ಡಾ.ರಮಾನಂದ ಬನಾರಿ, ಪ್ರೊ.ಎಂ.ಎಲ್ ಸಾಮಗ, ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್ ಗೆ ಯಕ್ಷಮಂಗಳ ಪ್ರಶಸ್ತಿ । ಅಶೋಕ ಹಾಸ್ಯಗಾರರ ‘ದಶರೂಪಕಗಳ ದಶಾವತಾರ’ ಗ್ರಂಥಕ್ಕೆ ಕೃತಿ ಪ್ರಶಸ್ತಿ
ಯಕ್ಷಗಾನ ರಂಗದ ಹಿರಿಯ ಅರ್ಥಧಾರಿ, ವಿದ್ವಾಂಸ ಡಾ.ರಮಾನಂದ ಬನಾರಿ, ಕಾಸರಗೋಡು, ಹಿರಿಯ ಯಕ್ಷಗಾನ ಕಲಾವಿದ, ವಿದ್ವಾಂಸ ಪ್ರೊ.ಎಂ.ಎಲ್ .ಸಾಮಗ ಹಾಗೂ ತೆಂಕುತಿಟ್ಟು ಯಕ್ಷಗಾನದ ಹಿರಿಯ ಬಣ್ಣದ ವೇಷಧಾರಿ ಸದಾಶಿವ ಶೆಟ್ಟಿಗಾರ್ ಸಿದ್ಧಕಟ್ಟೆ ಆಯ್ಕೆಯಾಗಿದ್ದಾರೆ. ಯಕ್ಷಮಂಗಳ ಕೃತಿ ಪ್ರಶಸ್ತಿಗೆ ಲೇಖಕ, ಪತ್ರಕರ್ತ ಶಿರಸಿಯ ಅಶೋಕ ಹಾಸ್ಯಗಾರ ಅವರ ‘ದಶರೂಪಕಗಳ ದಶಾವತಾರ’ ಕೃತಿಯು ಆಯ್ಕೆಯಾಗಿದೆ.ಯಕ್ಷಮಂಗಳ ಪ್ರಶಸ್ತಿ 25 ಸಾವಿರ ರು. ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ ಮತ್ತು ಸನ್ಮಾನಗಳನ್ನೊಳಗೊಂಡಿದೆ. ಯಕ್ಷಮಂಗಳ ಕೃತಿ ಪ್ರಶಸ್ತಿ 10 ಸಾವಿರ ರು. ನಗದು, ಪ್ರಶಸ್ತಿ , ಸ್ಮರಣಿಕೆಗಳನ್ನೊಳಗೊಂಡಿದೆ.ಜಾನಪದ ವಿದ್ವಾಂಸ ಡಾ.ಕೆ.ಚಿನ್ನಪ್ಪ ಗೌಡ ಅಧ್ಯಕ್ಷತೆಯಲ್ಲಿ ಪ್ರೊ.ಪಾದೆಕಲ್ಲು ವಿಷ್ಣುಭಟ್, ಯಕ್ಷಗಾನ ಸಂಘಟಕ ಮುರಲೀ ಕಡೇಕಾರ್ ಹಾಗೂ ಕೇಂದ್ರದ ನಿರ್ದೆಶಕರಾದ ಡಾ.ಧನಂಜಯ ಕುಂಬ್ಳೆ ಅವರನ್ನು ಒಳಗೊಂಡಿರುವ ಆಯ್ಕೆ ಸಮಿತಿಯು ಈ ಹೆಸರುಗಳನ್ನು ಆಯ್ಕೆ ಮಾಡಿದೆ.
