ಕಬ್ಬಿನ ಲಾರಿ ಪಲ್ಟಿ: ಚಾಲಕ ಪ್ರಾಣಪಾಯದಿಂದ ಪಾರು

KannadaprabhaNewsNetwork |  
Published : Oct 05, 2024, 01:32 AM IST
ಕಬ್ಬಿನ ಲಾರಿ ಪಲ್ಟಿ ಚಾಲಕ ಪ್ರಾಣಪಾಯದಿಂದ  ಪಾರು | Kannada Prabha

ಸಾರಾಂಶ

ಹನೂರು ತಾಲೂಕಿನ ನಾಲಾ ರೋಡ್ ಬಳಿ ಕಬ್ಬು ತುಂಬಿಕೊಂಡು ತಮಿಳುನಾಡಿಗೆ ಹೋಗುತ್ತಿದ್ದ ಲಾರಿ ಪಲ್ಟಿ ಹೊಡೆದು ಚಾಲಕ ಗಾಯಗೊಂಡಿರುವ ಘಟನೆ ನಡೆದಿದೆ.

ಕನ್ನಡಪ್ರಭ ವಾರ್ತೆ ಹನೂರು

ಕಬ್ಬು ತುಂಬಿಕೊಂಡು ತಮಿಳುನಾಡಿಗೆ ತೆರಳುತ್ತಿದ್ದ ಲಾರಿಯೊಂದು ರಾಮಪುರ ನಾಲಾ ರೋಡ್ ಮಾರ್ಗದಲ್ಲಿ ಪಲ್ಟಿ ಹೊಡೆದು ಚಾಲಕ ಗಂಭೀರವಾಗಿ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಜರುಗಿದೆ.

ಚಾಮರಾಜನಗರ ಜಿಲ್ಲೆಯ ತೆರಕಣಾಂಬಿ ಗ್ರಾಮದಿಂದ ಕಬ್ಬು ತುಂಬಿಕೊಂಡು ತಮಿಳುನಾಡಿನ ಸೇಲಂ ಜಿಲ್ಲೆಗೆ ತೆರಳುತ್ತಿದ್ದ ಲಾರಿಯೊಂದು ರಾಮಪುರ ಹಾಗೂ ನಾಲಾ ರೋಡ್ ಮಾರ್ಗ ಮಧ್ಯ ಬೆಳಗಿನ ಜಾವ 5.30ರಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಪಲ್ಟಿ ಹೊಡೆದಿದೆ. ಇದರ ಪರಿಣಾಮ ಕಬ್ಬು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದು, ಲಾರಿ ಚಾಲಕ ಗಂಭೀರವಾಗಿ ಗಾಯಗೊಂಡಿದ್ದರಿಂದ ಕಾಮಗೆರೆ ಹೋಲಿ ಕ್ರಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಗುಂಡಿಮಯವಾದ ರಸ್ತೆಯಿಂದ ಸರಣಿ ಅಪಘಾತಗಳು: ಈ ರಸ್ತೆಯಲ್ಲಿ ದಿನನಿತ್ಯ ನೂರಾರು ಸರಕು ತುಂಬಿದ ವಾಹನಗಳು ಸಂಚರಿಸುತ್ತಿರುವುದರಿಂದ ರಸ್ತೆಯು ಗುಂಡಿಮಯವಾಗಿ ವಾಹನ ಸವಾರರು ಗುಂಡಿಗಳು ಇರುವುದನ್ನು ತಿಳಿಯದೆ ಈ ಮಾರ್ಗದಲ್ಲಿ ಸಂಚರಿಸುವ ಸಂದರ್ಭದಲ್ಲಿ ಹಲವಾರು ಅಪಘಾತಗಳು ಸಂಭವಿಸುತ್ತಿವೆ. ಜೊತೆಗೆ ವಾಹನಗಳ ಬಿಡಿ ಭಾಗಗಳು ಸಹ ಹಾಳಾಗುತ್ತಿದ್ದು , ಖಾಸಗಿ ವಾಹನ ಸವಾರರೆ ಈ ರಸ್ತೆಯನ್ನು ಗುಂಡಿ ಮುಚ್ಚುವ ಕೆಲಸ ಮಾಡಿದ್ದರೂ ಸಹ ರಸ್ತೆ ದುರಸ್ತಿ ಪಡಿಸದೆ ಇರುವುದರಿಂದ ಪದೇ ಪದೇ ಈ ಮಾರ್ಗದಲ್ಲಿ ಹಲವಾರು ಸರಣಿ ಅಪಘಾತಗಳು ನಡೆಯುತ್ತಿವೆ.

ರಸ್ತೆ ದುರಸ್ತಿಗೆ ಒತ್ತಾಯ:

ಅಂತಾರಾಜ್ಯ ತಮಿಳುನಾಡಿಗೆ ಹೋಗಿ ಬರುವ ರಸ್ತೆ ಇದಾಗಿದ್ದು, ಕಳೆದ 15-20 ವರ್ಷಗಳಿಂದ ಈ ಮಾರ್ಗದ ರಸ್ತೆ ದುರಸ್ತಿ ಪಡಿಸದೆ ಇರುವುದರಿಂದ ದಿನನಿತ್ಯ ವಾಹನ ದಟ್ಟಣೆಯಿಂದ ಈ ಭಾಗದಲ್ಲಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆಯನ್ನು ದುರಸ್ತಿ ಪಡಿಸುವಂತೆ ವಾಹನ ಸವಾರರು ಸರ್ಕಾರ ಹಾಗೂ ಸಂಬಂಧಪಟ್ಟ ಜಿಲ್ಲಾಡಳಿತ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ಮತ್ತು ಇಲ್ಲಿನ ಜನಪ್ರತಿನಿಧಿಗಳನ್ನು ಸಹ ಅಂತಾರಾಜ್ಯ ರಸ್ತೆ ದುರಸ್ತಿ ಪಡಿಸುವಂತೆ ಜೊತೆಗೆ ದಿನನಿತ್ಯ ಆಗುತ್ತಿರುವ ಅಪಘಾತಗಳನ್ನು ತಪ್ಪಿಸುವಂತೆ ನಾಗರಿಕರು ಆಗ್ರಹಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು : ನಗರದ ವಿವಿಧೆಡೆ ನಾಳೆ ವಿದ್ಯುತ್ ವ್ಯತ್ಯಯ-ಎಲ್ಲೆಲ್ಲಿ ?
ಸಾಮಾಜಿಕ ಜಾಲತಾಣ ಮೇಲೆ ಕಣ್ಣಿಡಲು ಸರ್ಕಾರಿ ಸಾಫ್ಟ್‌ವೇರ್‌