ಮಹಾರಾಷ್ಟ್ರದಲ್ಲಿ ಕಬ್ಬಿಗೆ ರಾಜ್ಯಕ್ಕಿಂತಲೂ ₹600 ಹೆಚ್ಚು ಪಾವತಿ!

KannadaprabhaNewsNetwork |  
Published : Nov 07, 2026, 02:15 AM IST
ಕಬ್ಬು | Kannada Prabha

ಸಾರಾಂಶ

ಕಬ್ಬಿಗೆ ಬೆಲೆ ನಿಗದಿಗಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರದ ರೈತರು ನಡೆಸಿದ ಹೋರಾಟಗಳು ಒಂದೇ ಕಾಲಘಟ್ಟದಲ್ಲಿ ಎರಡು ವಿಭಿನ್ನ ಫಲಿತಾಂಶಕ್ಕೆ ಸಾಕ್ಷಿಯಾಗಿವೆ.

ಶ್ರೀಶೈಲ ಮಠದ

ಕನ್ನಡಪ್ರಭ ವಾರ್ತೆ ಬೆಳಗಾವಿ:

ಕಬ್ಬಿಗೆ ಬೆಲೆ ನಿಗದಿಗಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರದ ರೈತರು ನಡೆಸಿದ ಹೋರಾಟಗಳು ಒಂದೇ ಕಾಲಘಟ್ಟದಲ್ಲಿ ಎರಡು ವಿಭಿನ್ನ ಫಲಿತಾಂಶಕ್ಕೆ ಸಾಕ್ಷಿಯಾಗಿವೆ.

ಬೆಳಗಾವಿಯಲ್ಲಿ ಜಿಲ್ಲಾಡಳಿತ ರೂಪಿಸಿದ ಲಾಭಾಂಶ ಹಂಚಿಕೆ ಸೂತ್ರದಡಿ ಪ್ರತಿ ಟನ್ ಕಬ್ಬಿಗೆ ಆರಂಭಿಕ ₹3600 ದರ ನಿಗದಿಯಾಗಿದ್ದರೆ, ನೆರೆಯ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ರೈತರ ಸುದೀರ್ಘ ಹೋರಾಟದ ಬಳಿಕ ಪ್ರತಿ ಟನ್‌ ಕಬ್ಬಿಗೆ ₹4200 ದರಕ್ಕೆ ಕಾರ್ಖಾನೆಗಳು ಒಪ್ಪಿಗೆ ಸೂಚಿಸಿವೆ. ಕಳೆದ ಬಾರಿ ಮಹಾರಾಷ್ಟ್ರದಲ್ಲಿ ಟನ್‌ ಕಬ್ಬಿಗೆ ₹3,500-₹3,550 ದರ ನಿಗದಿಯಾಗಿತ್ತು. ಇದರಿಂದ ಎರಡೂ ರಾಜ್ಯಗಳ ಕಬ್ಬು ಬೆಳೆಗಾರರಿಗೆ ಸಿಗುವ ದರದ ನಡುವಿನ ಅಂತರ ಮತ್ತೆ ಚರ್ಚೆಗೆ ಗ್ರಾಸವಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಿಂದ ಕಬ್ಬಿನ ದರಕ್ಕಾಗಿ ನಡೆದ ಹೋರಾಟ ರಾಜ್ಯದ ಗಮನ ಸೆಳೆಯಿತು. ರಾಷ್ಟ್ರೀಯ ಹೆದ್ದಾರಿ ತಡೆ, ‘ಹುಬ್ಬಳ್ಳಿ ಚಲೋ’ ಪಾದಯಾತ್ರೆ, ಜೈಲ್ ಭರೋ ಸೇರಿದಂತೆ ವಿವಿಧ ಹಂತಗಳಲ್ಲಿ ರೈತರು ಪ್ರತಿಭಟನೆ ನಡೆಸಿ, ಪ್ರತಿ ಟನ್ ಕಬ್ಬಿಗೆ ₹5,500 ದರ ನಿಗದಿಪಡಿಸಬೇಕು. ಸಕ್ಕರೆಯ ಕನಿಷ್ಠ ಮಾರಾಟ ದರ ಹೆಚ್ಚಿಸಬೇಕು ಹಾಗೂ ರಾಜ್ಯ ಸಲಹಾ ಬೆಲೆ ಜಾರಿಗೊಳಿಸುವುದು ಸೇರಿ ಹಲವು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಇತ್ತೀಚೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಮಧ್ಯಸ್ಥಿಕೆಯಲ್ಲಿಯೂ ಹಲವು ಸುತ್ತಿನ ಮಾತುಕತೆ ನಡೆದರೂ ಪರಿಹಾರ ಸಾಧ್ಯವಾಗಿರಲಿಲ್ಲ.

