ಕೆ.ಎಂ.ಮಂಜುನಾಥ್
ಬಳ್ಳಾರಿ: ಬಳ್ಳಾರಿ ಲೋಕಸಭಾ ಚುನಾವಣೆ ಪ್ರಚಾರಕ್ಕೆ ಕೈ-ಕಮಲ ನಾಯಕರಿಗೆ ಅಕ್ಷರಶಃ ಸೂರ್ಯನೇ ಅಡ್ಡಿಯಾಗಿದ್ದಾನೆ.
ಕೆಂಡದ ಮೇಲೆ ನಡೆದ ಅನುಭವ ಆಗುತ್ತಿದ್ದು, ಬಿಸಿಲಿನ ತಾಪಕ್ಕೆ ಬೆವರಿಳಿಸುತ್ತಿರುವ ಅಭ್ಯರ್ಥಿಗಳು ಹಾಗೂ ಬೆಂಬಲಿಗರು, ಉಷ್ಣಾಂಶದ ತೀವ್ರ ಏರಿಕೆಯಲ್ಲಿ ನಿತ್ಯ ಹತ್ತಾರು ಹಳ್ಳಿಗಳಿಗೆ ತೆರಳಿ ಪ್ರಚಾರ ಮಾಡಲು ಒದ್ದಾಡುತ್ತಿದ್ದಾರೆ. ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ವ್ಯಾಪ್ತಿಯ ಲೋಕಸಭಾ ಕ್ಷೇತ್ರದಲ್ಲಿ ನಿತ್ಯ ಬಿಡುವಿಲ್ಲದೆ ಪ್ರಚಾರಕ್ಕೆ ಓಡಾಡುವುದು ಅನಿವಾರ್ಯವಾಗಿದೆ. ಆದರೆ, ಬಿಸಿಲಿನ ಪ್ರಖರದಲ್ಲಿ ಮತದಾರರನ್ನು ಭೇಟಿ ಮಾಡುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ.ಬೆಳಿಗ್ಗೆಯೇ ಮನೆ ಬಿಡುವ ಅಭ್ಯರ್ಥಿಗಳು:ಸಾಮಾನ್ಯ ದಿನಗಳಲ್ಲಿ ಸೂರ್ಯನ ದರ್ಶನದ ಬಳಿಕವೇ ಹಾಸಿಗೆಯಿಂದ ಮೇಲೇಳುತ್ತಿದ್ದ ಅಭ್ಯರ್ಥಿಗಳು ಹಾಗೂ ಮುಖಂಡರು ಬೆಳಗಿನಜಾವದಿಂದಲೇ ಪ್ರಚಾರದ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ದೂರದ ಊರುಗಳನ್ನು ತಲುಪಲು ಬೆಳಿಗ್ಗೆಯೇ ಮನೆಯಿಂದ ಹೊರಡುತ್ತಿದ್ದಾರೆ. ಅಭ್ಯರ್ಥಿಗಳು ನಿರ್ದಿಷ್ಟ ಊರು ತಲುಪುವ ಹೊತ್ತಿಗೆ ಸ್ಥಳೀಯ ಮುಖಂಡರು ಸಿದ್ಧಪಡಿಸುವ ಪ್ರಚಾರದ ವೇಳಾಪಟ್ಟಿಯಂತೆ ಮತದಾರರ ಮನವೊಲಿಕೆ ಆರಂಭಿಸುತ್ತಿದ್ದಾರೆ.
ಕೆಂಡದಂತಹ ಬಿಸಿಲಿಗೆ ಹೊರಗಡೆ ಹೆಜ್ಜೆ ಇಡಲು ಕಷ್ಟವಾಗುತ್ತಿದೆ. ಆದರೆ, ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡುವುದು ಅನಿವಾರ್ಯವಾಗಿದೆ. ಬಿಸಿಲಿಗೆ ಓಡಾಡುವುದು ನನಗಾಗುತ್ತಿಲ್ಲ ಎನ್ನುವಂತಿಲ್ಲ. ಏನೇ ನೆಪ ಹೇಳಿದರೂ ಹುಡುಕಿಕೊಂಡು ಬರುತ್ತಾರೆ. ಹೀಗಾಗಿ ಬಿಸಿಲಿದ್ದರೂ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದೇವೆ ಎನ್ನುತ್ತಾರೆ ಪಕ್ಷವೊಂದರ ಕಾರ್ಯಕರ್ತ ವಿಶ್ವನಾಥ್.ಹಗಲು-ರಾತ್ರಿ ಓಡಾಟ:
ಪಕ್ಷವೊಂದರ ಮುಖಂಡರು ಹೇಳುವ ಪ್ರಕಾರ, ಅಭ್ಯರ್ಥಿಗಿಂತಲೂ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚು ಶ್ರಮಿಸುತ್ತಿದ್ದಾರೆ. ನಿರ್ದಿಷ್ಟ ಜಾಗಕ್ಕೆ ನೇರವಾಗಿ ಬಂದು ಸೇರುವ ಅಭ್ಯರ್ಥಿ, ಮತದಾರರನ್ನುದ್ದೇಶಿಸಿ ಮಾತನಾಡುತ್ತಾರೆ. ಆದರೆ, ಬಹಿರಂಗ ಸಭೆಗೆ ಸಿದ್ಧತೆ ಮಾಡುವುದು, ಸಾರ್ವಜನಿಕರನ್ನು ಸೇರಿಸುವುದು ಸ್ಥಳೀಯ ಕಾರ್ಯಕರ್ತರ ಜವಾಬ್ದಾರಿಯಾಗಿದೆ.ಬಿಸಿಲಿನಲ್ಲಿ ಜನರು ಹೊರ ಬರಲು ಹಿಂದೇಟು ಹಾಕುತ್ತಾರೆ. ಆದರೆ, ಅವರ ಮನವೊಲಿಸಿ ಕರೆ ತರಬೇಕು. ದೊಡ್ಡ ಸಂಖ್ಯೆಯಲ್ಲಿ ಜನರಿಲ್ಲ ಎಂದಾದರೆ ಸಭೆ ಯಶಸ್ವಿಯಾಗುವುದಿಲ್ಲ. ಹೀಗಾಗಿ ಜನ ಸೇರಿಸಲು ಒದ್ದಾಡುತ್ತೇವೆ ಎನ್ನುತ್ತಾರೆ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು.