ಕಬ್ಬು ಬೆಳೆಗಾರರಿಗೆ ಸಂಕಷ್ಟ, ಕಾರ್ಖಾನೆಗಳಿಗೆ ಧರ್ಮಸಂಕಟ

KannadaprabhaNewsNetwork |  
Published : Nov 04, 2025, 04:00 AM IST
 ಜಮಖಂಡಿ | Kannada Prabha

ಸಾರಾಂಶ

ರೈತರಿಂದಲೇ ನಿರ್ಮಾಣವಾಗಿರುವ ದೇಶದಲ್ಲಿರುವ ಸಹಕಾರಿ ಸಕ್ಕರೆ ಕಾರ್ಖಾನೆಗಳು ಸಾಲದಲ್ಲಿ ಸಿಲುಕಿ ಹೊರಬಾರದಂತ ಪರಿಸ್ಥಿತಿಯಲ್ಲಿವೆ.

ಕೇಶವ ಕುಲಕರ್ಣಿ

ಕನ್ನಡಪ್ರಭ ವಾರ್ತೆ ಜಮಖಂಡಿ

ಬಾಗಲಕೋಟೆ, ವಿಜಯಪುರ ಹಾಗೂ ಬೆಳಗಾವಿ ಜಿಲ್ಲೆಗಳ ಬಹುತೇಕ ಭಾಗದಲ್ಲಿ ಕಬ್ಬು ಬೆಲೆ ನಿಗದಿಗಾಗಿ ನಡೆಯುತ್ತಿರುವ ಹೋರಾಟಗಳು ದಿನದಿಂದ ದಿನಕ್ಕೆ ಕಾವು ಪಡೆಯುತ್ತಿವೆ. ಪ್ರತಿವರ್ಷ ಕಬ್ಬು ಸಾಗುವಳಿ ವೆಚ್ಚ ಹೆಚ್ಚುತ್ತಿರುವುದರಿಂದ ಮತ್ತು ಎಕರೆವಾರು ಕಬ್ಬು ಉತ್ಪಾದನೆ ಕಡಿಮೆ ಆಗುತ್ತಿರುವುದರಿಂದ ಕಬ್ಬು ಬೆಳೆಗಾರರು ಅನಿವಾರ್ಯವಾಗಿ ಹೆಚ್ಚಿನ ಬೆಲೆ ಪಡೆಯಲು ಹೋರಾಟ ಮಾಡುವಂತಾಗಿದೆ.

ಕೃಷಿ ಕಾರ್ಮಿಕರ ಕೊರತೆಯ ದಿನಮಾನಗಳಲ್ಲಿ ಮತ್ತು ನೀರಾವರಿ ಅನುಕೂಲವಿರುವ ಕಾರಣದಿಂದ ರೈತರಿಗೆ ಕಬ್ಬು ಬೆಳೆಯು ಭರವಸೆ ಬೆಳೆಯಾಗಿದೆ. ಗೋವಿನ ಜೋಳ, ಗೋಧಿ, ಜವೆಗೋಧಿ (ಸದಕ), ಈರುಳ್ಳಿ, ಟೊಮೆಟೊ ಸೇರಿದಂತೆ ಬಹುತೇಕ ಬೆಳೆಗಳ ಬೆಲೆಯು ಅನಿಶ್ಚಿತವಾಗಿವೆ. ಕಳೆದ ಇಪ್ಪತ್ತು ವರ್ಷಗಳಿಂದ ನೀರಾವರಿ ಸೌಕರ್ಯ ಹೆಚ್ಚಿದಂತೆ ಕಬ್ಬು ಬೆಳೆಯು ಹೆಚ್ಚಾಗುತ್ತಿರುವುದರಿಂದ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸಿರುವುದು ಸುಳ್ಳೇನಲ್ಲ. ಕಬ್ಬು ಬೆಳೆಯಿಂದ ಜೀವನಮಟ್ಟ ಸುಧಾರಿಸಿಕೊಂಡ ರೈತರಿಗೆ ಇಂದು ತಾವೇ ಬೆಳೆದ ಕಬ್ಬಿನ ಬೆಲೆಗಾಗಿ ಹೋರಾಟ ಮಾಡುವ ಪರಿಸ್ಥಿತಿ ಬಂದಿರುವುದು ದುರದೃಷ್ಟಕರ.

ಕಾರ್ಖಾನೆಗಳಿಗೆ ನೂರಾರು ಸಂಕಷ್ಟ:

ಇತ್ತ ಸಕ್ಕರೆ ಕಾರ್ಖಾನೆಗಳ ಪರಿಸ್ಥಿತಿಯು ಅಧೋಗತಿಯಾಗಿದೆ. ರೈತರಿಂದಲೇ ನಿರ್ಮಾಣವಾಗಿರುವ ದೇಶದಲ್ಲಿರುವ ಸಹಕಾರಿ ಸಕ್ಕರೆ ಕಾರ್ಖಾನೆಗಳು ಸಾಲದಲ್ಲಿ ಸಿಲುಕಿ ಹೊರಬಾರದಂತ ಪರಿಸ್ಥಿತಿಯಲ್ಲಿವೆ. ದೂರದ ಗುಡ್ಡ ಕಣ್ಣಿಗೆ ಚಂದ ಎಂಬಂತೆ ಪ್ರತಿವರ್ಷ ಹೆಚ್ಚುತ್ತಿರುವ ಖರ್ಚು- ವೆಚ್ಚಗಳು, ಬಡ್ಡಿಯ ಹೊರೆ, ಗುಣಮಟ್ಟದ ಕಬ್ಬಿನ ಕೊರತೆ (ಅಪಕ್ವ ಕಬ್ಬು, ಹಸಿರು ವಾಡಿ, ರವದಿ, ಮಣ್ಣು, ಬೇರು), ಉತ್ಪಾದನಾ ವೆಚ್ಚ ಹೆಚ್ಚಳ ಮತ್ತು ಬದಲಾಗುತ್ತಿರುವ ಸರ್ಕಾರದ ಧೋರಣೆಗಳಿಂದ ಸಕ್ಕರೆ ಕಾರ್ಖಾನೆಗಳಿಗೆ ನೂರಾರು ಸಂಕಷ್ಟಗಳು ಎದುರಾಗಿವೆ.ರೈತರಿಗೆ ಉತ್ತಮ ಬೆಲೆ ಕೊಟ್ಟಾಗಲೇ ಕಬ್ಬು ಬೆಳೆಯುತ್ತಾರೆ ಎಂಬ ದೃಢವಾದ ನಿಲುವು ಸಕ್ಕರೆ ಕಾರ್ಖಾನೆಗಳಿಗಿದೆ. ಆದರೆ ಸದ್ಯ ಕಬ್ಬಿನಿಂದ ಬರುವ ಆದಾಯದಿಂದ ರೈತರಿಗೆ ನಿರೀಕ್ಷಿಸಿದಷ್ಟು ಬೆಲೆ ಕೊಡುವುದು ಕಾರ್ಖಾನೆಗಳಿಗೆ ಅಸಾಧ್ಯವಾಗಿದೆ ಎನ್ನುತ್ತಾರೆ ಕಾರ್ಖಾನೆ ವ್ಯವಸ್ಥಾಪಕರು.

7 ವರ್ಷವಾದ್ರೂ ಬದಲಾಗದ ದರ:

ಕೇಂದ್ರ ಸರ್ಕಾರವು ನಿಗದಿಪಡಿಸುವ ಎಫ್‌ಆರ್‌ಪಿ ದರವು ಪ್ರತಿವರ್ಷ ಹೆಚ್ಚಾಗುತ್ತಿದೆ. ಆದರೆ ಸಕ್ಕರೆಯ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಯು ಹೆಚ್ಚಾಗುತ್ತಿಲ್ಲ. ಅಂದರೆ 2022-23ರಲ್ಲಿ ಎಫ್‌ಆರ್‌ಪಿ ದರವು ₹305 ಇದ್ದದ್ದು, ಈಗ 2025-26ನೇ ಸಾಲಿನಲ್ಲಿ ₹355 ರಷ್ಟು ಏರಿ ಶೇ.29ನಷ್ಟು ಹೆಚ್ಚಾಗಿದೆ. ಆದರೆ ಕಳೆದ 7 ವರ್ಷಗಳಿಂದ ಸಕ್ಕರೆಯ ಕನಿಷ್ಠ ಬೆಂಬಲ ಬೆಲೆಯು ಪ್ರತಿ ಟನ್‌ ₹31 ರಲ್ಲೇ ಮುಂದುವರೆದಿದೆ. ಸಕ್ಕರೆಯ ದರದಲ್ಲಿ ಪ್ರತಿನಿತ್ಯ ವ್ಯತ್ಯಾಸವಾಗುತ್ತಿರುವುದು ಕಾರ್ಖಾನೆಗಳಿಗೆ ಸಂಕಷ್ಟ ತಂದೊಡ್ಡಿದೆ.

ಕಳೆದ ನಾಲ್ಕು ವರ್ಷಗಳಿಂದ ಎಥೆನಾಲ್ ದರದಲ್ಲಿಯೂ ಬದಲಾಗಿಲ್ಲ. ಆದರೆ ಎಥೆನಾಲ್ ಉತ್ಪಾದನೆ ಮತ್ತು ಪೂರೈಕೆಯ ಧೋರಣೆಗಳು ಪ್ರತಿವರ್ಷ ಬದಲಾಗುತ್ತಿವೆ. ನೂರಾರು ಕೋಟಿ ಹಣ ಹೂಡಿ ಹುಟ್ಟಿಕೊಂಡ ಡಿಸ್ಟಿಲರಿಗಳು ಪ್ರತಿಶತ ಪ್ರಮಾಣದಲ್ಲಿ ಎಥೆನಾಲ್ ಉತ್ಪಾದನೆ ಮಾಡಲು ಸಾಧ್ಯವಾಗಿಲ್ಲ. ಕಳೆದ 2019-20ರಲ್ಲಿ ದೇಶಾದ್ಯಂತ ಎಥೆನಾಲ್ ಹಂಚಿಕೆ ಪ್ರಮಾಣವು ಸರಾಸರಿ ಶೇ.90 ರಷ್ಟಿತ್ತು. ಆದರೆ ಪ್ರಸಕ್ತ 2025-26ರಲ್ಲಿ ಕೇವಲ ಸರಾಸರಿ ಶೇ.27.5ನಷ್ಟಿದೆ.

ಮುಕ್ತವಾಗಿ ಶೇ.100ರಷ್ಟು ಎಥೆನಾಲ್ ಉತ್ಪಾದನೆಗೆ ಸರ್ಕಾರ ಅವಕಾಶ ಕಲ್ಪಿಸಬೇಕು ಮತ್ತು ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣದಿಂದ ಸರ್ಕಾರಕ್ಕೆ ಉಳಿತಾಯವಾಗುವ ಪ್ರತಿ ಲೀಟರ್‌ಗೆ ₹70 ಕಾರ್ಖಾನೆಗಳಿಗೆ ಸಂದಾಯ ಮಾಡಬೇಕು. ಅಂದಾಗ ಮಾತ್ರ ಸಕ್ಕರೆ ಕಾರ್ಖಾನೆಗಳು ಸದೃಢವಾಗುತ್ತವೆ ಮತ್ತು ರೈತರನ್ನು ಸದೃಢಗೊಳಿಸುತ್ತವೆ. ಕಳೆದ ದಶಕದಲ್ಲಿನ ವಿದ್ಯುತ್ ಕೊರತೆಯ ದಿನಮಾನಗಳಲ್ಲಿ ಕಾರ್ಖಾನೆಗಳಿಂದ ಉತ್ಪಾದಿಸುವ ಪ್ರತಿ ಯುನಿಟ್‌ಗೆ ವಿದ್ಯುತ್ ದರವು ₹6.60 ರಷ್ಟಿತ್ತು. ಆದರೆ ಸದ್ಯದ ವಿದ್ಯುತ್ ದರವು ₹2 ಇದೆ ಎಂದು ಕಾರ್ಖಾನೆಯ ವ್ಯವಸ್ಥಾಪಕರು ವಿವರಿಸಿದ್ದಾರೆ.

ನೆರೆ ರಾಜ್ಯದಲ್ಲಿ ಹೆಚ್ಚು, ನಮ್ಮಲ್ಲಿ ಯಾಕೆ ಕಮ್ಮಿ:

ಪಶ್ಚಿಮ ಮಹಾರಾಷ್ಟ್ರದಲ್ಲಿ ಕಳೆದ ಹಲವು ದಶಕಗಳಿಂದಲು ಕರ್ನಾಟಕಕ್ಕಿಂತ ಕಬ್ಬು ಬೆಲೆಯನ್ನು ಹೆಚ್ಚಿಗೆ ಕೊಡುತ್ತಾರೆ. ಕಾರಣ ಅಲ್ಲಿಯ ಸಕ್ಕರೆ ಇಳುವರಿಯು ಕರ್ನಾಟಕಕ್ಕಿಂತ ಕನಿಷ್ಠ ಶೇ.1.5ರಷ್ಟು ಹೆಚ್ಚಿರುತ್ತದೆ. ಅಂದರೆ ಪ್ರತಿಟನ್‌ ಕಬ್ಬಿನಿಂದ 15 ಕಿಲೋ ಹೆಚ್ಚುವರಿ ಸಕ್ಕರೆಯ ಉತ್ಪಾದನೆಯಾಗುತ್ತದೆ. ಇದಕ್ಕೆ ಪ್ರಮುಖ ಕಾರಣ ಜೇಷ್ಠತೆಯ ಆಧಾರದಲ್ಲಿ ಕಬ್ಬು ಕಟಾವು ಪದ್ಧತಿಯಾಗಿದೆ. ಅದರಂತೆ ರಾಜ್ಯವಾರು ಎಥೆನಾಲ್ ಉತ್ಪಾದನೆಯ ಹಂಚಿಕೆ ಪ್ರಮಾಣವು ದೇಶದಲ್ಲಿಯೆ ಅತಿಹೆಚ್ಚು ಎಥೆನಾಲ್ ಅನ್ನು ಕರ್ನಾಟಕಕ್ಕಿಂತ ಮಹಾರಾಷ್ಟ್ರ ಹೆಚ್ಚಾಗಿ ಉತ್ಪಾದಿಸುತ್ತಿದೆ. ಮಹಾರಾಷ್ಟ್ರದಲ್ಲಿ ಇಂದಿಗೂ ಅಲ್ಲಿನ ಸರ್ಕಾರವು ಸಕ್ಕರೆ ಕಾರ್ಖಾನೆಗಳಿಂದ ₹6.60ರಂತೆ ಪ್ರತಿ ಯುನಿಟ್‌ಗೆ ವಿದ್ಯುತ್ ಖರೀದಿಸುತ್ತಿದೆ. ಆದರೆ ಕರ್ನಾಟಕದಲ್ಲಿ ಸರ್ಕಾರದಿಂದ ಖರೀದಿ ಒತ್ತಟ್ಟಿಗಿರಲಿ, ಖಾಸಗಿಯಾಗಿ ಮಾರಾಟ ಮಾಡಲು ಹಲವು ಷರತ್ತುಗಳಿವೆ. ಅಲ್ಲದೆ ಇಲ್ಲಿನ ಪ್ರತಿ ಯುನಿಟ್ ದರ ₹2 ಆಸುಪಾಸಿನಲ್ಲಿರುವುದು ಉತ್ಪಾದನಾ ವೆಚ್ಚಕ್ಕೂ ಸರಿದೂಗುತ್ತಿಲ್ಲ. ಇದರಿಂದ ಪ್ರತಿ ಟನ್ ಕಬ್ಬಿನಿಂದ ಮಹಾರಾಷ್ಟ್ರಕ್ಕಿಂತ ಸರಾಸರಿ ₹200ರಷ್ಟು ಕರ್ನಾಟಕದಲ್ಲಿ ಹಾನಿಯಿದೆ. ಹೀಗಾಗಿ ಮಹಾರಾಷ್ಟ್ರದಲ್ಲಿ ಕಬ್ಬು ಬೆಲೆ ಹೆಚ್ಚಾಗಿದೆ. ಆದರೆ ಮಹಾರಾಷ್ಟ್ರದ ಮರಾಠವಾಡಾ (ಸೋಲಾಪೂರ) ಮತ್ತು ವಿದರ್ಭ(ನಾಗಪೂರ) ಭಾಗದಲ್ಲಿ ಕರ್ನಾಟಕಕ್ಕಿಂತ ಕನಿಷ್ಠ ₹300 ಕಬ್ಬಿನ ಬಿಲ್‌ ಕಡಿಮೆಯಿದೆ.

ಹೀಗೆ ಸಕ್ಕರೆ, ಎಥೆನಾಲ್ ಮತ್ತು ವಿದ್ಯುತ್ ದರಗಳಲ್ಲಿ ಹೆಚ್ಚಳ ಮಾಡುವ ಅಧಿಕಾರವು ಸರ್ಕಾರದ ನಿಯಂತ್ರಣದಲ್ಲಿ ಇರುವುದರಿಂದ ಸರ್ಕಾರವು ಕೂಡಲೇ ಕ್ರಮ ಕೈಕೊಂಡು ಕಬ್ಬು ಬೆಳೆಗಾರರ ಮತ್ತು ಕಾರ್ಖಾನೆಗಳ ಹಿತ ಕಾಪಾಡಬೇಕು. ಸಕ್ಕರೆ ಕಾರ್ಖಾನೆಗಳು ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ರೈತರಿಗೆ ಹೆಚ್ಚಿನ ಬಿಲ್‌ ಕೊಡುವಲ್ಲಿ ಕಾರ್ಯನಿರ್ವಹಿಸಬೇಕು. ಅದರಂತೆ ರೈತರು ಎಕರೆವಾರು ಕಬ್ಬು ಉತ್ಪಾದನೆ ಹೆಚ್ಚಿಸಲು ಗಮನ ನೀಡಬೇಕಾಗಿದೆ.

ರೈತರ ಹೋರಾಟಕ್ಕೆ ಸರ್ಕಾರ ಮಧ್ಯ ಪ್ರವೇಶಿಸಬೇಕು. ಸಕ್ಕರೆ ಕಾರ್ಖಾನೆಗಳು, ಕಬ್ಬು ಬೆಳೆದ ರೈತರು ಇಬ್ಬರೂ ಬದುಕುವಂತೆ ಕ್ರಮ ಜರುಗಿಸಬೇಕು. 2016ರಲ್ಲಿ ಮುಖ್ಯಂತ್ರಿ ಸಿದ್ದರಾಮಯ್ಯ ಕಬ್ಬುಬೆಳೆದ ರೈತರಿಗೆ ಪ್ರತಿ ಟನ್‌ಗೆ ₹200 ಹೆಚ್ಚುವರಿ ಬೆಂಬಲ ಬೆಲೆ ನೀಡಿದ್ದರು ಅದೇ ಮಾದರಿಯಲ್ಲಿ ಈಗಲೂ ಮುಖ್ಯಮಂತ್ರಿಯಾಗಿರುವ ಸಿದ್ದರಾಮ್ಯನವರು ₹500 ಬೆಂಬಲ ಬೆಲೆ ನೀಡುವ ಮೂಲಕ ರೈತರು ಮತ್ತು ಕಾರ್ಖಾನೆಗಳನ್ನು ಉಳಿಸಬೇಕು. ಕಾರ್ಖಾನೆಗಳು ಪ್ರಾರಂಭವಾಗದೇ ಹೋದಲ್ಲಿ ಕಬ್ಬು ಕಟಾವಿಗೆ ಲಗಾಣಿ ಹೆಚ್ಚಿಗೆ ಕೊಡಬೇಕಾದ ಸ್ಥಿತಿ ಬರುತ್ತದೆ. ಇದರಿಂದ ರೈತರಿಗೆ ಹೆಚ್ಚಿನ ಹೊರೆಯಾಗುತ್ತದೆ.

ಅಣ್ಣಪ್ಪ ಶಿರಹಟ್ಟಿ ಪ್ರಗತಿಪರ ರೈತರು ನಾಗನೂರು.

ಬೆಳಗಾವಿ , ಬಾಗಲಕೊಟೆ, ವಿಜಯಪುರ ಭಾಗದಲ್ಲಿ ಉತ್ತಮ ಗುಣಮಟ್ಟದ ಕಬ್ಬು ಬೆಳೆಯುತ್ತದೆ. 11 ರಿಂದ 13ರ ವರೆಗೆ ರೀಕವರಿ ಬರುತ್ತದೆ. ಆದ್ದರಿಂದ ರೈತರು ಕೇಳುವ ಬೆಲೆಯನ್ನು ನೀಡುವುದು ಸೂಕ್ತ, ಮಂಡ್ಯ, ಮೈಸೂರು ಭಾಗದಲ್ಲಿ ಕಡಿಮೆ ರೀಕವರಿ ಬರುತ್ತದೆ ಎಂಬುದನ್ನು ಒಪ್ಪಬಹುದು. ಆದರೆ ನಮ್ಮಭಾಗದ ಕಬ್ಬು ಉತ್ಕೃಷ್ಠವಾಗಿದೆ. ಎಲ್ಲ ಕಾರ್ಖಾನೆಗಳು ಕಬ್ಬು ಬೆಳೆಗಾರರ ಹಿತ ಕಾಯುವ ಕೆಲಸ ಮಾಡಬೇಕು ಜೊತೆಗೆ ಬಾಕಿ ಉಳಿಸಿಕೊಂಡಿರುವ ಹಣವನ್ನು ಬಿಡುಗಡೆಗೆ ಕ್ರಮ ಜರುಗಿಸಬೇಕು.

ಶ್ರೀಕಾಂತ ಕುಲಕರ್ಣಿ, ಮಾಜಿ ಶಾಸಕರು,

PREV

Recommended Stories

ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