ಹಳಿಯಾಳದ ಪ್ಯಾರಿ ಸಕ್ಕರೆ ಗೋದಾಮಿಗೆ ಕಬ್ಬು ಬೆಳೆಗಾರರಿಂದ ಬೀಗ

KannadaprabhaNewsNetwork |  
Published : Oct 30, 2026, 02:45 AM IST
ಹಳಿಯಾಳದಲ್ಲಿ ಕಬ್ಬು ಬೆಳೆಗಾರರು ಕಾರ್ಖಾನೆ ಆಡಳಿತ ಮಂಡಳಿಯ ಮುಖ್ಯಸ್ಥರಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಲು ಮತ್ತು ಎಂಎಸ್‌ಪಿ ದರ ಘೋಷಣೆಗೆ ನಾವು ಸರ್ಕಾರಕ್ಕೆ ಅ. 31ರ ವರೆಗೆ ಗಡುವು ನೀಡಿದ್ದೇವೆ. ಒಂದು ವೇಳೆ ನಿಗದಿತ ಕಾಲಾವಧಿಯಲ್ಲಿ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಹತ್ತರಗಿ ಟೋಲ್ ಸಂಪೂರ್ಣ ಬಂದ್ ಮಾಡಿ ಮುಷ್ಕರ ಆರಂಭಿಸುವುದು ನಿಶ್ಚಿತ ಎಂದು ಮುಖಂಡರು ತಿಳಿಸಿದರು.

ಹಳಿಯಾಳ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ಧೋರಣೆ ಖಂಡಿಸಿ, ಕಬ್ಬಿಗೆ ಎಂಎಸ್‌ಪಿ ಮತ್ತು ಎಸ್‌ಎಪಿ ದರ ಘೋಷಿಸಬೇಕೆಂದು ಆಗ್ರಹಿಸಿ ಗುರುವಾರ ಉತ್ತರ ಕನ್ನಡ ಮತ್ತು ಧಾರವಾಡ ಜಿಲ್ಲೆಯ ಕಬ್ಬು ಬೆಳೆಗಾರರು ಹಳಿಯಾಳದ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ಎದುರು ದಿಢೀರ್ ಪ್ರತಿಭಟನೆ ನಡೆಸಿದರು.ಪ್ರತಿಭಟನೆಯ ಅಂಗವಾಗಿ ಕಬ್ಬು ಬೆಳೆಗಾರರು ಕಾರ್ಖಾನೆಯ ಯಾರ್ಡ್‌ನಲ್ಲಿರುವ ಸಕ್ಕರೆ ಗೋದಾಮುಗಳಿಗೆ ಬೀಗ ಜಡಿದು, ಪ್ರತಿ ಕೆಜಿಗೆ ₹65 ದರದಂತೆ ಸಕ್ಕರೆ ಮಾರಾಟ ಮಾಡಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಕುಮಾರ ಬೊಬಾಟೆ ಅವರು, ರಾಜ್ಯದಲ್ಲಿ ಕಬ್ಬು ಬೆಳೆಗಾರರು ದರ ಘೋಷಣೆ ಸೇರಿದಂತೆ ಇನ್ನಿತರ ಬೇಡಿಕೆಗಳಿಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಆಲಿಸುವ ಇರಾದೆಯೇ ಇಲ್ಲ. ಕೇಂದ್ರ ಸರ್ಕಾರ ಎಂಎಸ್‌ಪಿ ದರ ಘೋಷಣೆ ಮಾಡುತ್ತಿಲ್ಲ. ಇತ್ತ ರಾಜ್ಯ ಸರ್ಕಾರ ತನ್ನ ಎಸ್‌ಎಪಿ ದರವನ್ನು ಘೋಷಿಸಲು ಮೀನಮೇಷ ಮಾಡುತ್ತಿದೆ. ಹೀಗಾದರೆ ಕಬ್ಬು ಬೆಳೆಗಾರರು ಬದುಕುವುದು ಹೇಗೆ? ಎಂಎಸ್‌ಪಿ ದರ ಘೋಷಣೆಯಾದರೆ ಕಬ್ಬು ಬೆಳೆಗಾರರಿಗೂ ಮತ್ತು ಕಾರ್ಖಾನೆಯವರಿಗೂ ನ್ಯಾಯ ದೊರೆಯಲಿದೆ ಎಂದರು.

ಕಬ್ಬು ಬೆಳೆಗಾರರ ಸಂಘದ ರಾಜ್ಯ ಮುಖಂಡ ಮಹೇಶ ಬೆಳಗಾಂವಕರ ಹಾಗೂ ಧಾರವಾಡ ಜಿಲ್ಲಾ ರೈತ ಮುಖಂಡ ಪರಶುರಾಮ ಎತ್ತಿನಗುಡ್ಡ ಮಾತನಾಡಿ, ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಲು ಮತ್ತು ಎಂಎಸ್‌ಪಿ ದರ ಘೋಷಣೆಗೆ ನಾವು ಸರ್ಕಾರಕ್ಕೆ ಅ. 31ರ ವರೆಗೆ ಗಡುವು ನೀಡಿದ್ದೇವೆ. ಒಂದು ವೇಳೆ ನಿಗದಿತ ಕಾಲಾವಧಿಯಲ್ಲಿ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಹತ್ತರಗಿ ಟೋಲ್ ಸಂಪೂರ್ಣ ಬಂದ್ ಮಾಡಿ ಮುಷ್ಕರ ಆರಂಭಿಸುವುದು ನಿಶ್ಚಿತ ಎಂದರು.

ಕಬ್ಬು ಬೆಳೆಗಾರರು ಕಾರ್ಖಾನೆ ಆಡಳಿತ ಮಂಡಳಿಯ ಮುಖ್ಯಸ್ಥ ಬಾಲಾಜಿ ಹಾಗೂ ಕಾರ್ಖಾನೆ ಘಟಕ ಪ್ರಮುಖ ರಾಜೇಂದ್ರ ಅವರಿಗೆ ಮನವಿ ಸಲ್ಲಿಸಿದರು. ಹಳಿಯಾಳ ತಾಲೂಕು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಶಂಕರ ಕಾಜಗಾರ, ಪ್ರಮುಖರಾದ ಸುರೇಶ ಶಿವಣ್ಣನವರ, ಧಾರವಾಡ ಜಿಲ್ಲಾಧ್ಯಕ್ಷ ಸುಭಾಷ್ ಬೂದಣ್ಣವರ, ಕಲಘಟಗಿ ತಾಲೂಕ ಅಧ್ಯಕ್ಷ ಸಹದೇವ ಕುಂಬಾರ, ಪ್ರಮುಖರಾದ ಉಳವಪ್ಪ ಬಳಿಗೇರ ಹಾಗೂ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೇಪ್‌ ಮಾಡಿದ್ದಕ್ಕಾಗಿ ಅಪಹರಣ ಮೂಲಕ ಪ್ರತೀಕಾರ
ಉತ್ತರ ಪಾಲಿಕೆಯಲ್ಲಿ 18 ಜಂಕ್ಷನ್‌ ಗುರುತು