ಕೊನೆಗೆ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರೈತ ಮುಖಂಡರು ಮತ್ತು ಸಕ್ಕರೆ ಕಾರ್ಖಾನೆಗಳ ಮಾಲೀಕರು ಒಮ್ಮತಕ್ಕೆ ಬಂದಿದ್ದಾರೆ. ಪ್ರಭಾರ ಜಿಲ್ಲಾಧಿಕಾರಿ ರಾಹುಲ್ ಶಿಂಧೆ ರೂಪಿಸಿದ ಲಾಭಾಂಶ ಹಂಚಿಕೆ ಸೂತ್ರದ ಪ್ರಕಾರ ಮೊದಲ ಕಂತಿನಲ್ಲಿ ₹3500 ಹಾಗೂ ಹಂಗಾಮು ಮುಕ್ತಾಯದ ಬಳಿಕ ಎರಡನೇ ಕಂತಿನಲ್ಲಿ ₹100 ಸೇರಿ ಒಟ್ಟು ₹3600 ಪಾವತಿಸಲು ನಿರ್ಧರಿಸಲಾಗಿದೆ. ನಂತರ, ಸಕ್ಕರೆಯ ಸರಾಸರಿ ಮಾರುಕಟ್ಟೆ ದರ ₹45 ಮೀರಿದರೆ ಅದರ ಆಧಾರದ ಮೇಲೆ ಹೆಚ್ಚುವರಿ ಹಣ ನೀಡುವುದು, ಸಕ್ಕರೆ ಮಾರಾಟದ ಸರಾಸರಿ ಲಾಭದಲ್ಲಿ ಶೇ.75ರಷ್ಟು ರೈತರಿಗೆ ಹಾಗೂ ಶೇ.25ರಷ್ಟು ಕಾರ್ಖಾನೆಗಳಿಗೆ ಹಂಚಿಕೆ ಮಾಡುವುದೇ ಈ ಸೂತ್ರದ ಪ್ರಮುಖ ಅಂಶ. ಸಕ್ಕರೆಯ ಸರಾಸರಿ ಮಾರಾಟ ದರ ₹50 ಇದ್ದರೆ ಪ್ರತಿ ಟನ್ ಕಬ್ಬಿಗೆ ಒಟ್ಟು ₹3790 ದೊರೆಯುವ ಲೆಕ್ಕಾಚಾರವನ್ನು ಜಿಲ್ಲಾಡಳಿತ ಮುಂದಿಟ್ಟಿದೆ. ಸಕ್ಕರೆ ದರ ಹೆಚ್ಚಾದಂತೆ ರೈತರ ಪಾಲಿನ ಹಣವೂ ಹೆಚ್ಚಾಗಲಿದೆ ಎಂಬುದು ಜಿಲ್ಲಾಡಳಿತದ ಸೂತ್ರ.

ಮಹಾದಲ್ಲಿ ರೈತರ ಹೋರಾಟಕ್ಕೆ ಮಣಿದ ಕಾರ್ಖಾನೆಗಳು:

ಇನ್ನೊಂದೆಡೆ, ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯಲ್ಲಿ ಪ್ರತಿ ಟನ್ ಕಬ್ಬಿಗೆ ₹4,500 ದರ ನೀಡಬೇಕೆಂದು ಆಗ್ರಹಿಸಿ ಸ್ವಾಭಿಮಾನಿ ರೈತ ಸಂಘಟನೆ ಕಿಣಿ ಟೋಲ್‌ಗೇಟ್ ಬಳಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆ ಹೋರಾಟ ಆರಂಭಿಸಿತ್ತು. ಸತತ 62 ಗಂಟೆಗಳ ಕಾಲ ನಡೆದ ಈ ಹೋರಾಟದಿಂದ ಹೆದ್ದಾರಿ ಬಂದ್‌ ಆಗಿ ಪ್ರಯಾಣಿಕರು, ವಾಹನ ಚಾಲಕರು, ಹಾಲು ಉತ್ಪಾದಕರು ಮತ್ತು ವ್ಯಾಪಾರಿಗಳು, ವಾಣಿಜ್ಯ ಸರಕು ಸಾಗಣೆಗೂ ಸಂಕಷ್ಟ ಎದುರಾಗಿತ್ತು. ಬಳಿಕ ಮಾಜಿ ಸಂಸದ ರಾಜು ಶೆಟ್ಟಿ ನೇತೃತ್ವದಲ್ಲಿ ನಡೆದ ಹೋರಾಟ ತೀವ್ರ ಸ್ವರೂಪ ಪಡೆಯಿತು. ಕೊಲ್ಲಾಪುರ, ಸಾಂಗ್ಲಿ ಮತ್ತು ಸಾತಾರಾ ಜಿಲ್ಲೆಗಳ ಬಂದ್‌ಗೆ ಕರೆ ನೀಡಿದ ಬೆನ್ನಲ್ಲೇ ಜಿಲ್ಲಾಡಳಿತ ಹಾಗೂ ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳು ಮಾತುಕತೆಗೆ ಮುಂದಾದರು. ಅಂತಿಮವಾಗಿ ಪ್ರತಿ ಟನ್ ಕಬ್ಬಿಗೆ ₹4200 ನೀಡುವ ಸಕ್ಕರೆ ಕಾರ್ಖಾನೆಗಳ ಮಾಲೀಕರ ಪ್ರಸ್ತಾವಕ್ಕೆ ಸಂಘಟನೆ ಒಪ್ಪಿಗೆ ಸೂಚಿಸಿದೆ.

ಕರ್ನಾಟಕ- ಮಹಾರಾಷ್ಟ್ರ ಗಡಿ ಭಾಗದಲ್ಲಿ ಕಬ್ಬಿನ ಇಳುವರಿ ಹೆಚ್ಚು ಕಡಿಮೆ ಒಂದೇ ಇದೆ. ಹಾಗಾಗಿ, ಉಭಯ ರಾಜ್ಯಗಳಲ್ಲಿನ ಕಬ್ಬಿನ ದರವೂ ಒಂದೇ ಆಗಬೇಕು. ಆದರೆ, ಇದೀಗ ದರದಲ್ಲಿ ವ್ಯತ್ಯಾಸವಾಗಿದೆ ಎನ್ನುತ್ತಾರೆ ಈ ಭಾಗದ ರೈತರು. ಪಕ್ಕದ ರಾಜ್ಯದಲ್ಲಿ ದೊರೆತ ₹4200 ದರದ ಹಿನ್ನೆಲೆಯಲ್ಲಿ ತಮಗೂ ತಮ್ಮ ಪಾಲಿನ ನ್ಯಾಯಯುತ ಬೆಲೆ ಸಿಗಬೇಕು ಎಂಬುದು ಕಬ್ಬು ಬೆಳೆಗಾರರ ವಾದವಾಗಿದೆ.ಕೋಟ್‌:

ನೆರೆಯ ಮಹಾರಾಷ್ಟ್ರದಲ್ಲಿ ಪ್ರತಿ ಟನ್ ಕಬ್ಬಿಗೆ ₹4200 ದರ ಘೋಷಿಸಲಾಗಿದೆ. ಆದರೆ, ಬೆಳಗಾವಿಯಲ್ಲಿ ₹3600 ದರ ನಿಗದಿಪಡಿಸಿರುವುದರಿಂದ ರೈತರಿಗೆ ನಿರೀಕ್ಷಿತ ನ್ಯಾಯ ಒದಗಿಸಿಲ್ಲ. ಪಕ್ಕದ ರಾಜ್ಯಕ್ಕೆ ಹೋಲಿಸಿದರೆ ಕರ್ನಾಟಕದ ದರ ಕಡಿಮೆಯಿದೆ. ಕೇಂದ್ರ ಸರ್ಕಾರದ ಎಫ್‌ಆರ್‌ಪಿ ಹಾಗೂ ರಾಜ್ಯದ ಸಲಹಾ ಬೆಲೆ (ಎಸ್‌ಎಪಿ) ಎರಡನ್ನೂ ಪರಿಗಣಿಸಿ ರೈತರಿಗೆ ನ್ಯಾಯ ಒದಗಿಸಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು.

- ಸುರೇಶ ಪರಗಣ್ಣವರ, ರೈತ ಮುಖಂಡ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಬ್ಬಿಗೆ ಸ್ಥಳೀಯ ರಿಕವರಿ ಆಧಾರದಲ್ಲಿ ನ್ಯಾಯಯುತ ಬೆಲೆ ನೀಡಲು ಆಗ್ರಹ
ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದರೆ ಸೂಕ್ತ ಕ್ರಮ