ಸುಲ್ತಾನಪುರ ಪ್ರಾಥಮಿಕ ಶಾಲೆಗೆ ಪ್ರೌಢ ಭಾಗ್ಯ

KannadaprabhaNewsNetwork |  
Published : May 22, 2025, 11:56 PM IST
ಮೇಲ್ದರ್ಜೆಗೇರಿದ ಹುಕ್ಕೇರಿ ತಾಲೂಕು ಸುಲ್ತಾನಪುರ ಸರ್ಕಾರಿ ಶಾಲೆ | Kannada Prabha

ಸಾರಾಂಶ

ಮಕ್ಕಳ ಸರ್ವತೋಮುಖ ಬೆಳವಣಿಗೆ ಸಾಧಿಸಲು ಶಿಕ್ಷಣವನ್ನು ಸಾಧನವನ್ನಾಗಿ ರೂಪಿಸುವ ಉದ್ದೇಶ ಹೊಂದಿ ರಾಜ್ಯ ಸರ್ಕಾರ ಮಹತ್ವದ ನಿರ್ಣಯ ಕೈಗೊಂಡಿದೆ. ಇದರೊಂದಿಗೆ ಮಕ್ಕಳಿಗೆ ಗುಣಾತ್ಮಕ ಮತ್ತು ಸೃಜನಾತ್ಮಕ ಶಿಕ್ಷಣ ಕಲ್ಪಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ.

ರವಿ ಕಾಂಬಳೆ

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಮಕ್ಕಳ ಸರ್ವತೋಮುಖ ಬೆಳವಣಿಗೆ ಸಾಧಿಸಲು ಶಿಕ್ಷಣವನ್ನು ಸಾಧನವನ್ನಾಗಿ ರೂಪಿಸುವ ಉದ್ದೇಶ ಹೊಂದಿ ರಾಜ್ಯ ಸರ್ಕಾರ ಮಹತ್ವದ ನಿರ್ಣಯ ಕೈಗೊಂಡಿದೆ. ಇದರೊಂದಿಗೆ ಮಕ್ಕಳಿಗೆ ಗುಣಾತ್ಮಕ ಮತ್ತು ಸೃಜನಾತ್ಮಕ ಶಿಕ್ಷಣ ಕಲ್ಪಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ.

ಪ್ರೌಢ ಶಿಕ್ಷಣವನ್ನು ಸಾರ್ವತ್ರಿಕರಣಗೊಳಿಸುವ ಆಶಯದೊಂದಿಗೆ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗಳನ್ನಾಗಿ ಉನ್ನತೀಕರಿಸಲಾಗಿದೆ. ಅದರನ್ವಯ ಹುಕ್ಕೇರಿ ತಾಲೂಕಿನ ಸುಲ್ತಾನಪುರ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಮಾದರಿ ಶಾಲೆಯನ್ನು ಪ್ರೌಢಶಾಲೆಯನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ.ರಾಜ್ಯದಲ್ಲಿ ಒಟ್ಟು 17 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಉನ್ನತೀಕರಿಸಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಈ ಪೈಕಿ ಪ್ರೌಢ ಶಾಲೆಗಳಾಗಿ ಮೇಲ್ಗರ್ಜೆಗೇರಿರುವ ಅರ್ಹತೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ವಲಯ ಸುಲ್ತಾನಪುರ ಮತ್ತು ಮೂಡಲಗಿ ವಲಯದ ಅವರಾದಿ ಶಾಲೆಗಳಿಗೆ ಮಾತ್ರ ಲಭಿಸಿದೆ.ತಾಲೂಕಿನ ಸುಲ್ತಾನಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಉನ್ನತೀಕರಣದ ಭಾಗ್ಯ ಲಭಿಸಿದ್ದು, ಈ ಭಾಗದ ಗ್ರಾಮೀಣ ವಿದ್ಯಾರ್ಥಿಗಳ ಮೊಗದಲ್ಲಿ ಮಂದಹಾಸ ಮೂಡಿದೆ. ಪ್ರಸಕ್ತ 2025-26ನೇ ಸಾಲಿನ ಶೈಕ್ಷಣಿಕ ವರ್ಷದಿಂದಲೇ ಇಲ್ಲಿ 9ನೇ ತರಗತಿ ಆರಂಭಿಸಲು ಶಿಕ್ಷಣ ಇಲಾಖೆ ಎಲ್ಲ ಕ್ರಮ ವಹಿಸಿದೆ. ಇದರೊಂದಿಗೆ ನಗರ ಮತ್ತು ಪಟ್ಟಣಗಳಿಗೆ ಪ್ರೌಢ ಶಿಕ್ಷಣಕ್ಕಾಗಿ ತೆರಳಬೇಕಿದ್ದ ಗ್ರಾಮೀಣ ವಿದ್ಯಾರ್ಥಿಗಳಿಗೆ ಗೋಳಾಟ ತಪ್ಪಲಿದೆ.ಹಿರಿಯ ಪ್ರಾಥಮಿಕ ಶಾಲೆಗಳನ್ನು ಮೇಲ್ದರ್ಜೆಗೇರಿಸಬೇಕೆಂಬುವುದು ಬಹು ವರ್ಷಗಳ ಬೇಡಿಕೆಯಾಗಿತ್ತು. ಈ ಕುರಿತು ಸಾಕಷ್ಟು ಬಾರಿ ಶಿಕ್ಷಣ ಇಲಾಖೆಗೆ ಮನವಿ ಕೂಡ ಸಲ್ಲಿಸಲಾಗಿತ್ತು. ಇದೀಗ ಈ ಭಾಗದ ಪಾಲಕ-ಪೋಷಕರು ಮತ್ತು ವಿದ್ಯಾರ್ಥಿಗಳ ಬಹುಕಾಲದ ಬೇಡಿಕೆ ಈಡೇರಿದಂತಾಗಿದೆ. ಆದರೆ, ಉನ್ನತೀಕರಣದಿಂದ ಕೊಠಡಿಗಳ ಸಮಸ್ಯೆ ಮತ್ತು ಶಿಕ್ಷಕರ ಕೊರತೆ ಎದುರಾಗುವ ಸಾಧ್ಯತೆ ಹೆಚ್ಚಿದೆ.

ಹೊಸದಾಗಿ ಆರಂಭಿಸಲಿರುವ 9ನೇ ತರಗತಿಗೆ ಸ್ಥಳೀಯವಾಗಿಯೇ ಅಗತ್ಯವಿರುವ ಮೂಲಭೂತ ಸೌಲಭ್ಯಗಳು ಮತ್ತು ಮಾನವ ಸಂಪನ್ಮೂಲಗಳನ್ನು ಬಳಸಿಕೊಳ್ಳಲು ಸೂಚಿಸಲಾಗಿದೆ. ತನ್ಮೂಲಕ ಕಲಿಕಾ ಪ್ರಕ್ರಿಯೆಯನ್ನು ಸ್ಥಳೀಯವಾಗಿ ಚಟುವಟಿಕಾಧಾರಿತ ಹಾಗೂ ಸಂತಸದಾಯಕವಾಗಿರುವಂತೆ ಶೈಕ್ಷಣಿಕ ಆಡಳಿತ ನಡೆಸಲು ಸೂಚಿಸಲಾಗಿದೆ. ಜೊತೆಗೆ ಹೆಚ್ಚುವರಿ ಹುದ್ದೆಗಳನ್ನು ಸೃಜಿಸದೇ ಈಗಾಗಲೇ ಇಲಾಖೆಗೆ ಮಂಜೂರಾಗಿರುವ ಹುದ್ದೆಗಳಿಂದಲೇ ನಿಯೋಜನೆ ಮೇಲೆ ಭರ್ತಿ ಮಾಡುವಂತೆ ಆದೇಶಿಸಲಾಗಿದೆ.ಪ್ರೌಢ ಶಿಕ್ಷಣವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಹುಕ್ಕೇರಿ ತಾಲೂಕಿನ ಸುಲ್ತಾನಪುರ ಹಿರಿಯ ಪ್ರಾಥಮಿಕ ಶಾಲೆಯನ್ನು ಉನ್ನತೀಕರಿಸಲಾಗಿದೆ. ಇದರೊಂದಿಗೆ ಗ್ರಾಮೀಣ ಭಾಗದ ಪಾಲಕ-ಪೋಷಕರು ಮತ್ತು ವಿದ್ಯಾರ್ಥಿಗಳ ಬಹುಕಾಲದ ಬೇಡಿಕೆ ಈಡೇರಿಸಲಾಗಿದೆ.

-ನಿಖಿಲ್ ಕತ್ತಿ, ಶಾಸಕರು.

ಗ್ರಾಮೀಣ ವಿದ್ಯಾರ್ಥಿಗಳ ಕಲಿಕೆಗೆ ಸ್ಥಳೀಯವಾಗಿಯೇ ಅವಕಾಶ ಕಲ್ಪಿಸಲು ಹುಕ್ಕೇರಿ ಶೈಕ್ಷಣಿಕ ವಲಯ ವ್ಯಾಪ್ತಿಯ ಸುಲ್ತಾನಪುರ ಪ್ರಾಥಮಿಕ ಶಾಲೆ ಇದೀಗ ಪ್ರೌಢ ಶಾಲೆಯಾಗಲಿದೆ. ಇದು ಈ ಭಾಗದ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ವರದಾನವಾಗುವ ಆಶಾಭಾವ ಮೂಡಿಸಿದೆ.

-ಪ್ರಭಾವತಿ ಪಾಟೀಲ,

ಬಿಇಒ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