ಮುಧೋಳದಲ್ಲಿನ ಕಬ್ಬು ಬೆಳೆಗಾರರ ಹೋರಾಟ ಅಂತ್ಯ

KannadaprabhaNewsNetwork |  
Published : Nov 15, 2025, 02:45 AM IST
ಪೊಟೋ ನ.14ಎಂಡಿಎಲ್ 1ಎ, 1ಬಿ. ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ರೈತ ಮುಖಂಡರ ಜೊತೆ ಸಂಧಾನ ಸಭೆ ನಡೆಸಿದರು, ಸಂಧಾನ ಸಭೆ ನಂತರ ಹೋರಾಟಗಾರ ಮುಖಂಡರು ಮಾಧ್ಯಮಗಳಿಗೆ ಮಾಹಿತಿ ನೀಡಿದರು. | Kannada Prabha

ಸಾರಾಂಶ

ರೈತ ಸಂಘ, ಹಸಿರು ಸೇನೆ ಹಾಗೂ ಕಬ್ಬು ಬೆಳೆಗಾರರ ಸಂಘದ ಆಶ್ರಯದಲ್ಲಿ ನಗರದ ಸಂಗೊಳ್ಳಿ ರಾಯಣ್ಣ ಸರ್ಕಲ್ ನಲ್ಲಿ ಪ್ರಸಕ್ತ ಸಾಲಿಗೆ ಪ್ರತಿ ಟನ್ ಕಬ್ಬಿಗೆ ₹3500 ಬೆಲೆ ನೀಡಬೇಕು ಮತ್ತು ರೈತರ ಬಾಕಿ ಹಣ ಉಳಸಿಕೊಂಡಿರುವುದನ್ನು ಕಾರ್ಖಾನೆಯವರು ಪೂರ್ಣ ಪ್ರಮಾಣದಲ್ಲಿ ಚುಕ್ತಾ ಮಾಡಬೇಕೆಂದು ಆಗ್ರಹಿಸಿ ನಡೆಸುತ್ತಿದ್ದ ಹೋರಾಟ ಶುಕ್ರವಾರ ಸಂಜೆ ಅಂತ್ಯಗೊಂಡಿದೆ.

