ಮಡಿಕೇರಿ: 26ನೇ ಉಚಿತ ಬೇಸಿಗೆ ಶಿಬಿರ ಉದ್ಘಾಟನೆ
ಕನ್ನಡಪ್ರಭ ವಾರ್ತೆ ಮಡಿಕೇರಿಮಕ್ಕಳ ಬೌದ್ಧಿಕ ಮತ್ತು ಕ್ರೀಯಾಶೀಲ ಚಟುವಟಿಕೆಗೆ ಬೇಸಿಗೆ ಶಿಬಿರ ಸಹಕಾರಿಯಾಗಿದ್ದು, ಬೇಸಿಗೆ ಅವಧಿಯಲ್ಲಿನ ಶಿಬಿರದ ಅವಕಾಶ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರಂಗದಾಮಪ್ಪ ಹೇಳಿದರು.ಸರ್ಕಾರಿ ಬಾಲಕರ ಬಾಲಮಂದಿರದಲ್ಲಿ ರಾಜ್ಯ ಬಾಲಭವನ ಸೊಸೈಟಿ ಬೆಂಗಳೂರು, ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಬಾಲಭವನ ಸಮಿತಿ ಕೊಡಗು ಸಹಯೋಗದಲ್ಲಿ ಶುಕ್ರವಾರ 2025-26ನೇ ಸಾಲಿನ ಉಚಿತ ಬೇಸಿಗೆ ಶಿಬಿರ ಉದ್ಘಾಟಿಸಿ ಮಾತನಾಡಿದರು.ಬಾಲ್ಯದಲ್ಲಿಯೇ ಮಕ್ಕಳಲ್ಲಿರುವ ಸೃಜನಾತ್ಮಕ ಕಲೆಯನ್ನು ವೃದ್ಧಿಸಲು ಇಂತಹ ಶಿಬಿರಗಳು ಸಹಾಯವಾಗಲಿದೆ. ಮಕ್ಕಳಿಗೆ ಆಟ-ಪಾಠಗಳ ಜೊತೆಗೆ ನೃತ್ಯ, ಸಾಂಸ್ಕೃತಿಕ ಕಲೆ, ಸಂಗೀತ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಲು ಇಂತಹ ಶಿಬಿರಗಳು ಮೂಲ ಪ್ರೇರಣೆಯಾಗುತ್ತವೆ. ಮಕ್ಕಳ ಬೌದ್ಧಿಕ ವಿಕಾಸದೊಂದಿಗೆ ಭವಿಷ್ಯದ ಜೀವನಕ್ಕೆ ಮಾದರಿಯಾಗುತ್ತದೆ. ಮಕ್ಕಳು ಇಂತಹ ಶಿಬಿರಗಳ ಸದುಪಯೋಗ ಪಡೆದುಕೊಳ್ಳುವಂತಾಗಬೇಕು ಎಂದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ತಿಪ್ಪಣ್ಣ ಸಿರಸಗಿ ಮಾತನಾಡಿ, 5ರಿಂದ 16 ವರ್ಷದ ಮಕ್ಕಳಿಗೆ ಯೋಗ, ಚಿತ್ರಕಲೆ, ಕ್ರಾಪ್ಟ್, ನೃತ್ಯ, ಸಂಗೀತ, ನಾಟಕ ಸೇರಿದಂತೆ 6 ರೀತಿಯ ಚಟುವಟಿಕೆಗಳನ್ನು ಈ ಶಿಬಿರದಲ್ಲಿ ಕಲಿಸಲಾಗುತ್ತದೆ. ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿ ಇದರ ಸದುಪಯೋಗವನ್ನು ಪಡೆಯಬೇಕು ಹಾಗೂ ಪೋಷಕರು ಮಕ್ಕಳನ್ನು ಶಿಬಿರಕ್ಕೆ ಸೇರಿಸುವ ಮೂಲಕ ಶಿಬಿರದಲ್ಲಿ ಮಕ್ಕಳ ಬೆಳವಣಿಗೆಗೆ ಹಾಗೂ ಕಲಿಕೆಗೆ ಪೂರಕವಾಗಿರಬೇಕು. ಮಕ್ಕಳು ಜ್ಞಾನ ವೃದ್ಧಿಯನ್ನು ಪಡೆದುಕೊಳ್ಳಲು ಪೋಷಕರು ಮಕ್ಕಳಿಗೆ ಸಹಕರಿಸಬೇಕು ಎಂದು ಹೇಳಿದರು.