ಸಿದ್ದರಾಮಯ್ಯ ಅಲ್ಲ ಸುಳ್ಳಿನರಾಮಯ್ಯ: ಈಶ್ವರಪ್ಪ

KannadaprabhaNewsNetwork | Updated : Nov 08 2023, 01:01 AM IST

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳ್ಳು ಆಶ್ವಾಸನೆ ಕೊಡುತ್ತಾ ಅಧಿಕಾರಕ್ಕೆ ಬಂದಿದ್ದಾರೆ. ಅವರನ್ನು ಸಿದ್ದರಾಮಯ್ಯ ಎನ್ನುವ ಬದಲಿಗೆ ಸುಳ್ಳಿನರಾಮಯ್ಯ ಎಂದರೆ ತಪ್ಪಾಗಲಾರದು ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ವ್ಯಂಗ್ಯವಾಡಿದರು.

ಕನ್ನಡಪ್ರಭ ವಾರ್ತೆ ಕುಷ್ಟಗಿಮುಖ್ಯಮಂತ್ರಿ ಸಿದ್ದರಾಮಯ್ಯ ಸುಳ್ಳು ಆಶ್ವಾಸನೆ ಕೊಡುತ್ತಾ ಅಧಿಕಾರಕ್ಕೆ ಬಂದಿದ್ದಾರೆ. ಅವರನ್ನು ಸಿದ್ದರಾಮಯ್ಯ ಎನ್ನುವ ಬದಲಿಗೆ ಸುಳ್ಳಿನರಾಮಯ್ಯ ಎಂದರೆ ತಪ್ಪಾಗಲಾರದು ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ವ್ಯಂಗ್ಯವಾಡಿದರು.ತಾಲೂಕಿಗೆ ಬರ ಅಧ್ಯಯನಕ್ಕಾಗಿ ಬಂದ ಸಂದರ್ಭದಲ್ಲಿ ಪಟ್ಟಣದ ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ಸಿಗರು ರಾಜ್ಯವನ್ನು ಲೂಟಿ ಮಾಡಲು ಬಂದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.ವಿಧಾನಸಭೆ ಚುನಾವಣೆಗೆ ಟಿಕೆಟ್ ಕೊಡಲ್ಲ ಎಂದ ತಕ್ಷಣ ಪಕ್ಷದ ತೀರ್ಮಾನಕ್ಕೆ ತಲೆಬಾಗಿ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ. ಆದರೆ ಸಿದ್ದರಾಮಯ್ಯ ಅಧಿಕಾರಕ್ಕಾಗಿ ಮಂಗನಂತೆ ಗಿಡದಿಂದ ಗಿಡಕ್ಕೆ (ಪಕ್ಷದಿಂದ ಮತ್ತೊಂದು ಪಕ್ಷಕ್ಕೆ) ಜಿಗಿಯುವ ಕೆಲಸ ಮಾಡುತ್ತಾರೆ. ನಾನು ಅಧಿಕಾರ ಸಿಗದೇ ಇದ್ದರೂ ನಮ್ಮ ಪಕ್ಷದಲ್ಲಿ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದೇನೆ. ನನ್ನ ಬಗ್ಗೆ ಮಾತನಾಡುವುದಕ್ಕೆ ಅವರಿಗೆ ನೈತಿಕತೆ ಇಲ್ಲ ಎಂದರು.ಕಾಂಗ್ರೆಸ್ಸಲ್ಲಿ ಕಲಹ ಶುರುವಾಗಿದೆ. ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳು ಬಹಳಷ್ಟು ಹುಟ್ಟಿಕೊಂಡಿದ್ದಾರೆ. ಈ ಸರ್ಕಾರ ಬಹಳಷ್ಟು ದಿನ ಉಳಿಯುವುದಿಲ್ಲ ಎಂದು ಭವಿಷ್ಯ ನುಡಿದರು.ಪ್ರಿಯಾಂಕ ಖರ್ಗೆ ಕೂಡ ಮುಖ್ಯಮಂತ್ರಿ ಸ್ಥಾನಕ್ಕೆ ಆಸೆ ಪಡುತ್ತಿದ್ದಾರೆ. ಅವರು ಇನ್ನೂ ಬಚ್ಚಾ. ಅವರಪ್ಪನಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಡದ ಇವರು, ಈತನಿಗೆ ಹೇಗೆ ಬಿಟ್ಟು ಕೊಡ್ತಾರೆ? ಎಂದು ವ್ಯಂಗ್ಯವಾಡಿದರು.ಕೆಲವು ದಿನಗಳ ಹಿಂದಷ್ಟೇ ರಣದೀಪಸಿಂಗ್‌ ಸುರ್ಜೆವಾಲಾ, ಕೆ.ಸಿ. ವೇಣುಗೋಪಾಲ್ ಬಂದು ಸರ್ಕಾರದ ಬಗ್ಗೆ ಯಾರೂ ಇಲ್ಲಸಲ್ಲದ ಹೇಳಿಕೆ ಕೊಡಬಾರದು ಎಂದು ಹೇಳಿ ಹೋದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು "ನಾನೇ ಐದು ವರ್ಷ ಸಿಎಂ " ಎಂದು ಹೇಳಿಕೆ ಕೊಟ್ಟಿದ್ದಾರೆ. ಈಗ ಯಾರಿಗೆ ನೋಟಿಸ್ ಕೊಡಬೇಕು? ಎಂದು ಪ್ರಶ್ನಿಸಿದರು.ಡಿಸಿಎಂ ಡಿ.ಕೆ. ಶಿವಕುಮಾರ ಹೆಸರಿನಲ್ಲಿ ವಸೂಲಿ ಮಾಡುತ್ತಿದ್ದಾರೆ ಎಂದು ಇತ್ತೀಚೆಗೆ ಕೆಂಪಣ್ಣ ನೇರವಾಗಿ ಆರೋಪಿಸಿದ್ದಾರೆ. ಪ್ರಹ್ಲಾದ ಎಂಬವರನ್ನು ಅರೆಸ್ಟ್ ಮಾಡಿದರೆ ಗೊತ್ತಾಗುತ್ತೆ. ಈ ಕುರಿತು ಸಮರ್ಪಕ ತನಿಖೆ ಆಗಬೇಕು. ಹಿಂದೆ ನಮ್ಮ ಸರ್ಕಾರವನ್ನು ಭ್ರಷ್ಟ ಸರ್ಕಾರ ಎನ್ನುತ್ತಿದ್ದವರು ಈಗ ತಾವೇ ಭ್ರಷ್ಟಾಚಾರಿಗಳಾಗಿದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದರು.ಈ ಸಂದರ್ಭದಲ್ಲಿ ಶಾಸಕ ದೊಡ್ಡನಗೌಡ ಪಾಟೀಲ, ಸಂಸದ ಸಂಗಣ್ಣ ಕರಡಿ, ಎಂಎಲ್ಸಿ ಹೇಮಲತಾ ನಾಯಕ, ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ, ಹಾಲಪ್ಪ ಆಚಾರ್, ಬಸವರಾಜ ದಡೇಸುಗೂರು ಸೇರಿದಂತೆ ಇತರರು ಇದ್ದರು.

Share this article