ಅರಕಲಗೂಡಲ್ಲಿ ಅಕಾಲಿಕ ಮಳೆ: ಕಾಫಿ ಬೆಳೆಗಾರರಿಗೆ ಸಂಕಟ

KannadaprabhaNewsNetwork | Published : Jan 23, 2024 1:51 AM

ಸಾರಾಂಶ

ಅರಕಲಗೂಡು ತಾಲೂಕಿನ ಮಲ್ಲಿಪಟ್ಟಣ ಹೋಬಳಿಯಲ್ಲಿ ಇತ್ತೀಚೆಗೆ ಸುರಿದ ಆಕಾಲಿಕ ಮಳೆ ಕಾಫಿ ಬೆಳೆಗಾರರ ಆರ್ಥಿಕ ಬುದುಕಿಗೆ ಬರೆ ಹಾಕಿದೆ. ಮಳೆಗೆ ಕಾಫಿ ಗಿಡಗಳು ಹೂವು ಬಿಟ್ಟು ಇಳುವರಿ ಮೇಲೆ ಹೊಡೆತ ಬಿದ್ದು ನಷ್ಟ ಉಂಟು ಮಾಡಿದೆ.

ನೂರಾರು ಎಕರೇಲಿ ಬೆಳೆದಿರುವ ಕಾಫಿ ನಷ್ಟ ಭೀತಿ

ಅರಕಲಗೂಡು: ತಾಲೂಕಿನ ಮಲ್ಲಿಪಟ್ಟಣ ಹೋಬಳಿಯಲ್ಲಿ ಇತ್ತೀಚೆಗೆ ಸುರಿದ ಆಕಾಲಿಕ ಮಳೆ ಕಾಫಿ ಬೆಳೆಗಾರರ ಆರ್ಥಿಕ ಬುದುಕಿಗೆ ಬರೆ ಹಾಕಿದೆ. ಮಳೆಗೆ ಕಾಫಿ ಗಿಡಗಳು ಹೂವು ಬಿಟ್ಟು ಇಳುವರಿ ಮೇಲೆ ಹೊಡೆತ ಬಿದ್ದು ನಷ್ಟ ಉಂಟು ಮಾಡಿದೆ.

ಅರೆಮಲೆನಾಡು ಹೋಬಳಿಯಾದ ಮಲ್ಲಿಪಟ್ಟಣ ಭಾಗದಲ್ಲಿ ಹೆಚ್ಚಿನದಾಗಿ ಬೆಳೆಗಾರರು ಕಾಫಿ ಬೆಳೆಯನ್ನೆ ಅವಲಂಬಿಸಿದ್ದಾರೆ. ಹೋಬಳಿ ಭಾಗದ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿರುವ ಕಾಫಿ ಬೆಳೆಗೆ ಆಕಾಲಿಕ ಮಳೆ ಕಂಟಕವಾಗಿ ಪರಿಣಮಿಸಿದೆ.

ಮಳೆಯಿಂದಾಗಿ ಈಗಾಗಲೇ ಕಾಫಿ ಗಿಡಗಳಲ್ಲಿ ಹೂ ಕಾಣಿಸಿಕೊಂಡಿದೆ. ಪ್ರತಿ ವರ್ಷ ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಕಾಫಿ ಹಣ್ಣುಗಳ ಕಟಾವು ಕಾರ್ಯ ನಡೆಯುತ್ತದೆ. ಮುಂಗಾರು ಪೂರ್ವ ಮಳೆಗೆ ಗಿಡಗಳಲ್ಲಿ ಮಾರ್ಚ್ ಇಲ್ಲವೇ ಏಪ್ರಿಲ್ ತಿಂಗಳಿನಲ್ಲಿ ಹೂ ಬಿಡಬೇಕು. ಆದರೆ ಈ ಬಾರಿ ಬಿದ್ದ ಆಕಾಲಿಕ ಮಳೆಗೆ ಗಿಡಗಳಲ್ಲಿ ಜನವರಿ ತಿಂಗಳಲ್ಲೇ ಹೂ ಬಿಟ್ಟಿವೆ. ಹಣ್ಣು ಕಟಾವು ಮಾಡುವ ವೇಳೆ ಗಿಡಗಳಲ್ಲಿ ಬಿಟ್ಟಿರುವ ಹೂವುಗಳು ನೆಲಕ್ಕುದುರುತ್ತಿವೆ ಎಂದು ಬೆಳೆಗಾರರು ಅವಲತ್ತುಕೊಂಡಿದ್ದಾರೆ.

ದುರಾದೃಷ್ಟವಶಾತ್ ಆಕಾಲಿಕ ಮಳೆಯಿಂದಾಗಿ ಈಗಾಗಲೇ ಗಿಡಗಳಲ್ಲಿ ಬೆಳೆದಿದ್ದ ಹೂವುಗಳು ಉದುರುತ್ತಿದ್ದು ಕೆಲವು ಕಡೆ ಬಾಡಿ ಹೋಗುತ್ತಿವೆ. ಪರಿಣಾಮವಾಗಿ ಶೇ.50ರಷ್ಟು ಕಾಫಿ ಇಳುವರಿ ಕಡಿಮೆಯಾಗುವ ಆತಂಕ ಎದುರಾಗಿದೆ ಎನ್ನುತ್ತಾರೆ ಮಾದಲಾಪುರದ ಕಾಫಿ ಬೆಳೆಗಾರ ಎಂ.ಆರ್. ರಂಗಸ್ವಾಮಿ.

ಈ ಬಾರಿ ಮಾರುಕಟ್ಟೆಯಲ್ಲಿ ಕಾಫಿಗೆ ಉತ್ತಮ ಬೆಲೆ ಬಂದಿದೆ. 50 ಕೆಜಿ ತೂಕದ ರೋಬಾಸ್ಟ್ ಹಾಗೂ ಅರೇಬಿಕಾ ಕಾಫಿ ಕಾಳು ಗರಿಷ್ಠ ದರ 11 ರಿಂದ 14 ಸಾವಿರ ರು. ಗಡಿ ತಲುಪಿದೆ. ಕಾಳು ಬಿಡಿಸದ ಕಾಫಿ ದರ 8 ರಿಂದ 9 ಸಾವಿರ ರು. ಮಾರಾಟವಾಗುತ್ತಿದೆ. ದುರಾದೃಷ್ಟವಶಾತ್ ಅಕಾಲಿಕ ಮಳೆ ಕಾಫಿ ಬೆಳೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಕಾಫಿ ಬೆಳೆಯಿಂದ ಉತ್ತಮ ಆದಾಯ ಕಂಡುಕೊಳ್ಳಬೇಕೆನ್ನುವ ಬೆಳೆಗಾರರ ಆಸೆಗೆ ಆಕಾಲಿಕ ಮಳೆ ತಣ್ಣೀರೆರಚಿದೆ. ಅಕಾಲಿಕ ಮಳೆಯಿಂದ ಹೂವಾಗಿರುವುದನ್ನು ತೋರಿಸುತ್ತಿರುವ ಕಾಫಿ ಬೆಳೆಗಾರ ರಂಗಸ್ವಾಮಿ.

Share this article