ರಸ್ತೆ ದುರವಸ್ಥೆ: ಈ ಊರಿಗೆ ಆಂಬ್ಯುಲೆನ್ಸ್ ಕೂಡ ಬರುವಂತಿಲ್ಲ!

KannadaprabhaNewsNetwork |  
Published : Aug 12, 2026, 03:15 AM IST
ಆಂಬ್ಲುಲೆನ್ಸ್‌  | Kannada Prabha

ಸಾರಾಂಶ

ಸಮರ್ಪಕವಾದ ರಸ್ತೆ ವ್ಯವಸ್ಥೆ ಇಲ್ಲದೆ ಏಳು ಮನೆಗಳ ಮಂದಿ ನಾಗರಿಕ ಜಗತ್ತಿನ ಸಂಪರ್ಕವನ್ನೇ ಕಡಿತಗೊಂಡಿರುವ ದಯನೀಯ ಸ್ಥಿತಿಯೊಂದು ಸುಳ್ಯ ತಾಲೂಕಿನ ತೊಡಿಕಾನ ಗ್ರಾಮದ ಮಾವಿನಕಟ್ಟೆ ಎಂಬಲ್ಲಿದ್ದು, ಇಲ್ಲಿನ ಸಮಸ್ಯೆಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಪರಿಹಾರ ಹುಡುಕಬೇಕಾಗಿದೆ.

ದುರ್ಗಾಕುಮಾರ್ ನಾಯರ್‌ಕೆರೆ

ಸುಳ್ಯ: ಸಮರ್ಪಕವಾದ ರಸ್ತೆ ವ್ಯವಸ್ಥೆ ಇಲ್ಲದೆ ಏಳು ಮನೆಗಳ ಮಂದಿ ನಾಗರಿಕ ಜಗತ್ತಿನ ಸಂಪರ್ಕವನ್ನೇ ಕಡಿತಗೊಂಡಿರುವ ದಯನೀಯ ಸ್ಥಿತಿಯೊಂದು ಸುಳ್ಯ ತಾಲೂಕಿನ ತೊಡಿಕಾನ ಗ್ರಾಮದ ಮಾವಿನಕಟ್ಟೆ ಎಂಬಲ್ಲಿದ್ದು, ಇಲ್ಲಿನ ಸಮಸ್ಯೆಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಪರಿಹಾರ ಹುಡುಕಬೇಕಾಗಿದೆ.

ಮಾವಿನಕಟ್ಟೆ ನಿವಾಸಿಗಳು ಕಳೆದ 25 ವರ್ಷಗಳಿಂದ ಈ ಸಮಸ್ಯೆ ಎದುರಿಸುತ್ತಿದ್ದಾರೆ. ಅದುವರೆಗೆ ತೊಡಿಕಾನದಿಂದ ಮುತ್ತುಕೋಡಿ, ಮಾವಿನಕಟ್ಟೆ, ಬಿಳಿಯಾರು, ಬಾಳೆಕಜೆ ರಸ್ತೆಯಲ್ಲಿ ಮಾವಿನಕಟ್ಟೆಯ ಮನೆ ಮಂದಿ ತೆರಳುತ್ತಿದ್ದರು. ಆ ದಾರಿಯು ಮುತ್ತುಕೋಡಿಯ ಖಾಸಗಿಯವರ ಜಾಗದ ಮೂಲಕ ಹಾದು ಹೋಗುತ್ತಿದ್ದು, 25 ವರ್ಷಗಳ ಹಿಂದೆ ಊರ ಮತ್ತು ಸುಳ್ಯದ ಕೆಲವು ಮುಖಂಡರು ಪಂಚಾತಿಗೆ ನಡೆಸಿ ಆ ದಾರಿಯನ್ನು ಮುಚ್ಚಿ ಮಾವಿನಕಟ್ಟೆಯವರಿಗೆ ಮತ್ತೊಂದು ಮಾರ್ಗವನ್ನು ನಿರ್ಮಿಸಿಕೊಟ್ಟಿದ್ದರು. ಈ ದಾರಿಯಾಗಿ ಮಾವಿನಕಟ್ಟೆಗೆ ಒಂದು ಕಿ.ಮೀ.ನಷ್ಟು ದೂರವಿದೆ.

ಆದರೆ ಈ ರಸ್ತೆ ತೀರಾ ದುರವಸ್ಥೆಯಿಂದ ಕೂಡಿದ್ದು ವರ್ಷದಲ್ಲಿ ಕೇವಲ ಮೂರು ತಿಂಗಳುಗಳಷ್ಟೇ ಸರಿಯಾಗಿ ವಾಹನಗಳಿಗೆ ಸಂಚರಿಸಲು ಯೋಗ್ಯವಾಗಿದೆ. ಬೇಸಿಗೆಯಲ್ಲಿ ಮಾತ್ರ ಕಷ್ಟದಲ್ಲಿ ಫೋರ್ ವೀಲರ್ ವಾಹನಗಳು ಬರುತ್ತವೆ.

ಸಂಚಾರಕ್ಕೆ ಸಂಚಕಾರ:

ಮಳೆ ಬಂತೆಂದರೆ ಈ ರಸ್ತೆಯ ಮಣ್ಣು ಕೊಚ್ಚಿ ಹೋಗಿ ಭಾರಿ ಗಾತ್ರದ ಹೊಂಡ ಗುಂಡಿಗಳು ನಿರ್ಮಾಣವಾಗುತ್ತವೆ. ರಸ್ತೆಯ ಎರಡೂ ಬದಿಗಳಲ್ಲಿ ಮಣ್ಣಿನ ಬರೆಗಳು, ಮರಗಳಿದ್ದು ಇವು ಕುಸಿದು ರಸ್ತೆಗಡ್ಡವಾಗಿ ಬೀಳುತ್ತವೆ. ಈಗಲೂ ಅಲ್ಲಿ ಆ ಪರಿಸ್ಥಿತಿ ಇದೆ.

ಈ ಭಾಗದಲ್ಲಿ ಏಳು ಮನೆ ಮತ್ತು ಅವರ ಕೃಷಿ ಭೂಮಿ ಇದೆ. ಸುಮಾರು 40ಕ್ಕಿಂತ ಅಧಿಕ ಮಂದಿ ಇಲ್ಲಿ ವಾಸಿಸುತ್ತಿದ್ದಾರೆ. ಮಕ್ಕಳಿಂದ ವೃದ್ಧರ ವರೆಗೆ ಈ ಮನೆಗಳಲ್ಲಿ ಮನೆ ಮಂದಿ ಇದ್ದಾರೆ. ಇವರೆಲ್ಲ ಸಮಸ್ಯೆ ಎದುರಿಸುತ್ತಿದ್ದಾರೆ. ತಮ್ಮ ವಾಹನಗಳನ್ನು ಮುಖ್ಯ ರಸ್ತೆ ಬದಿಯೇ ಇಟ್ಟು ಕಷ್ಟದಲ್ಲಿ ನಡೆದುಕೊಂಡೇ ಇವರೆಲ್ಲ ಮನೆ ಸೇರುತ್ತಿದ್ದಾರೆ.

ಈ ಮನೆಗಳಿಗೆ ಅಕ್ಕಿ ಸಾಮಗ್ರಿ ಸೇರಿದಂತೆ ದಿನಸಿ ಸಾಮಗ್ರಿಗಳನ್ನು ಕೊಂಡೊಯ್ಯುವುದು ಬಹುತೇಕ ತಿಂಗಳುಗಳಲ್ಲಿ ತಲೆಹೊರೆಯ ಮೂಲಕ. ಗ್ಯಾಸ್ ಹಂಡೆಗಳನ್ನು ಕೂಡ ಹೊತ್ತುಕೊಂಡೇ ಸಾಗಿಸಬೇಕಾಗುತ್ತದೆ. ಈ ಮನೆ ಮಂದಿಗೆ ಅಸೌಖ್ಯ ಭಾದಿಸಿದರೆ ವಾಹನಗಳಲ್ಲಿ ಆಸ್ಪತ್ರೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ನಡೆದಾಡಲು ಸಾಧ್ಯವಾಗದವರನ್ನು ರಸ್ತೆವರೆಗೆ ಹೊತ್ತೊಯ್ಯಬೇಕಾದ ಸ್ಥಿತಿ ಇದೆ. ತೀರಾ ಆರೋಗ್ಯ ತುರ್ತಿನ ಸಂದರ್ಭಗಳಲ್ಲಿ ಆಂಬ್ಯುಲೆನ್ಸ್‌ ಬರಲೂ ಸಾಧ್ಯವಾಗದಂತಹ ಘೋರ ಪರಿಸ್ಥಿತಿ ಇಲ್ಲಿದೆ. ಸಕಾಲದಲ್ಲಿ ಆಸ್ಪತ್ರೆಗೆ ಸಾಗಿಸಲಾಗದೆ ಅನಾರೋಗ್ಯಪೀಡಿತ ವೃದ್ಧರೊಬ್ಬರು ಮೃತಪಟ್ಟ ಘಟನೆ ಕೂಡ ಕೆಲವು ವರ್ಷದ ಹಿಂದೆ ನಡೆದಿದೆ. ಇಲ್ಲಿರುವ ಮನೆಗಳ ದುರಸ್ತಿಯಾಗಲಿ, ಹೊಸ ಮನೆ ನಿರ್ಮಾಣವಾಗಲಿ ತುಂಬಾ ಕಷ್ಟದ ಮತ್ತು ಅಧಿಕ ವೆಚ್ಚದ ಕೆಲಸವಾಗಿದೆ. ಇಲ್ಲಿಗೆ ಮನೆ ನಿರ್ಮಾಣದ ಸಾಮಗ್ರಿಗಳನ್ನು ತರಬೇಕಾದರೆ ದುಪ್ಪಟ್ಟು ಬಾಡಿಗೆ ನೀಡಬೇಕಾಗಿದೆ. ಹೀಗಾಗಿ ಇಲ್ಲಿನ ಕೆಲವು ಮನೆ ಕುಸಿದು ಬೀಳುವ ಸ್ಥಿತಿಯಲ್ಲಿವೆ.

ಇಲ್ಲಿ ಅಡಕೆ, ರಬ್ಬರ್, ತೆಂಗು ಬೆಳೆ ಇದೆ. ಆದರೆ ಮಳೆಗಾಲದಲ್ಲಿ ಈ ಉತ್ಪತ್ತಿಗಳನ್ನು ತಲೆ ಹೊರೆಯಲ್ಲೇ ಸಾಗಿಸಬೇಕಾದ ಅನಿವಾರ್ಯ ಸ್ಥಿತಿ ಇದೆ. ಕೃಷಿ ಕಾರ್ಯಕ್ಕೆ ಬಳಸಲಾಗುವ ಗೊಬ್ಬರವನ್ನು ಕೂಡ ತಲೆಹೊರೆಯಲ್ಲೇ ತರಬೇಕಾಗುತ್ತದೆ. ಸಕಾಲದಲ್ಲಿ ಕಚೇರಿ ತಲುಪಲು ಸಾಧ್ಯವಾಗದ ಕಾರಣ ವೃತ್ತಿಯನ್ನೇ ಬಿಟ್ಟವರು ಈ ಮನೆಗಳಲ್ಲಿದ್ದಾರೆ.

ಕಳೆದ ಎರಡೂವರೆ ದಶಕದಿಂದ ಈ ಸಮಸ್ಯೆ ಇದ್ದರೂ ಇತ್ತೀಚಿನ ವರ್ಷಗಳಲ್ಲಿ ಭೂ ಕುಸಿತದಂತಹ ಘಟನೆಗಳು ಹೆಚ್ಚಾಗಿರುವ ಕಾರಣ ಇತ್ತೀಚೆಗೆ ಇಲ್ಲಿನ ನಿವಾಸಿಗಳ ಸಮಸ್ಯೆಯೂ ಹೆಚ್ಚಾಗಿದೆ. ರಸ್ತೆಯ ಒಂದು ಕಡೆ ಮಾತ್ರ 20 ಮೀಟರ್ ಕಾಂಕ್ರಿಟೀಕರಣ ಆಗಿದ್ದರೂ ನಿರಂತರವಾಗಿ ಮಣ್ಣು ಕುಸಿತದಿಂದಾಗಿ ಇದು ಪ್ರಯೋಜನಕಾರಿಯಾಗಿಲ್ಲ.

