ಕಬ್ಬು ಕಟಾವು, ಸಾಗಣೆ ವೆಚ್ಚ ಹೆಚ್ಚಳಕ್ಕೆ ಬೆಳೆಗಾರರ ಆಕ್ರೋಶ

KannadaprabhaNewsNetwork | Published : Jul 2, 2025 11:48 PMUpdated   : Jul 02 2025, 11:49 PM IST
2ಎಚ್‌ವಿಆರ್3-ಭುವನೇಶ್ವರ ಶಿಡ್ಲಾಪುರ  | Kannada Prabha

ಸಾರಾಂಶ

ಕೇಂದ್ರ ಸರ್ಕಾರ ಪ್ರಸಕ್ತ ಸಾಲಿನಲ್ಲಿ 10.5 ರಿಕವರಿಯ ಪ್ರತಿ ಟನ್ ಕಬ್ಬಿಗೆ ₹3550 ನಿಗದಿ ಮಾಡಿದೆ. ಕಳೆದ ವರ್ಷ ಟನ್‌ಗೆ ₹3400 ಇತ್ತು. ಈ ಬಾರಿ ಕೇಂದ್ರ ಸರ್ಕಾರ ₹150 ಹೆಚ್ಚಿಸಿದ್ದು, ಇದೀಗ ರಾಜ್ಯ ಸರ್ಕಾರ ಅದನ್ನು ಕಸಿಯಲು ಮುಂದಾಗಿದೆ.

ಹಾವೇರಿ: ರಾಜ್ಯ ಸರ್ಕಾರ ಸಕ್ಕರೆ ಕಾರ್ಖಾನೆಗಳ ಲಾಬಿಗೆ ಮಣಿದು ಪ್ರತಿ ಟನ್ ಕಬ್ಬು ಕಟಾವು ಮತ್ತು ಸಾಗಣೆ ವೆಚ್ಚ ಎಂದು ₹125 ನಿಗದಿ ಮಾಡಿರುವುದು ಸರಿಯಲ್ಲ. ಅದರ ಬದಲಾಗಿ ಕಬ್ಬು ಬೆಳೆದ ರೈತರಿಗೆ ಪ್ರೋತ್ಸಾಹಧನ ನೀಡಬೇಕು ಎಂದು ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಆಗ್ರಹಿಸಿದರು. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ಪ್ರಸಕ್ತ ಸಾಲಿನಲ್ಲಿ 10.5 ರಿಕವರಿಯ ಪ್ರತಿ ಟನ್ ಕಬ್ಬಿಗೆ ₹3550 ನಿಗದಿ ಮಾಡಿದೆ. ಕಳೆದ ವರ್ಷ ಟನ್‌ಗೆ ₹3400 ಇತ್ತು. ಈ ಬಾರಿ ಕೇಂದ್ರ ಸರ್ಕಾರ ₹150 ಹೆಚ್ಚಿಸಿದ್ದು, ಇದೀಗ ರಾಜ್ಯ ಸರ್ಕಾರ ಅದನ್ನು ಕಸಿಯಲು ಮುಂದಾಗಿದೆ.