ಜೂನ್ ತಿಂಗಳಲ್ಲಿ ಮಂಗಳೂರು ವಿವಿ ಕುಲಪತಿ ಪ್ರೊ.ಪಿಎಲ್.ಧರ್ಮ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಯಕ್ಷಮಂಗಳ ಪ್ರಶಸ್ತಿ ಮತ್ತು ಕೃತಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕುಲಸಚಿವ ಕೆ.ರಾಜು ಮೊಗವೀರ ಹಾಗೂ ಕೇಂದ್ರದ ನಿರ್ದೇಶಕ ಡಾ.ಧನಂಜಯ ಕುಂಬ್ಳೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಡಾ.ರಮಾನಂದ ಬನಾರಿ: ಯಕ್ಷಗಾನ ಅರ್ಥದಾರಿ, ವಿದ್ವಾಂಸ ಹಾಗೂ ವೃತ್ತಿಯಲ್ಲಿ ವೈದ್ಯರಾಗಿರುವ ಡಾ.ರಮಾನಂದ ಬನಾರಿ 1940 ಜೂ.4 ರಂದು ಕಾಸರಗೋಡಿನ ಕಿರಿಕ್ಕಾಡುವಿನಲ್ಲಿ ಜನಿಸಿದರು. ಎಂಬಿಬಿಎಸ್ ಪದವೀಧರರಾಗಿರುವ ಇವರು ಪ್ರವೃತ್ತಿಯಲ್ಲಿ ಸಾಹಿತ್ಯ, ಯಕ್ಷಗಾನ, ಕನ್ನಡ ಸಂಸ್ಕೃತಿ ಪರ ಹೋರಾಟ, ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ತಂದೆ ಕೀರಿಕ್ಕಾಡು ವಿಷ್ಣುಮಾಸ್ಟರ್ ಅವರಿಂದ ಯಕ್ಷಗಾನದ ಪ್ರೇರಣೆ ಪಡೆದುಕೊಂಡ ಇವರು ತನ್ನ 16ನೇ ವಯಸ್ಸಿನಲ್ಲೇ ಅರ್ಥಗಾರಿಕೆ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಕರ್ಣ, ಅರ್ಜುನ, ರಾಮ, ಕೃಷ್ಣ, ರಾವಣ ಮೊದಲಾದ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸಿದ್ದರು. ಅದರೊಂದಿಗೆ ಮಕ್ಕಳ ಕವನ ಸಂಕಲನ, ಹನಿಗವನ ಸಂಕಲನ, ಆರೋಗ್ಯ ಗೀತೆ, ವೈದ್ಯಕೀಯ ಕವನ ಸಂಕಲನ ಸೇರಿದಂತೆ ಒಟ್ಟು ಹದಿನೈದಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಜೀವವೃಕ್ಷ ಇವರ ಅಭಿನಂದನಾ ಗ್ರಂಥ.
ಯಕ್ಷಗಾನ ಕಲಾವಿದರು, ಅರ್ಥದಾರಿ, ಶಿಕ್ಷಣ ತಜ್ಞ ಪ್ರೊ.ಎಂ.ಎಲ್.ಸಾಮಗ ನಾಡಿನ ಶ್ರೇಷ್ಠ ವಿದ್ವಾಂಸರೂ ಆಗಿದ್ದಾರೆ. ಯಕ್ಷಕಲೆಯ ದಿಗ್ಗಜರಾದ ಶಂಕರನಾರಾಯಣ ಸಾಮಗರ ಪುತ್ರ ಎಂ.ಲಕ್ಷ್ಮೀನಾರಾಯಣ ಸಾಮಗ ಅವರು ಜನವರಿ 31, 1949ರಲ್ಲಿ ಜನಿಸಿದರು. ಯಕ್ಷಗಾನ ಶಿಕ್ಷಣಕ್ಕೆ ಸಂಬಂಧಿಸಿದಂತೆ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಇವರು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಯಕ್ಷಗಾನದ ತೆಂಕು ತಿಟ್ಟು ಹಾಗೂ ಬಡಗುತಿಟ್ಟು ಎರಡು ಪ್ರಕಾರಗಳಲ್ಲೂ ಕಲಾಪ್ರೌಢಿಮೆ ಮೆರೆದಿರುವ ಇವರು ಉತ್ತಮ ಕಲಾವಿದರಾಗಿ, ಅರ್ಥದಾರಿಯಾಗಿ ಗುರುತಿಸಿಕೊಂಡಿದ್ದಾರೆ. ವೃತ್ತಿಯಲ್ಲಿ ಪ್ರಾಧ್ಯಾಪಕರಾಗಿದ್ದ ಸಾಮಗರು ಯಕ್ಷಗಾನ ಮಾತ್ರವಲ್ಲದೆ ನಾಟಕ, ಕಥೆ , ಕವನ ಸೇರಿದಂತೆ ಸಾಹಿತ್ಯ ಕ್ಷೇತ್ರದಲ್ಲೂ ತೊಡಗಿಸಿಕೊಂಡು ಸಾಧನೆ ಮಾಡಿದ ಹಿರಿಯರಾಗಿದ್ದಾರೆ. ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿಯೂ ಇವರು ಸೇವೆ ಸಲ್ಲಿಸಿದ್ದರು.
ಯಕ್ಷಮಂಗಳ ಕೃತಿ ಪ್ರಶಸ್ತಿ: