ಕುಮಟಾ: ಭಾರತದಲ್ಲಿ ಹಿಂದೆ ಸ್ವಚ್ಛಂದವಾಗಿ ಓಡಾಡಿಕೊಂಡಿದ್ದ ಗೋವುಗಳಿಗೆ ಭವಿಷ್ಯದ ದಿನಗಳು ಗಂಭೀರವಾಗಲಿದೆ. ಗೋವುಗಳ ಉಳಿವಿನೊಂದಿಗೆ ಮನುಕುಲದ ಉಳಿವು ತಳಕು ಹಾಕಿಕೊಂಡಿದ್ದು, ಜನಜಾಗೃತಿ ಆಗಬೇಕಿದೆ. ಗೋ ಸಂಕುಲ ಉಳಿವಿಗೆ ಸಂಪೂರ್ಣ ಸನಾತನ ಸಮಾಜವೇ ಎದ್ದು ಪಣತೊಡಬೇಕಿದೆ ಎಂದು ಲಯನ್ಸ್ ಮಾಜಿ ಅಧ್ಯಕ್ಷ ದಾಮೋದರ ಭಟ್ ಹೇಳಿದರು.ತಾಲೂಕಿನ ಹೊಸಾಡದಲ್ಲಿರುವ ಅಮೃತಧಾರಾ ಗೋಬ್ಯಾಂಕಿನಲ್ಲಿ ಗುರುವಾರ ಸಂಜೆ ನಾಲ್ಕು ದಿನಗಳ ಆಲೆಮನೆ ಹಬ್ಬ ಮತ್ತು ಗೋಸಂಧ್ಯಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಭಾರತೀಯ ಕಿಸಾನ್ ಸಂಘದ ಗಣಪತಿ ಹೆಗಡೆ ಮಾತನಾಡಿ, ದೇಸೀ ಗೋತಳಿಗಳ ಸಂರಕ್ಷಣೆಯ ಮಹಾಕಾರ್ಯ ಇಲ್ಲಿ ನಡೆಯುತ್ತಿರುವುದು ಮತ್ತು ಅಲೆಮನೆ ಹಬ್ಬದ ಮೂಲಕ ಗೋ ಜಾಗೃತಿ ಉಂಟು ಮಾಡುತ್ತಿರುವುದು ಸ್ತುತ್ಯಾರ್ಹ ಕಾರ್ಯ ಎಂದರು.ಅಧ್ಯಕ್ಷತೆ ವಹಿಸಿದ್ದ ಗೋಶಾಲೆಯ ಅಧ್ಯಕ್ಷ ಮುರಳಿಧರ ಪ್ರಭು, ಅಲೆಮನೆ ಹಬ್ಬ ಹಾಗೂ ಗೋಸಂಧ್ಯಾ ಕಾರ್ಯಕ್ರಮವನ್ನು ಈ ವರ್ಷದಿಂದ ನಾಲ್ಕು ದಿನ ಆಚರಿಸಲಾಗುತ್ತಿದೆ. ಹೊಸ ಪರಿಕಲ್ಪನೆಗಳ ಮುಖಾಂತರ ಹೆಚ್ಚು ಜನರನ್ನು ತಲುಪುವ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ಗೋಸಂರಕ್ಷಣೆಗೆ ಎಲ್ಲರ ಸಹಕಾರ ಬೇಕು ಎಂದರು.
ಸಂಘದ ಮಾಜಿ ಅಧ್ಯಕ್ಷ ಸುಬ್ರಾಯ ಹೆಗಡೆ ಮಾಳ್ಕೋಡ್ ಮಾತನಾಡಿದರು.ಶ್ರೀರಾಮಚಂದ್ರಪುರ ಮಠದ ಮಹಾಮಂಡಲದ ಉಪಾಧ್ಯಕ್ಷ ಜಿ.ಎಸ್. ಹೆಗಡೆ, ಪ್ರಾಂತ ನಿರ್ದೇಶಕ ಎಸ್.ವಿ. ಹೆಗಡೆ ಭದ್ರನ್, ಗೋಶಾಲೆಯ ಉಪಾಧ್ಯಕ್ಷ ಆರ್.ಜಿ. ಭಟ್ ಬಗ್ಗೋಣ ವೇದಿಕೆಯಲ್ಲಿದ್ದರು. ಗೋಪ್ರೇಮಿ ಮಾತೆಯರ ಪ್ರತಿನಿಧಿಯಾಗಿ ಲಲಿತಾ ಹೆಬ್ಬಾರ್ ಅವರನ್ನು ಗೌರವಿಸಲಾಯಿತು.
ಖಜಾಂಚಿ ಸುಬ್ರಾಯ ಭಟ್ ಕೋಣಾರೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ಅರುಣ ಹೆಗಡೆ ಸ್ವಾಗತಿಸಿ, ನಿರೂಪಿಸಿದರು. ರಾಜಾರಾಮ ಭಟ್ ನಿರ್ವಹಿಸಿದರು.ಕಾರ್ಯಕ್ರಮದ ನಿಮಿತ್ತ ಲೋಕಕಲ್ಯಾಣಾರ್ಥವಾಗಿ ಮಾವಿನಕಟ್ಟೆಯ ಶ್ರೀಸುಧೀಂದ್ರ ವಿಷ್ಣುತೀರ್ಥ ಪ್ರಭುಪಾದರ ಉಪಸ್ಥಿತಿಯಲ್ಲಿ ಮುಂಬೈನ ಚಂದ್ರಶೇಖರ ಎಂ. ಭಟ್ ಅವರಿಂದ ಕಾಮಧೇನುಯಾಗ ಹಮ್ಮಿಕೊಳ್ಳಲಾಗಿತ್ತು.
ಆಲೆಮನೆ ಹಬ್ಬದಲ್ಲಿ ಕಬ್ಬಿನ ಗಾಣದ ಮೂಲಕ ಕಬ್ಬಿನ ಹಾಲಿನ ದೋಸೆ, ತಾಜಾ ಬೆಲ್ಲ, ಕೊಪ್ಪರಿಗೆ ಬಾಳೆದಿಂಡು-ಪಪ್ಪಾಯಿ, ತೊಡದೇವು ಇತ್ಯಾದಿಗಳನ್ನು ಜನರು ಮುಗಿಬಿದ್ದು ಸವಿದರು. ಇದಲ್ಲದೇ ಮಳಿಗೆಗಳಲ್ಲಿ ದೇಸಿ ತಿಂಡಿ ತಿನಿಸುಗಳು, ಪುಸ್ತಕ ಭಂಡಾರ, ದೇಸಿ ಗೋಜನ್ಯ ವಸ್ತುಗಳು ಖಾದಿ ಭಂಡಾರ ಮುಂತಾದವು ಆಲೆಮನೆ ಹಬ್ಬಕ್ಕೆ ಬಂದವರನ್ನು ವಿಶೇಷವಾಗಿ ಆಕರ್ಷಿಸಿತು.