ಈಗಿನ ಮಕ್ಕಳು ಮೊಬೈಲ್ ಬಳಕೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಅದನ್ನು ಕಡಿಮೆ ಮಾಡಿ ಶಿಬಿರದಲ್ಲಿ ಸೃಜನಾತ್ಮಕ ಹಾಗೂ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಹೆಚ್ಚು ಭಾಗವಹಿಸುವಂತೆ ತಿಳಿಸಿದರು.ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಮಾತನಾಡಿ, ಕನ್ನಡವು ಉತ್ತಮವಾಗಿ ಬೆಳೆಯಬೇಕೆಂದರೆ ಇಂದಿನ ಪ್ರಜೆಗಳಾದ ಪುಟಾಣೆ ಮಕ್ಕಳು ಹೆಚ್ಚಾಗಿ ಕಲಿತು ತಮ್ಮ ಜೀವನದಲ್ಲಿ ಆಳವಡಿಸಿಕೊಳ್ಳಬೇಕು. ಆಗ ಮಾತ್ರ ಕನ್ನಡ ಉಳಿಯುವುದು ಎಂದು ತಿಳಿಸಿದರು. ಹಾಗೆಯೇ ಮಕ್ಕಳು ಶಿಬಿರದಲ್ಲಿರುವ ಎಲ್ಲಾ ಚಟುವಟಿಕೆಯಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸೀತಾಲಕ್ಷ್ಮೀ, ಶಿಬಿರದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ, ಬೇಸಿಗೆ ಅವಧಿಯಲ್ಲಿ ವಿದ್ಯಾರ್ಥಿಗಳು ವ್ಯಕ್ತಿತ್ವದ ವಿಕಸನಕ್ಕೆ ಬೇಕಾಗುವ ಚಟುವಟಿಕೆಗಳಲ್ಲಿ ತೊಡಗುವ ಮೂಲಕ ವ್ಯಕ್ತಿತ್ವವನ್ನು ವೃದ್ಧಿಸಿಕೊಳ್ಳಲು ಇಂತಹ ಶಿಬಿರಗಳಲ್ಲಿ ಮಕ್ಕಳು ಭಾಗವಹಿಸಿ, ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.ವಿಕಲಚೇತರ ಕಲ್ಯಾಣ ಅಧಿಕಾರಿ ವಿಮಲ ಅವರು ಸ್ವಾಗತಿಸಿದರು. ಪೂಜಾ ನಿರೂಪಿಸಿದರು. ಲೋಕೋಪಯೋಗಿ ಇಲಾಖೆ ಇಇ ಇಬ್ರಾಹಿಂ, ಸರ್ಕಾರಿ ಬಾಲಕರ ಬಾಲಮಂದಿರದ ಅಧೀಕ್ಷಕರಾದ ಶ್ರೀಧರ್, ಪವಿತ್ರಾ, ಸತ್ಯಭಾಮ, ಸವಿತಾ ಹಾಗೂ ಮಹಿಳಾ ಮೇಲ್ವಿಚಾರಕರಾದ ಶೀಲಾ, ಯೋಗ ತರಬೇತಿ ಶಿಕ್ಷಕರು ಅಲಿಮ, ಕ್ರಾಫ್ಟ್ ತರಬೇತಿ ಶಿಕ್ಷಕರು ನಮಿತಾ ರಾವ್, ಚಿತ್ರಕಲೆ ತರಬೇತಿ ಶಿಕ್ಷಕರು ಕುಮಾರ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ಸಿಬ್ಬಂದಿ ವರ್ಗದವರು, ಪೋಷಕರು ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.