ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಧರ್ಮಸ್ಥಳ ಗ್ರಾಮ ಕೇಸ್‌ನಲ್ಲಿ ಸಾಕಷ್ಟು ಸದ್ದು ಮಾಡಿದ್ದ ಸುಜಾತಾ ಭಟ್ ಅವರ ಮಗಳು ಅನನ್ಯಾ ಭಟ್ ನಾಪತ್ತೆ ಪ್ರಕರಣ ಬಹುತೇಕ ಸುಳ್ಳು ಅನ್ನೋದು ಸಾಬೀತಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಸುಳ್ಳಿಗೆ ಒಂದು ಸುಳ್ಳು ಪೋಣಿಸಿ ಹೇಳಿಕೆಗಳ ಮೇಲೆ ಹೇಳಿಕೆ ನೀಡಿದ್ದ ಸುಜಾತಾ ಭಟ್, ಈಗ ಜನರ ಎದುರು ಬೆತ್ತಲಾಗಿದ್ದಾರೆ.1. ಮೊದಲಿಗೆ, ನನ್ನ ಮಗಳು ಅನನ್ಯಾ ಭಟ್, ಆಕೆ ನಾಪತ್ತೆಯಾಗಿದ್ದಾಳೆ. ಆದರೆ, ಆಕೆಯ ಫೋಟೋ ಇಲ್ಲ ಎಂದಿದ್ದಳು. ಬಳಿಕ, ಒತ್ತಡ ಹೆಚ್ಚಿದಾಗ ‘ಇವಳೇ ನನ್ನ ಮಗಳು’ ಎಂದು ಫೋಟೋ ರಿಲೀಸ್ ಮಾಡಿದ್ದಳು. ಆದರೆ, ಆಕೆಗೆ ಮಗಳೇ ಇಲ್ಲ, ರಿಲೀಸ್ ಮಾಡಿದ ಫೋಟೋ, ಆಕೆಯ ಒಡನಾಟದಲ್ಲಿದ್ದ ರಂಗಪ್ರಸಾದ್ ಎಂಬುವರ ಸೊಸೆ ವಾಸಂತಿಯ ಫೋಟೋ ಎಂದು ತಿಳಿದು ಬಂತು.
2. ನನ್ನ ಮಗಳು ಮಣಿಪಾಲ್ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಓದುತ್ತಿದ್ದಳು ಎಂದಿದ್ದಳು ಸುಜಾತಾ. ಬಳಿಕ, ವ್ಯಾಸಂಗ ಮಾಡುತ್ತಿದ್ದ ಬಗ್ಗೆ ದಾಖಲೆ ಇಲ್ಲ, ಎಲ್ಲಾ ದಾಖಲೆಗಳನ್ನು ನಾಶ ಮಾಡಿದ್ದಾರೆ. ಸಿಇಟಿ ಪರೀಕ್ಷೆಯ ದಾಖಲೆಯೂ ಸುಟ್ಟುಹೋಗಿದೆ ಎಂದಿದ್ದಾಳೆ.3. ನನ್ನ ಮಗಳು ಅನನ್ಯಾ ಭಟ್, ಬೇಕಿದ್ದರೆ, ಜನ್ಮದಾಖಲೆ ತೋರಿಸುವೆ ಎಂದಿದ್ದ ಸುಜಾತಾ, ಬಳಿಕ, ದಾಖಲೆ ಕಳೆದುಹೋಗಿದೆ ಎಂದಿದ್ದಾಳೆ.
