ಕನ್ನಡಪ್ರಭ ವಾರ್ತೆ, ಹನೂರು
ಸುಳ್ವಾಡಿ ವಿಷ ಪ್ರಸಾದ ದುರಂತದ ಭಾಧಿತರಿಗೆ ಜಿಲ್ಲಾ ಆಸ್ಪತ್ರೆ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಚಿಕಿತ್ಸೆ ಕೊಡಿಸಲಾಯಿತು.ತಾಲೂಕಿನ ಸುಳ್ವಾಡಿ ಗ್ರಾಮದಲ್ಲಿ ಕಳೆದ 7 ವರ್ಷಗಳ ಹಿಂದೆಯೇ ನಡೆದ ವಿಷ ಪ್ರಸಾದ ದುರಂತದಲ್ಲಿ 17 ಜನ ಮೃತರಾಗಿದ್ದು, ಸುಮಾರು 150ಕ್ಕೂ ಹೆಚ್ಚು ಜನರು ಸಾವಿನ ದವಡೆಯಿಂದ ಪಾರಾಗಿದ್ದರು. ಇದೀಗ ಸುಮಾರು 23 ಜನರು ವಿವಿಧ ಅಂಗ ವೈಫಲ್ಯದಿಂದ ನರಳುತ್ತಿದ್ದರು. ಇವರನ್ನು ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳು ಚಿಕಿತ್ಸೆ ಕೊಡಿಸಲು ಮುಂದಾಗಿದ್ದು ,ಇದೀಗ ಚೇತರಿಸಿಕೊಂಡಿದ್ದಾರೆ.
ಜಿಲ್ಲಾ ಆರೋಗ್ಯ ಇಲಾಖೆಯ ಅಡಿಯಲ್ಲಿ ರಾಷ್ಟ್ರೀಯ ನಿಯಂತ್ರಣ ಸಂಸ್ಥೆಯ ವಾಹನದಲ್ಲೇ ಕರೆದುಕೊಂಡು ಹೋಗಿ ಗುಣಮಟ್ಟದ ಚಿಕಿತ್ಸೆ ನೀಡಿ ಮತ್ತೆ ವಾಪಸ್ಸು ಕರೆದುಕೊಂಡು ಹೋಗಿ ಮನೆಗೆ ಕಳುಹಿಸಿದ್ದಾರೆ.ಘಟನೆ ಇನ್ನೂ ಮಾಸಿಲ್ಲ:ಘಟನೆ ನಡೆದು 7 ವರ್ಷ ಕಳೆದರೂ ಸಹ ಇನ್ನೂ ನೂರಕ್ಕೂ ಹೆಚ್ಚು ಜನರು ಅನೇಕ ರೀತಿಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೂಲಿ ಕೆಲಸ ಮಾಡಲಾಗದೆ ಪರಿಸ್ಥಿತಿ ನಿರ್ಮಾಣವಾಗಿದೆ. ಘಟನೆ ನಡೆದು ಇಷ್ಟು ದಿನಗಳಾದರೂ ಇನ್ನೂ ಸಹ ಪ್ರತಿನಿತ್ಯ ನರಳಾಟ ನಡೆಯುತ್ತಿದೆ. ಆದರೂ ಸ್ವಂತ ಖರ್ಚು ಮಾಡಲಾಗದ ಪರಿಸ್ಥಿತಿಯಲ್ಲಿ ಅಲ್ಲಿನ ಸಾಕಷ್ಟು ಜನರು ಪರದಾಡುತ್ತಿದ್ದಾರೆ. ಇದರಿಂದ ಜನ ಮತ್ತಷ್ಟು ಸಂಕಷ್ಟಕ್ಕೀಡಾಗಿದ್ದಾರೆ.
ಜೀವನ ನಿರ್ವಹಣೆ ಕಷ್ಟ:ವಿಷ ಪ್ರಸಾದ ದುರಂತದ ಬಳಿಕ ಬದುಕುಳಿದ ಒಂದಷ್ಟು ಮಂದಿ ಜನರಿಗೆ ಕೂಲಿ ಕೆಲಸ ಸಹ ಮಾಡಲಾಗದೆ ಜೀವನ ನಿರ್ವಹಣೆ ತುಂಬಾ ಕಷ್ಟದ ಹಾದಿಯಾಗಿದೆ. ಇದರಿಂದ ಜೀವನ ನಡೆಸಲು ಆಗದೆ ಒಂದಷ್ಟು ನೋವು ಉಂಟಾದಲ್ಲಿ ಆಸ್ಪತ್ರೆ ಖರ್ಚಿಗೆ ಸಹ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಸರ್ಕಾರ ಇತ್ತ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಜೊತೆಗೆ ನೈಜವಾದ ತಲುಪಬೇಕಾದ ಸೌಲಭ್ಯಗಳು ತಲುಪಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.