ಹೇಮಾವತಿ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆಗೆ ಚಾಲನೆ

KannadaprabhaNewsNetwork | Published : Jul 2, 2025 11:47 PM
ಶ್ರೀನಿವಾಸಪುರದಲ್ಲಿನ ಹೇಮಾವತಿ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಗುತ್ತಿಗೆ ಪಡೆದಿರುವ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆಗೆ ಶಾಸಕ ಬಾಲಕೃಷ್ಣ ಚಾಲನೆ ನೀಡಿದರು. | Kannada Prabha

ಸಾರಾಂಶ

ಚನ್ನರಾಯಪಟ್ಟಣ ತಾಲೂಕಿನ ರೈತರ, ಕಬ್ಬು ಬೆಳೆಗಾರರ ಜೀವನಾಡಿಯಾಗಿರುವ ಹೇಮಾವತಿ ಸಹಕಾರಿ ಸಕ್ಕರೆ ಕಾರ್ಖಾನೆಯ ಸಮಗ್ರ ಅಭಿವೃದ್ಧಿಗೆ ರೈತರು ಸಹಕರಿಸಬೇಕು ಎಂದು ಶಾಸಕ ಸಿ. ಎನ್. ಬಾಲಕೃಷ್ಣ ಮನವಿ ಮಾಡಿದರು. ಕಬ್ಬು ಬೆಳೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬಿತ್ತನೆ ಬೀಜವನ್ನು ಸಾಲದ ರೂಪದಲ್ಲಿ, ಹನಿ ನೀರಾವರಿ ಪದ್ಧತಿ ಅಳವಡಿಕೆಗೆ ಸಹಾಯಧನವನ್ನು ಕಾರ್ಖಾನೆಯಿಂದ ನೀಡಲಾಗುತ್ತಿದೆ. ಕಬ್ಬು ಕಟಾವಿನ ವಿಚಾರದಲ್ಲಿ ತೊಂದರೆಯಾಗದ ರೀತಿಯಲ್ಲಿ ೩೦೦ ಕಾರ್ಮಿಕರನ್ನು ಕರೆತರಲಾಗಿದೆ. ಯಾವುದೇ ಸಮಸ್ಯೆಗೆ ಆಸ್ಪದ ಕೊಡದ ರೀತಿಯಲ್ಲಿ ಕಾರ್ಖಾನೆ ಉಳಿಸಲು ರೈತರು ಮುಂದಾಗಬೇಕು ಎಂದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ತಾಲೂಕಿನ ರೈತರ, ಕಬ್ಬು ಬೆಳೆಗಾರರ ಜೀವನಾಡಿಯಾಗಿರುವ ಹೇಮಾವತಿ ಸಹಕಾರಿ ಸಕ್ಕರೆ ಕಾರ್ಖಾನೆಯ ಸಮಗ್ರ ಅಭಿವೃದ್ಧಿಗೆ ರೈತರು ಸಹಕರಿಸಬೇಕು ಎಂದು ಶಾಸಕ ಸಿ. ಎನ್. ಬಾಲಕೃಷ್ಣ ಮನವಿ ಮಾಡಿದರು.

ತಾಲೂಕಿನ ಶ್ರೀನಿವಾಸಪುರದಲ್ಲಿನ ಹೇಮಾವತಿ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಗುತ್ತಿಗೆ ಪಡೆದಿರುವ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯಲ್ಲಿ ಪ್ರಸಕ್ತ ಸಾಲಿನ ಕಬ್ಬು ಅರೆಯುವಿಕೆಗೆ ಚಾಲನೆ ನೀಡಿ ಮಾತನಾಡಿದ ಅವರು, ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ತಾಲೂಕು ಮತ್ತು ತಾಲೂಕಿಗೆ ಹೊಂದಿ ಕೊಂಡಂತಿರುವ ಅಕ್ಕಪಕ್ಕದ ತಾಲೂಕಿನ ರೈತರು ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಬೆಳೆಯುವಲ್ಲಿ ಮುಂದಾಗಬೇಕು. ಕಬ್ಬು ಬೆಳೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬಿತ್ತನೆ ಬೀಜವನ್ನು ಸಾಲದ ರೂಪದಲ್ಲಿ, ಹನಿ ನೀರಾವರಿ ಪದ್ಧತಿ ಅಳವಡಿಕೆಗೆ ಸಹಾಯಧನವನ್ನು ಕಾರ್ಖಾನೆಯಿಂದ ನೀಡಲಾಗುತ್ತಿದೆ. ಕಬ್ಬು ಕಟಾವಿನ ವಿಚಾರದಲ್ಲಿ ತೊಂದರೆಯಾಗದ ರೀತಿಯಲ್ಲಿ ೩೦೦ ಕಾರ್ಮಿಕರನ್ನು ಕರೆತರಲಾಗಿದೆ. ಯಾವುದೇ ಸಮಸ್ಯೆಗೆ ಆಸ್ಪದ ಕೊಡದ ರೀತಿಯಲ್ಲಿ ಕಾರ್ಖಾನೆ ಉಳಿಸಲು ರೈತರು ಮುಂದಾಗಬೇಕು ಎಂದರು.ಈ ಹಿಂದೆ ಸೂಚಿಸಿದಂತೆ ಕಬ್ಬು ನುರಿಸುವಿಕೆಗೆ ಚಾಲನೆ ನೀಡಲಾಗಿದೆ. ದಿನವಹಿ ೩ ಸಾವಿರ ಟನ್ ಕಬ್ಬು ಅರೆಯುವ ಮೂಲಕ ರೈತರು ಬೆಳೆದ ಕಬ್ಬನ್ನು ಸಕಾಲಕ್ಕೆ ನುರಿಸಲಾಗುವುದು, ೫ ಲಕ್ಷ ಟನ್ ಕಬ್ಬು ಅರೆಯುವಿಕೆಗೆ ಪ್ರಸಕ್ತ ಸಾಲಿನಲ್ಲಿ ಕಾರ್ಖಾನೆ ಮುಂದಾಗಿದ್ದು, ನಮ್ಮ ವ್ಯಾಪ್ತಿಯಲ್ಲಿ ೪ ಲಕ್ಷ ಟನ್ ಕಬ್ಬು ಬೆಳೆಯಲಾಗಿದೆ. ಹೆಚ್ಚುವರಿಯಾಗಿ ಅವಶ್ಯವಿರುವ ಇನ್ನೊಂದು ಟನ್ ಕಬ್ಬನ್ನು ಪಕ್ಕದ ಜಿಲ್ಲೆಗಳಿಂದ ತರಿಸಿ ಕೊಳ್ಳುವಲ್ಲಿ ಕಾರ್ಖಾನೆ ಮುಂದಾಗಿದೆ. ಪೂರ್ವ ಮುಂಗಾರು ಶೀಘ್ರ ಆರಂಭವಾಗಿರುವುದರಿಂದ ಇಳುವರಿಯೂ ಉತ್ತಮವಾಗಿರಲಿದೆ ಎಂದು ಅವರು ತಿಳಿಸಿದರು.ಕಳೆದ ಸಾಲಿನಲ್ಲಿ ಎರಡು ತಿಂಗಳು ತಡವಾಗಿ ಕ್ರಷಿಂಗ್ ಆರಂಭವಾಗಿದ್ದು, ಈ ಬಾರಿ ಸಕ್ಕರೆ ಸಚಿವರನ್ನು ಮನವಿ ಮಾಡಿದ ಮೇರೆಗೆ ಎರಡು ತಿಂಗಳು ಮುಂಚಿತವಾಗಿ ಕಾರ್ಖಾನೆ ಆರಂಭಿಸಲಾಗಿದೆ. ಕೇಂದ್ರ ಸರ್ಕಾರ ಪ್ರತಿ ಟನ್ ಕಬ್ಬಿಗೆ ೩೨೨೧ ರು. ನಿಗದಿ ಮಾಡಿದ್ದು, ಬೆಂಬಲ ಬೆಲೆ ಹೆಚ್ಚಿಗೆ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.ಈ ವೇಳೆ ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸಿ.ಎನ್. ವೆಂಕಟೇಶ್ ಉಪಾಧ್ಯಕ್ಷ ಕೃಷ್ಣೇಗೌಡ, ನಿರ್ದೇಶಕರಾದ ಸಿ.ಸಿ.ರವೀಶ್, ಮುತ್ತಿಗೆ ರಾಜೇಗೌಡ, ನಾರಾಯಣ ಗೌಡ, ಶಿವಣ್ಣ, ಯೋಗಣ್ಣ, ನಾರಾಯಣ್, ಜಯರಾಂ, ರವಿ, ಲಕ್ಷ್ಮೀ, ಭಾರತಿ, ಸಿಡಿಒ ದೇವೇಗೌಡ ಇತರರು ಭಾಗವಹಿಸಿದ್ದರು.

PREV