ಕಬ್ಬಿಗೆ ₹5500 ಬೆಂಬಲ ಬೆಲೆ: ಡಿ.12ರಂದು ಬೆಳಗಾವಿ ಚಲೋ

KannadaprabhaNewsNetwork |  
Published : Nov 14, 2024, 12:46 AM IST
13ಕೆಡಿವಿಜಿ14-ದಾವಣಗೆರೆಯಲ್ಲಿ ಬುಧವಾರ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಎಲ್‌.ಭರತ್ ರಾಜ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಕಬ್ಬಿಗೆ ₹5,500 ಬೆಂಬಲ ಬೆಲೆ ನಿಗದಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಕಬ್ಬು ಬೆಳೆಗಾರರ ಸಂಘದಿಂದ ಡಿ.12ರಂದು ಬೆಳಗ್ಗೆ 11 ಗಂಟೆಗೆ ಬೆಳಗಾವಿ ಸುವರ್ಣ ಸೌಧ ಚಲೋ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಎಲ್. ಭರತ್ ರಾಜ್ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಹೆಚ್ಚುವರಿ ಕಟಾವು, ಸಾಗಣೆ ವೆಚ್ಚ ವಸೂಲು ವಿರುದ್ಧ ಕ್ರಿಮಿನಲ್ ಕೇಸ್‌ಗೆ ಭರತ್ ರಾಜ್ ಒತ್ತಾಯ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ಕಬ್ಬಿಗೆ ₹5,500 ಬೆಂಬಲ ಬೆಲೆ ನಿಗದಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಕಬ್ಬು ಬೆಳೆಗಾರರ ಸಂಘದಿಂದ ಡಿ.12ರಂದು ಬೆಳಗ್ಗೆ 11 ಗಂಟೆಗೆ ಬೆಳಗಾವಿ ಸುವರ್ಣ ಸೌಧ ಚಲೋ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಎಲ್. ಭರತ್ ರಾಜ್ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಕ್ಕರೆ ಕಾರ್ಖಾನೆಗಳು ಕಟಾವು ಮತ್ತು ಸಾಗಾಣಿಕೆ ವೆಚ್ಚವನ್ನು ನಿಯಮಕ್ಕೆ ವಿರುದ್ಧವಾಗಿ ಹೆಚ್ಚುವರಿ ಹಣ ಕಡಿತ ಮಾಡಿರುವುದನ್ನು ತಕ್ಷಣವೇ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡುವಂತೆಯೂ ಒತ್ತಾಯಿಸಲಾಗುವುದು ಎಂದರು.

ಕಟಾವು ಮತ್ತು ಸಾಗಣೆ ವೆಚ್ಚವನ್ನು ನಿಯಮಕ್ಕೆ ವಿರುದ್ಧವಾಗಿ ಹೆಚ್ಚುವರಿ ಪಡೆದ ಬಾಗಲಕೋಟೆ, ಹಳಿಯಾಳ, ರಾಮದುರ್ಗದ ಇಐಡಿ ಪ್ಯಾರಿ ಶುಗರ್ ಮತ್ತು ಅಫ್ಜಲ್‌ಪುರದ ರೇಣುಕಾ ಶುಗರ್, ಕೆಪಿಆರ್ ಶುಗರ್ ಕಾರ್ಖಾನೆಗಳಿಂದ ರೈತರಿಗೆ ಹಣ ವಾಪಸ್‌ ಕೊಡಿಸಬೇಕು. ಕಾರ್ಖಾನೆಗಳ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಬೇಕು. ಇತರೆ ಕಾರ್ಖಾನೆಗಳ ಬಗ್ಗೆ ಸಮಗ್ರ ತನಿಖೆ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕಬ್ಬು ಸರಬರಾಜು ಮಾಡಿದ 12 ತಿಂಗಳಿಗೆ ಕಟಾವು ಮಾಡಬೇಕು. ಹೆಚ್ಚುವರಿ ತಿಂಗಳುಗಳಾಗಿ ರೈತರಿಗೆ ಆಗುವ ನಷ್ಟವನ್ನು ಕಾರ್ಖಾನೆ ಮತ್ತು ಸರ್ಕಾರವೇ ಭರಿಸಬೇಕು. ಸಕ್ಕರೆ ಕಾರ್ಖಾನೆಗಳು ಪ್ರಾರಂಭವಾಗುವ ಮುನ್ನ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ಮಾಡಿ, ಆ ಭಾಗದ ರೈತರ ಕುಂದು ಕೊರತೆ ಮತ್ತು ಬೆಲೆ, ಕಟಾವು, ವೆಚ್ಚ ಇತರೆ ವಿಷಯಗಳ ಬಗ್ಗೆ ಸಮಗ್ರವಾಗಿ ಚರ್ಚಿಸಿದ ನಂತರವಷ್ಟೇ ಕಾರ್ಖಾನೆ ಆರಂಭಿಸಬೇಕು ಎಂದು ಅವರು ಹೇಳಿದರು.