ಕನ್ನಡಪ್ರಭ ವಾರ್ತೆ ಮುಧೋಳ

ರೈತ ಸಂಘ, ಹಸಿರು ಸೇನೆ ಹಾಗೂ ಕಬ್ಬು ಬೆಳೆಗಾರರ ಸಂಘದ ಆಶ್ರಯದಲ್ಲಿ ನಗರದ ಸಂಗೊಳ್ಳಿ ರಾಯಣ್ಣ ಸರ್ಕಲ್ ನಲ್ಲಿ ಪ್ರಸಕ್ತ ಸಾಲಿಗೆ ಪ್ರತಿ ಟನ್ ಕಬ್ಬಿಗೆ ₹3500 ಬೆಲೆ ನೀಡಬೇಕು ಮತ್ತು ರೈತರ ಬಾಕಿ ಹಣ ಉಳಸಿಕೊಂಡಿರುವುದನ್ನು ಕಾರ್ಖಾನೆಯವರು ಪೂರ್ಣ ಪ್ರಮಾಣದಲ್ಲಿ ಚುಕ್ತಾ ಮಾಡಬೇಕೆಂದು ಆಗ್ರಹಿಸಿ ನಡೆಸುತ್ತಿದ್ದ ಹೋರಾಟ ಶುಕ್ರವಾರ ಸಂಜೆ ಅಂತ್ಯಗೊಂಡಿದೆ. ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಅವರ ನೇತೃತ್ವದಲ್ಲಿ ಶುಕ್ರವಾರ ಮಧ್ಯಾಹ್ನ ಪಿಡಬ್ಲ್ಯುಡಿ ಪ್ರವಾಸಿ ಮಂದಿರದಲ್ಲಿ ಸಕ್ಕರೆ ಕಾರ್ಖಾನೆಗಳ ಮಾಲೀಕರ ಹಾಗೂ ಕಬ್ಬು ಹೋರಾಟಗಾರ ಮುಖಂಡರ ಜೊತೆ ಸಂಧಾನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಸಂಧಾನದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಪ್ರಸಕ್ತ ಹಂಗಾಮಿಗೆ ಪ್ರತಿ ಟನ್ ಕಬ್ಬಿಗೆ ಕಾರ್ಖಾನೆಯವರು ಮೊದಲನೇ ಕಂತಿನ ಬಿಲ್‌ ₹3200 ದರ ಕೊಡಬೇಕು, ಕಬ್ಬಿನ ರಿಕವರಿ ಆಧಾರದ ಮೇಲೆ ದರ ನೀಡದೆ ಏಕರೂಪ ಬೆಲೆ ಕೊಡಬೇಕು. ಎರಡನೇ ಕಂತಿನ ಬಿಲ್‌ ರಾಜ್ಯ ಸರ್ಕಾರ ಟನ್ ಗೆ ₹50 ಪ್ರೋತ್ಸಾಹ ಧನ ಹಾಗೂ ಕಾರ್ಖಾನೆಯವರು ₹50 ಕೊಡಬೇಕು ಎಂದು ಸಂಧಾನ ಸಭೆಯಲ್ಲಿ ನಿರ್ಣಯಿಸಲಾಯಿತು. ಇದಕ್ಕೆ ಕಾರ್ಖಾನೆ ಮಾಲೀಕರು ಮತ್ತು ರೈತ ಮುಖಂಡರು ಒಪ್ಪಿಗೆ ನೀಡಿದ್ದಾರೆಂದು ಹೇಳಿದ ಅವರು, ಮುಧೋಳ ನಿರಾಣಿ ಶುಗರ್ಸ್, ಸಮೀರವಾಡಿ ಗೋದಾವರಿ ಶುಗರ್ಸ್, ಉತ್ತೂರಿನ ಐಸಿಪಿಎಲ್ ಶುಗರ್ಸ್, ಸಿದ್ದಾಪುರದ ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆಗೆ ಮಾತ್ರ ಈ ನಿಯಮ ಅನ್ವಯವಾಗುತ್ತದೆ ಎಂದು ಸಚಿವರು ಸ್ಪಷ್ಟಪಡಿಸಿದರು.

ಈ ನಾಲ್ಕು ಕಾರ್ಖಾನೆಯವರು ರೈತರ ₹125 ಕೋಟಿ ಬಾಕಿ ಹಣ ಉಳಿಸಿಕೊಂಡಿದ್ದು, ಈ ಪೈಕಿ ಈಗಾಗಲೇ ₹100 ಕೋಟಿ ಬಾಕಿ ಹಣ ನೀಡಿದ್ದಾರೆ. ಉಳಿದ ₹25 ಕೋಟಿ ಹಣವನ್ನು ವಾರದೊಳಗೆ ನೀಡುವಾಗಿ ಕಾರ್ಖಾನೆ ಮಾಲೀಕರು ಒಪ್ಪಿಕೊಂಡಿದ್ದಾರೆ. ಎಚ್.ಎನ್.ಟಿ ಬಾಕಿ ಹಣ ಪೂರ್ಣ ಪ್ರಮಾಣದಲ್ಲಿ ಚುಕ್ತಾ ಆಗಿದೆ ಎಂದು ಮಾಹಿತಿ ನೀಡಿದರು.

ಈ ಹಿಂದೆ ಕಾಂಗ್ರೆಸ್ ಸರ್ಕಾರ ರೈತರಿಗೆ ಪ್ರತಿ ಟನ್ ಗೆ ₹350 ನೀಡಿದಂತೆ, ಪ್ರಸಕ್ತ ಸಾಲಿಗೆ ಪ್ರತಿ ಟನ್ ಗೆ ₹50 ನೀಡಲಿದೆ. ಹಿಗಾಗಿ ಕಾಂಗ್ರೆಸ್ ಸರ್ಕಾರ ಯಾವತ್ತೂ ರೈತಪರವಾಗಿದೆ ಎಂಬುದನ್ನು ಸಾಬೀತುಪಡಿಸಿದೆ. ಎಫ್.ಆರ್.ಪಿ ಹಾಗೂ ಕಬ್ಬಿನ ಉಪ ಉತ್ಪನ್ನಗಳ ಬೆಲೆ ನಿಗದಿ ಪಡಿಸುವುದು ಕೇಂದ್ರ ಸರ್ಕಾರ, ಕಬ್ಬಿಗೆ ಎಫ್.ಆರ್.ಪಿ ಬೆಲೆ ನಿಗದಿ ಸೇರಿದಂತೆ ಇತರೆ ಉಪ ಉತ್ಪನ್ನಗಳ ಬೆಲೆ ಕುರಿತು ಚರ್ಚಿಸಲು ಮುಖ್ಯಮಂತ್ರಿಗಳು ಪ್ರಧಾನಿಗೆ ಪತ್ರ ಬರೆದಿದ್ದಾರೆ, ಪ್ರಧಾನಿಗಳು ಅಹ್ವಾನ ನೀಡಿದ ತಕ್ಷಣ ದೆಹಲಿಗೆ ತೆರಳಿ ಕಬ್ಬಿಗೆ ವೈಜ್ಞಾನಿಕ ಬೆಲೆ ನೀಡುವ ಕುರಿತು ಚರ್ಚಿಸಲಿದ್ದಾರೆ ಎಂದು ಹೇಳಿದರು.

ಕಬ್ಬು ಹೋರಾಟಗಾರರ ಮಖಂಡರಾದ ಬಸವಂತಪ್ಪ ಕಾಂಬಳೆ, ಈರಪ್ಪ ಹಂಚಿನಾಳ, ಸುಭಾಷ ಶಿರಬೂರ, ದುಂಡಪ್ಪ ಯರಗಟ್ಟಿ, ಮುತ್ತಪ್ಪ ಕೋಮಾರ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ನೇತೃತ್ವದಲ್ಲಿ ನಡೆದ ಸಂಧಾನ ಸಭೆಯಲ್ಲಿ ಕಬ್ಬು ಬೆಳೆಗಾರರ ಪರವಾಗಿ ಒಪ್ಪಿಗೆ ಸೂಚಿಸಿದ್ದೇವೆ. ಶುಕ್ರವಾರದಿಂದಲೇ ರೈತರು ಕಬ್ಬು ಕಳಿಸಲು ತಿಳಿಸಿದ್ದೇವೆ. ಕಾರ್ಖಾನೆಯವರು ಕಬ್ಬು ನುರಿಸುವ ಕಾರ್ಯ ಆರಂಭಿಸಬೇಕೆಂದು ಹೇಳಿದ್ದೇವೆ. ಈ ಕುರಿತು ಕಾರ್ಖಾನೆಯವರು ಮುಚ್ಚಳಿಕೆ ಪತ್ರ ಬರೆದುಕೊಡಬೇಕೆಂದು ತಿಳಿಸಿದ್ದೇವೆ. ಕಬ್ಬು ಪೂರೈಸಿ 14 ದಿನದೊಳಗಾಗಿ ಕಬ್ಬಿನ ಬಿಲ್ ನೀಡುವಂತೆ ಒಪ್ಪಂದ ಮಾಡಿಕೊಂಡಿದ್ದೇವೆ. ಒಟ್ಟಾರೆ ಇದು ರೈತರ ಹೋರಾಟಕ್ಕೆ ಸಿಕ್ಕ ಜಯ ಎಂದು ಸಚಿವ ತಿಮ್ಮಾಪೂರ ತಿಳಿಸಿದರು. ಸಂಧಾನ ಸಭೆಯಲ್ಲಿ ಡಿಸಿ, ಎಸ್ಪಿ, ಸಿಇಓ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಹಿರಿಯ ಅಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