;Resize=(412,232))
ಬೆಳಗಾವಿ/ವಿಜಯಪುರ/ಬಾಗಲಕೋಟೆ : ಕಬ್ಬು ಹಂಗಾಮು ಆರಂಭಿಸುವ ಮುನ್ನವೇ ಪ್ರತಿ ಟನ್ ಕಬ್ಬಿಗೆ ₹3,500 ಬೆಲೆ ಘೋಷಣೆ ಮಾಡುವಂತೆ ಆಗ್ರಹಿಸಿ ಕಬ್ಬು ಬೆಳೆಗಾರರು ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ನಡೆಸುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ.
ಹೋರಾಟದ ಅಂಗವಾಗಿ ಬೆಳಗಾವಿ ಜಿಲ್ಲೆಯ ಅಥಣಿ ಹಾಗೂ ಹುಕ್ಕೇರಿ ಪಟ್ಟಣಗಳಲ್ಲಿ ಮಂಗಳವಾರ ಬಂದ್ ಆಚರಿಸಲಾಯಿತು. ಈ ಮಧ್ಯೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಬೆಳಗಾವಿ ಜಿಲ್ಲೆ ಗುರ್ಲಾಪುರ ಕ್ರಾಸ್‌ಗೆ ಆಗಮಿಸಿ, ಕಬ್ಬು ಬೆಳೆಗಾರರ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಅವರ ಹೋರಾಟಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.ಕಳೆದ ಕೆಲವು ದಿನಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ನಡೆಯುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಚಿಕ್ಕೋಡಿ, ಅಥಣಿ, ಬೈಲಹೊಂಗಲ, ರಾಯಬಾಗ ಸೇರಿ ಜಿಲ್ಲೆಯಾದ್ಯಂತ ಮಂಗಳವಾರ ರೈತರ ಪ್ರತಿಭಟನೆಗಳು ನಡೆದವು. ಪ್ರಗತಿಪರ ಸಂಘಟನೆಗಳು, ವಕೀಲರ ಸಂಘ, ಕರವೇ ಸೇರಿ ಹಲವು ಸಂಘ-ಸಂಸ್ಥೆಗಳು ಪ್ರತಿಭಟನೆಗೆ ತಮ್ಮ ಬೆಂಬಲ ವ್ಯಕ್ತಪಡಿಸಿದವು.
ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಗುರ್ಲಾಪುರ ಕ್ರಾಸ್‌ನಲ್ಲಿ ನಡೆಯುತ್ತಿರುವ ರೈತರ ಅಹೋರಾತ್ರಿ ಧರಣಿ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಮಂಗಳವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗಮಿಸಿ, ಕಬ್ಬು ಬೆಳೆಗಾರರ ಹೋರಾಟಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದರು. ಒಂದೆರಡು ತಾಸು ಇಲ್ಲಿ ಇದ್ದು ಹೊರಡಬೇಕು ಎಂದು ಬಂದಿದ್ದೆ. ಉರಿ ಬಿಸಿಲಿನಲ್ಲಿ ರೈತರು ಕುಳಿತಿದ್ದನ್ನು ಕಂಡು ಇಲ್ಲೇ ಇರಲು ತೀರ್ಮಾನ ಮಾಡಿದೆ.
ನೀವೆಲ್ಲರೂ ಇಲ್ಲೇ ಮಲಗುತ್ತಿರಿ ಅಂದರೆ ನಾನು ಕೂಡ ಇಲ್ಲೇ ಮಲಗುತ್ತೇನೆ. ರಾತ್ರಿ ರೈತರ ಜೊತೆಗೆ ಪ್ರತಿಭಟನಾ ಸ್ಥಳದಲ್ಲೇ ಮಲಗುತ್ತೇನೆ ಎಂದರು.
ಸಿಎಂ, ಉಸ್ತುವಾರಿ ಸಚಿವ ಅಥವಾ ಸಕ್ಕರೆ ಸಚಿವರು ಖುದ್ದಾಗಿ ಸ್ಥಳಕ್ಕೆ ಆಗಮಿಸಿ, ಕಬ್ಬು ಬೆಳೆಗಾರರಿಗೆ ನ್ಯಾಯಯುತ ದರ ನಿಗದಿ ಮಾಡಬೇಕು. ನ್ಯಾಯಯುತ ದರ ನಿಗದಿ ಮಾಡದಿದ್ದರೆ ಬುಧವಾರ ತಮ್ಮ ಜನ್ಮದಿನವಿದ್ದರೂ ಪ್ರತಿಭಟನೆಯಲ್ಲಿ ಭಾಗಿಯಾಗಿ, ಹೋರಾಟ ಮಾಡುತ್ತೇನೆ ಎಂದು ಘೋಷಿಸಿದರು.ಅಥಣಿ, ಹುಕ್ಕೇರಿ ಬಂದ್:
ಈ ಮಧ್ಯೆ, ರೈತರ ಹೋರಾಟ ಬೆಂಬಲಿಸಿ ಮಂಗಳವಾರ ಬೆಳಗಾವಿ ಜಿಲ್ಲೆಯ ಅಥಣಿ ಹಾಗೂ ಹುಕ್ಕೇರಿಗಳಲ್ಲಿ ಬಂದ್ ಆಚರಿಸಲಾಯಿತು. ಅಥಣಿಯ ಪ್ರಮುಖ ವೃತ್ತಗಳಲ್ಲಿ ರೈತರು ಅರೆಬೆತ್ತಲೆಯಾಗಿ ಪ್ರತಿಭಟಿಸಿ, ಬಾರುಕೋಲು ಚಾಟಿ ಬೀಸುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ರಸ್ತೆಯಲ್ಲಿಯೇ ಊಟ, ಉಪಹಾರ ಸೇವಿಸಿ ತಮ್ಮ ಆಕ್ರೋಶ ಹೊರಹಾಕಿದರು.
ವಿಜಯಪುರ ಜಿಲ್ಲೆಯಲ್ಲಿಯೂ ರೈತರ ಪ್ರತಿಭಟನೆ ಜೋರಾಗಿತ್ತು. ವಿಜಯಪುರದಲ್ಲಿ ಗಾಂಧಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ್‍ಯಾಲಿ ನಡೆಯಿತು. ರ್‍ಯಾಲಿ ಅಂಬೇಡ್ಕರ್ ಸರ್ಕಲ್ ಬಳಿ ಬರುತ್ತಿದ್ದಂತೆ ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದ ರೈತ ಸಂಘದ ನಿಡಗುಂದಿ ತಾಲೂಕು ಅಧ್ಯಕ್ಷ ಸಾಯಬಣ್ಣ ಅಂಗಡಿಯವರು ಅಸ್ವಸ್ಥಗೊಂಡು ಕುಸಿದು ಬಿದ್ದರು. ಸ್ಥಳದಲ್ಲಿಯೇ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು.
ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಜಂಬಗಿ ಬಿ.ಕೆ ಗ್ರಾಮ ಹಾಗೂ ಮುಧೋಳ ತಾಲೂಕಿನ ರನ್ನ ಬೆಳಗಲಿಯಲ್ಲಿ ಪ್ರತಿಭಟನಾಕಾರರು ಮುಧೋಳ-ನಿಪ್ಪಾಣಿ ಹೆದ್ದಾರಿ ಬಂದ್ ಮಾಡಿ, ತಮ್ಮ ಆಕ್ರೋಶ ಹೊರ ಹಾಕಿದರು.
ಕಬ್ಬಿನ ಬೆಂಬಲ ಬೆಲೆ ಘೋಷಣೆ ಮಾಡಬೇಕೆಂದು ರೈತರ ಹೋರಾಟದಲ್ಲಿ ಭಾಗಿಯಾಗಲು ನಾನು ಯಡಿಯೂರಪ್ಪನವರ ಮಗನಾಗಿ ಬಂದಿದ್ದೇನೆ. ಯಾರ್‍ಯಾರ ಕಾರ್ಖಾನೆಗಳಿವೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಸಕ್ಕರೆ ಕಾರ್ಖಾನೆಗಳ ಸಾಹುಕಾರರ ಜೊತೆಗೆ ಅಧಿಕಾರಿಗಳು ಸೇರಿ ಚರ್ಚೆ ಮಾಡಿ ಸಮಸ್ಯೆ ಬಗೆಹರಿಸಬೇಕು.
- ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ
ರೈತರೊಂದಿಗೇ ಇಂದು ಜನ್ಮದಿನ ಆಚರಿಸಿಕೊಳ್ಳುವುದಾಗಿ ಘೋಷಣೆ
ಹೋರಾಟ ಏಕೆ?- ಮಹಾರಾಷ್ಟ್ರದಲ್ಲಿ ಟನ್ ಕಬ್ಬಿಗೆ ₹3600 ನೀಡಲಾಗುತ್ತಿದೆ. ಆದರೆ ರಾಜ್ಯದಲ್ಲಿ ₹3200 ನಿಗದಿ ಮಾಡಲಾಗಿದೆ- ರಾಜ್ಯದ ಕಬ್ಬು ಬೆಳೆಗಾರರಿಗೆ 3500 ರುಪಾಯಿ ನೀಡಲೇಬೇಕು. ಆನಂತರವೇ ಕಬ್ಬು ಕಟಾವು ಮಾಡಬೇಕು- ಮಹಾರಾಷ್ಟ್ರ ರೀತಿ ಸಕಾಲಕ್ಕೆ ಹಣ ಬಟವಾಡೆ ಮಾಡಬೇಕು. ಸರಿಯಾದ ಸಮಯಕ್ಕೆ ಕಟಾವು ಆಗಬೇಕು- ತೂಕದಲ್ಲಿ ಮೋಸ ತಪ್ಪಿಸಲು ಸಕ್ಕರೆ ಕಾರ್ಖಾನೆ ಗೇಟ್ ಬಳಿಯೇ ತೂಕ ಮಾಡಿ ಕಬ್ಬು ತೆಗೆದುಕೊಳ್ಳಬೇಕು - ಹಣ ಪಾವತಿ ಮತ್ತು ಬಾಕಿ ಕುರಿತು ರೈತರಿಗೆ ಎಸ್ಎಂಎಸ್ ಕಳುಹಿಸಬೇಕು ಎಂದು ರೈತರ ಆಗ್ರಹ
ಕೇಂದ್ರ ಸರ್ಕಾರದ್ದೇಅಂತಿಮ ನಿರ್ಧಾರಕಬ್ಬಿನ ಬೆಲೆ ನಿಗದಿ ಕುರಿತಾಗಿ ರೈತರು ತೋರಿಸುತ್ತಿರುವ ಆತಂಕ ಮತ್ತು ಹೋರಾಟವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಕಬ್ಬಿಗೆ ನ್ಯಾಯಸಮ್ಮತ ದರ ನೀಡುವ ವಿಷಯದಲ್ಲಿ ಕೇಂದ್ರ ಸರ್ಕಾರವೇ ಅಂತಿಮ ನಿರ್ಧಾರ ಕೈಗೊಳ್ಳುತ್ತದೆ. ರೈತರ ಹಿತದೃಷ್ಟಿಯಿಂದ ಕೇಂದ್ರದಿಂದ ನಿಗದಿತ ದರ ಕೊಡಿಸಲು ರಾಜ್ಯ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ.
ಶಿವಾನಂದ ಪಾಟೀಲ, ಸಕ್ಕರೆ ಸಚಿವ
ಸಿಎಂ, ಸಚಿವರು ಸ್ಥಳಕ್ಕೆ ಬರಬೇಕು
ಮುಖ್ಯಮಂತ್ರಿಗಳು, ಉಸ್ತುವಾರಿ ಸಚಿವರು ಅಥವಾ ಸಕ್ಕರೆ ಸಚಿವರು ಖುದ್ದಾಗಿ ಸ್ಥಳಕ್ಕೆ ಆಗಮಿಸಿ, ಕಬ್ಬು ಬೆಳೆಗಾರರಿಗೆ ನ್ಯಾಯಯುತ ದರ ನಿಗದಿ ಮಾಡಬೇಕು. ನ್ಯಾಯಯುತ ದರ ನಿಗದಿ ಮಾಡದಿದ್ದರೆ ಬುಧವಾರ ಪ್ರತಿಭಟನೆಯಲ್ಲಿ ಭಾಗಿಯಾಗಿ, ಹೋರಾಟ ಮಾಡುತ್ತಲೇ ನನ್ನ ಜನ್ಮದಿನ ಆಚರಿಸಿಕೊಳ್ಳುತ್ತೇನೆ.
- ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