ಕನ್ನಡಪ್ರಭ ವಾರ್ತೆ ನಾಪೋಕ್ಲು
ತರಬೇತುದಾರರ ಮಾರ್ಗದರ್ಶನವನ್ನು ಶಿಬಿರಾರ್ಥಿಗಳು ಪಾಲಿಸುವುದರ ಜೊತೆಗೆ ಮಾಡುವ ಕೆಲಸದಲ್ಲಿ ಏಕಾಗ್ರತೆ ಇರಬೇಕು ಎಂದು ಮಡಿಕೇರಿಯ ವಾಂಡರರ್ಸ್ ಕ್ಲಬ್ ಅಧ್ಯಕ್ಷ, ತರಬೇತುದಾರ ಕೋಟೆರ ಮುದ್ದಪ್ಪ ಹೇಳಿದ್ದಾರೆ.ಇಲ್ಲಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕ್ರೀಡಾ ಮತ್ತು ಸಾಂಸ್ಕೃತಿಕ ಅಕಾಡೆಮಿ ವತಿಯಿಂದ ಕರ್ನಾಟಕ ಪಬ್ಲಿಕ್ ಶಾಲೆಯ ಆಟದ ಮೈದಾನದಲ್ಲಿ ನಡೆಯುತ್ತಿರುವ 24ನೇ ವರ್ಷದ ಉಚಿತ ಬೇಸಿಗೆ ತರಬೇತಿ ಶಿಬಿರದಲ್ಲಿ ಗುರುವಾರ ಪಾಲ್ಗೊಂಡು ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಪ್ರತಿಭೆ ಎಲ್ಲರಲ್ಲೂ ಇದೆ. ಪ್ರತಿಭೆ ಅನಾವರಣಗೊಳಿಸಿಕೊಳ್ಳುವುದು ಮುಖ್ಯ. ಉಜ್ವಲ ಭವಿಷ್ಯವನ್ನು ವಿದ್ಯಾರ್ಥಿಗಳ ರೂಪಿಸಿಕೊಳ್ಳಬೇಕು ಎಂದ ಅವರು ಶುಭ ಹಾರೈಸಿದರು.ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕೊಂಡಿರ ನಾಣಯ್ಯ ಮಾತನಾಡಿ, ಜಿಲ್ಲೆಯ ಮಂದಿಗೆ ದೇಶದೆಲ್ಲೆಡೆ ಗೌರವದ ಜೊತೆಗೆ ಹಾಕಿ ಕ್ರೀಡೆಗೆ ವಿಶೇಷ ಪ್ರಶಸ್ತಿ ಇದೆ. ಕ್ರೀಡೆಯಲ್ಲಿ ಉತ್ತಮ ತರಬೇತಿ ಹೊಂದುವುದರ ಮೂಲಕ ಮಕ್ಕಳು ಸತ್ಪ್ರಜೆಗಳಾಗಬೇಕು ಎಂದರು.
ವಿದ್ಯಾರ್ಥಿಗಳು ಶಿಬಿರದಲ್ಲಿ ತರಬೇತಿ ಪಡೆದು ನಂತರ ಮನೆಯಲ್ಲಿಯೂ ಪ್ರಯತ್ನ ಪಡಬೇಕು. ನುರಿತ ಆಟಗಾರ ಆಟವನ್ನು ಗಮನಿಸಬೇಕು ಯಾವುದೇ ವೃತ್ತಿಗೆ ಹೋದರೂ ಕೂಡ ಕ್ರೀಡೆಯನ್ನು ಕಡೆಗಣಿಸಬಾರದು ಎಂದರು.ಅಕಾಡೆಮಿ ಉಪಾಧ್ಯಕ್ಷ ಕಾಂಡಂಡ ಜೋಯಪ್ಪ ಮಾತನಾಡಿ, ಅಕಾಡೆಮಿಯ ಸ್ಥಾಪಕ ಅಧ್ಯಕ್ಷ ಕಲಿಯಂಡ ಸಾಬು ಅಯ್ಯನ ಅವರ ಶ್ರಮದ ಫಲವಾಗಿ ಮಕ್ಕಳಿಗೆ ಇತ್ತೀಚಿನ ದಿನಗಳಲ್ಲಿ ಉತ್ತಮ ತರಬೇತಿ ಸಿಗುತ್ತಿದೆ. ಮೊಬೈಲ್ ಬಳಸುವುದನ್ನು ದೂರ ಮಾಡಿ ಕ್ರೀಡಾ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಶಿಬಿರದಲ್ಲಿ ಸುಮಾರು 70 ಕ್ಕೂ ಅಧಿಕ ಶಿಬಿರಾರ್ಥಿಗಳು ಪ್ರತಿದಿನ ಬೆಳಗ್ಗೆ 7.30ರಿಂದ 9.30ರ ವರೆಗೆ ಭಾಗವಹಿಸುತ್ತಿದ್ದಾರೆ. ಇವರಿಗೆ ನುರಿತ ತರಬೇತುದಾರರಿಂದ ಹಾಕಿ ಸೇರಿದಂತೆ ವಿವಿಧ ಕ್ರೀಡಾ ತರಬೇತಿ ನೀಡಲಾಗುತ್ತಿದೆ. ಪ್ರತಿದಿನ ಹಾಲು, ಮೊಟ್ಟೆ, ಬಿಸ್ಕೆಟ್ ವಿತರಿಸಲಾಗುತ್ತಿದೆ.ಅಕಾಡೆಮಿ ಕಾರ್ಯದರ್ಶಿ ಹಾಗೂ ತರಬೇತುದಾರರಾಗಿ ಕೇಟೋಳಿರ ಡಾಲಿ ಅಚ್ಚಪ್ಪ, ಅರೆಯಡ ಗಣೇಶ್ ,ಮಾಚೆಟ್ಟಿರ ಕುಶು ಕುಶಾಲಪ್ಪ, ನಿರ್ದೇಶಕರು, ಪೋಷಕರು ಹಾಗೂ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.