ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೀನಾಮೆ ಘೋಷಣೆ ।
ಕನ್ನಡಪ್ರಭ ವಾರ್ತೆ, ಕೊಪ್ಪಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಈಗಾಗಲೇ ರಾಜೀನಾಮೆ ನೀಡಿದ್ದೇನೆ. ಶಾಸಕರು, ಕೆಪಿಸಿಸಿ ಸದಸ್ಯರು, ಪಕ್ಷದ ಮುಖಂಡರು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಕೆಪಿಸಿಸಿ ವಕ್ತಾರ, ನ್ಯಾಯವಾದಿ ಸುಧೀರ್ ಕುಮಾರ್ ಮುರೊಳ್ಳಿ ಹೇಳಿದರು. ಪಟ್ಟಣದ ಪುರಭವನದಲ್ಲಿ ಬ್ಲಾಕ್ ಕಾಂಗ್ರೆಸ್ ನಿಂದ ನಡೆದ ಸಂಕ್ರಾಂತಿ ಸಂಕಲ್ಪ ಕಾರ್ಯಕರ್ತರ ಸಮ್ಮಿಲನ ಕಾರ್ಯಕ್ರಮ ದಲ್ಲಿ ಮಾತನಾಡಿ, ಬಹುದಿನಗಳಿಂದ ಪಕ್ಷದ ಕಾರ್ಯಕರ್ತರಲ್ಲಿ ಚರ್ಚಾ ವಿಷಯವಾಗಿದ್ದ ರಾಜೀನಾಮೆ ಬಗ್ಗೆ ಸ್ಪಷ್ಟನೆ ನೀಡಿದ ಅವರು ಕೆಪಿಸಿಸಿ ನನಗೆ ಅನೇಕ ಜವಾಬ್ದಾರಿ ನೀಡಿದೆ. ಅದೆಲ್ಲವನ್ನು ನೈತಿಕ ಹೊಣೆ ಹೊತ್ತು ಪ್ರಾಮಾಣಿಕವಾಗಿ ಮಾಡು ತ್ತಿದ್ದೇನೆ. ಪಕ್ಷ ಸಂಘಟನೆ ಮತ್ತು ಸಮಾಜ ಕಟ್ಟುವ ಕೆಲಸಕ್ಕಾಗಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಜಿಲ್ಲೆಗಳಿಗೆ ಅನೇಕ ಬಾರಿ ಹೋಗುತ್ತಿರುತ್ತೇನೆ. ಇದಕ್ಕಾಗಿ ಕೆಪಿಸಿಸಿಯಿಂದ ಸಾಕಷ್ಟು ಹಣ ಬರುತ್ತದೆ ಎನ್ನುವ ಭಾವನೆ ಅನೇಕರಲ್ಲಿದೆ. ಆದರೆ ಈವರೆಗೂ ನಾನು ಕೆಪಿಸಿಸಿಯಿಂದ ಒಂದು ಪೈಸೆಯನ್ನೂ ಪಡೆದಿಲ್ಲ. ಅಲ್ಲದೆ ಅನೇಕ ಕಾರ್ಯಕ್ರಮಕ್ಕೆ ಬೇರೆ ಊರುಗಳಿಗೆ ಹೋದಾಗ ಆಯೋಜಕರ ಬಳಿ ಕಾರಿನ ಇಂಧನ ಹಾಗೂ ಊಟದ ಖರ್ಚನ್ನೂ ಸಹ ಪಡೆಯಲ್ಲ ಎನ್ನುವ ಆತ್ಮತೃಪ್ತಿ ನನಗಿದೆ. ದೇಶದ ಸಂವಿಧಾನ ಅಪಾಯದಲ್ಲಿದೆ. ಅದನ್ನು ಉಳಿಸುವ ನಿಟ್ಟಿನಲ್ಲಿ ಪ್ರತೀ ಚುನಾವಣೆಯಲ್ಲೂ ಕಾಂಗ್ರೆಸ್ ಗೆಲ್ಲಿಸಬೇಕೆಂದು ಹೋರಾಟ ನಡೆಸುವುದು ಅನಿವಾರ್ಯ ಎಂದರು.
