ಇಂದು ಮಂಡ್ಯದಲ್ಲಿ ಸುಮಲತಾ ಸಭೆ: ಸ್ಪರ್ಧೆ ಬಗ್ಗೆ ನಿರ್ಧಾರ

KannadaprabhaNewsNetwork |  
Published : Apr 03, 2024, 01:38 AM ISTUpdated : Apr 03, 2024, 08:59 AM IST
Sumalatha Ambareesh

ಸಾರಾಂಶ

ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಟಿಕೆಟ್‌ ವಂಚಿತ ಸಂಸದೆ ಸುಮಲತಾ ಅಂಬರೀಶ್‌ ಬುಧವಾರ ನಗರದಲ್ಲಿ ಬೆಂಬಲಿಗರು, ಕಾರ್ಯಕರ್ತರ ಸಭೆ ಕರೆದಿದ್ದಾರೆ.

  ಮಂಡ್ಯ :  ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಟಿಕೆಟ್‌ ವಂಚಿತ ಸಂಸದೆ ಸುಮಲತಾ ಅಂಬರೀಶ್‌ ಬುಧವಾರ ನಗರದಲ್ಲಿ ಬೆಂಬಲಿಗರು, ಕಾರ್ಯಕರ್ತರ ಸಭೆ ಕರೆದಿದ್ದಾರೆ. ಅವರ ಮುಂದಿನ ರಾಜಕೀಯ ನಡೆ ಬಗ್ಗೆ ನಿರ್ಧಾರ ಕೈಗೊಳ್ಳಲಿರುವ ಈ ಸಭೆ ತೀವ್ರ ಕುತೂಹಲ ಕೆರಳಿಸಿದೆ.

ಬುಧವಾರ ಬೆಳಗ್ಗೆ 10ಕ್ಕೆ ನಗರದ ಶ್ರೀ ಕಾಳಿಕಾಂಬ ದೇವಾಲಯದಲ್ಲಿ ಸಂಸದೆ ಸುಮಲತಾ ಅಂಬರೀಶ್‌ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಸಭೆಗೆ ಆಗಮಿಸಲಿದ್ದಾರೆ. ನಟ ದರ್ಶನ್‌ ಮತ್ತು ಅಭಿಷೇಕ್‌ ಅಂಬರೀಶ್‌ ಕೂಡ ಸಭೆಯಲ್ಲಿ ಪಾಲ್ಗೊಳ್ಳುವರು. ಸಂಸದೆಯಾಗಿ ಐದು ವರ್ಷಗಳ ಕಾಲ ಜಿಲ್ಲೆಯಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳ ಸಾಕ್ಷ್ಯಚಿತ್ರವನ್ನು ದರ್ಶನ್‌ ಇದೇ ಸಮಯದಲ್ಲಿ ಬಿಡುಗಡೆ ಮಾಡುವರು.

ಬಿಜೆಪಿ-ಜೆಡಿಎಸ್‌ ಮೈತ್ರಿ ಕಾರಣದಿಂದ ಸಂಸದೆ ಸುಮಲತಾ ಅವರಿಗೆ ಮಂಡ್ಯ ಕ್ಷೇತ್ರದ ಬಿಜೆಪಿ ಟಿಕೆಟ್‌ ಕೈತಪ್ಪಿದೆ. ಜೆಡಿಎಸ್‌ಗೆ ಮಂಡ್ಯ ಕ್ಷೇತ್ರ ಬಿಟ್ಟುಕೊಟ್ಟಿರುವುದರಿಂದ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅಖಾಡಕ್ಕಿಳಿದಿದ್ದಾರೆ. ಇದರಿಂದ ತೀವ್ರ ನಿರಾಸೆಗೊಳಗಾಗಿರುವ ಸುಮಲತಾ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಮಂಡ್ಯ ಜೆಡಿಎಸ್‌ ಅಭ್ಯರ್ಥಿ ಎಚ್‌.ಡಿ.ಕುಮಾರಸ್ವಾಮಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಬಿಜೆಪಿ ಹೈಕಮಾಂಡ್‌ ಕೂಡ ಮುಂದಿನ ದಿನಗಳಲ್ಲಿ ರಾಜಕೀಯ ಸ್ಥಾನ-ಮಾನ ನೀಡುವ ಭರವಸೆಯನ್ನೂ ನೀಡಿದೆ ಎನ್ನಲಾಗಿದೆ. ಈ ಎಲ್ಲಾ ಬೆಳವಣಿಗೆಗಳಿಂದ ಸುಮಲತಾ ಸಮಾಧಾನಗೊಂಡವರಂತೆ ಕಂಡುಬಂದಿದ್ದಾರೆ.ಭವಿಷ್ಯದ ರಾಜಕೀಯದ ಹಿತದೃಷ್ಟಿ ಹಾಗೂ ಪುತ್ರ ಅಭಿಷೇಕ್‌ ಅಂಬರೀಶ್‌ಗೆ ಜಿಲ್ಲೆಯಲ್ಲಿ ರಾಜಕೀಯ ನೆಲೆ ದೊರಕಿಸುವ ಅನಿವಾರ್ಯತೆ ಕಾರಣ ಸುಮಲತಾ ಚುನಾವಣೆಗೆ ಸ್ಪರ್ಧಿಸುವ ದುಡುಕಿನ ನಿರ್ಧಾರ ಮಾಡುವುದಿಲ್ಲ. ಜೆಡಿಎಸ್‌ ಅಭ್ಯರ್ಥಿ ಎಚ್‌.ಡಿ.ಕುಮಾರಸ್ವಾಮಿ ಬೆಂಬಲಕ್ಕೆ ನಿಲ್ಲುವುದರೊಂದಿಗೆ ಮೈತ್ರಿಧರ್ಮ ಪಾಲಿಸಲು ಮಾನಸಿಕವಾಗಿ ನಿರ್ಧರಿಸಿದ್ದಾರೆ ಎಂಬ ಮಾತುಗಳು ಬೆಂಬಲಿಗರ ವಲಯದಲ್ಲಿ ಕೇಳಿಬರುತ್ತಿವೆ.