ಪೊಳ್ಳು ಭರವಸೆ:

ನಾವು 25 ವರ್ಷದ ಹಿಂದೆ ಬಳಸುತ್ತಿದ್ದ ದಾರಿಯಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಅದನ್ನು ಅವರು ತಮ್ಮ ಖಾಸಗಿ ಜಾಗ ಎಂದು ಮುಚ್ಚಿದ ಕಾರಣ ಈ ಸಮಸ್ಯೆ ಉಂಟಾಗಿದೆ. ಅಲ್ಲಿ ಸರ್ಕಾರಿ ಜಾಗವೂ ಇದೆ. ಮುಚ್ಚುವ ವೇಳೆ ಪಂಚಾತಿಕೆ ನಡೆದಾಗ ನಮ್ಮನ್ಯಾರನ್ನೂ ಕರೆದಿಲ್ಲ. ಈಗ ನಾವು ತುಂಬಾ ಸಮಸ್ಯೆ ಎದುರಿಸುತ್ತಿದ್ದೇವೆ. ಪ್ರತಿ ಬಾರಿಯೂ ವ್ಯವಸ್ಥೆ ಮಾಡಿಕೊಡುವುದಾಗಿ ಹೇಳುತ್ತಾರೆ. ಆದರೆ ಇದುವರೆಗೂ ಆಗಿಲ್ಲ ಎಂದು ಇಲ್ಲಿನ ನಿವಾಸಿಗಳು ಹೇಳುತ್ತಾರೆ.

ಸ್ವಾತಂತ್ರ್ಯ ಬಂದು ಅಮೃತ ವರ್ಷ ಕಳೆದಿದ್ದರೂ ಇನ್ನೂ ಸ್ವಾತಂತ್ರ್ಯವಿಲ್ಲದ ಮಾವಿನಕಟ್ಟೆಯ ಏಳು ಮನೆಗಳವರ ಗೋಳಿಗೆ ಆಡಳಿತ ಶಾಶ್ವತವಾಗಿ ಸ್ಪಂದಿಸಬೇಕಾಗಿದೆ.

ನಮ್ಮ ಮನೆಯಲ್ಲಿ ನನ್ನ ತಾಯಿಗೆ ಹುಷಾರಿಲ್ಲ. ತಿಂಗಳ ಹಿಂದೆ ಅಡ್ಮಿಟ್ ಆಗಿ ಡಿಸ್ಚಾರ್ಜ್ ಆಗಿದ್ದರು. ಒಂದು ತಿಂಗಳ ಬಳಿಕ ಬರುವಂತೆ ವೈದ್ಯರು ಹೇಳಿದ್ದಾರೆ. ರಸ್ತೆ ಸಮಸ್ಯೆಯಿಂದಾಗಿ ಹೋಗಲಾಗುತ್ತಿಲ್ಲ. 10 ವರ್ಷಗಳ ಹಿಂದೆ ನನ್ನ ತಂದೆ ಅಸೌಖ್ಯಕ್ಕೀಡಾದಾಗಲೂ ಅವರನ್ನು ಹೊತ್ತೊಯ್ದು ಕೊಂಡೊಯ್ಯಲಾಗಿತ್ತು. ಚಿಕಿತ್ಸೆ ಕೊಡಿಸಲು ತಡವಾದುದರಿಂದ ಅವರು ಸಾವಿಗೀಡಾಗಿದ್ದರು.

- ಹರೀಶ್‌ ಎಂ.ಟಿ. ಮಾವಿನಕಟ್ಟೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಥಣಿಯಿಂದ ಶ್ರೀಶೈಲಕ್ಕೆ ಬಸ್ ಸೇವೆಗೆ ಚಾಲನೆ
ಷಡ್ಯಂತ್ರಕ್ಕೆ ನಾಡಗೌಡರಿಗೆ ಮತ್ತೆ ಸಚಿವ ಸ್ಥಾನ ಬಲಿ!