ಬಿಸಿಲು ಹೆಚ್ಚಿದೆ, ಬರಿಗಾಲಲ್ಲಿ ಪಾದಯಾತ್ರೆ ಬೇಡ: ಹೆಬ್ಬಾಳು ರುದ್ರೇಶ್ವರ ಸ್ವಾಮೀಜಿ

KannadaprabhaNewsNetwork |  
Published : Mar 02, 2024, 01:49 AM ISTUpdated : Apr 02, 2024, 05:29 AM IST
ಕ್ಯಾಪ್ಷನಃ1ಕೆಡಿವಿಜಿ43ಃದಾವಣಗೆರೆಯಿಂದ ಕೊಟ್ಟೂರು ಶ್ರೀ ಗುರುಬಸವೇಶ್ವರ ಸ್ವಾಮಿ ರಥೋತ್ಸವಕ್ಕೆ ತೆರಳುವ ಪಾದಯಾತ್ರಿಗಳಿಗೆ ನಡೆದ ಬೀಳ್ಕೊಡುಗೆ ಸಮಾರಂಭವನ್ನು ಹೆಬ್ಬಾಳು ಶ್ರೀ ಮಹಾಂತ ರುದ್ರೇಶ್ವರ ಸ್ವಾಮಿಗಳು ಉದ್ಘಾಟಿಸಿದರು. ಅಯ್ಯನಹಳ್ಳಿಯ ಹಿರೇಮಠದ ಶ್ರೀ ಮಹೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ, ಡಾ.ಅಥಣಿ ವೀರಣ್ಣ, ಕಣಕುಪ್ಪಿ ಮುರುಗೇಶ ಇತರರು ಇದ್ದರು. | Kannada Prabha

ಸಾರಾಂಶ

ಭಕ್ತರು ವರ್ಷದಿಂದ ವರ್ಷಕ್ಕೆ ನಾನು ಎಷ್ಟು ಬದಲಾವಣೆ ಆಗಿದ್ದೇನೆ ಎಂಬುದು ತಿಳಿದುಕೊಳ್ಳಬೇಕು. ಪಾದಯಾತ್ರೆ ಹೋದರೆ ಆಚಾರ ವಿಚಾರದಲ್ಲಿ , ಸನ್ನಡತೆಯಲ್ಲಿ ಏನಾದರೂ ಬದಲಾವಣೆ ಆಗಿದ್ದೇನೆಯೇ ಎಂಬ ಪ್ರಶ್ನೆ ನೀವೇ ಹಾಕಿಕೊಳ್ಳಬೇಕು.  

 ದಾವಣಗೆರೆ :  ಈಗ ಸುಮಾರು 35, 36 ಡಿಗ್ರಿ ಬಿಸಿಲು ಇದೆ. ಇನ್ನು ಬಳ್ಳಾರಿ ಜಿಲ್ಲೆಗೆ ಹೋಗುತ್ತಿದ್ದಂತೆ 40 ಡಿಗ್ರಿ ಬರಬಹುದು. ಈ ಸಂದರ್ಭದಲ್ಲಿ ಎಲ್ಲರೂ ಪಾದರಕ್ಷೆಗಳ ಧರಿಸಿ ಹೋಗಿರಿ, ನಿಮಗೆ ಕೊಟ್ಟೂರೇಶ್ವರ ಸ್ವಾಮಿ ಶಾಪ ಕೊಡಲ್ಲ. ನಿಮ್ಮಲ್ಲಿ ಭಕ್ತಿ ಶ್ರದ್ಧೆ ಇರಬೇಕು. ನಿಮ್ಮ ಆರೋಗ್ಯ ನೀವು ಕಾಪಾಡಿಕೊಳ್ಳಿ ಎಂದು ಹೆಬ್ಬಾಳು ವಿರಕ್ತಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ಸಲಹೆ ನೀಡಿದರು.