ಹಳೆಯ ಕಹಿ ನೆನಪುಗಳನ್ನು ಮರೆತು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಸುಮಲತಾ ಬೆಂಬಲ ಕೋರುವುದರೊಂದಿಗೆ ಸ್ನೇಹದ ರಾಜಕಾರಣ ಬಯಸಿದ್ದಾರೆ. ಸುಮಲತಾ ಪಾಲಿಗೆ ಕಾಂಗ್ರೆಸ್‌ ಬಾಗಿಲು ಮುಚ್ಚಿದೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ ಗೆಲುವು ಕಷ್ಟವಾಗಬಹುದೆಂಬ ಅಭಿಪ್ರಾಯದೊಂದಿಗೆ ಮೈತ್ರಿಧರ್ಮ ಪಾಲಿಸುವುದೇ ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಸೂಕ್ತ ಎಂದು ಗಂಭೀರವಾಗಿ ಆಲೋಚಿಸಿದ್ದಾರೆ ಎಂದು ತಿಳಿದುಬಂದಿದೆ.ನಿಮ್ಮ ನಡೆಯೇ ನನ್ನದೂ ಆಗಿರಲಿದೆ ಸುಮಲತಾ ವಿಡಿಯೋ ಸಂದೇಶ:

ಮಂಡ್ಯಗಾಗಿ, ನನ್ನ ಮಂಡ್ಯದ ಸ್ವಾಭಿಮಾನಿಗಳ ಸೇವೆಗೆ ಯಾವತ್ತಿಗೂ ನಾವು ಬದ್ಧ. ಹಾಗಾಗಿಯೇ ಲೋಕಸಭಾ ಚುನಾವಣೆಗೆ ಸಂಬಂಧಿಸಿ ಏನೇ ನಿರ್ಧಾರ ತೆಗೆದುಕೊಂಡರೂ ನಿಮ್ಮೊಂದಿಗೆ ಚರ್ಚಿಸಿಯೇ ಮುಂದುವರೆಯುವೆ ಎಂದು ಹೇ‍ಳಿದ್ದೇನೆ. ನಿಮ್ಮ ಸಲಹೆ, ಸೂಚನೆ ಹಾಗೂ ಭಾವನೆಗಳಿಗೆ ಯಾವತ್ತೂ ನೋವು ತರಲಾರೆ. ನಿಮ್ಮ ನಡೆಯೇ ನನ್ನದೂ ಆಗಿರಲಿದೆ ಎಂದು ಸುಮಲತಾ ಹೇಳಿಕೊಂಡಿದ್ದಾರೆ.

ಮಂಗಳವಾರ ವಿಡಿಯೋ ಸಂದೇಶವೊಂದನ್ನು ಹಂಚಿಕೊಂಡಿರುವ ಅವರು, ಚುನಾವಣೆಗೆ ಸ್ಪರ್ಧಿಸುವ ಕುರಿತು ನನ್ನ ನಿಲುವಿಗಾಗಿ ಅನೇಕರು ಕಾಯುತ್ತಿದ್ದಾರೆ. ಈಗಾಗಲೇ ಆ ಕುರಿತು ಗಂಭೀರ ಚಿಂತನೆ ಕೂಡ ನಡೆದಿದೆ. ನಿಮ್ಮೆಲ್ಲರ ನೆಚ್ಚಿನ ರೆಬಲ್ ಸ್ಟಾರ್ ಅಂಬರೀಶ್ ಅವರಾಗಲಿ, ನಾನಾಗಲಿ ನಮ್ಮ ಕುಟುಂಬವಾಗಲಿ ಯಾವತ್ತಿಗೂ ಅಧಿಕಾರಕ್ಕೆ ಅಂಟಿಕೊಂಡು ಕೂತವರಲ್ಲ. ಮಂಡ್ಯಗಾಗಿ, ನನ್ನ ಮಂಡ್ಯದ ಸ್ವಾಭಿಮಾನಿಗಳ ಸೇವೆಗೆ ಯಾವತ್ತಿಗೂ ನಾವು ಬದ್ಧ. ಏನೇ ನಿರ್ಧಾರ ತೆಗೆದುಕೊಂಡರೂ ನಿಮ್ಮೊಂದಿಗೆ ಚರ್ಚಿಸಿಯೇ ಮುಂದುವರೆಯುವೆ ಎಂದು ಹೇಳಿದ್ದೇನೆ ಎಂದು ತಿಳಿಸಿದ್ದಾರೆ.

ಕಾಳಿಕಾಂಬ ದೇಗುಲದ ಆವರಣದಲ್ಲೇ ನಾನು ಲೋಕಸಭೆ ಚುನಾವಣೆ ಕುರಿತಂತೆ ನನ್ನ ನಿರ್ಧಾರವನ್ನು ನಿಮ್ಮೆಲ್ಲರ ಮುಂದೆ ಪ್ರಕಟಿಸುತ್ತೇನೆ ಎಂದು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!