ಕಟಾವು ಮಾಡುವಾಗ ಬೆಳೆಯ ಹಿರಿತನದ ಆಧಾರದಲ್ಲಿ ಕಟಾವು ಮಾಡಬೇಕು. ಯಾವುದೇ ಆಮಿಷ, ಶಿಫಾರಸುಗಳಿಗೆ ಒಳಗಾಗಬಾರದು. 10 ವರ್ಷಗಳಿಂದ ಸಕ್ಕರೆ ಕಾರ್ಖಾನೆಗಳು ಗಳಿಸಿದ ಲಾಭದ ಆದಾಯದ ಪಾಲಿನ ಪ್ರಕಾರ ರೈತರಿಗೆ ಬಾಕಿ ಹಣ ನೀಡಬೇಕು. ಕಬ್ಬು ನಿಯಂತ್ರಣ ಆದೇಶದ 1966 ಹಾಗೂ 5ಎ ಕಾಯ್ದೆ ಮತ್ತಷ್ಟು ಬಲಪಡಿಸಬೇಕು. ಕಾಯ್ದೆಯ ಅನುಸಾರ ಕಬ್ಬು ಬೆಳೆಗಾರರ ಹಕ್ಕುಗಳ ರಕ್ಷಣೆಗೆ ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಆಯುಕ್ತರು, ಜಿಲ್ಲಾಧಿಕಾರಿ ಪ್ರಾಮಾಣಿಕವಾಗಿ ಶ್ರಮಿಸಬೇಕು. ಶೇ.9.50 ಸಕ್ಕರೆ ಇಳುವರಿ ಆಧಾರದಲ್ಲಿ ಪ್ರತಿ ಟನ್ ಕಬ್ಬಿಗೆ ₹5,500 ಬೆಂಬಲ ಬೆಲೆ ನಿಗದಿ ಆಗಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ಕಬ್ಬು ಖರೀದಿ ಮತ್ತು ಸರಬರಾಜು ಅಧಿನಿಯಮ 2013ರ ಕಾಯ್ದೆ ರದ್ದುಪಡಿಸಿ, ಈ ಹಿಂದಿನ ಎಸ್ಎಪಿ ನಿಗದಿಪಡಿಸಬೇಕು. ರೈತವಿರೋಧಿ ಕಬ್ಬು ನಿಯಂತ್ರಣ ತಿದ್ದುಪಡಿ ಕರಡು ಆದೇಶ 2024ರ ಮಸೂದೆ ಕೇಂದ್ರ ಸರ್ಕಾರ ಹಿಂಪಡೆಬೇಕು. ರಾಜ್ಯ ಸರ್ಕಾರ 2022- 2023ನೇ ಸಾಲಿಗೆ ಪ್ರತಿ ಟನ್‌ಗೆ ₹150 ಎಸ್ಎಪಿ ನೀಡಲು ಆದೇಶಿಸಿದೆ. ಬಾಕಿ ಹಣ ರೈತರಿಗೆ ಶೀಘ್ರ ನೀಡಬೇಕು. ಹರಿಯಾಣ. ಪಂಜಾಬ್ ಮಾದರಿಯಲ್ಲಿ ಎಫ್ಆರ್‌ಪಿ ಜೊತೆ ಅಲ್ಲಿನ ಸರ್ಕಾರಗಳು ಪ್ರತಿ ಟನ್‌ಗೆ ₹90 ಎಸ್‌ಎಪಿ ನಿಗದಿಪಡಿಸಿದೆ. ಅದೇ ರೀತಿ ನಮ್ಮ ಸರ್ಕಾರವು ಕನಿಷ್ಠ ₹500 ರು.ಗಳ ಎಸ್‌ಎಪಿ ನಿಗದಿಪಡಿಸಲಿ ಎಂದು ಎನ್.ಎಲ್. ಭರತ್ ರಾಜ್ ಮನವಿ ಮಾಡಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಈ.ಶ್ರೀನಿವಾಸ, ಕಾರ್ಮಿಕ ಮುಖಂಡ ಕೆ.ಎಚ್. ಆನಂದರಾಜ, ಸಂಘದ ಮುಖಂಡ ಭರಮಪ್ಪ ಇದ್ದರು.

- - - -13ಕೆಡಿವಿಜಿ14:

ದಾವಣಗೆರೆಯಲ್ಲಿ ಬುಧವಾರ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಎಲ್‌. ಭರತ್ ರಾಜ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

49 ಕೋಟಿ ರು. ಲಾಟರಿ - ಹೆಣ್ಣುಮಗು ತಂದ ಅದೃಷ್ಟ !
ಬ್ರಹ್ಮಕಲಶೋತ್ಸವದಿಂದ ಧಾರ್ಮಿಕ ಪ್ರಜ್ಞೆ: ಹರಿನಾರಾಯಣ ದಾಸ ಆಸ್ರಣ್ಣ