ಇನ್ನು ಕಬ್ಬಿನ ಬೆಲೆ ನಿಗದಿ ಮಾನದಂಡದಲ್ಲಿ ಕೇವಲ ಕೇಂದ್ರಕ್ಕೆ ಮಾತ್ರ ಅಧಿಕಾರವಿದ್ದು, ರಾಜ್ಯ ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲ. ಒಂದು ವೇಳೆ ರಾಜ್ಯ ಸರ್ಕಾರ ಸಕ್ಕರೆ ಕಾರ್ಖಾನೆಗಳ ಲಾಬಿಗೆ ಮಣಿದು ಪ್ರತಿ ಟನ್ ಕಬ್ಬು ಕಟಾವು ಮತ್ತು ಸಾಗಣೆ ವೆಚ್ಚ ಎಂದು ₹125 ನಿಗದಿ ಮಾಡಿದ್ದೇ ಆದಲ್ಲಿ ಕಬ್ಬು ಬೆಳೆಗಾರರಿಗೆ ಪ್ರತಿ ಟನ್‌ಗೆ ₹500 ಪ್ರೋತ್ಸಾಹಧನ ನೀಡಬೇಕು. ಪ್ರಸ್ತುತ ಕೇಂದ್ರ ಸರ್ಕಾರ ನಿಗದಿ ಮಾಡಿರುವ ಎಫ್‌ಆರ್‌ಪಿ ದರ ₹3550 ಸಕ್ಕರೆ ಕಾರ್ಖಾನೆಗಳು ನೀಡಬೇಕು ಹಾಗೂ ಕಬ್ಬು ಕಟಾವು ಮತ್ತು ಸಾಗಣೆ ವೆಚ್ಚವನ್ನು ಸಕ್ಕರೆ ಕಾರ್ಖಾನೆಗಳೇ ಭರಿಸಬೇಕು ಎಂದು ಒತ್ತಾಯಿಸಿದರು.ಇನ್ನು ಕಬ್ಬಿನಲ್ಲಿ ಇರುವ ಸಕ್ಕರೆ ರಿಕವರಿಯ ಲ್ಯಾಬ್ ಬೆಳಗಾವಿಯಲ್ಲಿದೆ. ಅಲ್ಲಿ ರೈತರಿಗೆ ಪ್ರವೇಶವಿಲ್ಲ. ಇನ್ನು ಹಾವೇರಿ ಜಿಲ್ಲೆಯ ಸಂಗೂರಿನ ಜಿಎಂ ಸಕ್ಕರೆ ಕಾರ್ಖಾನೆ 9.48 ರಿಕವರಿ ನಿಗದಿ ಮಾಡಿದರೆ, ಕೋಣನಕೇರಿಯ ವಿಐಪಿಎನ್ 9.43 ರಿಕವರಿ ನಿಗದಿ ಮಾಡಿದೆ. ಒಂದೇ ಜಿಲ್ಲೆಯ ಎರಡು ಸಕ್ಕರೆ ಕಾರ್ಖಾನೆಗಳ ರಿಕವರಿ ವ್ಯತ್ಯಾಸ ಸಾಧ್ಯವೇ? ಅದರಿಂದ ರೈತರಿಗೆ ಪ್ರತಿ ಟನ್‌ಗೆ ₹106 ನಷ್ಟವಾಗುತ್ತಿದೆ. ಇದನ್ನು ಸರಿಪಡಿಸಲು ಜಿಲ್ಲಾ ಉಸ್ತುವಾರಿ ಹಾಗೂ ಸಕ್ಕರೆ ಸಚಿವರಾದ ಶಿವಾನಂದ ಪಾಟೀಲ ಮುಂದಾಗಬೇಕೆಂದು ಆಗ್ರಹಿಸಿದರು.ಈ ಹಿಂದೆ ಸಂಗೂರ ಸಕ್ಕರೆ ಕಾರ್ಖಾನೆ 10.5ರ ರಿಕವರಿ ಕೊಡುತ್ತಿದ್ದು, ಈಗ 9.5ಕ್ಕೆ ಇಳಿಕೆ ಮಾಡಿದ್ದಾರೆ. ಸಕ್ಕರೆ ಕಾರ್ಖಾನೆಗಳೇ ನೀಡಿದ ಬೀಜ ಬೆಳೆದು ಇಂಥ ಸ್ಥಿತಿಗೆ ರೈತರು ನಲುಗುತ್ತಿದ್ದಾರೆ. ಜಿಲ್ಲೆಗೆ ಉಸ್ತುವಾರಿ ಸಚಿವರಾದ ಶಿವಾನಂದ ಪಾಟೀಲ ಎರಡು ವರ್ಷ ಪೂರ್ಣಗೊಂಡರೂ ಒಂದು ಬಾರಿಯೂ ಸಕ್ಕರೆ ಕಾರ್ಖಾನೆಗೆ ಭೇಟಿ ನೀಡಿಲ್ಲ, ಕಬ್ಬು ಬೆಳೆಗಾರರ ಜತೆಗೆ ಚರ್ಚೆ ನಡೆಸಿಲ್ಲ. ಸಂಗೂರ ಸಕ್ಕರೆ ಕಾರ್ಖಾನೆ ಇದುವರೆಗೂ ರೈತರ ₹2.30 ಕೋಟಿ ಹಣ ಬಾಕಿ ಉಳಿಸಿಕೊಂಡಿದೆ. ಆದಾಗ್ಯೂ ಎಲ್ಲ ಸಕ್ಕರೆ ಕಾರ್ಖಾನೆಗಳು ಹಣ ಪಾವತಿಸಿವೆ ಎಂದು ಹೇಳಿಕೆ ನೀಡಿರುವುದು ಎಷ್ಟು ಸರಿ? ಸ್ವತಃ ಸಚಿವರೇ ತಮ್ಮ ಸಕ್ಕರೆ ಕಾರ್ಖಾನೆಯ ಬಾಕಿ ಉಳಿಸಿಕೊಂಡಿದ್ದಾರೆ ಎಂದು ದೂರಿದರು.ರೈತ ಮುಖಂಡರಾದ ರಾಜಶೇಖರ ಹಲಸೂರ, ಶಂಕ್ರಪ್ಪ ಸಂಕಣ್ಣನವರ, ರುದ್ರಪ್ಪ ಸಂಕಣ್ಣನವರ, ನಾಗಪ್ಪ ಸಂಕಣ್ಣನವರ ಇದ್ದರು.

PREV