ಬಂಕಾಪುರ(ಹಾವೇರಿ): ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಪ್ರತಿ ಟನ್‌ಗೆ ₹3,600 ದರ ನಿಗದಿಪಡಿಸುವಂತೆ ಆಗ್ರಹಿಸಿ ಕಬ್ಬು ಬೆಳೆಗಾರರ ಸಮನ್ವಯ ಸಮಿತಿ ನೇತೃತ್ವದಲ್ಲಿ ನೂರಾರು ರೈತರು ಬಂಕಾಪುರ ಟೋಲ್ ಬಳಿ ರಸ್ತೆ ಸಂಚಾರ ಬಂದ್ ಮಾಡಿ ಬುಧವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕಬ್ಬು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಚೂನ್ನಪ್ಪ ಪೂಜಾರಿ ಮಾತನಾಡಿ, ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಬ್ಬಿನ ದರ ಘೋಷಣೆಯಾಗಿದೆ. ಬೆಳಗಾವಿಯಲ್ಲಿ ಪ್ರತಿ ಟನ್‌ಗೆ ₹3,800 ದರ ನೀಡಲಾಗಿದೆ. ಬಾಗಲಕೋಟೆ, ವಿಜಯಪುರ ಹಾಗೂ ಕಲಬುರಗಿ ಭಾಗದ ರೈತರು ಹೋರಾಟದ ಮೂಲಕ ದರ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಹಾವೇರಿ ಜಿಲ್ಲೆಯ ಕಾರ್ಖಾನೆ ಮಾಲೀಕರಿಗೆ ಮಾತ್ರ ದರ ನೀಡಲು ಏನು ಸಮಸ್ಯೆ ಎಂದು ಪ್ರಶ್ನಿಸಿದರು.
ಇಲ್ಲಿಯ ಕಾರ್ಖಾನೆಗಳ ಮಾಲೀಕರು ಪಕ್ಕದ ಬೆಳಗಾವಿ ಭಾಗದಲ್ಲೇ ಇದ್ದರೂ ಅಲ್ಲಿನ ದರ ಮಾದರಿಯನ್ನು ಇಲ್ಲೇಕೆ ಅನುಸರಿಸುತ್ತಿಲ್ಲ? ಕಬ್ಬಿನ ರಿಕವರಿ ಪ್ರಮಾಣದ ಲೆಕ್ಕಾಚಾರದಲ್ಲೂ ರೈತರಿಗೆ ಅನ್ಯಾಯವಾಗುತ್ತಿದೆ. ಜಿಎಂ ಶುಗರ್ಸ್ ಸಕ್ಕರೆ ಕಾರ್ಖಾನೆ ಮಾಲೀಕರು ಮುಂದೆ ಬಂದು ರೈತರ ಪ್ರಶ್ನೆಗಳಿಗೆ ಉತ್ತರಿಸಬೇಕು. ಕಾರ್ಖಾನೆಗಳಿಗೆ ಕಬ್ಬು ಪೂರೈಸುವವರು ರೈತರು. ಹೀಗಾಗಿ ನ್ಯಾಯಯುತ ದರ ಕೇಳುವ ಹಕ್ಕು ರೈತರಿಗಿದೆ. ಮಾರುಕಟ್ಟೆಯಲ್ಲಿ ಸಕ್ಕರೆಯನ್ನು ಕೆಜಿಗೆ ₹55ರಂತೆ ಮಾರಾಟ ಮಾಡುತ್ತಿದ್ದರೂ ಕಬ್ಬು ಬೆಳೆಗಾರರಿಗೆ ಲಾಭದ ಪಾಲು ನೀಡಲು ಹಿಂದೇಟು ಹಾಕಲಾಗುತ್ತಿದೆ. ಸಕ್ಕರೆ ಬೆಲೆ ಏರಿಕೆಗೆ ಅನುಗುಣವಾಗಿ ರೈತರಿಗೂ ಲಾಭ ಹಂಚಿಕೆಯಾಗಬೇಕು. ರೈತರ ಸಮ್ಮುಖದಲ್ಲೇ ಕಾರ್ಖಾನೆ ಮಾಲೀಕರು ಸ್ಪಷ್ಟ ನಿರ್ಧಾರ ಪ್ರಕಟಿಸಬೇಕು ಎಂದು ಆಗ್ರಹಿಸಿದರು.ರೈತರ ಸಮಸ್ಯೆ ಪರಿಹರಿಸುವ ಜವಾಬ್ದಾರಿ ಮುಖ್ಯಮಂತ್ರಿಗಳ ಮೇಲಿದೆ. ಜಿಲ್ಲೆಯ ಆರು ಶಾಸಕರು ರೈತರ ಹೋರಾಟಕ್ಕೆ ಬೆಂಬಲವಾಗಿ ನಿಲ್ಲಬೇಕು. ಸಕ್ಕರೆ ಸಚಿವರು ರೈತರ ಸಮಸ್ಯೆ ಬಗೆಹರಿಸದಿದ್ದರೆ ಸಚಿವ ಸ್ಥಾನದಲ್ಲಿದ್ದು ಪ್ರಯೋಜನವೇನು? ಬಂಧನ, ಕೇಸ್, ನಿಷೇಧಾಜ್ಞೆಗಳಿಗೆ ರೈತ ಹೋರಾಟಗಾರರು ಹೆದರುವುದಿಲ್ಲ. ನ. 26ರೊಳಗೆ ಸಕ್ಕರೆಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕು. ಬೇಡಿಕೆ ಈಡೇರದಿದ್ದರೆ ರಾಜ್ಯದ 31 ಜಿಲ್ಲೆಗಳ ರೈತರ ಬೆಂಬಲದೊಂದಿಗೆ ಹೋರಾಟ ಮುಂದುವರಿಸಲಾಗುವುದು ಎಂದು ಎಚ್ಚರಿಸಿದರು.
ಸ್ಥಳಕ್ಕೆ ಬಂದ ಅಪರ ಜಿಲ್ಲಾಧಿಕಾರಿ ಡಾ. ಎಲ್. ನಾಗರಾಜ ಹಾಗೂ ಎಸ್‌ಪಿ ಯಶೋದಾ ವಂಟಗೋಡಿ ಸ್ಥಳಕ್ಕೆ ಭೇಟಿ ನೀಡಿ ರೈತರ ಮನವೊಲಿಸಲು ಪ್ರಯತ್ನಿಸಿದರು. ಆದರೆ, ಬೇಡಿಕೆ ಈಡೇರುವ ವರೆಗೂ ಧರಣಿ ಕೈಬಿಡುವುದಿಲ್ಲ ಎಂದು ರೈತರು ಪಟ್ಟು ಹಿಡಿದು ಅಹೋರಾತ್ರಿ ಧರಣಿ ನಡೆಸುವುದಾಗಿ ಘೋಷಿಸಿದರು. ಕಬ್ಬು ಬೆಳೆಗಾರರ ಸಮನ್ವಯ ಸಮಿತಿ ಮುಖಂಡರಾದ ಅಶೋಕರೆಡ್ಡಿ ಮರಚರಡ್ಡೇರ, ಭುವನೇಶ್ವರ ಶಿಡ್ಲಾಪುರ, ಮರಿಗೌಡ ಪಾಟೀಲ, ಶಿವಬಸಪ್ಪ ಗೋವಿ, ಮಾಲತೇಶ ಪೂಜಾರ, ಮಂಜುನಾಥ ಹೊಸಕೋಟಿ, ಹನುಮಂತಪ್ಪ ಹುಚ್ಚಣ್ಣನವರ, ಹನುಮಂತಪ್ಪ ದೀವಗಿಹಳ್ಳಿ ಸೇರಿ ನೂರಾರು ಕಬ್ಬು ಬೆಳೆಗಾರರು ಪಾಲ್ಗೊಂಡಿದ್ದರು.
ಮಧ್ಯಾಹ್ನ 1 ಗಂಟೆಯಿಂದ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ವಾಹನ ಸಂಚಾರ ತಡೆದಿದ್ದರಿಂದ ಪ್ರಯಾಣಿಕರು ಪರದಾಡಿದರು. ಪೊಲೀಸರು ಕೂಡಲೇ ಹೆದ್ದಾರಿ ವಾಹನಗಳಿಗೆ ಸವಣೂರು, ಬಂಕಾಪುರ ಮಾರ್ಗವಾಗಿ ಸಂಚರಿಸಲು ಮಾರ್ಗ ಬದಲಾವಣೆ ಮಾಡಿಕೊಟ್ಟರು. ಧರಣಿ ನಿರತ ರೈತರು ಹೆದ್ದಾರಿಯಲ್ಲಿಯೇ ಅಡುಗೆ ಮಾಡಿದರು. ಬಂದಿದ್ದ ಎಲ್ಲ ರೈತರಿಗೂ ಅಲ್ಲಿಯೇ ಊಟ ಬಡಿಸಿದರು.
ಕಬ್ಬಿನ ದರಕ್ಕಾಗಿ ರೈತರು ಸಕ್ಕರೆ ಸಚಿವ ರುದ್ರಪ್ಪ ಲಮಾಣಿ ಮನೆಗೆ ಮುತ್ತಿಗೆ ಹಾಕಿ ಧರಣಿ ನಡೆಸುವುದಾಗಿ ರೈತರು ಘೋಷಣೆ ಮಾಡುತ್ತಿದ್ದಂತೆ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿಗೊಳಿಸಿದೆ. ಪೊಲೀಸರು ಸಚಿವರ ಮನೆ ರಸ್ತೆಗೆ ಬ್ಯಾರಿಕೇಡ್ ಅವಳಡಿಸಿ ಯಾರೂ ಸಚಿವರ ಮನೆಗೆ ರಸ್ತೆಗೆ ಹೋಗದಂತೆ ನಿರ್ಬಂಧಿಸಿದರು. ಇದರಿಂದ ಸ್ಥಳೀಯ ನಿವಾಸಿಗಳು ಕಿರಿಕಿರಿ ಅನುಭವಿಸುವಂತಾಯಿತು.