ಮುಖಂಡ ಡಿ.ಎಸ್. ವಿಶ್ವನಾಥ ಶೆಟ್ಟಿ ಮಾತನಾಡಿ ಧರ್ಮದ ಹೆಸರು ಮತ್ತು ಭಾವನಾತ್ಮಕ ವಿಚಾರಗಳಿಂದ ಜನರ ದಾರಿ ತಪ್ಪಿಸುವ ಬಿಜೆಪಿ ಹೆಚ್ಚು ಮತಗಳನ್ನು ಪಡೆಯುತ್ತಿದೆ. ಇತಿಹಾಸದಲ್ಲಿ ಯಾವುದೇ ಸರ್ಕಾರ ನೀಡದ ಜನೋಪಯೋಗಿ 5 ಗ್ಯಾರಂಟಿಗಳನ್ನು ಸಿದ್ಧರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಯಶಸ್ವಿಯಾಗಿ ಜಾರಿ ಗೊಳಿಸಿದೆ. ಇದು ಕಾಂಗ್ರೆಸ್ಸಿನ ಯೋಜನೆ ಎಂದು ಫಲಾನುಭವಿಗಳಲ್ಲಿ ಮನದಟ್ಟು ಮಾಡುವಲ್ಲಿ ನಮ್ಮ ಕಾರ್ಯಕರ್ತರು ಹಿಂದೆ ಬಿದ್ದಿದ್ದಾರೆ ಎಂದರು.ಕೆಪಿಸಿಸಿ ಸದಸ್ಯ ಬಾಳೆಮನೆ ನಟರಾಜ್, ಆರ್.ಸದಾಶಿವ, ಕಾಂಗ್ರೆಸ್ ವಿವಿಧ ಘಟಕದ ಮುಖಂಡರು, ಕಾರ್ಯಕರ್ತರು ಇದ್ದರು.
-- ಕೋಟ್--ಸುಧೀರ್ ಕುಮಾರ್ ರಾಜೀನಾಮೆ ವಿಚಾರ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗಮನಕ್ಕೆ ತಂದು ತೀರ್ಮಾನ ಕೈಗೊಳ್ಳಲಾಗುವುದು. ಶೃಂಗೇರಿ, ನ.ರಾ.ಪುರ ಬ್ಲಾಕ್ ಅಧ್ಯಕ್ಷರ ಬದಲಾವಣೆ ಬಗ್ಗೆಯೂ ಮುಖಂಡರ ಬಳಿ ಚರ್ಚಿಸ ಲಾಗುವುದು. ಕಾರ್ಯಕರ್ತರಲ್ಲಿ ಯಾವುದೇ ಭಿನ್ನಾಭಿಪ್ರಾಯವಿದ್ದರೂ ಅದನ್ನು ಪಕ್ಷದ ಕಚೇರಿಯಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಕಾರ್ಯಕರ್ತರು ಮುಂದಾಗಬೇಕು ಎಂದು ಶಾಸಕ ಟಿ.ಡಿ. ರಾಜೇಗೌಡ ಹೇಳಿದರು.ನಾನು ಚಿಕ್ಕಮಗಳೂರು-ಉಡುಪಿ ಲೋಕಸಭೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿ. ಆ ಬಗ್ಗೆ ಹೆಚ್ಚಿನ ಗಮನ ಹರಿಸುತ್ತೇನೆ. ಚಿಕ್ಕಮಗಳೂರು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಂಶುಮಂತ್ ಕೂಡ ಟಿಕೆಟ್ ಆಕಾಂಕ್ಷಿ. ನನಗೆ ಅಥವಾ ಡಾ. ಅಂಶುಮಂತ್, ನಮ್ಮಿಬ್ಬರನ್ನು ಬಿಟ್ಟು ಬೇರೆ ಯಾರಿಗೇ ಟಿಕೆಟ್ ನೀಡಿದರೂ ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿ ಚುನಾವಣೆ ಗೆಲುವಿಗೆ ದುಡಿಯುತ್ತೇವೆ.
-ಸುಧೀರ್ ಕುಮಾರ್ ಮುರೊಳ್ಳಿ