4. 2005ರ ತನಕ ನಾನು ಕೋಲ್ಕತ್ತಾದ್ದಲ್ಲಿದ್ದೆ, ಕೋಲ್ಕತಾ ಸಿಬಿಐ ಕಚೇರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಸ್ಟೆನೋಗ್ರಾಫರ್ ಆಗಿದ್ದೆ ಎಂದಿದ್ದಳು. ಬಳಿಕ, ಈ ಬಗ್ಗೆ ದಾಖಲೆ ಇಲ್ಲ, ನಿರ್ದಿಷ್ಟ ವರ್ಷ ಎಂದು ಎಲ್ಲಿಯೂ ಕೆಲಸ ಮಾಡಿಲ್ಲ. ಕರೆದಲ್ಲಿಗೆ ಹೋಗಿ ಕೆಲಸ ಮಾಡುತ್ತಿದ್ದೆ. ಕೋಲ್ಕತ್ತಾದಲ್ಲಿ ಕಾಯಂ ಆಗಿ ಇರಲಿಲ್ಲ, ರಿಪ್ಪನ್‌ಪೇಟೆಗೂ ಬಂದು ಹೋಗುತ್ತಿದ್ದೆ. 2003ರಲ್ಲಿ ಅಲ್ಲಿ ಪ್ರಭಾಕರ ಬಾಳಿಗ ಎಂಬವರೊಂದಿಗೆ ಇದ್ದಿದ್ದೆ ಎಂದಿದ್ದಾಳೆ. ಅಲ್ಲದೆ, ಆಕೆ ಓದಿದ್ದು ಕೇವಲ ಎಸ್‌ಎಸ್‌ಎಲ್‌ಸಿ ಎಂದು ತಿಳಿದು ಬಂದಿದೆ.5. ಧರ್ಮಸ್ಥಳ, ಜೈನರ ಕ್ಷೇತ್ರ. ಜೈನರದೆ ಪಾರುಪತ್ಯ, ಅವರೇ ಪೂಜೆ ಮಾಡ್ತಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದ ಸುಜಾತಾ ಭಟ್, ಬಳಿಕ, ಧರ್ಮಸ್ಥಳದ ಬಗ್ಗೆ ನನಗೆ ಗೌರವವಿದೆ. ಜೈನರು ಪೂಜೆ ಮಾಡುವುದಕ್ಕೆ ನನ್ನ ಆಕ್ಷೇಪವಿಲ್ಲ. ಆ ಬಗ್ಗೆ ನಾನು ತಕರಾರು ಎತ್ತಿಲ್ಲ ಎಂದಿದ್ದಳು.
6. ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂತಿದ್ದನ್ನು ನಾನೂ ನೋಡಿದ್ದೇನೆ. ಗಿರೀಶ್ ಮಟ್ಟಣ್ಣವನರ್, ಮಹೇಶ್ ಶೆಟ್ಟಿ ತಿಮರೋಡಿ ಮಾಡುತ್ತಿರುವ ಆರೋಪಗಳು ಸತ್ಯ ಎಂದಿದ್ದ ಸುಜಾತಾ, ಈಗ ಗಿರೀಶ್ ಮಟ್ಟಣ್ಣವನರ್, ತಿಮರೋಡಿಗೂ ನನಗೂ ಸಂಬಂಧವಿಲ್ಲ. ಅವರ ಆರೋಪಗಳನ್ನು ಸಮರ್ಥಿಸಿಕೊಳ್ಳಲು ಹೋಗಲ್ಲ. ನನ್ನ ಮಗಳ ನಾಪತ್ತೆ ಬಗ್ಗೆ ಮಾತ್ರ ಮಾತನಾಡಿದ್ದೇನೆ ಎಂದು ಸುಳ್ಳು ಹೇಳುತ್ತಿದ್ದಾಳೆ.7. ಆರಂಭದಲ್ಲಿ ಆಕೆ, ನಾನು ಊರು ಬಿಟ್ಟು ಎಲ್ಲೆಲ್ಲೋ ಹೋಗಿ ಕಷ್ಟಪಡಬೇಕಾಯಿತು ಎಂದು ಗೋಳಿಟ್ಟಿದ್ದಳು. ಆದರೆ, 2005ರ ತನಕ ಈಕೆ ಪ್ರಭಾಕರ್ ಬಾಳಿಗ ಅನ್ನುವವರ ಜತೆ ಶಿವಮೊಗ್ಗದ ರಿಪ್ಪನ್‌ಪೇಟೆಯಲ್ಲಿ ಇದ್ದಿದ್ದಕ್ಕೆ ದಾಖಲೆಗಳಿವೆ. 2005ರ ನಂತರ ಈಕೆ ಬೆಂಗಳೂರಿಗೆ ಬಂದಿದ್ದು, ಅಲ್ಲಿ ರಂಗಪ್ರಸಾದ್ ಎಂಬುವರ ಜತೆ ಲಿವಿಂಗ್ ಇನ್ ರಿಲೇಶನ್‌ಷಿಪ್ ನಲ್ಲಿ ಇದ್ದದ್ದು ಸತ್ಯ ಎಂದು ದಾಖಲೆಗಳು ಹೇಳುತ್ತಿವೆ.‘ಅರ್ಬನ್ ನಕ್ಸಲ್’ ಪಟ್ಟಿಯ ನಿಗಾದಲ್ಲಿದ್ದ ಸುಜಾತ ಭಟ್
ಸುಜಾತ ಭಟ್ ಅವರು ನಕ್ಸಲ್ ಚಳವಳಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದನ್ನು 2013ರಲ್ಲೇ ನಕ್ಸಲ್ ವಿರೋಧಿ ಪಡೆ (ಎಎನ್‌ಎಫ್) ಪತ್ತೆ ಮಾಡಿತ್ತು ಎಂಬ ಸಂಗತಿ ತಿಳಿದು ಬಂದಿದೆ. ಸುಜಾತ ಭಟ್ ಅವರ ಹೆಸರು ‘ಅರ್ಬನ್ ನಕ್ಸಲ್’ ಪಟ್ಟಿಯಲ್ಲಿ ಇದ್ದುದರಿಂದ ಅವರ ಚಲನವಲನಗಳ ಬಗ್ಗೆ ಆಗಲೇ ಒಂದೆರಡು ವರ್ಷಗಳವರೆಗೆ ಎಎನ್‌ಎಫ್ ಹದ್ದಿನ ಕಣ್ಣು ಇರಿಸಿತ್ತು ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.2013ರಲ್ಲಿ ಕುತ್ಲೂರಿನ ಸಾಮಾಜಿಕ ಕಾರ್ಯಕರ್ತ ರಾಮಚಂದ್ರ ಭಟ್ ಅವರ ಮನೆಗೆ ನಕ್ಸಲರು ನುಗ್ಗಿ ವಾಹನಗಳಿಗೆ ಬೆಂಕಿ ಹಚ್ಚಿದ ಘಟನೆ ನಡೆದಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ರಾಮಚಂದ್ರ ಭಟ್, ಅಂದಿನ ದಿನಗಳಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನದಲ್ಲಿ ಒಕ್ಕಲೆಬ್ಬಿಸುವ ಪ್ರಕ್ರಿಯೆ ವೇಳೆ ಮುಂಡಗಾರಿನಲ್ಲಿ ಇಬ್ಬರು ಮಹಿಳೆಯರ ಪೈಕಿ ಸುಜಾತ ಭಟ್ ಅವ್ರನ್ನೇ ಹೋಲುವ ಮಹಿಳೆಯನ್ನು ನೋಡಿದ್ದೆ. ಈ ಮಹಿಳೆಯರು ಒಕ್ಕಲೆಬ್ಬಿಸುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದರು. ಮಾವೋವಾದಿ ಸಿದ್ಧಾಂತವನ್ನು ಬೆಂಬಲಿಸುವ ಗುಂಪುಗಳಲ್ಲಿ ಸುಜಾತ ಅವರನ್ನೇ ಹೋಲುವ ಮಹಿಳೆಯನ್ನು ನೋಡಿದ್ದಾಗಿ ತಿಳಿಸಿದ್ದಾರೆ.
ಸುಜಾತಾ ಭಟ್ ತೋರಿಸಿದ ಫೋಟೋ ನನ್ನ ತಂಗಿಯದು: ಸಹೋದರ ವಿಜಯ್‌ನನ್ನ ತಂಗಿಯ ಫೋಟೋವನ್ನು ಇಟ್ಟುಕೊಂಡು ಸುಜಾತಾ ಭಟ್ ತನ್ನ ಮಗಳು ಅನನ್ಯಾ ಭಟ್ ಎಂದು ಹೇಳಿಕೊಳ್ಳುತ್ತಿದ್ದಾಳೆ. ಈಗ ಎಸ್‌ಐಟಿಯವರು ತನಿಖೆ ನಡೆಸುತ್ತಿದ್ದಾರೆ. ಮುಂದೆ ಕುಟುಂಬದರ ಜೊತೆ ಚರ್ಚಿಸಿ ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ವಾಸಂತಿ ಸಹೋದರ ವಿಜಯ್ ಹೇಳಿದ್ದಾರೆ.ಸುದ್ದಿಗಾರರ ಜೊತೆ ಮಾತನಾಡಿ, ನನ್ನ ತಂಗಿಯ ಫೋಟೋವನ್ನು ದುರ್ಬಳಕೆ ಮಾಡಲಾಗುತ್ತಿದೆ. ವಾಸಂತಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದವಳಲ್ಲ. ಆಕೆ ಕೊಡವ ಸಮಾಜಕ್ಕೆ ಸೇರಿದವಳು. ನನ್ನ ತಂಗಿಯ ಫೋಟೋ ನೋಡಿ ನಾವು ಆಘಾತಗೊಂಡಿದ್ದೇವೆ ಎಂದು ತಿಳಿಸಿದರು. ‘ನನ್ನ ಸಹೋದರಿ ವಾಸಂತಿ 2007ರಲ್ಲಿ ಮೃತರಾಗಿದ್ದಾರೆ. ಆಕೆ ಶ್ರೀವತ್ಸ ಭಟ್ ಎಂಬುವರನ್ನು ಪ್ರೀತಿಸಿ ವಿವಾಹವಾಗಿದ್ದರು. ಶ್ರೀವತ್ಸ ಭಟ್‌ಗೂ, ಸುಜಾತಾ ಭಟ್‌ಗೂ ಏನು ಸಂಬಂಧ ಎಂಬುದು ಗೊತ್ತಿಲ್ಲ? ಈ ಪ್ರಕರಣದಲ್ಲಿ ನನ್ನ ಸಹೋದರಿಯನ್ನು ಎಳೆದು ತಂದಿದ್ದು, ನನಗೆ ಬೇಸರ ತಂದಿದೆ. ವಾಸಂತಿಯ ಶವ 2007ರಲ್ಲಿ ಹೊಳೆಯಲ್ಲಿ ಪತ್ತೆಯಾಗಿತ್ತು, ಈ ಬಗ್ಗೆ ಸಿಐಡಿ ತನಿಖೆ ನಡೆದು ಅದು ಆತ್ಮಹತ್ಯೆ ಎಂದು ವರದಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ.ಧರ್ಮಸ್ಥಳ ಅವಹೇಳನ ಖಂಡಿಸಿ ಬಂಟ್ವಾಳದಲ್ಲಿ ಜನಾಗ್ರಹ ಸಭೆ:ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮ ರಕ್ಷಣಾ ವೇದಿಕೆ ಬಂಟ್ವಾಳ ತಾಲೂಕು ವತಿಯಿಂದ ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ವಿರುದ್ಧದ ಅವಹೇಳನ ಖಂಡಿಸಿ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದ ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ಜನಾಗ್ರಹ ಸಮಾವೇಶ ನಡೆಯಿತು. ಕಣಿಯೂರು ಕ್ಷೇತ್ರದ ಮಹಾಬಲ ಸ್ವಾಮೀಜಿ ಉಪಸ್ಥಿತಿಯಲ್ಲಿ ಬುಧವಾರ ನಡೆದ ಸಮಾವೇಶದಲ್ಲಿ ಮಾಜಿ ಶಾಸಕ ಎ.ರುಕ್ಮಯ ಪೂಜಾರಿ ಮಾತನಾಡಿ, ಸೌಜನ್ಯ ಸಾವಿಗೆ ನ್ಯಾಯ ಸಿಗಬೇಕು. ತಪ್ಪಿತಸ್ಥರಿಗೆ ಕಾನೂನಡಿ ಶಿಕ್ಷೆಯಾಗಬೇಕು. ಆದರೆ, ಸೌಜನ್ಯ ಹೆಸರಿನಲ್ಲಿ ಧರ್ಮಸ್ಥಳದ ವಿರುದ್ಧ ನಡೆಯುವ ಷಡ್ಯಂತ್ರದ ಆರೋಪಿಗಳಿಗೆ ಕೂಡ ಶಿಕ್ಷೆಯಾಗಬೇಕು. ಧರ್ಮಸ್ಥಳದ ಯೋಜನೆಗಳಿಂದ ರಾಜ್ಯದಲ್ಲಿ ಸಾಕಷ್ಟು ಮಂದಿ ಸ್ವಾವಲಂಬಿ ಬದುಕು ರೂಪಿಸಿಕೊಂಡಿದ್ದಾರೆ ಎಂದರು.ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಮಾತನಾಡಿ, ಎಸ್‌ಐಟಿ ತಂಡದವರು ದಾರಿ ತಪ್ಪದೆ ಕ್ಷೇತ್ರಕ್ಕೆ ಕಳಂಕ ಬರದ ರೀತಿಯಲ್ಲಿ ತನಿಖೆ ನಡೆಸಲಿ ಎಂದು ಆಗ್ರಹಿಸಿದರು. ಬಳಿಕ ತಹಸೀಲ್ದಾರ್ ಕಚೇರಿಗೆ ಭೇಟಿ ನೀಡಿ ಮನವಿ ಸಲ್ಲಿಸಲಾಯಿತು.ಬೆಳ್ತಂಗಡಿ ಠಾಣೆಗೆ ತಿಮರೋಡಿ, ಗಿರೀಶ್ ಮಟ್ಟಣ್ಣನವರ್ ಹಾಜರುಧರ್ಮಸ್ಥಳ ಗ್ರಾಮದಲ್ಲಿ ಶವಗಳ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಉಜಿರೆ ಖಾಸಗಿ ಆಸ್ಪತ್ರೆ ಮುಂಭಾಗ ನಡೆದ ಘರ್ಷಣೆ ಕುರಿತು ದಾಖಲಾದ ಬುಧವಾರ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಗಿರೀಶ್ ಮಟ್ಟಣ್ಣನವರ್ ಬೆಳ್ತಂಗಡಿ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದಾರೆ.ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಅಪರಾಧ ಸಂಖ್ಯೆ 76/77/79/2025 ಪ್ರಕರಣಕ್ಕೆ ಸಂಬಂಧಿಸಿದಂತೆ ಮಹೇಶ್ ಶೆಟ್ಟಿ ತಿಮರೋಡಿ ಸೇರಿದಂತೆ 16 ಮಂದಿಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಜಾರಿ ಮಾಡಲಾಗಿತ್ತು. ನೋಟಿಸ್ ಬೆನ್ನಲ್ಲೇ ಸಂಜೆ 5 ಗಂಟೆಗೆ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣಣವರ್, ಜಯಂತ್.ಟಿ ವೆಂಕಪ್ಪ ಕೋಟ್ಯಾನ್, ಶ್ರೀನಿವಾಸ್ ಗೌಡ, ಮೋಹನ್ ಶೆಟ್ಟಿ , ತನುಷ್ ಶೆಟ್ಟಿ, ಪ್ರಮೋದ್ ಶೆಟ್ಟಿ, ಗಣೇಶ್ ಶೆಟ್ಟಿ, ರಾಜೇಶ್ ಭಟ್ ಸೇರಿದಂತೆ 16 ಮಂದಿ ಬೆಳ್ತಂಗಡಿ ಠಾಣೆಯ ಇನ್‌ಸ್ಪೆಕ್ಟರ್ ಸುಬ್ಬಾಪುರ್ ಮಠ್ ಅವರ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.ಆಸ್ಪತ್ರೆ ಮುಂಭಾಗ ಅಕ್ರಮ ಕೂಟ, ಖಾಸಗಿ ಸುದ್ದಿ ವಾಹಿನಿ ವರದಿಗಾರನ ಮೇಲೆ ಹಲ್ಲೆ ಹಾಗೂ ಮಾಧ್ಯಮದಲ್ಲಿ ಅವಹೇಳನಕಾರಿ ಹೇಳಿಕೆ ಹೀಗೆ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಮೂರು ಪ್ರಕರಣಗಳು ದಾಖಲಾಗಿವೆ.ಯೂಟ್ಯೂಬರ್ ಸಮೀರ್ ವಿರುದ್ಧ ಬೆಂಗ್ಳೂರಲ್ಲಿ ಕೇಸ್ಸಾಮಾಜಿಕ ಜಾಲತಾಣಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ಬಳಸಿಕೊಂಡು ಧರ್ಮಸ್ಥಳ ಗ್ರಾಮದ ಕುರಿತು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಯೂಟ್ಯೂಬರ್ ಸಮೀರ್ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಬಜರಂಗದ ದಳದ ಮಾಜಿ ಬೆಂಗಳೂರು ನಗರ ಸಂಚಾಲಕ ತೇಜಸ್ ಗೌಡ ದೂರು ನೀಡಿದ್ದಾರೆ.ಹಿಂದೂ ಧರ್ಮದ ಪವಿತ್ರ ಕ್ಷೇತ್ರವಾದ ಧರ್ಮಸ್ಥಳದ ಬಗ್ಗೆ ಯೂಟ್ಯೂಬ್‌ನಲ್ಲಿ ವಿಡಿಯೋ ಮಾಡಿ ಸಮೀರ್ ಅಪಮಾನಕಾರಿ ಸುದ್ದಿ ಪ್ರಕಟಿಸಿದ್ದಾನೆ. ಈತನಿಂದ ಧರ್ಮ ಧರ್ಮಗಳ ನಡುವೆ ದ್ವೇಷ ಮೂಡುವಂತಾಗಿದೆ. ಇದಕ್ಕಾಗಿ ಎಐ ತಂತ್ರಜ್ಞಾನ ಬಳಸಿಕೊಂಡು ನಕಲಿ ವಿಡಿಯೋಗಳನ್ನು ಆತ ಸೃಷ್ಟಿಸಿದ್ದಾನೆ ಎಂದು ತೇಜಸ್ ಆರೋಪಿಸಿದ್ದಾರೆ.