೋಟಿ ಮೌಲ್ಯದ ಸುಮಾರು 19,677 ಮೆಟ್ರಿಕ್ ಟನ್ ಪುಷ್ಪೋತ್ಪನ್ನಗಳನ್ನು ರಫ್ತು ಮಾಡುತ್ತಿದೆ. ಈ ಮಸೂದೆಯು ಉತ್ಪಾದನಾ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದರು.

1. ಹೈನುಗಾರರ (ಕಲ್ಯಾಣ) ಮಸೂದೆ, 2024:

ಹವಾಮಾನದ ವೈಪರೀತ್ಯದಿಂದ ಜಾನುವಾರುಗಳ ಮೇಲೆ ಆಗುವ ಪರಿಣಾಮ, ಬೆಲೆ ಏರಿಳಿತ, ಹೆಚ್ಚುವ ವೆಚ್ಚಗಳು ಮತ್ತು ಸಾಮಾಜಿಕ ಭದ್ರತೆಯ ಸವಾಲುಗಳನ್ನು ಈ ಮಸೂದೆ ಪರಿಹರಿಸುತ್ತದೆ. ಈ ಮಸೂದೆಯು ದೇಶದ 7 ಕೋಟಿ ಡೇರಿ ಆಧಾರಿತ ಕೃಷಿ ಕುಟುಂಬಗಳಿಗೆ ಸಾಮಾಜಿಕ ಭದ್ರತೆಯ ನೆರವು ನೀಡುತ್ತದೆ. ಈ ಕುಟುಂಬಗಳಲ್ಲಿ ಹೆಚ್ಚಿನವರು ಸಣ್ಣ, ಅತಿ ಸಣ್ಣ ರೈತರು ಮತ್ತು ಮಹಿಳೆಯರಿದ್ದಾರೆ.

ಮಸೂದೆಯ ಪ್ರಮುಖ ಅಂಶಗಳು:

ಸಂಸದರು, ತಜ್ಞರು ಮತ್ತು ರೈತ ಪ್ರತಿನಿಧಿಗಳನ್ನು ಒಳಗೊಂಡ ಡೇರಿ ರೈತರ ಕಲ್ಯಾಣ ಸಮಿತಿ ರಚನೆ. ಡೇರಿ ರೈತರ ಕಲ್ಯಾಣ ನಿಧಿ ಸ್ಥಾಪನೆ. ಡೇರಿ ರೈತರಿಗೆ ತಲಾ ₹50 ಲಕ್ಷ ಅಪಘಾತ ವಿಮೆ. ಡೇರಿ ರೈತರಿಗೆ ತಲಾ ₹10 ಲಕ್ಷ ಆರೋಗ್ಯ ವಿಮೆ. ಸರ್ಕಾರಿ ಯೋಜನೆಗಳಡಿ ಖರೀದಿಸಿದ ಜಾನುವಾರುಗಳಿಗೆ ಉಚಿತ ವಿಮೆ. ಡೇರಿ ರೈತರಿಗೆ ಮಾಸಿಕ ಪಿಂಚಣಿ ಜಾರಿಯ ಅಂಶಗಳು ಈ ಮಸೂದೆಯಲ್ಲಿ ಅಡಕವಾಗಿವೆ. ಇದರ ಅಂದಾಜು ವೆಚ್ಚ, ವಾರ್ಷಿಕ ₹10,000 ಕೋಟಿ.

2. ರಾಷ್ಟ್ರೀಯ ಪುಷ್ಪಕೃಷಿ ಮಂಡಳಿ ಮಸೂದೆ, 2024:

ದೇಶದ ಹೂವು ಕೃಷಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಈ ಮಸೂದೆ ನೆರವಾಗುತ್ತದೆ. ದೇಶದಲ್ಲಿ ಹೂವಿನ ಉತ್ಪಾದನೆ ಹಾಗೂ ಹೂವಿನ ರಫ್ತು ಹೆಚ್ಚಿಸುವ ಮೂಲಕ ಭಾರತವನ್ನು ಹೂವು ಮಾರುಕಟ್ಟೆಯ ಜಾಗತಿಕ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು ಈ ಮಸೂದೆ ಉತ್ತೇಜನ ನೀಡುತ್ತದೆ.

ಮಸೂದೆಯ ಪ್ರಮುಖ ಅಂಶಗಳು:

ರಾಷ್ಟ್ರೀಯ ಪುಷ್ಪಕೃಷಿ ಮಂಡಳಿ ರಚನೆ, ಕರ್ನಾಟಕದ ಚಿಕ್ಕಬಳ್ಳಾಪುರದಲ್ಲಿ ಇದರ ಪ್ರಧಾನ ಕಚೇರಿ ಸ್ಥಾಪನೆ. ದೇಶದ ವಿವಿಧೆಡೆ ಪ್ರಾದೇಶಿಕ ಕಚೇರಿಗಳ ಸ್ಥಾಪನೆ. ವೈಜ್ಞಾನಿಕ ಕೃಷಿಗೆ ಒತ್ತು, ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಅಭಿವೃದ್ಧಿ. ಜೊತೆಗೆ, ರಫ್ತು ಪ್ರಮಾಣೀಕರಣಕ್ಕೆ ಸಹಾಯ ನೀಡಲು, ಸಂಶೋಧನೆ ಮತ್ತು ಬೆಲೆ ಶಿಫಾರಸ್ಸಿಗಾಗಿ ರಾಷ್ಟ್ರೀಯ ಪುಷ್ಪಕೃಷಿ ಮಂಡಳಿ ನಿಧಿಯ ರಚನೆಯ ಅಂಶಗಳು ಈ ಮಸೂದೆಯಲ್ಲಿದೆ. ಇದರ ಅಂದಾಜು ವೆಚ್ಚ, ವಾರ್ಷಿಕ ₹1,500 ಕೋಟಿ. ಒಂದು ಬಾರಿಯ ವೆಚ್ಚ: ₹50 ಕೋಟಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಲ್ಲ ಭಾಷೆ ಕಲಿಯಿರಿ, ಕನ್ನಡವನ್ನು ಪ್ರೀತಿಸಿ, ಬೆಳೆಸಿ
ರಾಟ್ ವೀಲರ್ ನಾಯಿ ದಾಳಿಗೆ ಮಹಿಳೆ ಬಲಿ