ಇಲ್ಲಿನ ಬಕ್ಕೇಶ್ವರ ದೇವಸ್ಥಾನದ ಅವರಣದಲ್ಲಿ ಶುಕ್ರವಾರ ಸಂಜೆ ಕೊಟ್ಟೂರು ಶ್ರೀ ಗುರುಬಸವೇಶ್ವರ ಸ್ವಾಮಿ ಪಾದಯಾತ್ರೆ ಟ್ರಸ್ಟ್ನಿಂದ ಹಮ್ಮಿಕೊಂಡ 45ನೇ ವರ್ಷದ ಸಮಗ್ರ ಪಾದಯಾತ್ರೆ ಬೀಳ್ಕೊಡುಗೆ ಸಮಾರಂಭದ ಸಾನ್ನಿಧ್ಯವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಶ್ರೀಗಳು ಮಾತನಾಡಿ ಕೊಟ್ಟೂರೇಶ್ವರ ರಥೋತ್ಸವದ ಪಾದಯಾತ್ರೆಯಲ್ಲಿ ಭಾಗವಹಿಸಿದ ಭಕ್ತರು ವರ್ಷದಿಂದ ವರ್ಷಕ್ಕೆ ನಾನು ಎಷ್ಟು ಬದಲಾವಣೆ ಆಗಿದ್ದೇನೆ ಎಂಬುದು ತಿಳಿದುಕೊಳ್ಳಬೇಕು. ಪಾದಯಾತ್ರೆ ಹೋದರೆ ಆಚಾರ ವಿಚಾರದಲ್ಲಿ , ಸನ್ನಡತೆಯಲ್ಲಿ ಏನಾದರೂ ಬದಲಾವಣೆ ಆಗಿದ್ದೇನೆಯೇ ಎಂಬ ಪ್ರಶ್ನೆ ನೀವೇ ಹಾಕಿಕೊಳ್ಳಬೇಕು. ಅವರು, ಇವರು, ಅಕ್ಕಪಕ್ಕದ ಮನೆಯವರು ಹೊರಟರು ಎಂದು ನಾನು ಹೊಂಟೆ ನೀನು ಹೊಂಟೆ ಅಂತ ಹೋಗೋದಲ್ಲ. ಭಕ್ತಿ, ಶ್ರದ್ಧೆ ಬೇಕು ಎಂದರು.

ಪಂಡರಾಪುರ ಪಾದಯಾತ್ರೆಗೆ ಹೋಗುವವರನ್ನು ಒಮ್ಮೆ ನೋಡಿ, ಅವರಲ್ಲಿ ತಂಡ ತಂಡ ಇರುತ್ತದೆ. ಕೊರಳಲ್ಲಿ ತಾಳ, ತಂಬೂರಿ, ಡೋಲು ಇರುತ್ತದೆ. ಅವರು ಅಲ್ಲಲ್ಲಿ ಭಜನೆ, ಧ್ಯಾನ ಮಾಡುತ್ತಾರೆ. ನೀವು ಸಹಾ ಶ್ರೀ ಕೊಟ್ಟೂರೇಶ್ವರರ ಧ್ಯಾನ, ಭಜನೆ ಮೂಲಕ ಪಾದಯಾತ್ರೆ ಕೈಗೊಳ್ಳಿ. ಕೊಟ್ಟಂತಹ ಪ್ರಸಾದವನ್ನು ಹೆಚ್ಚೆಚ್ಚು ಇಸಕೊಂಡು ಅಪವ್ಯಯ ಮಾಡಬೇಡಿ. ನಿಮ್ಮ ಹೊಟ್ಟೆಗೆ ಎಷ್ಟು ಬೇಕೋ ಅಷ್ಟನ್ನೇ ಸ್ವೀಕರಿಸಿ. ಭಕ್ತಿ ಶ್ರದ್ಧೆಯಿಂದ ಪಾದಯಾತ್ರೆ ಹೋಗುವಂತಹ ಕೆಲಸವನ್ನು ಮಾಡಿರಿ ಎಂದು ಶುಭ ಕೋರಿದರು.

ಅಯ್ಯನಹಳ್ಳಿಯ ಹಿರೇಮಠದ ಶ್ರೀ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಸಮ್ಮುಖ ವಹಿಸಿ ಮಾತನಾಡಿ, ಶ್ರೀ ಗುರು ಕೊಟ್ಟೂರು ಬಸವೇಶ್ವರ ಸ್ವಾಮಿಯ ರಥೋತ್ಸವಕ್ಕೆ ದಿನದಿಂದ ದಿನಕ್ಕೆ ವರ್ಷದಿಂದ ವರ್ಷಕ್ಕೆ ಬಹಳ ಭಕ್ತರನ್ನು ಒಳಗೊಂಡು ಪಾದಯಾತ್ರೆ ಸುಗಮವಾಗಿ ಸಾಗುತ್ತಾ ಇದೆ. ಈ ವರ್ಷ ಬಹಳ ಬಿಸಿಲಿನ ಒತ್ತಡ ಇದೆ. ಭಗವಂತಹ ಯಾತ್ರೆ ಎಷ್ಟು ಮುಖ್ಯವೋ ಮನುಷ್ಯನಿಗೆ ಆರೋಗ್ಯವೂ ಕೂಡಾ ಅಷ್ಟೇ ಮುಖ್ಯ. ಕೊಟ್ಟೂರೇಶ್ವರರ ಪ್ರಾರ್ಥನೆ, ಆಶೀರ್ವಾದ ಬೇಡುವ ಮೂಲಕ ತಮ್ಮ ತಮ್ಮ ಆರೋಗ್ಯದ ಕಡೆಯೂ ಹೆಚ್ಚು ಗಮನಹರಿಸಬೇಕು. ದಾರಿಯುದ್ದಕ್ಕೂ ನೀಡುವ ಪ್ರಸಾದವನ್ನು ಎಷ್ಟು ಅವಶ್ಯಕತೆ ಇದೆಯೋ ಅಷ್ಟನ್ನು ಮಾತ್ರ ಸ್ವೀಕರಿಸಿರಿ. ಜೊತೆಗೆ ಸ್ವಚ್ಛತೆ ಕಾಪಾಡಬೇಕು. ಏನು ಬೇಕಾದರೂ ತರಬಹುದು, ಸಮಯದಲ್ಲಿ ನೀರು ತರಲು ಆಗಲ್ಲ. ಈ ಪಾದಯಾತ್ರೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು.

ಕೊಟ್ಟೂರು ಶ್ರೀ ಗುರುಬಸವರಾಜೇಂದ್ರ ಸ್ವಾಮಿ ಪಾದಯಾತ್ರೆ ಟ್ರಸ್ಟ್ನ ಅಧ್ಯಕ್ಷ ಕಣಕುಪ್ಪಿ ಮುರುಗೇಶಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಅಭಾವೀಲಿಂ ಮಹಾಸಭಾ ಜಿಲ್ಲಾಧ್ಯಕ್ಷ ದೇವರಮನಿ ಶಿವಕುಮಾರ, ಡಾ.ಜಿ.ಸಿ.ಬಸವರಾಜ, ಅಜ್ಜಂಪುರ ಮೃತ್ಯುಂಜಯ, ಜಯರಾಜ, ವಿನುತಾ ರವಿ, ಟಿ.ಜಿ.ಬಕ್ಕೇಶಪ್ಪ, ಆರ್.ಜಿ.ದತ್ತರಾಜ್, ಮಲ್ಲಾಬಾದಿ ಗುರುಬಸವರಾಜ, ಬಿ.ಚಿದಾನಂದ ಸೇರಿ ಟ್ರಸ್ಟ್ ಪದಾಧಿಕಾರಿಗಳಿದ್ದರು.

ಎಷ್ಟು ಬೇಕೋ ಅಷ್ಟು ಸ್ವೀಕರಿಸಿ

ಪ್ರತಿ ವರ್ಷದಂತೆ ಈ ಬಾರಿಯೂ ಪಾದಯಾತ್ರೆ ಮೂಲಕ ತೆರಳುವ ಭಕ್ತಾದಿಗಳಿಗೆ ದಾರಿಯಲ್ಲಿ ವೈದ್ಯಕೀಯ ತಪಾಸಣೆ, ಪ್ರಥಮ ಚಿಕಿತ್ಸೆ ನೀಡುವ ಕ್ಯಾಂಪ್‌ಗಳ ಹಾಕಲಾಗಿದೆ. ಪಾದಯಾತ್ರೆಯಲ್ಲಿ ಪಾದಯಾತ್ರಿಗಳಿಗೆ ದಾರಿಯುದ್ದಕ್ಕೂ ಪ್ರಸಾದ ವ್ಯವಸ್ಥೆ ಮಾಡಿದ್ದಾರೆ. ಅದನ್ನು ಅಪವ್ಯಯ ಮಾಡದೇ ಅವಶ್ಯಕತೆಗೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಸ್ವೀಕರಿಸಿರಿ. ಶ್ರೀ ಬಕ್ಕೇಶ್ವರರ, ಶ್ರೀ ಕೊಟ್ಟೂರೇಶ್ವರರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ.

ಡಾ.ಅಥಣಿ ವೀರಣ್ಣ, ಪಾದಯಾತ್ರೆ ಟ್ರಸ್ಟ್‌ ಗೌರವಾಧ್ಯಕ್ಷ

PREV

Recommended Stories

ನಾಳೆ ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌
ಮೈಸೂರು ದಸರಾ ಆನೆಗಳಿಗೆ 630 ಟನ್‌ ಆಹಾರ!