10 ದಿನದಲ್ಲಿ ವರದಿಗೆ
ಹಾಸನ ಜಿಲ್ಲೆಯಲ್ಲಿ ಒಂದೇ ತಿಂಗಳಲ್ಲಿ ಇಪ್ಪತ್ತು ಮಂದಿ ಹೃದಯಾಘಾತದಿಂದ ಮೃತಪಟ್ಟಿರುವ ಪ್ರಕರಣಗಳ ಅಧ್ಯಯನ ನಡೆಸಿ 10 ದಿನಗಳಲ್ಲಿ ವರದಿ ನೀಡುವಂತೆ ತಜ್ಞರ ಸಮಿತಿಗೆ ಸೂಚಿಸಲಾಗಿದೆ. ವರದಿ ಬಂದ ಬಳಿಕ ಇಂತಹ ಪ್ರಕರಣಗಳ ತಡೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ==
ಹಾಸನದಲ್ಲಿ ಸಾಲುಸಾಲು ಹೃದಯಸ್ತಂಭನದಿಂದ ಸಾವುಗಳು ಸಂಭವಿಸಿದ ಹಿನ್ನೆಲೆಯಲ್ಲಿ ಬೆಂಗಳೂರು, ಮೈಸೂರು ಮತ್ತು ಕಲಬುರಗಿಯಲ್ಲಿರುವ ಜಯದೇವ ಹೃದ್ರೋಗ ಆಸ್ಪತ್ರೆಗೆ ಹೃದಯ ತಪಾಸಣೆಗಾಗಿ ಜನರು ದಾಂಗುಡಿ ಇಡುತ್ತಿದ್ದಾರೆ.
ಬೆಂಗಳೂರಿನ ಜಯದೇವದಲ್ಲಿ ಮಂಗಳವಾರ ಸಾಮಾನ್ಯ ದಿನಗಳಿಗಿಂತ ಶೇ.20ರಷ್ಟು ಹೆಚ್ಚಿನವರು ಹೃದಯ ತಪಾಸಣೆ ಮಾಡಿಸಿಕೊಂಡಿದ್ದಾರೆ. ಜನತೆಯಲ್ಲಿ ಹೃದಯಾಘಾತ, ಹೃದಯ ಸ್ತಂಭನ ಆತಂಕ ಆವರಿಸಿದ್ದು ಹೆಚ್ಚಾಗಿ ಯುವಕರು, ಮಧ್ಯವಯಸ್ಕರು ತಪಾಸಣೆಗೆ ಬಂದಿದ್ದರು. ಪ್ರತಿದಿನ ರೋಗಿಗಳು ಸೇರಿದಂತೆ ಸಾಮಾನ್ಯವಾಗಿ 1200-1300 ಜನ ಇಲ್ಲಿನ ಜಯದೇವ ಆಸ್ಪತ್ರೆಗೆ ಬಂದು ತಪಾಸಣೆ ಮಾಡಿಸಿಕೊಳ್ಳುತ್ತಾರೆ. ಮಂಗಳವಾರ ಸುಮಾರು 1700 ಜನ ಹೃದಯ ತಪಾಸಣೆ ಮಾಡಿಸಿಕೊಂಡಿದ್ದಾರೆ.
ಇನ್ನು ಕಲಬುರಗಿಯ ಜಯದೇವ ಹೃದರ್ರೋಗ ವಿಜ್ಞಾನಗಳ ಸಂಸ್ಥೆಗೆ 6 ತಿಂಗಳಲ್ಲೇ ರೋಗಿಗಳ ಸಂಖ್ಯೆ ಹೆಚ್ಚಿದೆ. ಓಪಿಡಿಗೆ 600 ಮಂದಿ ಭೇಟಿ ನೀಡಿದ್ದರು. ಸಾಮಾನ್ಯವಾಗಿ 300ರಿಂದ 500 ಮಂದಿ ಭೇಟಿ ನೀಡುತ್ತಿದ್ದರು. ಶೇ.25ರಷ್ಟು ಭೀತಿಯಿಂದ ಬಂದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.