ಬ್ಯಾಡಗಿ: ಮಕ್ಕಳ ಮಾನಸಿಕ, ಬೌದ್ಧಿಕ, ಶಾರೀರಿಕ ಹಾಗೂ ಶೈಕ್ಷಣಿಕ ಪ್ರಗತಿಗೆ ಬೇಸಿಗೆ ಶಿಬಿರಗಳು ಸಹಕಾರಿಯಾಗಲಿದೆ ಎಂದು ನಿವೃತ್ತ ಮುಖ್ಯೋಪಾಧ್ಯಾಯ ಎಂ.ಎಂ. ಕಂಠಿ ಅಭಿಪ್ರಾಯಪಟ್ಟರು.
ಪಟ್ಟಣದ ಬಿಇಎಸ್‌ಎಂ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಎಸ್.ಡಿ. ಬಾಲಾಜಿರಾವ್ ಅಭಿನಂದನಾ ಗ್ರಂಥ ಬಿಡುಗಡೆ ಮಾಡಿ, ಗಂಗಾ ಜೀನಿಯಸ್ ಅಕಾಡೆಮಿಯ ತರಬೇತಿ ಕೇಂದ್ರದಲ್ಲಿ ಪ್ರಾಥಮಿಕ ಪ್ರೌಢ ಹಾಗೂ ಪಿಯುಸಿಯ ಗ್ರಾಮೀಣ ವಿದ್ಯಾರ್ಥಿಗಳಿಗೆ ಆಂಗ್ಲ ಭಾಷೆ, ಐಚ್ಛಿಕ ವಿಷಯಗಳ ಮತ್ತು ಯೋಗ ತರಬೇತಿ ನೀಡುತ್ತಿರುವುದು ಪ್ರಶಂಸೆಗೆ ಪಾತ್ರವಾಗಿದೆ ಎಂದರು.
ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಜೀವರಾಜ ಛತ್ರದ ಮಾತನಾಡಿ, ಪ್ರತಿ ವರ್ಷ ಈ ಅಕಾಡೆಮಿಯಿಂದ ಗ್ರಾಮೀಣ ಮಕ್ಕಳ ಪ್ರತಿಭೆ ಗುರುತಿಸಿ ಅವರಿಗೆ ಶೈಕ್ಷಣಿಕವಾಗಿ ಮಾರ್ಗದರ್ಶನ ಮಾಡುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದರು. ಇದೇ ಸಂದರ್ಭದಲ್ಲಿ ಎಚ್.ಟಿ. ಭರಮಗೌಡ್ರ ಅವರ ಶಿಷ್ಯನಾದ ಮಂಜುನಾಥ ಹಾದಿಮನಿ ಗುರುಗಳ ಕುರಿತು ರಚಿಸಿದ “ಊರು ಮೆಚ್ಚಿದ ಶಿಕ್ಷಕ” ಎಂಬ ಅಭಿನಂದನಾ ಗ್ರಂಥ ಬಿಡುಗಡೆಗೊಳಿಸಲಾಯಿತು.ರಾಘವೇಂದ್ರ ಬೊವಿ ಕ್ರಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್‌ನ ತಾಲೂಕು ಅಧ್ಯಕ್ಷ ಬಿ.ಎಂ. ಜಗಾಪುರ, ಡಾ. ಬಿ.ಎಂ. ಬೇವಿನಮರದ, ಸಿ.ಎನ್. ಬಣಕಾರ, ಎಚ್.ಟಿ. ಭರಮಗೌಡ್ರ, ಗಿರೀಶ ಇಂಡಿಮಠ, ಡಾ. ಸತೀಶಕುಮಾರ ನಾಯ, ಶಿಕ್ಷಕರು, ಪಾಲಕ ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.